ಪದ್ಯ ೩೩: ರಾತ್ರಿಯ ದೀವಿಗೆಯಲ್ಲಿ ಸೈನ್ಯವು ಹೇಗೆ ಕಂಡಿತು?

ಬೆಳಗಿದವು ಬೊಂಬಾಳ ದೀವಿಗೆ
ಬಲದೊಳಾನೆಗೆ ಹತ್ತು ರಥಿಕಾ
ವಳಿಗೆ ನಾಲುಕು ಹಯಕೆರಡು ಕಾಲಾಳಿಗೊಂದೊಂದು
ಬಲಸಮುದ್ರದೊಳೊಗೆದ ವಡಬಾ
ನಳನ ಝಳವೋ ಮೃತ್ಯುವಿನ ದೀ
ವಳಿಗೆಯಿರುಳೋ ತಿಳಿಯಲರಿದೆನೆ ಚಿತ್ರವಾಯ್ತೆಂದ (ದ್ರೋಣ ಪರ್ವ, ೧೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ಬಹು ಪ್ರಕಾಶದ ಪಂಜುಗಳನ್ನು ಉರಿಸಿ ಒಂದು ಆನೆಗೆ ಹತ್ತು, ಒಬ್ಬ ರಥಿಕನಿಗೆ ನಾಲ್ಕು, ರಾವುತರಿಗೆ ಎರಡು, ಕಾಲಾಳಿಗೆ ಒಂದರಂತೆ ನೀಡಿದರು. ಸೈನ್ಯ ಸಮುದ್ರದಲ್ಲಿ ಹುಟ್ಟಿದ ವಡಬಾನಲದ ಪ್ರಕಾಶವೋ, ಮೃತ್ಯುವಿನ ದೀಪಾವಳಿ ಹಬ್ಬದ ರೀತಿಯೋ ಎಂಬಂತೆ ಸೈನ್ಯವು ಕಂಗೊಳಿಸಿತು.

ಅರ್ಥ:
ಬೆಳಗು: ಹೊಳೆ; ಬೊಂಬಾಳ: ಕಣ್ಣು ಕೋರೈಸುವ ಪ್ರಭೆಯುಳ್ಳ ದೀಪ; ದೀವಿಗೆ: ಸೊಡರು, ದೀಪಿಕೆ; ಆನೆ: ಗಜ; ಬಲ: ಸೈನ್ಯ; ರಥಿಕ: ರಥಿ; ಆವಳಿ: ಗುಂಪು, ಸಾಲು; ಹಯ: ಕುದುರೆ; ಕಾಲಾಳು: ಸೈನಿಕ; ಬಲ: ಸೈನ್ಯ; ಸಮುದ್ರ: ಸಾಗರ; ವಡಬಾನಳ: ಸಮುದ್ರದಲ್ಲಿರುವ ಬೆಂಕಿ; ಝಳ: ಪ್ರಕಾಶ, ಕಾಂತಿ; ಮೃತ್ಯು: ಸಾವು; ದೀವಳಿಗೆ: ದೀಪಗಳ ಸಾಲು; ಇರುಳು: ರಾತ್ರಿ; ಚಿತ್ರ: ಬರೆದ ಆಕೃತಿ;

ಪದವಿಂಗಡಣೆ:
ಬೆಳಗಿದವು +ಬೊಂಬಾಳ +ದೀವಿಗೆ
ಬಲದೊಳ್+ಆನೆಗೆ +ಹತ್ತು +ರಥಿಕಾ
ವಳಿಗೆ+ ನಾಲುಕು +ಹಯಕೆರಡು +ಕಾಲಾಳಿಗ್+ಒಂದೊಂದು
ಬಲಸಮುದ್ರದೊಳ್+ಒಗೆದ +ವಡಬಾ
ನಳನ +ಝಳವೋ +ಮೃತ್ಯುವಿನ +ದೀ
ವಳಿಗೆ+ಇರುಳೋ +ತಿಳಿಯಲ್+ಅರಿದೆನೆ+ ಚಿತ್ರವಾಯ್ತೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಬಲಸಮುದ್ರದೊಳೊಗೆದ ವಡಬಾನಳನ ಝಳವೋ ಮೃತ್ಯುವಿನ ದೀವಳಿಗೆಯಿರುಳೋ

ಪದ್ಯ ೨೭: ಖಡ್ಗದ ಯೋಧರು ಹೇಗೆ ಹೋರಾಡಿದರು?

