ಪದ್ಯ ೬: ಅರ್ಜುನನ ಮೇಲೆ ಯಾರು ಆಕ್ರಮಣ ಮಾಡಿದರು?

ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು (ಗದಾ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಈ ಸೈನ್ಯವು ಅರ್ಜುನನ ಮೇಲೆ ಆಕ್ರಮಣ ಮಾಡಿತು. ರಥಗಳು ವೇಗದಿಂದ ನುಗ್ಗಿದವು. ಗಜಘಟೆಗಳು ಮುಂದಾದವು. ಜೋಡಿ ಬೆರಳುಗಳಿಂದ ಬಾಣವನ್ನೆಳೆದು ಬಿಲ್ಲುಗಾರರು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟು ಅವನ ಆಕ್ರಮಣವನ್ನು ತಡೆದರು. ಈಟಿಯನ್ನು ಹಿಡಿದವರು ಆಕ್ರಮಣ ಮಾಡಿದರು.

ಅರ್ಥ:
ಕವಿ: ಆವರಿಸು, ಮುತ್ತು; ದುವ್ವಾಳಿ: ತೀವ್ರಗತಿ, ಓಟ; ರಥ: ಬಂಡಿ; ನಿವಹ: ಗುಂಪು; ಬಿಡು: ತೊರೆ; ಕುದುರೆ: ಅಶ್ವ; ಸೂಠಿ: ವೇಗ; ಅವಗಡಿಸು: ಕಡೆಗಣಿಸು, ಸೋಲಿಸು; ತೂಳು: ಆವೇಶ, ಉನ್ಮಾದ; ಹೇರಾನೆ: ದೊಡ್ಡ ಆನೆ; ಸಂದಣಿಸು: ಗುಂಪುಗೂಡು; ಸವಡಿ: ಜೊತೆ, ಜೋಡಿ; ಸೇದು: ಸೆಳೆ, ದೋಚು; ಅಂಬು: ಬಾಣ; ತವಕ: ಬಯಕೆ, ಆತುರ; ತರುಬು: ತಡೆ, ನಿಲ್ಲಿಸು; ಬಲುಬಿಲ್ಲವರು: ಶ್ರೇಷ್ಠನಾದ ಬಿಲ್ಲುಗಾರ; ಮೊನೆ: ತುದಿ; ಮೋಹಿತ: ಆಕರ್ಷ್ತಿಸಲ್ಪಟ್ಟ; ಮಿಕ್ಕ: ಉಳಿದ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಕವಿದುದಿದು +ದುವ್ವಾಳಿಸುತ +ರಥ
ನಿವಹ +ಬಿಟ್ಟವು +ಕುದುರೆ +ಸೂಠಿಯಲ್
ಅವಗಡಿಸಿ +ತೂಳಿದವು +ಹೇರಾನೆಗಳು +ಸಂದಣಿಸಿ
ಸವಡಿ+ಬೆರಳಲಿ +ಸೇದುವ್+ಅಂಬಿನ
ತವಕಿಗರು +ತರುಬಿದರು +ಬಲುಬಿ
ಲ್ಲವರು +ಮೊನೆ+ಮುಂತಾಗಿ +ಮೋಹಿತು +ಮಿಕ್ಕ +ಸಬಳಿಗರು

ಅಚ್ಚರಿ:
(೧) ಮ ಕಾರದ ಸಾಲು ಪದ – ಮೊನೆ ಮುಂತಾಗಿ ಮೋಹಿತು ಮಿಕ್ಕ
(೨) ಬಿಲ್ಲುಗಾರರನ್ನು ವಿವರಿಸುವ ಪರಿ – ಸವಡಿವೆರಳಲಿ ಸೇದುವಂಬಿನ ತವಕಿಗರು ತರುಬಿದರು