ಪದ್ಯ ೩೨: ಶಕುನಿಯ ಸೈನ್ಯವನ್ನು ಯಾರು ಕೊಂದರು?

ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ (ಗದಾ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶಕುನಿಯ ಸೇನೆಯು ವಡಬಾಗ್ನಿಯನ್ನು ಕವಿಯುವ ದುಂಬಿಗಳಂತೆ ಸಹದೇವನನ್ನು ಸುತ್ತುವರಿದಿತು. ಸಹದೇವನು ನಿಮಿಷಾರ್ಧದಲ್ಲಿ ಅವರೆಲ್ಲರನ್ನೂ ತಡೆದು ಶಕುನಿಯ ಸೇನೆಯನ್ನು ಕೊಂದನು.

ಅರ್ಥ:
ಕವಿ: ಆವರಿಸು; ಪರಿವಾರ: ಪರಿಜನ, ಬಂಧುಜನ; ವಡಬ: ಸಮುದ್ರದೊಳಗಿರುವ ಬೆಂಕಿ; ತಿವಿ: ಚುಚ್ಚು; ತುಂಬಿ: ದುಂಬಿ, ಭ್ರಮರ; ಬವರ: ಕಾಳಗ, ಯುದ್ಧ; ಮಂಡಳಿಸು: ಸುತ್ತುವರಿ; ರಥ: ಬಂಡಿ; ಅಗ್ರ: ಮುಂಭಾಗ; ತೆವರು: ಹಿಮ್ಮೆಟ್ಟು, ಅಟ್ಟು, ಓಡಿಸು; ಅನಿಬರ: ಅಷ್ಟುಜನ; ನಿಮಿಷ: ಕ್ಷಣ; ಸಂತವಿಸು: ಸಮಾಧಾನಗೊಳಿಸು; ಕೊಂದು: ಕೊಲ್ಲು; ಬಲ: ಶಕ್ತಿ, ಸೈನ್ಯ;

ಪದವಿಂಗಡಣೆ:
ಕವಿದುದಾ+ ಪರಿವಾರ +ವಡಬನ
ತಿವಿವ+ ತುಂಬಿಗಳಂತೆ +ಶಕುನಿಯ
ಬವರಿಗರು +ಮಂಡಳಿಸೆ +ಸಹದೇವನ +ರಥಾಗ್ರದಲಿ
ತೆವರಿಸಿದನ್+ಅನಿಬರ +ಚತುರ್ಬಲ
ನಿವಹವನು +ನಿಮಿಷಾರ್ಧದಲಿ +ಸಂ
ತವಿಸಿದನು +ಸಹದೇವ +ಕೊಂದನು +ಸೌಬಲನ +ಬಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕವಿದುದಾ ಪರಿವಾರ ವಡಬನತಿವಿವ ತುಂಬಿಗಳಂತೆ

ಪದ್ಯ ೯: ಪಾಂಡವರ ಸೇನಾಪತಿಯಾರು?

ಇವ ಕಣಾ ಪಾಂಡವರ ಸೇನಾ
ರ್ಣವಕೆ ನಾಯಕನಿವನ ಕೆಲಬಲ
ದವರು ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ
ಬವರಿಗರು ಪಾಂಚಾಲಕುಲಸಂ
ಭವರು ದ್ರುಪದ ಸಹೋದರರು ಮ
ತ್ತಿವರು ಸೃಂಜಯ ವರ ಯುಧಾಮನ್ಯೂತ್ತಮೌಂಜಸರು (ಭೀಷ್ಮ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ನೋಡು ದುರ್ಯೋಧನ ಅಲ್ಲಿ ಕಾಣುವವನೇ ಪಾಂಡವರ ಸೇನಾ ಸಮುದ್ರದ ಸೇನಾಧಿಪತಿ, ಸುತ್ತ ನಿಂತ ರಥಿಕರು ಪಾಂಚಾಲ ವಂಶದ ದ್ರುಪದನ ಸಹೋದರರು. ಇವರು ಯುಧಾಮನ್ಯು, ಸೃಂಜಯ ಮತ್ತು ಉತ್ತಮೌಂಜಸರು.

ಅರ್ಥ:
ಅರ್ಣವ: ಸಮುದ್ರ; ನಾಯಕ: ಒಡೆಯ; ಕೆಲಬಲ: ಅಕ್ಕಪಕ್ಕ, ಎಡಬಲ; ತೆಕ್ಕೆ: ಅಪ್ಪುಗೆ, ಆಲಿಂಗನ; ತೇರು:ಬಂಡಿ; ತೇಜಿ: ಕುದುರೆ; ಥಟ್ಟು: ಪಕ್ಕ, ಕಡೆ; ಉನ್ನತಿ: ಏಳಿಗೆ; ಬವರ: ಕಾಳಗ, ಯುದ್ಧ; ಬವರಿಗರು: ಯುದ್ಧಮಾಡುವವರು; ಕುಲ: ವಂಶ; ಸಂಭವ: ಹುಟ್ಟು; ಸಹೋದರ: ಅಣ್ಣ ತಮ್ಮಂದಿರು;

ಪದವಿಂಗಡಣೆ:
ಇವ +ಕಣಾ +ಪಾಂಡವರ +ಸೇನ
ಅರ್ಣವಕೆ +ನಾಯಕನ್+ಇವನ +ಕೆಲಬಲ
ದವರು +ತೆಕ್ಕೆಯ +ತೇರ +ತೇಜಿಯ+ ಥಟ್ಟಿನ್+ಉನ್ನತಿಯ
ಬವರಿಗರು+ ಪಾಂಚಾಲ+ಕುಲ+ಸಂ
ಭವರು +ದ್ರುಪದ+ ಸಹೋದರರು +ಮ
ತ್ತಿವರು+ ಸೃಂಜಯ+ ವರ+ ಯುಧಾಮನ್ಯ+ಉತ್ತಮೌಂಜಸರು

