ಪದ್ಯ ೪೫: ಅರ್ಜುನನು ಪಾಂಡವರನ್ನು ಉತ್ತರನಿಗೆ ಹೇಗೆ ಪರಿಚಯಿಸಿದನು?

ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ (ವಿರಾಟ ಪರ್ವ, ೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕೇಳು ಉತ್ತರಕುಮಾರ, ನಾನೇ ಅರ್ಜುನ, ವಲಲನಾಗಿ ಬಾಣಸಿಯಾದವನು ಭೀಮ, ಕಂಕನು ಧರ್ಮಜನು, ಗೋಕುಲವನ್ನು ರಕ್ಷಿಸಿದವನು ಸಹದೇವ, ಕುದುರೆಗಳನ್ನು ಕಾಯುತ್ತಿದ್ದವನು ಸಹದೇವ, ನಮ್ಮ ಪತ್ನಿಯಾದ ದ್ರೌಪದಿ ಸೈರಂಧ್ರಿಯಾಗಿ ದಾಸಿಯಾಗಿದ್ದವಳು ಎಂದು ಪರಿಚಯಿಸಿದನು.

ಅರ್ಥ:
ಬಾಣಸಿ: ಅಡಗೆಯವ; ವರ: ಶ್ರೇಷ್ಠ; ಯತಿ: ಸಂನ್ಯಾಸಿ; ಗೋಕುಲ: ಗೋಸಮೂಹ; ಕಾದವ: ರಕ್ಷಿಸು; ವಿಳಾಸಿನಿ: ಸ್ತ್ರೀ, ದಾಸಿ; ರಾಣಿ: ಅರಸಿ; ರಾವುತ: ಅಶ್ವ;

ಪದವಿಂಗಡಣೆ:
ಆದೊಡ್+ಆನ್+ಅರ್ಜುನನು +ಬಾಣಸಿ
ಯಾದ +ವಲಲನು +ಭೀಮ +ವರ+ಯತಿ
ಯಾದ +ಕಂಕನು+ ಧರ್ಮಪುತ್ರನು +ನಿಮ್ಮ+ ಗೋಕುಲವ
ಕಾದವನು +ಸಹದೇವ +ರಾವುತ
ನಾದವನು +ನಕುಲನು +ವಿಳಾಸಿನಿ
ಯಾದವಳು+ ಸೈರಂಧ್ರಿ +ರಾಣೀವಾಸವ್+ಎಮಗೆಂದ

ಅಚ್ಚರಿ:
(೧) ಕಾದವನು, ಆದವನು – ಪ್ರಾಸ ಪದಗಳು

ಪದ್ಯ ೪೫: ಸಿಂಧುರನು ಭೀಮನಿಗೆ ಏನು ಹೇಳಿದ?

ಎಲವೊ ಬಾಣಸಿ ಎನ್ನೊಡನೆ ಹೆ
ಕ್ಕಳಿಸಿ ಸಮರವ ತೊಡಕಿದರೆ ನಿ
ಟ್ಟೆಲುವ ಮುರಿವೆನುಯೆನುತ ಸಿಂಧುರ ಗಾಢಗರ್ವದಲಿ
ಹಳಚಿದನು ಖತಿಯೇರೆ ಬಾಹ
ಪ್ಪಳಿಸಿ ತಿವಿಯಲು ಭೀಮ ನಗುತದ
ಕಳುಕದಿರೆ ಭೀತಿಯಲಿ ಸಿಂಧುರ ಹೊಕ್ಕನುರವಣಿಸಿ (ವಿರಾಟ ಪರ್ವ, ೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲವೋ ಅಡುಗೆಯವ, ನನ್ನೊಡನೆ ಯುದ್ಧಕ್ಕೆ ಬಂದರೆ ನಿನ್ನೆಲ್ಲ ಮೂಳೆಗಳನ್ನು ಮುರಿಯುತ್ತೇನೆ, ಎನ್ನುತ್ತಾ ಸಿಂಧುರನು ಮಹಾಗರ್ವದಿಂದ ತೋಳುತಟ್ಟಿ ಭೀಮನನ್ನು ತಿವಿದನು. ಭೀಮನು ನಕ್ಕು ಅಲುಗಾಡದಿರಲು, ಸಿಂಧುರನು ಬೆದರಿ ಮತ್ತೆ ಆಕ್ರಮಣ ಮಾಡಿದನು.

