ಪದ್ಯ ೩: ದ್ರೋಣನ ಸಾರಥಿಯು ಏನೆಂದು ಹೇಳಿದನು?

ಎಲಲೆ ಪಾತಕಿ ಹೆಣನ ಹೊಯ್ದರೆ
ಬಲುಗಡಿಯ ನೀನೆಂಬರೇ ಸುಡು
ಹೊಲೆಯರಿದಕಂಗೈಸುವರೆ ತಾ ರಾಜಸೂನು ಗಡ
ಅಳಿದನಾದರೆ ನಿನ್ನ ಭಾಗ್ಯವು
ಉಳಿದಡೀತನ ಮಗನು ನಿನ್ನಯ
ಕುಲದ ತಲೆ ಚೆಂಡಾಡಿದಲ್ಲದೆ ಬರಿದೆ ಬಿಡನೆಂದ (ದ್ರೋಣ ಪರ್ವ, ೧೯ ಸಂಧಿ, ೩ ಪದ್ಯ)

ತಾತ್ಪರ್ಯ:
ಎಲವೋ ಪಾಪಿ, ಹೆಣವನ್ನು ಹೊಯ್ದರೆ ನಿನ್ನನ್ನು ವೀರನೆಂದು ಹೊಗುಳುವರೇ? ಬಿಡು ಆ ಮಾತನ್ನು, ಅಂತ್ಯಜರೂ ಇಂತಹ ಹೇಯ ಕೆಲಸವನ್ನು ಮಾಡಲಾರರು, ನೀನಾದರೋ ರಾಜಪುತ್ರ, ಅಶ್ವತ್ಥಾಮನು ಸತ್ತಿದ್ದರೆ ನಿನ್ನ ಭಾಗ್ಯ, ಅವನು ಉಳಿದಿದ್ದರೆ ನಿನ್ನ ವಂಶದ ತಲೆಯನ್ನು ಚೆಂಡಾಡದೆ ಬಿಡುವುದಿಲ್ಲವೆಂದು ದ್ರೋಣನ ಸಾರಥಿಯು ಹೇಳಿದನು.

ಅರ್ಥ:
ಪಾತಕಿ: ಪಾಪಿ; ಹೆಣ: ಜೀವವಿಲ್ಲದ ಶರೀರ; ಹೊಯ್ದು: ಹೊಡೆ; ಬಲುಗಡಿ: ಪರಾಕ್ರಮಿ; ಸುಡು: ದಹಿಸು; ಹೊಲೆಯ: ನೀತಿಗೆಟ್ಟವನು; ಅಂಗೈಸು: ಜತೆಯಾಗು; ರಾಜ: ದೊರೆ; ಸೂನು: ಪುತ್ರ; ಗಡ: ಅಲ್ಲವೇ; ಅಳಿ: ನಾಶ, ಸಾವು; ಭಾಗ್ಯ: ಪುಣ್ಯ; ಉಳಿದ: ಜೀವಿಸು; ಮಗ: ಪುತ್ರ; ಕುಲ: ವಂಶ; ತಲೆ: ಶಿರ; ಚೆಂಡಾಡು: ಇಟ್ಟಾಡಿಸು; ಬರಿದೆ: ಸುಮ್ಮನೆ; ಬಿಡು: ತೊರೆ;

ಪದವಿಂಗಡಣೆ:
ಎಲಲೆ +ಪಾತಕಿ +ಹೆಣನ +ಹೊಯ್ದರೆ
ಬಲುಗಡಿಯ +ನೀನೆಂಬರೇ+ ಸುಡು
ಹೊಲೆಯರ್+ಇದಕ್+ಅಂಗೈಸುವರೆ+ ತಾ +ರಾಜಸೂನು +ಗಡ
ಅಳಿದನಾದರೆ+ ನಿನ್ನ +ಭಾಗ್ಯವು
ಉಳಿದಡ್+ಈತನ +ಮಗನು +ನಿನ್ನಯ
ಕುಲದ +ತಲೆ +ಚೆಂಡಾಡಿದಲ್ಲದೆ +ಬರಿದೆ +ಬಿಡನೆಂದ

ಅಚ್ಚರಿ:
(೧) ಧೃಷ್ಟದ್ಯುಮ್ನನನ್ನು ಪಾತಕಿ ಎಂದು ಕರೆದಿರುವುದು
(೨) ಮಗ, ಸೂನು – ಸಮಾನಾರ್ಥಕ ಪದ
(೩) ಅಳಿ, ಉಳಿ – ಪ್ರಾಸ ಪದ

ಪದ್ಯ ೬೦: ಅಭಿಮನ್ಯುವು ಜಯದ್ರಥನಿಗೆ ಏನು ಹೇಳಿದ?

