ಪದ್ಯ ೨೯: ಪಾಂಡುವಿನ ಅಂತ್ಯಕ್ರಿಯೆಯನ್ನು ಪುನಃ ಯಾರು ಮಾಡಿದರು?

ಮುನಿಗಳಾಕ್ಷಣ ಮರಳಿದರು ತ
ಜ್ಜನಪ ವೃತ್ತಾಂತವನು ವಿವರಿಸೆ
ಜನಜನಿತ ಬಳಿಕುಬ್ಬಿ ಹರಿದುದು ಶೋಕರಸ ಜಲಧಿ
ಜನಪ ಧೃತರಾಷ್ಟ್ರಾದಿ ಬಾಂಧವ
ಜನ ಪುನಃ ಸಂಸ್ಕಾರದಲಿ ಭೂ
ಪನನು ದಹಿಸಿದರೂರ್ಧ್ವ ದೈಹಿಕವಾಯ್ತು ಮಗುಳಲ್ಲಿ (ಆದಿ ಪರ್ವ, ೫ ಸಂಧಿ, ೨೯ ಪದ್ಯ)

ತಾತ್ಪರ್ಯ:
ಮುನಿಗಳು ತಕ್ಷನವೇ ತಮ್ಮ ಆಶ್ರಮಕ್ಕೆ ಹಿಂದಿರುಗಿದರು. ಪಾಂಡುವಿನ ವೃತ್ತಾಂತವು ಜನಜನಿತವಾಗಿ ದುಃಖ ಸಮುದ್ರವೇ ತುಂಬಿ ಹರಿಯಿತು. ಧೃತರಾಷ್ಟ್ರನೇ ಮೊದಲಾದ ಬಾಂಧವರು ಮತ್ತೆ ಪಾಂಡುವಿನ ಅಂತ್ಯಕ್ರಿಯೆಗಳನ್ನೂ ಅಪರ ಕ್ರಿಯೆಗಳನ್ನು ಮಾಡಿದರು.

ಅರ್ಥ:
ಮುನಿ: ಋಷಿ; ಕ್ಷಣ: ಸಮಯ; ಮರಳು: ಹಿಂದಿರುಗು; ಜನಪ: ರಾಜ; ವೃತ್ತಾಂತ: ಸಮಾಚಾರ; ವಿವರಿಸು: ವಿಸ್ತಾರವಾಗಿ ಹೇಳು; ಜನಜನಿತ: ಪ್ರಚಲಿತವಾದ; ಬಳಿಕ: ನಂತರ; ಉಬ್ಬು: ಹೆಚ್ಚಾಗು; ಹರಿ: ಹರಡು; ಶೋಕ: ದುಃಖ; ರಸ: ಸಾರ; ಜಲಧಿ: ಸಾಗರ; ಬಾಂಧವ: ನಂಟ, ಸಂಬಂಧಿಕ; ಜನ: ಮನುಷ್ಯ; ಪುನಃ: ಮತ್ತೆ; ಸಂಸ್ಕಾರ: ಪರಿಷ್ಕರಣ; ಭೂಪ: ರಾಜ; ದಹಿಸು: ಸುಡು; ಊರ್ಧ್ವ: ಅಂತ್ಯಕ್ರಿಯೆ; ದೈಹಿಕ: ಶರೀರಕ್ಕೆ ಸಂಬಂಧಿಸಿದ; ಮಗುಳು: ಹಿಂತಿರುಗು, ಪುನಃ;

ಪದವಿಂಗಡಣೆ:
ಮುನಿಗಳ್+ಆ+ಕ್ಷಣ+ ಮರಳಿದರು +ತ
ಜ್ಜನಪ+ ವೃತ್ತಾಂತವನು +ವಿವರಿಸೆ
ಜನಜನಿತ+ ಬಳಿಕುಬ್ಬಿ+ ಹರಿದುದು +ಶೋಕರಸ +ಜಲಧಿ
ಜನಪ +ಧೃತರಾಷ್ಟ್ರಾದಿ +ಬಾಂಧವ
ಜನ +ಪುನಃ +ಸಂಸ್ಕಾರದಲಿ +ಭೂ
ಪನನು +ದಹಿಸಿದರ್+ಊರ್ಧ್ವ+ ದೈಹಿಕವಾಯ್ತು +ಮಗುಳಲ್ಲಿ

ಅಚ್ಚರಿ:
(೧) ಜನಪ – ೨, ೪ ಸಾಲಿನ ಮೊದಲ ಪದ
(೨) ಜನ, ಜನಜನಿತ, ಜನಪ – ಪದಗಳ ಬಳಕೆ

ಪದ್ಯ ೩: ಬಲರಾಮನೇಕೆ ಕರಗಿದನು?

ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ (ಗದಾ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣ, ಭೀಷ್ಮ, ಶಲ್ಯ, ಕರ್ಣ, ಸೈಂಧವ, ನೂರು ಮಂದಿ ತಮ್ಮಂದಿರು ಮಕ್ಕಳು ಗೆಳೆಯರು, ಜ್ಞಾತಿಗಳು, ಬಾಂಧವರು ಎಲ್ಲರನ್ನೂ ಹರಕೆಯ ಕುರಿಗಳಂತೆ ಬಲಿಕೊಟ್ಟೆ. ಜಯದ ನಿಧಿ ಕಾಣಲಿಲ್ಲವೇ? ಶಿವ ಶಿವಾ ಎಂದು ಬಲರಾಮ ಕರುಣೆಯಿಂದ ಕರಗಿ ಹೋದನು.

ಅರ್ಥ:
ಗುರು: ಆಚಾರ್ಯ; ಸುತ: ಮಗ; ಸೋದರ: ತಮ್ಮ; ಶತ: ನೂರು; ಪುತ್ರ: ಸುತ; ಮಿತ್ರ: ಸ್ನೇಹಿತ; ಜ್ಞಾತಿ: ದಾಯಾದಿ; ಬಾಂಧವ: ಬಂಧುಜನ; ಹರಸುಕುರಿ: ಹರಕೆಯ ಕುರಿ; ಗೋಚರಿಸು: ಗೊತ್ತುಪಡಿಸು; ರಣ: ಯುದ್ಧ; ವಿಜಯ: ಗೆಲುವು; ನಿಧಿ: ಸಿರಿ; ಹರ: ಶಿವ; ಕರಗು: ಕನಿಕರ ಪಡು; ಕರುಣ: ದಯೆ;

ಪದವಿಂಗಡಣೆ:
ಗುರುವೊ +ಗಂಗಾಸುತನೊ +ಮಾದ್ರೇ
ಶ್ವರನೊ +ಕರ್ಣನೊ +ಸೈಂಧವನೊ +ಸೋ
ದರರ +ಶತಕವೊ +ಪುತ್ರ+ ಮಿತ್ರ+ ಜ್ಞಾತಿ +ಬಾಂಧವರೊ
ಹರಸಿ +ಕುರಿಗಳನ್+ಇಕ್ಕಿದಡೆ+ ಗೋ
ಚರಿಸದೇ +ರಣ+ವಿಜಯನಿಧಿ +ಹರ
ಹರ +ಎನುತ +ಕರಗಿದನು +ಕಡು +ಕರುಣದಲಿ +ಬಲರಾಮ

ಅಚ್ಚರಿ:
(೧) ರೂಪಕದ ಪ್ರಯೋಗ – ಹರಸಿ ಕುರಿಗಳನಿಕ್ಕಿದಡೆ ಗೋಚರಿಸದೇ ರಣವಿಜಯನಿಧಿ

ಪದ್ಯ ೨೨: ಅರ್ಜುನನು ಏನೆಂದು ಕೂಗಿದನು?

ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರಿವನಿನ್ನಾಹವ ವಿಲಂಬವ ಮಾಡಬೇಡೆಂದ (ಗದಾ ಪರ್ವ, ೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸತ್ಯಕರ್ಮ, ಸುಶರ್ಮ, ಅವರ ಸಹೋದರರು, ಗೋತ್ರ ಬಾಂಧವರೆಲ್ಲರನ್ನು ಅರ್ಜುನನು ಸಂಹರಿಸಿ, ದುರ್ಯೋಧನ ನಿನ್ನಪ್ತರೆಲ್ಲರನ್ನೂ ಕೊಂದಿದ್ದೇನೆ, ಯುದ್ಧಕ್ಕೆ ಬಾ ತಡಮಾಡಬೇಡ ಎಂದು ಕೂಗಿದನು.

