ಪದ್ಯ ೯: ಕುದುರೆಗಳು ಹೇಗೆ ಮಲಗಿದ್ದವು?

ಬಾಯ ಲೋಳೆಗಳಿಳಿಯೆ ಮೈಹಳು
ವಾಯಿ ಮಿಗೆ ತುದಿ ಖುರವನೂರಿ ನ
ವಾಯಿ ಮಿಗಲರೆನೋಟದಾಲಿಯ ಮಿಡುಕದವಿಲಣದ
ಲಾಯದಲಿ ಲಂಬಿಸಿದವೊಲು ವಾ
ನಾಯುಜದ ಸಾಲೆಸೆದುದೊರಗಿದ
ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ (ದ್ರೋಣ ಪರ್ವ, ೧೭ ಸಂಧಿ, ೯ ಪದ್ಯ)

ತಾತ್ಪರ್ಯ:
ಬಾಯಿಂದ ನೊರೆಯಿಳಿಯುತ್ತಿರಲು, ಮೈ ಬೆಂಡಾಗಿ ತುದಿಗೊರಸನ್ನೂರಿ ಕಣ್ಣನ್ನು ಅರೆತೆರೆದು ಲಾಯದಲ್ಲಿ ಮಲಗಿದಂತೆ ಕುದುರೆಗಳ ಸಾಲು ಮಲಗಿತ್ತು. ರಾವುತರ ಕಿರೀಟಗಳು ಮರಗೋಡಿನ ಮೇಲಿದ್ದವು.

ಅರ್ಥ:
ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಇಳಿ: ಕೆಳಕ್ಕೆ ಬೀಳು; ಮೈ: ತನು; ಹಳುವ: ಕಾಡು; ಮಿಗೆ: ಅಧಿಕ; ತುದಿ: ಕೊನೆ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಊರು: ಮೆಟ್ಟು; ನವಾಯಿ: ಹೊಸರೀತಿ, ಠೀವಿ; ಮಿಗಲು: ಹೆಚ್ಚು; ಅರೆ: ಅರ್ಧ; ನೋಟ: ದೃಷ್ಥಿ; ಆಲಿ: ಕಣ್ಣು; ಮಿಡುಕು: ಅಲುಗಾಟ, ಚಲನೆ; ಲಾಯ: ಕುದುರೆಗಳನ್ನು ಕಟ್ಟುವ ಸ್ಥಳ, ಅಶ್ವಶಾಲೆ; ಲಂಬಿಸು: ತೂಗಾಡು, ಜೋಲಾಡು; ವಾನಾಯುಜ: ಕುದುರೆ; ಸಾಲು: ಆವಳಿ; ಒರಗು: ಮಲಗು, ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಣಿ: ಬೆಲೆಬಾಳುವ ರತ್ನ; ಮಕುಟ: ಕಿರೀಟ; ಮರಗೋಡು: ಕುದುರೆಯ ನೆತ್ತಿಗೆ ಕಟ್ಟಿದ ಲೋಹದ ರಕ್ಷೆ; ಓಲೈಸು: ಸೇವೆಮಾಡು, ಉಪಚರಿಸು;

ಪದವಿಂಗಡಣೆ:
ಬಾಯ +ಲೋಳೆಗಳ್+ಇಳಿಯೆ +ಮೈಹಳು
ವಾಯಿ +ಮಿಗೆ +ತುದಿ +ಖುರವನ್+ಊರಿ +ನ
ವಾಯಿ +ಮಿಗಲ್+ಅರೆನೋಟದ್+ಆಲಿಯ +ಮಿಡುಕದವಿಲಣದ
ಲಾಯದಲಿ +ಲಂಬಿಸಿದವೊಲು+ ವಾ
ನಾಯುಜದ +ಸಾಲೆಸೆದುದ್+ಒರಗಿದ
ರಾಯ +ರಾವ್ತರ+ ಮಣಿಮಕುಟ+ ಮರಗೋಡನ್+ಓಲೈಸೆ

ಅಚ್ಚರಿ:

(೧) ವಾನಾಯುಜ – ಕುದುರೆಗಳನ್ನು ಕರೆದ ಪರಿ
(೨) ಲಾಯ, ಬಾಯ, ರಾಯ – ಪ್ರಾಸ ಪದಗಳು
(೩) ಕುದುರೆಗಳು ಮಲಗಿದ ಪರಿ – ವಾನಾಯುಜದ ಸಾಲೆಸೆದುದೊರಗಿದ ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ

ಪದ್ಯ ೫೯: ಅಭಿಮನ್ಯುವಿನೊಡನೆ ಯುದ್ಧ ಮಾಡಲು ಯಾರು ಮುಂದೆ ಬಂದರು?