ಫಡ ಜಯದ್ರಥ ಹೋಗು ಹೋಗಳ
ವಡಿಕೆಯಲ್ಲಿದು ಸಾರು ಸೌಬಲ
ಮಿಡುಕಿದಡೆ ಮರುಳಹಿರಿ ಲೇಸಲ್ಲೆಮ್ಮೊಳತಿಮಥನ
ತುಡುಕಿದರೆ ಕೈ ಬೇವುದೀ ಬಲು
ಗಡಿಯತನ ಬಯಲಹುದೆನುತ ತಡೆ
ಗಡಿದು ಬಿಸುಟನು ಭಟರ ಹಯ ರಥ ಧನುವ ಸಾರಥಿಯ (ದ್ರೋಣ ಪರ್ವ, ೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಗರ್ಜಿಸುತ್ತಾ, ಫಡ, ಜಯದ್ರಥ, ನಿನ್ನಿಂದಾಗುವುದಿಲ್ಲ, ಶಕುನಿ, ಸುಮ್ಮನೇ ತೆರಳು, ನಮ್ಮೊಡನೆ ಯುದ್ಧವು ನಿಮ್ಮಿಂದ ಆಗದಿರುವ ಕಾರ್ಯ. ಒಮ್ಮೆ ಮುಂದೆ ಬಂದು ಆರಂಭಿಸಿದರೆ ನಿಮ್ಮ ಕೈ ಬೆಂದುಹೋದೀತು. ನಿಮ್ಮ ಪರಾಕ್ರಮದ ಗುಟ್ಟು ಬಯಲಾದೀತು ಎಂದು ಅವರಿಬ್ಬರ ಕುದುರೆ ರಥ ಧನುಸ್ಸುಗಳನ್ನು ಕತ್ತರಿಸಿ ಎಸೆದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಪದ; ಹೋಗು: ತೆರಳು; ಅಳವಡಿಕೆ: ಹೊಂದಿಕೆ;
ಸಾರು: ಕೂಗು, ಘೋಷಿಸು; ಮಿಡುಕು: ಅಲುಗಾಟ; ಮರುಳು: ಮೂಢ; ಲೇಸು: ಒಳೆತು; ಮಥನ: ಘರ್ಷಣೆ; ತುಡುಕು: ಹೋರಾಡು; ಬೇವುದು: ಬೆಂದುಹೋಗು; ಬಲುಗಡಿ: ಪರಾಕ್ರಮ; ಬಯಲು: ಹೊರಹೊಮ್ಮು; ತಡೆ: ನಿಲ್ಲಿಸು; ಕಡಿ: ಸೀಳು; ಬಿಸುಟು: ಹೊರಹಾಕು; ಭಟ: ಸೈನಿಕ; ಹಯ: ಕುದುರೆ, ರಥ: ಬಂಡಿ; ಧನು: ಬಿಲ್ಲು; ಸಾರಥಿ: ಸೂತ;

ಪದವಿಂಗಡಣೆ:
ಫಡ +ಜಯದ್ರಥ +ಹೋಗು +ಹೋಗ್+ಅಳ
ವಡಿಕೆಯಲ್ಲಿದು +ಸಾರು +ಸೌಬಲ
ಮಿಡುಕಿದಡೆ +ಮರುಳಹಿರಿ+ ಲೇಸಲ್+ಎಮ್ಮೊಳ್+ಅತಿ+ಮಥನ
ತುಡುಕಿದರೆ +ಕೈ +ಬೇವುದೀ+ ಬಲು
ಗಡಿಯತನ +ಬಯಲಹುದ್+ಎನುತ +ತಡೆ
ಗಡಿದು +ಬಿಸುಟನು +ಭಟರ +ಹಯ +ರಥ +ಧನುವ +ಸಾರಥಿಯ

ಅಚ್ಚರಿ:
(೧) ಮಿಡುಕಿದಡೆ, ತುಡುಕಿದರೆ; ಬಲುಗಡಿ, ತಡೆಗಡಿ – ಪ್ರಾಸ ಪದಗಳು

ಪದ್ಯ ೫೪: ಅಭಿಮನ್ಯುವಿನ ಸಾರಥಿಯು ಏನು ಹೇಳಿದನು?