ಅರ್ಥ:
ತರಿ: ಸೀಳು; ಅಗ್ಗ: ಶ್ರೇಷ್ಠ; ಧುರ: ಯುದ್ಧ, ಕಾಳಗ; ಸಂತೈಸು: ತಾಳ್ಮೆ, ಸಹಿಸು; ದೊರೆ: ರಾಜ; ಸಹಭವ: ಸಹೋದರ; ಗೋತ್ರ: ವಂಶ; ಬಾಂಧವ: ಸಂಬಂಧಿಕ, ಆಪ್ತ; ಒರಸು: ನಾಶ; ಬರಲಿ: ಆಗಮಿಸು; ಆಪ್ತ: ಹತ್ತಿರದ; ಕೊಡು: ನೀಡು; ಹರಿ: ನಾಶ; ಆಹವ: ಯುದ್ಧ; ವಿಲಂಬ: ತಡ;

ಪದವಿಂಗಡಣೆ:
ತರಿದನ್+ಅಗ್ಗದ +ಸತ್ಯಕರ್ಮನ
ಧುರವ +ಸಂತೈಸುವ +ತ್ರಿಗರ್ತರ
ದೊರೆ +ಸುಶರ್ಮನನ್+ ಅವನ +ಸಹಭವ +ಗೋತ್ರ +ಬಾಂಧವರ
ಒರಸಿದನು +ಕುರುರಾಯನ್+ಆವೆಡೆ
ಬರಲಿ+ ತನ್ನಾಪ್ತರಿಗೆ +ಕೊಟ್ಟೆನು
ಹರಿವನಿನ್+ಆಹವ +ವಿಲಂಬವ +ಮಾಡಬೇಡೆಂದ

ಅಚ್ಚರಿ:
(೧) ಸಹೋದರ ಎಂದು ಹೇಳುವ ಪರಿ – ಅವನ ಸಹಭವ ಗೋತ್ರ ಬಾಂಧವರ

ಪದ್ಯ ೨೭: ಬಂಧುಗಳು ಏನು ಹೇಳಿ ಯುದ್ಧಕ್ಕೆ ಮುನ್ನುಗ್ಗಿದರು?

ಅರಿಯಬಹುದೈ ಭಾವಮೈದುನ
ಮೆರೆ ಭುಜಾಟೋಪವನು ಹಿಂದಣ
ಕೊರತೆಯನು ಕಳೆ ಮಗನೆ ಬೊಪ್ಪಕುಲಕ್ರಮಾಗತವ
ಮರೆಯದಿರು ಮುಂಗಲಿತನಕೆ ತಾ
ಸಿರಿವೆ ನಾ ಮುನ್ನೆಂದು ತಮ್ಮೊಳು
ಜರೆದರೊಡವುಟ್ಟಿದರು ಬಾಂಧವ ಮಿತ್ರ ಭೂಮಿಪರು (ಗದಾ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸೇನೆಯಲ್ಲಿದ್ದ ಬಂಧುಗಳು, ಸ್ನೇಹಿತರಾಗಿದ್ದ ರಾಜರು, ಭಾವಮೈದುನನೇ, ಈಗ ತಿಳಿಯುತ್ತದೆ, ನಿನ್ನ ಬಾಹುಬಲವನ್ನು ಮೆರೆ. ಹಿಂದಾದ ಸೋಲನ್ನು ತಿದ್ದಿಕೋ, ಮಗನೇ ನಿನ್ನ ತಂದೆ ಅಜ್ಜ ಮೊದಲಾದವರ ಕೀರ್ತಿಯನ್ನು ಮರೆಯಬೇಡ, ನಾನು ಮುನ್ನುಗ್ಗಿ ಯುದ್ಧಮಾಡುತ್ತೇನೆ, ನಿನಗಿಂತ ಮೊದಲು ನಾನು ಎಂದೆಲ್ಲಾ ಹೇಳುತ್ತಾ ಹೊರಟರು.

