ಪದ್ಯ ೨೭: ಕೌರವನ ಸ್ಥಿತಿಯನ್ನು ಸಂಜಯನು ಹೇಗೆ ವಿವರಿಸಿದನು?

ಬೀಳುಕೊಂಡನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರು ಹೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ (ಗದಾ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಾನು ಮ್ನಿಯಿಂದ ಬೀಳ್ಕೊಂಡು ಅರಸನನ್ನು ಹುಡುಕುತ್ತಾ ಹೋಗುವಾಗ ಸಾಲು ಹೆಣಗಳೊಟ್ಟಿಲ ಮೇಲೆ, ತಲೆಯಿಲ್ಲದ ಶರೀರಗಳ ಪಕ್ಕದಲ್ಲಿ ರಕ್ತ ಪೂರಿತವಾದ ಜಾಗದಲ್ಲಿ ಏರುತ್ತಾ, ಬೀಳುತ್ತಾ ನಿಲ್ಲುತ್ತಾ ಬಳಲುತ್ತಾ ಕಾಲು ನಡಿಗೆಯಲ್ಲಿ ಹೋಗುತ್ತಿದ್ದ ಕೌರವನನ್ನು ಕಂಡು ಅವನೊಡನೆ ದ್ವೈಪಾಯನ ಸರೋವರದ ದಡದವರೆಗೆ ಹೋದೆನು.

ಅರ್ಥ:
ಬೀಳುಕೊಂಡು: ತೆರಳು; ಮುನಿ: ಋಷಿ; ಅವನೀಪಾಲಕ: ರಾಜ; ಅರಸು: ಹುಡುಕು; ಕಳ: ಯುದ್ಧಭೂಮಿ; ಸಾಲ: ಗುಂಪು; ಹೆಣ: ಜೀವವಿಲ್ಲದ ಶರೀರ; ಕಬಂಧ: ತಲೆಯಿಲ್ಲದ ದೇಹ, ಮುಂಡ; ರುಧಿರ: ರಕ್ತ; ಪೂರ: ಪೂರ್ಣ; ಬೀಳುತೇಳು: ಹತ್ತು, ಇಳಿ; ನಿಲು: ನಿಲ್ಲು, ತಡೆ; ಬಳಲು: ಆಯಾಸಗೊಳ್ಳು; ಕಾಲುನಡೆ: ಪಾದದಿಂದ ಚಲಿಸುತ್ತಾ; ಸುಳಿ: ಕಾಣಿಸಿಕೊಳ್ಳು; ಭೂಪಾಲಕ: ರಾಜ; ಕಂಡು: ನೋಡು; ಬಂದೆ: ಆಗಮಿಸು; ಕೊಳ: ಸರೋವರ; ತಡಿ: ದಡ;

ಪದವಿಂಗಡಣೆ:
ಬೀಳುಕೊಂಡನು +ಮುನಿಯನ್+ಅವನೀ
ಪಾಲಕನನ್+ಅರಸಿದೆನು +ಕಳನೊಳು
ಸಾಲ +ಹೆಣನೊಟ್ಟಿಲ+ ಕಬಂಧದ +ರುಧಿರ+ಪೂರದಲಿ
ಬೀಳುತೇಳುತ +ನಿಲುತ +ಬಳಲಿದು
ಕಾಲುನಡೆಯಲಿ +ಸುಳಿವ +ಕುರು+ ಭೂ
ಪಾಲಕನ +ಕಂಡೊಡನೆ +ಬಂದೆನು +ಕೊಳನ +ತಡಿಗಾಗಿ

ಅಚ್ಚರಿ:
(೧) ಅವನೀಪಾಲಕ, ಭೂಪಾಲಕ – ಸಮಾನಾರ್ಥಕ ಪದ
(೨) ರಣರಂಗದ ಸ್ಥಿತಿ – ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