ಎಲೆ ಕುಮಾರಕ ಹರ ಕುಮಾರಂ
ಗಳವಿಯಲಿ ನಿಲಲರಿದು ಕೊರಳಿನ
ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು
ಬಲುಗಡಿಯನೀ ಕರ್ಣನೀ ಕೃಪ
ನಲಘು ಭುಜಬಲ ದ್ರೋಣನೀ ವೆ
ಗ್ಗಳ ಜಯದ್ರಥನೆಂದು ಸಾರಥಿ ತೂಗಿದನು ಶಿರವ (ದ್ರೋಣ ಪರ್ವ, ೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಸಾರಥಿಯು ಅಭಿಮನ್ಯುವಿಗೆ, ಎಲೈ ಕುಮಾರ, ಈ ಪದ್ಮವ್ಯೂಹವನ್ನೆದುರಿಸಿ ನಿಲ್ಲಲು ಶಿವನ ಕುಮಾರನೂ ದೇವಸೇನಾಪತಿಯೂ ಆದ ಷಣ್ಮುಖನಿಗೂ ಅಸಾಧ್ಯ. ಕೊರಳಿನ ಶಕ್ತಿಯನ್ನರಿಯದೆ ಬೆಟ್ಟವನ್ನು ಯಾರಾದರೂ ಹೊರಬಹುದೇ? ಕರ್ಣನು ಅತಿಶಯವೀರ, ಕೃಪನು ಮಹಾಭುಜಬಲಶಾಲಿ, ದ್ರೋಣನೂ ಜಯದ್ರಥನೂ ಮಹಾಬಲಶಾಲಿಗಳು ಎಂದು ಹೇಳಿದನು.

ಅರ್ಥ:
ಕುಮಾರ: ಮಗ; ಹರ: ಶಿವ; ಹರಕುಮಾರ: ಷಣ್ಮುಖ; ಅಳವು: ಶಕ್ತಿ; ನಿಲು: ಎದುರಿಸು; ಕೊರಳು: ಗಂಟಲು; ಬಲು: ಬಹಳ; ಅರಿ: ತಿಳಿ; ಗಿರಿ: ಬೆಟ್ಟ; ಲಂಘೈಸು: ಹಾರು; ಭಟ: ಪರಾಕ್ರಮಿ; ಬಲುಗಡಿ: ಪರಾಕ್ರಮಿ; ಭುಜಬಲ: ಪರಾಕ್ರಮಿ; ವೆಗ್ಗಳ: ಶ್ರೇಷ್ಠ; ಸಾರಥಿ: ಸೂತ; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ಎಲೆ +ಕುಮಾರಕ+ ಹರ+ ಕುಮಾರಂಗ್
ಅಳವಿಯಲಿ +ನಿಲಲರಿದು+ ಕೊರಳಿನ
ಬಲುಹನ್+ಅರಿಯದೆ +ಗಿರಿಯ+ ಹೊರಲಂಘೈಸುವರೆ +ಭಟರು
ಬಲುಗಡಿಯನೀ +ಕರ್ಣನೀ +ಕೃಪನ್
ಅಲಘು +ಭುಜಬಲ +ದ್ರೋಣನೀ +ವೆ
ಗ್ಗಳ +ಜಯದ್ರಥನೆಂದು +ಸಾರಥಿ +ತೂಗಿದನು +ಶಿರವ

ಅಚ್ಚರಿ:
(೧) ಪದ್ಮವ್ಯೂಹದ ಕ್ಲಿಷ್ಟತೆ – ಎಲೆ ಕುಮಾರಕ ಹರ ಕುಮಾರಂಗಳವಿಯಲಿ ನಿಲಲರಿದು – ಕುಮಾರ ಪದದ ಬಳಕೆ
(೨) ಉಪಮಾನದ ಪ್ರಯೋಗ – ಕೊರಳಿನ ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು

ಪದ್ಯ ೩೭: ಸುಪ್ರತೀಕವು ಹೇಗೆ ಹೋರಾಡಿತು?