ಬಲಸಮುದ್ರದ ಬುದ್ಬುದಂಗಳೊ
ತಿಳಿಯಲರಿದೆನೆ ಹರಿಗೆ ಮುಸುಕಿತು
ಬಳಿಯ ಚೌರಿಗಳುಲಿವ ಘಂಟೆಯ ಬಿರುದಿನುಬ್ಬಟೆಯ
ತಳಪಟದೊಳೌಕಿದರು ತೊಡೆಸಂ
ಕಲೆಯ ತೊಲಗದ ಕಂಭದಪ್ರತಿ
ಬಲರು ಹಾಣಾಹಾಣಿಯಲಿ ಹೊಯಿದಾಡಿದರು ಕಡುಗಿ (ಭೀಷ್ಮ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಖಡ್ಗದಿಂದ ಕಾದುವ ಯೋಧರ ಕೈಗಲಲ್ಲಿದ್ದ ಗುರಾಣಿಗಳು ಸೈನ್ಯ ಸಮುದ್ರದ ನೀರುಗುಳ್ಳೆಗಳಂತೆ ಕಾಣಿಸಿದವು. ವೀರರು ಧರಿಸಿದ ಚೌರಿ, ಗಂಟೆ, ಬಿರುದಿನ ಮಾಲೆಗಳೊಡನೆ ಕಾಲುಗಳನ್ನೂ ಕಂಭದಂತೆ ದೃಢವಾಗಿ ನಿಲ್ಲಿಸಿ, ಆಕ್ರಮಣಕ್ಕೆ ಬೆದರದೆ ಇದಿರೊಡ್ಡಿ ನಿಂತು ಕಾದಿದರು.

ಅರ್ಥ:
ಬಲ: ಶಕ್ತಿ, ಪೂರ್ವ ; ಸಮುದ್ರ: ಸಾಗರ; ಬುದ್ಬುದ: ನೀರಿನ ಮೇಲಣ ಗುಳ್ಳೆ, ಬೊಬ್ಬುಳಿ; ತಿಳಿ: ಅರಿವು; ಅರಿ: ತಿಳಿ; ಹರಿ: ಓಡು, ಧಾವಿಸು; ಮುಸುಕು: ಹೊದಿಕೆ; ಬಿಳಿ: ಸಿತ; ಚೌರಿ: ಚಾಮರ; ಉಲಿವ: ಧ್ವನಿ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಬಿರು: ಗಟ್ಟಿಯಾದುದು; ಉಬ್ಬಟೆ: ಅತಿಶಯ; ತಳಪಟ: ಸೋಲು; ಔಕು: ಒತ್ತು, ಹಿಸುಕು; ತೊಡೆ: ಊರು; ಸಂಕಲೆ: ಬ್ಬಿಣದ ಸರಪಣಿ, ಬಂಧನ; ತೊಲಗು: ದೂರವಾಗು; ಕಂಭ: ಸ್ಥಂಭ; ಪ್ರತಿ:ವಿರುದ್ಧ, ಎದುರು; ಬಲರು: ಪರಾಕ್ರಮಿ; ಹಾಣಾಹಣಿ: ಹಣೆ ಹಣೆಯ ಯುದ್ಧ; ಹೊಯಿದಾಡು: ಹೋರಾಡು; ಕಡುಗು: ಉತ್ಸಾಹಗೊಳ್ಳು, ವೇಗವಾಗು;

ಪದವಿಂಗಡಣೆ:
ಬಲಸಮುದ್ರದ+ ಬುದ್ಬುದಂಗಳೊ
ತಿಳಿಯಲ್+ಅರಿದೆನೆ +ಹರಿಗೆ +ಮುಸುಕಿತು
ಬಳಿಯ +ಚೌರಿಗಳ್+ಉಲಿವ +ಘಂಟೆಯ +ಬಿರುದಿನ್+ಉಬ್ಬಟೆಯ
ತಳಪಟದೊಳ್+ಔಕಿದರು +ತೊಡೆ+ಸಂ
ಕಲೆಯ +ತೊಲಗದ+ ಕಂಭದ+ಪ್ರತಿ
ಬಲರು+ ಹಾಣಾಹಾಣಿಯಲಿ +ಹೊಯಿದಾಡಿದರು +ಕಡುಗಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲಸಮುದ್ರದ ಬುದ್ಬುದಂಗಳೊ ತಿಳಿಯಲರಿದೆನೆ