ಪದ್ಯ ೨೩: ದುರ್ಯೋಧನನು ಕರ್ಣನಿಗೆ ಏನು ಹೇಳಿದನು?

ಸಾಕು ದೈತ್ಯನ ಕೆಡಹು ಸೇನೆಯ
ಸಾಕು ಸುಭಟರು ಬಾಯಬಿಡುತಿದೆ
ನೂಕು ನೂಕಮರಾರಿಯನು ತಡೆ ತಡವುಮಾಡದಿರು
ಆಕೆವಾಲರು ವಿಗಡ ವೀರಾ
ನೀಕವಿದೆ ತಲ್ಲಣದ ತಗಹಿನ
ಲೇಕೆ ಕಾಲಕ್ಷೇಪವೆಂದನು ಕೌರವರರಾಯ (ದ್ರೋಣ ಪರ್ವ, ೧೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕರ್ಣ, ಈ ಮಾತು ಸಾಕು, ದೈತ್ಯನನ್ನು ಸಂಹರಿಸು, ನಮ್ಮ ಪರಾಕ್ರಮಿಗಳು ಬಾಯಿಬಾಯಿ ಬಿಡುತ್ತಿದ್ದಾರೆ, ತಡೆಯದೆ ತಡಮಾಡದೆ ಈ ರಾಕ್ಷಸನನ್ನು ಸಂಹರಿಸು. ವೀರರೂ ಸಮರ್ಥರೂ ತಲ್ಲಣಗೊಂಡಿದ್ದಾರೆ. ಕಾಲವನ್ನು ಸುಮ್ಮನೇ ವ್ಯರ್ಥಮಾಡಬೇಡ ಎಂದು ದುರ್ಯೋಧನನು ಕರ್ಣನಿಗೆ ಹೇಳಿದನು.

ಅರ್ಥ:
ಸಾಕು: ನಿಲ್ಲಿಸು; ದೈತ್ಯ: ರಾಕ್ಷಸ; ಕೆಡಹು: ಬೀಳಿಸು, ನಾಶಮಾಡು; ಸೇನೆ: ಸೈನ್ಯ; ಸುಭಟ: ವೀರ; ನೂಕು: ತಳ್ಳು; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ತಡೆ: ನಿಲ್ಲಿಸು; ತಡ: ನಿಧಾನ; ಆಕೆವಾಳ: ವೀರ, ಪರಾಕ್ರಮಿ; ವಿಗಡ: ಶೌರ್ಯ, ಪರಾಕ್ರಮ; ವೀರ: ಶೂರ; ತಲ್ಲಣ: ಅಂಜಿಕೆ, ಭಯ; ತಗಹು: ಅಡ್ಡಿ, ತಡೆ; ಕಾಲಕ್ಷೇಪ: ಕಾಲ ಕಳೆಯುವುದು; ರಾಯ: ರಾಜ; ಆನೀಕ: ಸಮೂಹ;

ಪದವಿಂಗಡಣೆ:
ಸಾಕು +ದೈತ್ಯನ +ಕೆಡಹು +ಸೇನೆಯ
ಸಾಕು +ಸುಭಟರು +ಬಾಯಬಿಡುತಿದೆ
ನೂಕು +ನೂಕ್+ಅಮರಾರಿಯನು +ತಡೆ +ತಡವು+ಮಾಡದಿರು
ಆಕೆವಾಳರು +ವಿಗಡ +ವೀರಾ
ನೀಕವಿದೆ +ತಲ್ಲಣದ +ತಗಹಿನ
ಲೇಕೆ +ಕಾಲಕ್ಷೇಪವೆಂದನು +ಕೌರವರ+ರಾಯ

ಅಚ್ಚರಿ:
(೧) ಸಾಕು, ನೂಕು – ಪ್ರಾಸ ಪದಗಳು
(೨) ಆಕೆವಾಳ, ಸುಭಟ, ವಿಗಡ, ವೀರಾನೀಕ – ಸಾಮ್ಯಾರ್ಥ ಪದಗಳು
(೩) ತಡೆ, ತಡ – ಪದಗಳ ಬಳಕೆ

ಪದ್ಯ ೩೨: ಸಹದೇವನು ಯಾವ ಮಾತಿನಿಂದ ಹಣ್ಣು ಮೇಲೇರಿತು?