ನೆಳಲುಗಂಡವ್ವಳಿಸುವುದು ಸುಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗ ನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲುಬಿಡುವುದು
ಬಲುಗಡಿಯ ಹಿಡಿಹಿಂಗೆ ಲಾಗಿಸುತಿರ್ದುದಾ ದಂತಿ (ದ್ರೋಣ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಮನ ನೆರಳನ್ನು ಕಂಡು ಮುನ್ನುಗ್ಗುವುದು, ಸೊಂಡಿಲನ್ನು ತೂಗಾಡಿಸುವುದು, ಹೋರಾಡಿ ಆಯಾಸಗೊಳ್ಳುವುದು, ಮುಖವೆತ್ತಿ ಭೀಮನ ದನಿಯನ್ನು ಕೇಳುವುದು, ಕಿವಿಬೀಸದೆ ಜೋಲು ಬಿಡುವುದು, ಭೀಮನ ಬಲವಾದ ಹಿಡಿತ ಕಡಿಮೆಯಾದರೆ ಹೊಡೆಯುವುದು

ಅರ್ಥ:
ನೆಳಲು: ನೆರಳು; ಕಂಡು: ನೋಡು; ಅವ್ವಳಿಸು: ಆರ್ಭಟಿಸು; ಸುಂಡಿಲು: ಆನೆಯ ಕೈ, ಗಜಹಸ್ತ; ತೂಗು: ಅಲ್ಲಾಡಿಸು; ಹೋರು: ಸೆಣಸು, ಕಾದಾಡು; ಬಳಲು: ಆಯಾಸ, ದಣಿವು; ಮೊಗ: ಮುಖ; ನೆಗಹು: ಮೇಲೆತ್ತು; ದನಿ: ಶಬ್ದ; ಆಲಿಸು: ಕೇಳು; ಅಳಿ: ನಾಶವಾಗು; ಮುತ್ತಿಗೆ: ಆವರಿಸುವಿಕೆ; ಬೀಸು: ಹರಡು; ನೆಲ: ಭೂಮಿ; ಕಿವಿ: ಕರ್ಣ; ಜೋಲು: ತೂಗಾಡು; ಹಿಡಿ: ಬಂಧಿಸು; ಲಾಗು: ನೆಗೆಯುವಿಕೆ; ದಂತಿ: ಆನೆ;

ಪದವಿಂಗಡಣೆ:
ನೆಳಲು + ಕಂಡ್+ಅವ್ವಳಿಸುವುದು +ಸುಂ
ಡಿಲನು +ತೂಗಾಡುವುದು+ ಹೋರಿದು
ಬಳಲುವುದು+ ಮೊಗ +ನೆಗಹಿ+ ಭೀಮನ +ದನಿಯನ್+ಆಲಿಪುದು
ಅಳಿಯ+ ಮುತ್ತಿಗೆಗಳನು +ಬೀಸದೆ
ನೆಲಕೆ +ಕಿವಿಯನು +ಜೋಲು+ಬಿಡುವುದು
ಬಲುಗಡಿಯ +ಹಿಡಿಹಿಂಗೆ+ ಲಾಗಿಸುತಿರ್ದುದಾ +ದಂತಿ

ಅಚ್ಚರಿ:
(೧) ಅವ್ವಳಿಸು, ತೂಗಾಡು, ಬಳಲು, ಲಾಗಿಸು – ಹೋರಾಟವನ್ನು ವಿವರಿಸುವ ಪದ

ಪದ್ಯ ೨೪: ಅರ್ಜುನನು ಕರ್ಣನಿಗೆ ಏನು ಹೇಳಿದನು?