ಘಾಯವಡೆದನು ಶಲ್ಯ ರವಿಸುತ
ನಾಯುಧವ ಬಿಟ್ಟೋಡಿದನು ಕುರು
ರಾಯನನುಜನು ಬದುಕುವರೆ ಮೆಯ್ಯೆಲ್ಲ ಬಾದಣವು
ಸಾಯದುಳಿದವರಿಲ್ಲ ಮಿಕ್ಕಿನ
ನಾಯಕರೊಳಕಟೆನಲು ಕುರುಬಲ
ಬಾಯ ಬಿಟೆ ಶಲ್ಯನ ಕುಮಾರಕ ಹೊಕ್ಕನಾಹವವ (ದ್ರೋಣ ಪರ್ವ, ೫ ಸಂಧಿ, ೫೯ ಪದ್ಯ)

ತಾತ್ಪರ್ಯ:
ಶಲ್ಯನು ಗಾಯಗೊಂಡನು, ಕರ್ಣನು ಆಯುಧವನ್ನು ಬಿಟ್ಟೋಡಿದನು. ಕೌರವನ ತಮ್ಮಂದಿರು ಮೈಯೆಲ್ಲಾ ತೂತಾಗಿದ್ದವು, ಅವರು ಬದುಕ ಬಹುದೇ ಎನ್ನುವಂತಿದ್ದರು. ಅಭಿಮನ್ಯುವನ್ನು ಎದುರಿಸಿ ಬದುಕಿದವರೇ ಇಲ್ಲ ಎಂದು ಕೌರವ ಸೈನ್ಯವು ಬಾಯಿ ಬಿಡಲು, ಶಲ್ಯನ ಮಗನು ಅಭಿಮನ್ಯುವಿನೊಡನೆ ಯುದ್ಧಕ್ಕೆ ಬಂದನು.

ಅರ್ಥ:
ಘಾಯ: ಪೆಟ್ಟು; ರವಿಸುತ: ಸೂರ್ಯನ ಮಗ (ಕರ್ಣ); ಆಯುಧ: ಶಸ್ತ್ರ; ಬಿಟ್ಟು: ತೊರೆದು; ಓಡು: ಧಾವಿಸು; ರಾಯ: ರಾಜ; ಅನುಜ: ತಮ್ಮ; ಬದುಕು: ಜೀವಿಸು; ಮೆಯ್ಯೆ: ತನು, ದೇಹ; ಬಾದಣ: ತೂತು; ಸಾಯದೆ: ಸಾವಿಲ್ಲದೆ; ಉಳಿದು: ಜೀವಿಸು; ಮಿಕ್ಕ: ಉಳಿದ; ನಾಯಕ: ಒಡೆಯ; ಅಕಟ: ಅಯ್ಯೋ; ಬಿಟೆ: ಬಿಡು; ಕುಮಾರ: ಪುತ್ರ; ಹೊಕ್ಕು: ಸೇರು; ಆಹವ: ಯುದ್ಧ;

ಪದವಿಂಗಡಣೆ:
ಘಾಯವಡೆದನು+ ಶಲ್ಯ+ ರವಿಸುತನ್
ಆಯುಧವ +ಬಿಟ್ಟೋಡಿದನು +ಕುರು
ರಾಯನ್+ಅನುಜನು +ಬದುಕುವರೆ+ ಮೆಯ್ಯೆಲ್ಲ +ಬಾದಣವು
ಸಾಯದ್+ಉಳಿದವರಿಲ್ಲ+ ಮಿಕ್ಕಿನ
ನಾಯಕರೊಳ್+ಅಕಟೆನಲು +ಕುರುಬಲ
ಬಾಯ +ಬಿಟೆ +ಶಲ್ಯನ +ಕುಮಾರಕ +ಹೊಕ್ಕನ್+ಆಹವವ

ಅಚ್ಚರಿ:
(೧) ಘಾಯ, ರಾಯ, ಬಾಯ – ಪ್ರಾಸ ಪದಗಳು

ಪದ್ಯ ೪: ಸಾತ್ಯಕಿಯ ಎದುರು ಯಾರು ಯುದ್ಧ ಮಾಡಲು ನಿಂತರು?