ರಾಯಕೇಳೈಫಲ ನೆಗೆಯಲೊಮ್ಮೊಳ
ನಾಯತಕೆ ಸಹದೇವ ನುಡಿದನು
ಕಾಯವೆಂಬುದನಿತ್ಯ ಬೆಂಬತ್ತಿಹುದು ಬಲುಮೃತ್ಯು
ಬಾಯಬಿಡುತಿರೆ ನೆಚ್ಚಿಕೆಡುವುದ
ಪಾಯದಲಿ ಜಗವರಿಯೆ ಧರ್ಮೋ
ಪಾಯವಿಹಪರ ಪಥ್ಯವೆನೆ ಫಲವೇರಿದುದು ಮೊಳನ (ಅರಣ್ಯ ಪರ್ವ್, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ನಕುಲನ ಮಾತಿಗೆ ಹಣ್ಣು ಒಂದು ಮೊಳ ಮೇಲಕ್ಕೇರಿತು. ಸಹದೇವನೆದ್ದು ಶರೀರವು ಶಾಶ್ವತವಲ್ಲ, ಮೃತ್ಯುವು ಹಗಲಿರುಳು ಈ ಶರೀರವನ್ನು ಹಿಂಬಾಲಿಸುತ್ತಾ ಹತ್ತಿರಕ್ಕೆ ಬರುತ್ತಿರುತ್ತಾನೆ, ಅಪಾಯ ಸಮಯಗಳಲ್ಲಿ ಈ ದೇಹವು ಬಿರುಕುಬಿಟ್ಟು ನಾಶವಾಗುತ್ತದೆ. ಹೀಗಿರುವಾಗ ಇರುವ ಸಮಯದಲ್ಲಿ ಧರ್ಮಸಂಗ್ರಹವು ಇಹಪರಗಳಿಗೂ ಅನುಕೂಲ ಎಂದು ಹೇಳಲು ಹಣ್ಣು ಮೇಲಕ್ಕೆ ಏರಿತು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ಫಲ: ಹಣ್ಣು; ನೆಗೆ: ಹಾರು; ಮೊಳ: ಮೊಳಕೈಯಿಂದ ಹಸ್ತದ ತುದಿಯವರೆಗಿನ ಅಳತೆ, ಎರಡು ಗೇಣು; ಆಯತ: ಸರಿಯಾದ, ನೆಲೆ; ನುಡಿ: ಮಾತಾಡು; ಕಾಯ: ದೇಹ; ಅನಿತ್ಯ: ಅಶಾಶ್ವತ; ಬೆಂಬತ್ತು: ಹಿಂದೆ ಬೀಳು, ಹಿಂಬಾಲಿಸು; ಮೃತ್ಯು: ಸಾವು; ಬಾಯಬಿಡು: ಹೋಳಾಗು, ಬಿರುಕುಬಿಡು; ನೆಚ್ಚು: ನಂಬಿಕೆ, ವಿಶ್ವಾಸ; ಕೇಡುವು: ಹಾಳಾಗು; ಅಪಾಯ: ಕೇಡು, ತೊಂದರೆ; ಇಹಪರ: ಈ ಲೋಕ ಮತ್ತು ಪರಲೋಕ; ಪಥ್ಯ: ಯೋಗ್ಯವಾದುದು; ಏರು: ಮೇಲೇಳು;

ಪದವಿಂಗಡಣೆ:
ರಾಯಕೇಳೈ+ಫಲ +ನೆಗೆಯಲ್+ಒಮ್+ಮೊಳನ್
ಆಯತಕೆ+ ಸಹದೇವ+ ನುಡಿದನು
ಕಾಯ+ವೆಂಬುದ್+ಅನಿತ್ಯ+ ಬೆಂಬತ್ತಿಹುದು +ಬಲುಮೃತ್ಯು
ಬಾಯಬಿಡುತಿರೆ+ ನೆಚ್ಚಿ+ಕೆಡುವುದ್
ಅಪಾಯದಲಿ +ಜಗವರಿಯೆ +ಧರ್ಮೋ
ಪಾಯವ್+ಇಹಪರ+ ಪಥ್ಯವೆನೆ+ ಫಲವೇರಿದುದು +ಮೊಳನ

ಅಚ್ಚರಿ:
(೧) ಮೊಳನ – ೧, ೬ ಸಾಲಿನ ಕೊನೆ ಪದ
(೨) ಸಹದೇವನ ನುಡಿ – ಧರ್ಮೋಪಾಯವಿಹಪರ ಪಥ್ಯವ್, ಕಾಯವೆಂಬುದನಿತ್ಯ ಬೆಂಬತ್ತಿಹುದು ಬಲುಮೃತ್ಯು