ಅರ್ಥ:
ಅರಿ: ತಿಳಿ; ಭಾವಮೈದುನ: ಗಂಡನ ಯಾ ಹೆಂಡತಿಯ ಸಹೋದರ; ಮೆರೆ: ಶೋಭಿಸು; ಭುಜಾಟೋಪ: ಪರಾಕ್ರಮ; ಹಿಂದಣ: ಹಿಂದಿನ; ಕೊರತೆ: ನ್ಯೂನ್ಯತೆ; ಕಳೆ: ನೀಗಿಸು; ಮಗ: ಪುತ್ರ; ಬೊಪ್ಪ: ತಂದೆ; ಕುಲ: ವಂಶ; ಕ್ರಮ: ನಡೆಯುವಿಕೆ; ಮರೆ: ನೆನಪಿನಿಂದ ದೂರಮಾಡು; ಕಲಿ: ಶೂರ; ಸಿರಿ: ಐಶ್ವರ್ಯ; ಮುನ್ನ: ಹಿಂದೆ ನಡೆದ; ಜರೆ: ಬಯ್ಯು; ಒಡವುಟ್ಟು: ಜೊತೆಯಲ್ಲಿ ಹುಟ್ಟಿದ; ಬಾಂಧವ: ಸಹೊದರ; ಮಿತ್ರ: ಸ್ನೇಹಿತ; ಭೂಮಿಪ: ರಾಜ;

ಪದವಿಂಗಡಣೆ:
ಅರಿಯಬಹುದೈ +ಭಾವಮೈದುನ
ಮೆರೆ +ಭುಜಾಟೋಪವನು +ಹಿಂದಣ
ಕೊರತೆಯನು +ಕಳೆ +ಮಗನೆ +ಬೊಪ್ಪ+ಕುಲ+ಕ್ರಮಾಗತವ
ಮರೆಯದಿರು +ಮುಂಗಲಿತನಕೆ +ತಾ
ಸಿರಿವೆ +ನಾ +ಮುನ್ನೆಂದು +ತಮ್ಮೊಳು
ಜರೆದರ್+ಒಡವುಟ್ಟಿದರು +ಬಾಂಧವ +ಮಿತ್ರ +ಭೂಮಿಪರು

ಅಚ್ಚರಿ:
(೧) ಪರಾಕ್ರಮಿ ಎಂದು ಹೇಳಲು – ಭುಜಾಟೋಪ ಪದದ ಬಳಕೆ

ಪದ್ಯ ೨೪: ಸೈಂಧವನು ಎಲ್ಲಿ ನಿಂತನು?

ಪದುಮ ಸೂಚೀವ್ಯೂಹ ಮಧ್ಯದೊ
ಳಿದಟರನು ನಿಲಿಸಿದನು ಸಮರಾ
ಗ್ರದಲಿ ಅವನಳಲಿಗರನಾಪ್ತರನವನ ಬಾಂಧವರ
ಕದನಗಲಿಸೈಂಧವನನಾ ಮ
ಧ್ಯದಲಿ ನಿಲಿಸಿದನಮಮ ಸಮರಕೆ
ಮದನ ಮಥನನು ಮೊಗಸಲಸದಳವೆನಿಸಿ ರಂಜಿಸಿತು (ದ್ರೋಣ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪದ್ಮವ್ಯೂಹ ಸೂಚೀವ್ಯೂಹಗಳ ನದುವೆ ಯುದ್ಧದಲ್ಲಿ ವೀರರಾದ ಸೈಂಧವನ ಬಂಧು ಬಾಂಧವರನ್ನು ನಿಲ್ಲಿಸಿ, ಅವರ ನದುವೆ ಸೈಂಧವನನ್ನು ನಿಲಿಸಿದನು. ಶಿವನು ಮುಖವೆತ್ತಿ ನೋಡಲೂ ಅಸಾಧ್ಯವೆನ್ನಿಸುವ ರೀತಿಯಲ್ಲಿ ಸೈನ್ಯವು ಯುದ್ಧ ಸನ್ನದ್ಧವಾಯಿತು.

ಅರ್ಥ:
ಪದುಮ: ಕಮಲ, ಪದ್ಮ; ಸೂಚಿ: ಸೂಜಿ; ವ್ಯೂಹ: ಗುಂಪು; ಮಧ್ಯ: ನಡುವೆ; ನಿಲಿಸು: ಸ್ಥಾಪಿಸು; ಸಮರ: ಯುದ್ಧ; ಅಗ್ರ: ಮುಂಭಾಗ; ಆಪ್ತ: ಹತ್ತಿರದವರು; ಬಾಂಧವ: ಬಂಧು ಬಳಗ; ಕದನ: ಯುದ್ಧ; ಮಧ್ಯ: ನಡುವೆ; ಅಮಮ: ಅಬ್ಬಾ; ಸಮರ: ಯುದ್ಧ; ಮದನ: ಮನ್ಮಥ; ಮಥನ: ನಾಶ; ಮೊಗ: ಮುಖ, ಮೋರೆ; ಅಸದಳ: ಅಸಾಧ್ಯ; ರಂಜಿಸು: ಹೊಳೆ, ಪ್ರಕಾಶಿಸು; ಕಲಿ: ಶೂರ; ಅಳಲಿಗೆ: ವ್ಯಥೆಗೊಂಡವ;