ಬಾಯಿಬಡಿಕರು ನಾವು ನೀ ಗರು
ವಾಯಿಕಾರನು ಬಯ್ವ ಬಿರುದಿನ
ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು
ಸಾಯಕದ ಹೊದೆ ಹಲವು ಶಲ್ಯಗೆ
ಬೀಯವಾದವು ಬಳಿಕ ಕೌರವ
ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ (ಕರ್ಣ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಶಲ್ಯನು ಸಾತ್ಯಕಿಯನ್ನು ಎದುರಿಸುತ್ತಾ, ಎಲವೋ ಸಾತ್ಯಕಿ ನಾವು ಬಾಯಿಬಡಿಕರೋ, ನೀನು ವೀರ, ಬೈಯುವ ನಿನ್ನ ಬಾಯನ್ನೊಮ್ಮೆ ನೋಡು, ಎನ್ನುತ್ತಾ ಹಲವಾರು ಹೊರೆ ಬಾಣಗಳನ್ನು ಸಾತ್ಯಕಿಯ ಮೇಲೆ ಬಿಟ್ಟನು. ಆಗ ದುಶ್ಯಾಸನನು ಸಾತ್ಯಕಿಯ ರಥವನ್ನು ತಡೆದು ನಿಲ್ಲಿಸಿದನು.

ಅರ್ಥ:
ಬಾಯಿಬಡಿಕ: ಪೊಳ್ಳೆಮಾತು, ತಲೆಹರಟೆ; ಗರುವಾಯಿ: ದೊಡ್ಡತನ, ಗೌರವ;ಬಯ್ವ: ಬಯ್ಯುವ, ಜರಿ; ಬಿರುದು: ಗೌರವ ಸೂಚಕ ಹೆಸರು; ಬಾಯಿ: ಮುಖದ ಒಂದು ಅಂಗ; ನೋಡು: ವೀಕ್ಷಿಸು; ತೋಟಿ: ಯುದ್ಧ, ಜಗಳ; ತೆರಹು: ಬಿಚ್ಚು, ತೆರೆ, ಜಾಗ; ಸಾಯಕ: ಬಾಣ, ಶರ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಹಲವು: ಬಹಳ; ಬೀಯ: ವ್ಯಯ, ನಷ್ಟ, ಖರ್ಚು; ಬಳಿಕ: ನಂತರ; ರಾಯ: ರಾಜ; ಅನುಜ: ತಮ್ಮ; ತರುಬು: ಅಡ್ಡಗಟ್ಟು, ಬೆನ್ನಟ್ಟು; ನಿಂದನು: ಎದುರು ನಿಲ್ಲು; ರಥ: ಬಂಡಿ;

ಪದವಿಂಗಡಣೆ:
ಬಾಯಿಬಡಿಕರು+ ನಾವು +ನೀ +ಗರು
ವಾಯಿಕಾರನು +ಬಯ್ವ +ಬಿರುದಿನ
ಬಾಯ +ನೋಡಾ+ಯೆನುತ +ತೋಟಿಗೆ +ತೆರಹು+ಗೊಡದ್+ಎಸಲು
ಸಾಯಕದ +ಹೊದೆ +ಹಲವು +ಶಲ್ಯಗೆ
ಬೀಯವಾದವು+ ಬಳಿಕ+ ಕೌರವ
ರಾಯನ್+ಅನುಜನು +ತರುಬಿ +ನಿಂದನು +ಸಾತ್ಯಕಿಯ +ರಥವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಯ್ವ ಬಿರುದಿನ ಬಾಯ
(೨) ಬಾಯಿ, ಗರುವಾಯಿ – ಪ್ರಾಸ ಪದ
(೩) ಸಾತ್ಯಕಿ, ಶಲ್ಯ, ದುಶ್ಯಾಸನ – ಪದ್ಯದಲ್ಲಿ ಬಂದ ಹೆಸರುಗಳು

ಪದ್ಯ ೧೦: ಮುಕ್ತಿರಾಜ್ಯವನ್ನು ಹೇಗೆ ವಶಪಡಿಸಿಕೊಳ್ಳಬೇಕು?

