ಪದ್ಯ ೮: ಧೃತರಾಷ್ಟ್ರನು ಹೇಗೆ ದುಃಖಿಸಿದನು?

ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲುಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧನೃಪ (ದ್ರೋಣ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸಂಜಯ, ನಾನು ಬಹಳವಾಗಿ ನೊಂದಿದ್ದೇನೆ, ದುರ್ಯೋಧನನು ಉದ್ಧಾರವಾಗಬಹುದೆಂಬ ಆಶೆ ಬಿಟ್ಟುಹೋಗಿದೆ, ಸುಟ್ಟಗಾಯದ ಮೇಲೆ ಸಾಸಿವೆಯ ಪುಡಿಯನ್ನು ಬಳಿಯಬೇಡ, ನಿನಗೆ ದಯೆಯಿಲ್ಲ, ನಿಮಗೆ ಎಷ್ಟು ಬಲವಿದ್ದರೂ ಶ್ರೀಕೃಷ್ಣನ ವಿರೋಧಿಗಳಾಗಿದ್ದೀರಿ ಎಂದು ಎಷ್ಟು ಬಾರಿ ಎಷ್ಟು ಬಗೆಯಿಂದ ಹೇಳಿದರು ಕೇಳದೇ ಹೋದ ನನ್ನ ಮಗ, ನಾನೇನು ಮಾಡಲಿ ಎಂದು ನೊಂದುಕೊಂಡನು.

ಅರ್ಥ:
ಘಾಸಿ: ದಣಿವು, ಆಯಾಸ; ಮಗ: ಸುತ; ಆಸೆ: ಇಚ್ಛೆ; ಬೀತು: ಕಡಿಮೆಯಾಗು, ಬತ್ತು; ಬೆಂದು: ಪಕ್ವ; ಹುಣ್ಣು: ಗಾಯ; ಬಳಿ: ಹರಡು; ದಯೆ: ಕರುಣೆ; ಬಲುಹು: ಶಕ್ತಿ; ಹಗೆ: ವೈರ; ಹರಿಬ: ಕಾಳಗ; ಏಸು: ಎಷ್ಟು; ಒರಲು: ಹೇಳು ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ಘಾಸಿಯಾದೆನು +ಮಗನ +ಮೇಲಿನ್
ಆಸೆ +ಬೀತುದು +ಬೆಂದ +ಹುಣ್ಣಲಿ
ಸಾಸಿವೆಯ +ಬಳಿಯದಿರು +ಸಂಜಯ +ನಿನಗೆ +ದಯವಿಲ್ಲ
ಏಸು+ ಬಲುಹುಂಟಾದರೆಯು+ ಹಗೆ
ವಾಸುದೇವನ +ಹರಿಬವ್+ಎಂದಾನ್
ಏಸನ್+ಒರಲಿದೆನ್+ಏನ +ಮಾಡುವೆನ್+ಎಂದನ್+ಅಂಧನೃಪ

ಅಚ್ಚರಿ:
(೧) ಲೋಕ ನುಡಿ – ಬೆಂದ ಹುಣ್ಣಲಿ ಸಾಸಿವೆಯ ಬಳಿಯದಿರು

ಪದ್ಯ ೨೦: ದೇವತೆಗಳಾದಿ ಶಿವನನ್ನು ಹೇಗೆ ಆರಾಧಿಸಿದರು?