ಅರ್ಥ:
ಬಾಣಸಿ: ಅಡುಗೆಯವ; ಹೆಕ್ಕಳ: ಹೆಚ್ಚಳ, ಅತಿಶಯ; ಸಮರ: ಯುದ್ಧ; ತೊಡಕು: ಸಿಕ್ಕು, ಗೋಜು, ಗೊಂದಲ; ನಿಟ್ಟೆಲುವು: ನೇರವಾದ ಮೂಲೆ; ಮುರಿ: ಚೂರುಮಾಡು; ಗಾಢ: ದೃಢವಾದ; ಗರ್ವ: ಅಹಂಕಾರ; ಹಳಚು: ತಾಗು, ಬಡಿ; ಖತಿ: ದುಃಖ, ಅಳಲು; ಬಾಹು: ತೋಳು; ಅಪ್ಪಲಿಸು: ತಾಗು; ತಿವಿ: ಚುಚ್ಚು; ನಗುತ: ಹರ್ಷಿಸುತ್ತ; ಅಳುಕು: ಹೆದರು; ಭೀತಿ: ಭಯ; ಹೊಕ್ಕು: ಸೇರು; ಉರವಣಿಸು: ಉತ್ಸಾಹದಿಂದಿರು, ಆತುರಿಸು;

ಪದವಿಂಗಡಣೆ:
ಎಲವೊ +ಬಾಣಸಿ +ಎನ್ನೊಡನೆ +ಹೆ
ಕ್ಕಳಿಸಿ +ಸಮರವ +ತೊಡಕಿದರೆ +ನಿ
ಟ್ಟೆಲುವ +ಮುರಿವೆನು+ಎನುತ +ಸಿಂಧುರ +ಗಾಢ+ಗರ್ವದಲಿ
ಹಳಚಿದನು +ಖತಿ+ಏರೆ +ಬಾಹ
ಪ್ಪಳಿಸಿ+ ತಿವಿಯಲು +ಭೀಮ +ನಗುತ್+ಅದಕ್
ಅಳುಕದಿರೆ +ಭೀತಿಯಲಿ +ಸಿಂಧುರ +ಹೊಕ್ಕನ್+ಉರವಣಿಸಿ

ಅಚ್ಚರಿ:
(೧) ಭೀಮನ ಶಕ್ತಿ – ಹಳಚಿದನು ಖತಿಯೇರೆ ಬಾಹಪ್ಪಳಿಸಿ ತಿವಿಯಲು ಭೀಮ ನಗುತದಕಳುಕದಿರೆ

ಪದ್ಯ ೩೬: ಕಂಕನು ಮಲ್ಲಯುದ್ಧಕ್ಕೆ ಯಾರನ್ನು ಕರೆಸಲು ಹೇಳಿದನು?

ಅವನಿಪತಿ ಕೇಳ್ನಿನ್ನ ಬಾಣಸಿ
ನವನು ಮಲ್ಲನು ಭೀಮಸೇನನ
ಭವನದಲಿ ಬಲು ಮಲ್ಲವಿದ್ಯೆಯ ಸಾಧಿಸಿದನವನು
ಪವನಸುತನಿಂ ಬಲುಮೆಯೀತನು
ಜವಕೆ ಜವವೊದಗುವನು ನೀನಿಂ
ದಿವನ ಕರೆಸುವುದೆನಲು ಮತ್ಸ್ಯನೃಪಾಲನಿಂತೆಂದ (ವಿರಾಟ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕಂಕನು ತನ್ನ ಉಪಾಯವನ್ನು ತಿಳಿಸುತ್ತಾ, ರಾಜ ನಿನ್ನ ಅಡಿಗೆಯವನಾದ ವಲಲನು ಮಹಾ ಜಟ್ಟಿ, ಭೀಮನ ಮನೆಯ ಗರುಡಿಯಲ್ಲಿ ಅಭ್ಯಾಸ ಮಾಡಿ ಮಲ್ಲ ವಿದ್ಯೆಯನ್ನು ಸಾಧಿಸಿದ್ದಾನೆ, ಭೀಮನಿಗಿಂತ ಒಂದು ಕೈ ಹೆಚ್ಚು ಬಲಶಾಲಿ, ಯಮನಿಗೆ ಯಮನಾಗಿ ನಿಲ್ಲುವಷ್ಟು ಬಲವಂತ, ಎಂತಹ ವೀರನೇ ಆಗಲಿ ಗೆಲ್ಲಬಲಾವನು. ಅವನನ್ನು ಮಲ್ಲಕಾಳಗಕ್ಕೆ ಕರೆಸು ಎಂದನು.

ಅರ್ಥ:
ಅವನಿಪತಿ: ರಾಜ; ಅವನಿ: ಭೂಮಿ; ಕೇಳು: ಆಲಿಸು; ಬಾಣಸಿ: ಅಡುಗೆಯವ; ಮಲ್ಲ: ಜಟ್ಟಿ; ಭವನ: ಆಲಯ; ಬಲು: ಹೆಚ್ಚು; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಪವನಸುತ: ವಾಯುಪುತ್ರ; ಬಲುಮೆ: ಬಲ, ಶಕ್ತಿ; ಜವ: ಯಮ; ಕರೆಸು: ಬರೆಮಾಡು; ನೃಪಾಲ: ರಾಜ;

ಪದವಿಂಗಡಣೆ:
ಅವನಿಪತಿ +ಕೇಳ್+ನಿನ್ನ+ ಬಾಣಸಿನ್
ಅವನು +ಮಲ್ಲನು +ಭೀಮಸೇನನ
ಭವನದಲಿ +ಬಲು +ಮಲ್ಲವಿದ್ಯೆಯ +ಸಾಧಿಸಿದನವನು
ಪವನಸುತನಿಂ+ ಬಲುಮೆ+ಈತನು
ಜವಕೆ+ ಜವ+ ಒದಗುವನು +ನೀನ್+ಇಂದ್
ಇವನ +ಕರೆಸುವುದ್+ಎನಲು +ಮತ್ಸ್ಯ+ನೃಪಾಲನ್+ಇಂತೆಂದ