ಬಲುಗಡಿಯನಹೆ ಬೇಟೆಗಾರರ
ಬಳಗವುಳ್ಳವನಹೆ ವಿರೋಧಿಯ
ದಳಕೆ ನೀನೊಡ್ಡುಳ್ಳ ಭಟನಹೆ ಸ್ವಾಮಿಕಾರ್ಯದಲಿ
ತಲೆಯ ತೆರುವವನಹೆ ಕುಭಾಷೆಗೆ
ಮುಳಿವವರು ನಾವಲ್ಲ ಸೈರಿಸು
ಬಳಿಕೆನುತ ಕಲಿಪಾರ್ಥ ಸುರಿದನು ಸರಳ ಸುರಿಮಳೆಯ (ವಿರಾಟ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಕರ್ಣ ನೀನು ಶತ್ರುಗಳನ್ನು ಪರಾಕ್ರಮದಿಂದ ಕತ್ತರಿಸಬಲ್ಲವನು, ಶತ್ರುಗಳ ಸೈನ್ಯವನ್ನು ಎದುರಿಸಿ ಸೋಲಿಸಬಲ್ಲವನು, ಅಷ್ಟೇ ಅಲ್ಲ ಸ್ವಾಮಿಕಾರ್ಯದಲ್ಲಿ ನಿನ್ನ ತಲೆಯನ್ನೇ ಕೊಡುವವನು. ಹೌದು, ನಿಜ ನಿನ್ನ ದುರ್ಭಾಷೆಗೆ ನಾವು ಸಿಟ್ಟಾಗುವುದಿಲ್ಲ. ಈ ಹೊಡೆತವನ್ನು ಸೈರಿಸು ಎಂದು ಅರ್ಜುನನು ಬಾಣಗಳ ಮಳೆಯನ್ನೇ ಸುರಿಸಿದನು.

ಅರ್ಥ:
ಬಲುಗಡಿ: ಮಹಾ ಪರಾಕ್ರಮಿ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ಬೇಟೆಗಾರ: ಬೇಡ; ಬಳಗ: ಗುಂಪು; ವಿರೋಧಿಸು: ಎದುರಿಸು; ದಳ: ಗುಂಪು; ಒಡ್ಡು: ಸೈನ್ಯ, ಪಡೆ; ಭಟ: ಸೈನಿಕ; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ತಲೆ: ಶಿರ; ತೆರು: ನೀಡು; ಕುಭಾಷೆ: ಕೆಟ್ಟ ನುಡಿ; ಮುಳಿ: ಕೋಪ; ಸೈರಿಸು: ತಾಳು; ಬಳಿಕ: ನಂತರ; ಕಲಿ: ಶೂರ; ಸುರಿ: ವರ್ಷಿಸು; ಸರಳ: ಬಾಣ; ಸುರಿಮಳೆ: ಜೋರಾದ ವರ್ಷ;

ಪದವಿಂಗಡಣೆ:
ಬಲುಗಡಿಯನಹೆ +ಬೇಟೆಗಾರರ
ಬಳಗವುಳ್ಳವನಹೆ+ ವಿರೋಧಿಯ
ದಳಕೆ +ನೀನ್+ಒಡ್ಡುಳ್ಳ +ಭಟನಹೆ+ ಸ್ವಾಮಿಕಾರ್ಯದಲಿ
ತಲೆಯ +ತೆರುವವನಹೆ+ ಕುಭಾಷೆಗೆ
ಮುಳಿವವರು+ ನಾವಲ್ಲ +ಸೈರಿಸು
ಬಳಿಕೆನುತ +ಕಲಿಪಾರ್ಥ +ಸುರಿದನು+ ಸರಳ+ ಸುರಿಮಳೆಯ

ಅಚ್ಚರಿ:
(೧) ಜಾಣ್ಣುಡಿ – ತಲೆಯ ತೆರುವವನಹೆ ಕುಭಾಷೆಗೆ ಮುಳಿವವರು ನಾವಲ್ಲ
(೨) ಸ ಕಾರದ ತ್ರಿವಳಿ ಪದ – ಸುರಿದನು ಸರಳ ಸುರಿಮಳೆಯ

ಪದ್ಯ ೪: ಕೀಚಕನ ಮೇಲೆ ಯಾರು ಬಾಣಗಳನ್ನು ತೂರಿದರು?