ಪದವಿಂಗಡಣೆ:
ಪದುಮ+ ಸೂಚೀವ್ಯೂಹ +ಮಧ್ಯದೊಳ್
ಇದಟರನು +ನಿಲಿಸಿದನು +ಸಮರಾ
ಗ್ರದಲಿ +ಅವನ್+ಅಳಲಿಗರನ್+ಆಪ್ತರನ್+ಅವನ +ಬಾಂಧವರ
ಕದನ+ಕಲಿ+ಸೈಂಧವನನ್+ಆ+ ಮ
ಧ್ಯದಲಿ +ನಿಲಿಸಿದನ್+ಅಮಮ +ಸಮರಕೆ
ಮದನ +ಮಥನನು +ಮೊಗಸಲ್+ಅಸದಳವ್+ಎನಿಸಿ +ರಂಜಿಸಿತು

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮದನ ಮಥನನು ಮೊಗಸಲಸದಳವೆನಿಸಿ
(೨) ಶಿವನನ್ನು ಮದನ ಮಥನ ಎಂದು ಕರೆದಿರುವುದು

ಪದ್ಯ ೪೪: ಉತ್ತರನು ಸಾರಥಿಯನ್ನು ಯಾರೆಂದು ಊಹಿಸಿದನು?

ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡಕು
ಮಾರರಾಯುಧತತಿಯ ನೀನೆಂತರಿವೆ ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ಸಾರಥಿ ನೀನಾದರು ಯಾರು? ಅರ್ಜುನನೋ, ನಕುಲನೋ, ವಾಯುಪುತ್ರನಾದ ಭೀಮನೋ, ವೀರ ಯುಧಿಷ್ಠಿರನೋ, ಸಹದೇವನೋ ಅಥವ ಅವರ ಬಾಂಧವನೋ, ಎಲೈ ಶೂರ,ನಾನು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ತಿಳಿಸು, ಈ ಪಾಂಡವರ ಆಯುಧಗಳೆಲ್ಲವೂ ನಿನಗೆ ಹೇಗೆ ತಿಳಿದಿದೆ ಎಂದು ಕೇಳಿದನು.

ಅರ್ಥ:
ವೀರ: ಶೂರ; ಸುತ: ಮಗ; ಮಾರುತ: ವಾಯು; ಮೇಣ್: ಅಥವ; ಬಾಂಧವ: ಸಂಬಂಹಿಕ; ಧೀರ: ಶೂರ; ಹೇಳು: ತಿಳಿಸು; ಬೇಡು: ಯಾಚಿಸು; ಕಾರಣ: ನಿಮಿತ್ತ, ಹೇತು; ವಿಸ್ತರಿಸು: ವಿವರಣೆ; ಕುಮಾರ: ಮಕ್ಕಳು; ಆಯುಧ: ಶಸ್ತ್ರ; ತತಿ: ಗುಂಪು; ಅರಿ: ತಿಳಿ; ಹೇಳು: ತಿಳಿಸು;

ಪದವಿಂಗಡಣೆ:
ಆರು+ ನೀನ್+ಅರ್ಜುನನೊ +ನಕುಲನೊ
ಮಾರುತನ +ಸುತನೋ +ಯುಧಿಷ್ಠಿರ
ವೀರನೋ +ಸಹದೇವನೋ +ಮೇಣ್+ಅವರ +ಬಾಂಧವನೊ
ಧೀರ +ಹೇಳೈ +ಬೇಡಿಕೊಂಬೆನು
ಕಾರಣವ +ವಿಸ್ತರಿಸು +ಪಾಂಡ+ಕು
ಮಾರರ್+ಆಯುಧ+ತತಿಯ+ ನೀನೆಂತರಿವೆ+ ಹೇಳೆಂದ

ಅಚ್ಚರಿ:
(೧) ವೀರ, ಧೀರ; ಸುತ, ಕುಮಾರ – ಸಮನಾರ್ಥಕ ಪದ