ಕಾಯವಿದು ನೆಲೆಯಲ್ಲ ಸಿರಿತಾ
ಮಾಯರೂಪಿನ ಮೃತ್ಯು ದೇವತೆ
ಬಾಯಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿತು ಮಹಾತ್ಮರಿದಕೆ ಸ
ಹಾಯ ಧರ್ಮವ ವಿರಚಿಸುತ ನಿ
ರ್ದಾಯದಲಿ ಕೈ ಸೂರೆಗೊಂಬುದು ಮುಕ್ತಿ ರಾಜ್ಯವನು (ಉದ್ಯೋಗ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಈ ದೇಹವು ಶಾಶ್ವತವಲ್ಲ. ಐಶ್ವರ್ಯವು ಮಾಯರೂಪವಾಗಿರುವು ಮೃತ್ಯು ದೇವತೆ, ಇದು ಬಾಯಿಬಿಡುತ್ತಾ ಇವನ ಕಾಲವೆಂದು ಕೊನೆಗೊಳ್ಳುತ್ತದೆ ಎಂದು ಕಾಯುತ್ತಿದಾಳೆ. ಈ ವ್ಯೂಹವನ್ನು ಯಾವ ಲೆಕ್ಕದಿಂದ ದಾಟಬೇಕು ಎಂದರಿತ ಮಹಾತ್ಮರು, ಧರ್ಮದ ಸಹಾಯದಿಂದ ಜೀವನವನ್ನು ರೂಪಿಸಿಕೊಂಡು, ಮೋಕ್ಷದ ಸ್ಥಾನಕ್ಕೆ ನಿರ್ದಾಕ್ಷಿಣ್ಯದಿಂದ ವಶಪಡಿಸಿಕೊಳ್ಳಬೇಕು.

ಅರ್ಥ:
ಕಾಯ: ದೇಹ; ನೆಲೆ: ಆಶ್ರಯ, ವಾಸಸ್ಥಾನ; ಸಿರಿ: ಐಶ್ವರ್ಯ; ಮಾಯ: ಇಂದ್ರಜಾಲ; ರೂಪ: ಆಕಾರ; ಮೃತ್ಯು: ಸಾವು; ದೇವತೆ: ದೇವಿ; ಬಾಯಿ: ಮುಖದ ಅಂಗ; ಬಿಡು: ಅಡೆಯಿಲ್ಲದಿರು ; ಕಾಲ: ಸಮಯ, ಸಾವು; ದಾಯ: ರೀತಿ; ಪಾಲು; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಸಹಾಯ: ನೆರವು; ಧರ್ಮ: ಧಾರಣೆ ಮಾಡಿರುವುದು; ವಿರಚಿಸು: ಕಟ್ಟು, ನಿರ್ಮಿಸು; ನಿರ್ದಾಯದ: ಅಖಂಡ; ಕೈ: ಕರ; ಸೂರೆ: ಸುಲಿಗೆ; ಮುಕ್ತಿ: ಮೋಕ್ಷ; ರಾಜ್ಯ: ದೇಶ;

ಪದವಿಂಗಡಣೆ:
ಕಾಯವಿದು +ನೆಲೆಯಲ್ಲ +ಸಿರಿ+ತಾ+
ಮಾಯ+ರೂಪಿನ +ಮೃತ್ಯು +ದೇವತೆ
ಬಾಯಬಿಡುತಿಹಳ್ +ಆವುದೀತನ+ ಕಾಲಗತಿಯೆಂದು
ದಾಯವರಿತು +ಮಹಾತ್ಮರ್+ಇದಕೆ +ಸ
ಹಾಯ +ಧರ್ಮವ +ವಿರಚಿಸುತ+ ನಿ
ರ್ದಾಯದಲಿ +ಕೈ +ಸೂರೆಗೊಂಬುದು+ ಮುಕ್ತಿ +ರಾಜ್ಯವನು

ಅಚ್ಚರಿ:
(೧) ಕಾಯ, ಮಾಯ, ದಾಯ, ಸಹಾಯ, ನಿರ್ದಾಯ, ಬಾಯ – ಪ್ರಾಸ ಪದಗಳು
(೨) ಕಾಲ, ಮೃತ್ಯು – ಸಮನಾರ್ಥಕ ಪದ