ಅಚ್ಚರಿ:
(೧) ಸೇನಾಗಾತ್ರವನ್ನು ಸಮುದ್ರಕ್ಕೆ ಹೋಲಿಸುವ ಪರಿ – ಪಾಂಡವರ ಸೇನಾರ್ಣವಕೆ ನಾಯಕ
(೨) ತ ಕಾರದ ಸಾಲು ಪದ – ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ

ಪದ್ಯ ೩೪: ದುಶ್ಯಾಸನ ಮತ್ತು ಭೀಮರು ಯಾವುದರಿಂದ ಯುದ್ಧವನ್ನು ಮುಂದುವರೆಸಿದರು?

ಸವೆಯೆ ಸರಳೆಚ್ಚಾಡಿದರು ಕಲಿ
ಪವನಸುತ ದುಶ್ಯಾಸನರು ರಣ
ದವಕಿಗರ ಕೋಪಾಗ್ನಿ ಭುಗಿಭುಗಿಲೆಂದುದಡಿಗಡಿಗೆ
ಅವನಿಗಿಳಿಬಿಡು ಧನುವ ತೆಗೆ ಖಡು
ಗವನೆನುತ ರಥದಿಂದ ಹಾಯ್ದರು
ಬವರಿಗರು ಬಿನ್ನಣದಿ ಹೊಯ್ದಾಡಿದರಡಾಯುಧದಿ (ಕರ್ಣ ಪರ್ವ, ೧೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಬಾಣಗಳ ಹೋರಟವು ಕಡಿಮೆಯಾಗುತ್ತಿದ್ದಂತೆ ಇಬ್ಬರ ಕೋಪಾಗ್ನಿಯು ಭುಗುಭುಗಿಲೆಂದು ಹೆಚ್ಚಾಗ ತೊಡಗಿತು, ಭೂಮಿಗೆ ಇಳಿ, ಧನಸ್ಸನ್ನು ಬಿಡು, ತೆಗೆ ಕತ್ತಿಯನು ಎಂದು ಇಬ್ಬರೂ ಹೇಳುತ್ತಾ ಭೂಮಿಗೆ ಕತ್ತಿಯೊಡನೆ ಜಿಗಿದು ಹೋರಾಡಿದರು.

ಅರ್ಥ:
ಸವೆ: ಕುಗ್ಗು, ಕಡಿಮೆಯಾಗು; ಸರಳು: ಬಾಣ; ಎಚ್ಚು: ಬಾಣಬಿಡು; ಕಲಿ: ಶೂರ; ಪವನಸುತ: ವಾಯುಪುತ್ರ (ಭೀಮ); ರಣ: ಯುದ್ಧ; ರಣದವಕಿ: ಯುದ್ಧದಲ್ಲಿ ಉತ್ಸುಕನಾದ; ಕೋಪ: ಕ್ರೋಧ; ಅಗ್ನಿ: ಬೆಂಕಿ; ಭುಗುಭುಗಿಲು: ಭುಗು ಭುಗು ಎಂದು ಶಬ್ದ ಮಾಡುವ; ಅಡಿಗಡಿಗೆ: ಹೆಜ್ಜೆಹೆಜ್ಜೆಗೂ; ಅವನಿ: ಭೂಮಿ; ಇಳಿ: ಕೆಳಕ್ಕೆ ಬಾ; ಧನು: ಬಿಲ್ಲು; ತೆಗೆ: ಹೊರಹಾಕು; ಖಡುಗ: ಕತ್ತಿ; ರಥ: ಬಂಡಿ; ಹಾಯ್ದು: ಜಿಗಿ; ಬವರ: ಯುದ್ಧ, ಧುರ, ಕಾಳಗ; ಬಿನ್ನಣ: ಪಾಂಡಿತ್ಯ; ಹೊಯ್ದಾಡು: ಹೋರಾಡು; ಅಡಾಯುಧ: ಮೇಲಕ್ಕೆ ಬಾಗಿದ ಕತ್ತಿ;

ಪದವಿಂಗಡಣೆ:
ಸವೆಯೆ +ಸರಳ್+ಎಚ್ಚಾಡಿದರು +ಕಲಿ
ಪವನಸುತ +ದುಶ್ಯಾಸನರು +ರಣ
ದವಕಿಗರ+ ಕೋಪಾಗ್ನಿ +ಭುಗಿಭುಗಿಲೆಂದುದ್+ಅಡಿಗಡಿಗೆ
ಅವನಿಗ್+ಇಳಿ+ಬಿಡು +ಧನುವ +ತೆಗೆ +ಖಡು
ಗವನ್+ಎನುತ +ರಥದಿಂದ +ಹಾಯ್ದರು
ಬವರಿಗರು+ ಬಿನ್ನಣದಿ +ಹೊಯ್ದಾಡಿದರ್+ಅಡಾಯುಧದಿ

ಅಚ್ಚರಿ:
(೧) ರಣದವಕಿ, ಬವರಿಗರು – ಇಬ್ಬರ ರಣದುತ್ಸಾಹವನ್ನು ವರ್ಣಿಸುವ ಪದ
(೨) ಖಡ್ಗದ ವರ್ಣನೆ – ಅಡಾಯುಧ