ಅಚ್ಚರಿ:
(೧) ಅವನಿಪತಿ, ನೃಪಾಲ – ಸಮನಾರ್ಥಕ ಪದಗಳು
(೨) ಭೀಮನನ್ನು ಹೊಗಳುವ ಪರಿ – ಪವನಸುತನಿಂ ಬಲುಮೆಯೀತನು ಜವಕೆ ಜವವೊದಗುವನು

ಪದ್ಯ ೨೨: ಭೀಮನು ಯಾವ ಕೆಲಸಕ್ಕೆ ವಿರಾಟನಲ್ಲಿ ಸೇರಿಕೊಂಡನು?

ಏನು ಪರಿಣತಿ ನಿನಗೆ ಬಾಣಸಿ
ಯಾನು ಭೀಮನ ಮನೆಯವನು ಮ
ತ್ತೇನು ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ
ನೀನಧಿಕನೆಂದಾ ಸಮೀರನ
ಸೂನುವನು ಮನ್ನಿಸಿದನಿತ್ತಲು
ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನಾ ಹೊಳಲ (ವಿರಾಟ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೀಮನು ವಿರಾಟನನ್ನು ಭೇಟಿಮಾಡಿದನು, ನೀನು ಯಾವುದರಲ್ಲಿ ಪರಿಣತಿ ಹೊಂದಿರುವೆ ಎಂದು ಕೇಳಲು, ಭೀಮನು ತನಗೆ ಅಡುಗೆ ಕಾರ್ಯದಲ್ಲಿ ನಿಪುಣತೆ ಹೊಂದಿರುವೆ ಎಂದು ಉತ್ತರಿಸಿದನು. ಇನ್ನಾವ ವಿದ್ಯೆ ಬರುತ್ತದೆ ಎನಲು, ತಾನು ಮಲ್ಲವಿದ್ಯೆಯಲ್ಲೂ ನಿಪುಣನೆಂದ ವಾಯುಪುತ್ರನು ಉತ್ತರಿಸಲು, ವಿರಾಟನು ಭೀಮನನ್ನು ತನ್ನ ಅಡುಗೆ ಮನೆಯಲ್ಲಿರುವಂತೆ ಅಪ್ಪಣೆಮಾಡಿದನು. ಮರುದಿನ ಅರ್ಜುನನು ಆ ಪಟ್ಟಣವನ್ನು ಹೊಕ್ಕನು.

ಅರ್ಥ:
ಪರಿಣತಿ: ಪಾಂಡಿತ್ಯ, ವಿಶೇಷತೆ; ಬಾಣಸಿ: ಅಡುಗೆಯವ; ಮನೆ: ಆಲಯ; ಭುಜಬಲ: ಪರಾಕ್ರಮ, ಶಕ್ತಿ; ಅಗ್ಗ: ಶ್ರೇಷ್ಠ; ಅರಿ: ತಿಳಿ; ಮಲ್ಲ: ಕುಸ್ತಿ; ವಿದ್ಯೆ: ಜ್ಞಾನ; ಅಧಿಕ: ಹೆಚ್ಚಳ; ಸಮೀರ: ವಾಯು; ಸೂನು: ಪುತ್ರ; ಮನ್ನಿಸು: ಅಂಗೀಕರಿಸು, ದಯಪಾಲಿಸು; ಮಾನನಿಧಿ: ಮಾನವನ್ನೇ ಐಶ್ವರ್ಯವನ್ನಾಗಿಸಿಕೊಂಡ; ಮರುದಿವಸ: ನಾಳೆ; ಹೊಕ್ಕು: ಸೇರು; ಹೊಳಲು:ಪಟ್ಟಣ, ನಗರ;

ಪದವಿಂಗಡಣೆ:
ಏನು +ಪರಿಣತಿ +ನಿನಗೆ +ಬಾಣಸಿ
ಯಾನು +ಭೀಮನ +ಮನೆಯವನು +ಮ
ತ್ತೇನು+ ಭುಜಬಲವ್+ಅರಿವೆನ್+ಅಗ್ಗದ +ಮಲ್ಲ+ವಿದ್ಯೆಯಲಿ
ನೀನ್+ಅಧಿಕನೆಂದ್+ಆ+ ಸಮೀರನ
ಸೂನುವನು+ ಮನ್ನಿಸಿದನ್+ಇತ್ತಲು
ಮಾನನಿಧಿ+ ಮರುದಿವಸ+ ಹೊಕ್ಕನು +ಪಾರ್ಥನಾ +ಹೊಳಲ

ಅಚ್ಚರಿ:
(೧) ಭೀಮ, ಸಮೀರನ ಸೂನು – ಭೀಮನನ್ನು ಕರೆದ ಪರಿ
(೨) ಭೀಮನ ಪರಿಣತಿ – ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ, ಬಾಣಸಿ