ಪುಳಕಜಲವುಬ್ಬರಿಸೆ ಕುಸುಮಾಂ
ಜಳಿಯನಂಘ್ರಿದ್ವಯಕೆ ಹಾಯಿಕಿ
ನಳಿನಭವ ಮೆಯ್ಯಿಕ್ಕಿದನು ಭಯಭರಿತ ಭಕ್ತಿಯಲಿ
ಬಳಿಯಲಮರೇಂದ್ರಾದಿ ದಿವಿಜಾ
ವಳಿಗಳವನಿಗೆ ಮೆಯ್ಯ ಚಾಚಿದ
ರುಲಿವುತಿರ್ದುದು ಜಯಜಯ ಧ್ವಾನದಲಿ ಸುರಕಟಕ (ಕರ್ಣ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶಿವನನ್ನು ನೋಡಿದ ಬ್ರಹ್ಮನು ರೋಮಾಂಚನ ಗೊಂಡು ಸ್ವೇದಗಳುಂಟಾದವು. ಬೊಗಸೆಯಲ್ಲಿ ಹೂಗಳನ್ನು ಶಿವನ ಪಾದಗಳಿಗೆ ಹಾಕಿ, ಭಯಭರಿತ ಭಕ್ತಿಯಿಂದ ಬ್ರಹ್ಮನು ನಮಸ್ಕರಿಸಿದನು. ಆವನೊಡನೆ ಸಮಸ್ತದೇವತೆಗಳೂ ನಮಸ್ಕರಿಸಿ ಜಯಘೋಷವನ್ನು ಹಾಡಿದರು.

ಅರ್ಥ:
ಪುಳಕ: ಮೈನವಿರೇಳುವಿಕೆ, ರೋಮಾಂಚನ; ಜಲ: ನೀರು; ಪುಳಕಜಲ: ರೋಮಾಂಚನದ ನೀರು; ಉಬ್ಬರಿಸು:ಅತಿಶಯ, ಹೆಚ್ಚಳ; ಕುಸುಮ: ಹೂವು; ಆಂಜಳಿ:ಕೈಬೊಗಸೆ, ಜೋಡಿಸಿದ ಕೈಗಳು; ಅಂಘ್ರಿ: ಪಾದ; ದ್ವಯ: ಎರಡು; ಹಾಯಿಕಿ: ಹಾಕಿ; ನಳಿನ:ಕಮಲ; ನಳಿನಭವ: ಕಮಲದಿಂದ ಹುಟ್ಟಿದ (ಬ್ರಹ್ಮ); ಮೈಯ್ಯಿಕ್ಕು: ನಮಸ್ಕರಿಸು; ಭಯ: ಹೆದರಿಕೆ; ಭರಿತ: ತುಂಬಿದ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬಳಿ: ಹತ್ತಿರ; ಅಮರೇಂದ್ರ: ದೇವತೆಗಳ ರಾಜ (ಇಂದ್ರ); ಆದಿ: ಮುಂತಾದ; ದಿವಿಜ: ಸುರ, ದೇತವೆ; ಆವಳಿ: ಗುಂಪು; ಮೆಯ್ಯಚಾಚು: ದೀರ್ಘದಂಡ ನಮಸ್ಕಾರ; ಉಲಿವು:ಧ್ವನಿ; ಜಯ: ಗೆಲುವು, ಹೊಗಳು; ಧ್ವಾನ: ಧ್ವನಿ; ಸುರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಪುಳಕಜಲವ್+ಉಬ್ಬರಿಸೆ +ಕುಸುಮಾಂ
ಜಳಿಯನ್+ಅಂಘ್ರಿ+ದ್ವಯಕೆ +ಹಾಯಿಕಿ
ನಳಿನಭವ+ ಮೆಯ್ಯಿಕ್ಕಿದನು+ ಭಯಭರಿತ+ ಭಕ್ತಿಯಲಿ
ಬಳಿಯಲ್+ಅಮರೇಂದ್ರಾದಿ +ದಿವಿಜಾ
ವಳಿಗಳ್+ಅವನಿಗೆ+ ಮೆಯ್ಯ ಚಾಚಿದರ್
ಉಲಿವುತಿರ್ದುದು +ಜಯಜಯ +ಧ್ವಾನದಲಿ +ಸುರಕಟಕ

ಅಚ್ಚರಿ:
(೧) ಕುಸುಮಾಂಜಳಿ, ದಿವಿಜಾವಳಿ, ಬಳಿ – ಪ್ರಾಸ ಪದಗಳು
(೨) ಮೆಯ್ಯಿಕ್ಕು, ಮೆಯ್ಯ ಚಾಚು – ನಮಸ್ಕರಿಸು ಎಂದು ಹೇಳಲು ಬಳಸಿದ ಪದ
(೩) ಕಟಕ, ಆವಳಿ – ಗುಂಪು ಪದದ ಸಮನಾರ್ಥ