ಎಲವೊ ಕೀಚಕ ಹೋಗದಿರು ನಿ
ಲ್ಲೆಲವೊ ಹುಲು ಮಂಡಳಿಕ ನಿನ್ನಯ
ಬಲುಗಡಿಯ ತೋರುವುದು ನಿನ್ನಂತರದ ರಾಯರಲಿ
ತೊಲಗು ಸೈರಿಸೆನುತ್ತಲುರೆ ಬಿಲು
ಬಲುಸರಳ ಸರಿವಳೆಯ ಸುರಿಯ
ಲ್ಕಲಘು ವಿಕ್ರಮ ಕೀಚಕನು ಸವರಿದನು ಶರತತಿಯ (ಅರಣ್ಯ ಪರ್ವ, ೨೪ ಸಂಧಿ, ೪ ಪದ್ಯ)

ತಾತ್ಪರ್ಯ:
ಕೌರವ ವೀರರು, ಎಲವೋ ಕೀಚಕ ಹೋಗ ಬೇಡ, ನೀನು ಹುಲು ಮಂಡಲಿಕ. ನಿನ್ನ ಪರಾಕ್ರಮವನ್ನು ನಿನ್ನ ಸಮಾನ ರಾಜರೊಡನೆ ತೋರಿಸು, ಎಂದು ಕೌರವ ವೀರರು ಹೇಳಿ ಬಾಣಗಳ ಮಳೆಯನ್ನು ಸುರಿಸಲು, ಪರಾಕ್ರಮಿಯಾದ ಕೀಚಕನು ಆ ಬಾಣಗಳನ್ನು ಕಡಿದೆಸೆದನು.

ಅರ್ಥ:
ಹೋಗು: ತೆರಳು; ನಿಲ್ಲು: ತಡೆ; ಹುಲು: ಕ್ಷುಲ್ಲಕ; ಮಂಡಳಿಕ: ಒಂದು ಪ್ರಾಂತ್ಯದ ಅಧಿಪತಿ; ಬಲುಗಡಿ: ಮಹಾಪರಾಕ್ರಮ; ತೋರು: ಪ್ರದರ್ಶಿಸು; ರಾಯ: ರಾಜ; ತೊಲಗು: ತೆರಳು; ಸೈರಿಸು: ತಾಳು; ಬಿಲು: ಬಿಲ್ಲು; ಉರು: ವಿಶೇಷವಾದ; ಸರಳು: ಬಾಣ; ಸರಿವಳೆ: ಒಂದೇ ಸಮನಾಗಿ ಸುರಿವ ಮಳೆ; ಸುರಿ: ವರ್ಷಿಸು; ವಿಕ್ರಮ: ಪರಾಕ್ರಮಿ; ಸವರು: ನಾಶಗೊಳಿಸು; ಶರ: ಬಾಣ; ತತಿ: ಗುಂಪು; ಅಲಘು: ಭಾರವಾದ;

ಪದವಿಂಗಡಣೆ:
ಎಲವೊ +ಕೀಚಕ +ಹೋಗದಿರು +ನಿಲ್
ಎಲವೊ +ಹುಲು +ಮಂಡಳಿಕ +ನಿನ್ನಯ
ಬಲುಗಡಿಯ +ತೋರುವುದು +ನಿನ್ನಂತರದ+ ರಾಯರಲಿ
ತೊಲಗು +ಸೈರಿಸೆನುತ್ತಲ್+ಉರೆ +ಬಿಲು
ಬಲುಸರಳ+ ಸರಿವಳೆಯ+ ಸುರಿಯಲ್ಕ್
ಅಲಘು ವಿಕ್ರಮ +ಕೀಚಕನು +ಸವರಿದನು +ಶರತತಿಯ

ಅಚ್ಚರಿ:
(೧) ಕೀಚಕನನ್ನು ಹಂಗಿಸುವ ಪರಿ – ಎಲವೊ ಹುಲು ಮಂಡಳಿಕ
(೨) ಕೀಚಕನ ಪರಾಕ್ರಮ – ಅಲಘು ವಿಕ್ರಮ ಕೀಚಕನು ಸವರಿದನು ಶರತತಿಯ