ಪದ್ಯ ೩: ಬಲರಾಮನೇಕೆ ಕರಗಿದನು?

ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ (ಗದಾ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣ, ಭೀಷ್ಮ, ಶಲ್ಯ, ಕರ್ಣ, ಸೈಂಧವ, ನೂರು ಮಂದಿ ತಮ್ಮಂದಿರು ಮಕ್ಕಳು ಗೆಳೆಯರು, ಜ್ಞಾತಿಗಳು, ಬಾಂಧವರು ಎಲ್ಲರನ್ನೂ ಹರಕೆಯ ಕುರಿಗಳಂತೆ ಬಲಿಕೊಟ್ಟೆ. ಜಯದ ನಿಧಿ ಕಾಣಲಿಲ್ಲವೇ? ಶಿವ ಶಿವಾ ಎಂದು ಬಲರಾಮ ಕರುಣೆಯಿಂದ ಕರಗಿ ಹೋದನು.

ಅರ್ಥ:
ಗುರು: ಆಚಾರ್ಯ; ಸುತ: ಮಗ; ಸೋದರ: ತಮ್ಮ; ಶತ: ನೂರು; ಪುತ್ರ: ಸುತ; ಮಿತ್ರ: ಸ್ನೇಹಿತ; ಜ್ಞಾತಿ: ದಾಯಾದಿ; ಬಾಂಧವ: ಬಂಧುಜನ; ಹರಸುಕುರಿ: ಹರಕೆಯ ಕುರಿ; ಗೋಚರಿಸು: ಗೊತ್ತುಪಡಿಸು; ರಣ: ಯುದ್ಧ; ವಿಜಯ: ಗೆಲುವು; ನಿಧಿ: ಸಿರಿ; ಹರ: ಶಿವ; ಕರಗು: ಕನಿಕರ ಪಡು; ಕರುಣ: ದಯೆ;

ಪದವಿಂಗಡಣೆ:
ಗುರುವೊ +ಗಂಗಾಸುತನೊ +ಮಾದ್ರೇ
ಶ್ವರನೊ +ಕರ್ಣನೊ +ಸೈಂಧವನೊ +ಸೋ
ದರರ +ಶತಕವೊ +ಪುತ್ರ+ ಮಿತ್ರ+ ಜ್ಞಾತಿ +ಬಾಂಧವರೊ
ಹರಸಿ +ಕುರಿಗಳನ್+ಇಕ್ಕಿದಡೆ+ ಗೋ
ಚರಿಸದೇ +ರಣ+ವಿಜಯನಿಧಿ +ಹರ
ಹರ +ಎನುತ +ಕರಗಿದನು +ಕಡು +ಕರುಣದಲಿ +ಬಲರಾಮ

ಅಚ್ಚರಿ:
(೧) ರೂಪಕದ ಪ್ರಯೋಗ – ಹರಸಿ ಕುರಿಗಳನಿಕ್ಕಿದಡೆ ಗೋಚರಿಸದೇ ರಣವಿಜಯನಿಧಿ

ಪದ್ಯ ೪೦: ದುರ್ಯೋಧನನು ಯಾರ ಜೊತೆ ಹಸ್ತಿನಾಪುರಕ್ಕೆ ಹೊರಟನು?

ಎನಲು ಕರ ಲೇಸೆಂದು ದುರಿಯೋ
ಧನನು ಕಳುಹಿಸಿಕೊಂಡು ಬಲರಾ
ಮನನು ಕೃತವರ್ಮನನು ಕಂಡನು ನಿಖಿಳ ಯಾದವರ
ವಿನುತ ಬಲಸಹಿತೊಲವಿನಲಿ ಹ
ಸ್ತಿನಪುರಿಗೆ ಹಾಯಿದನು ಬಳಿಕೀ
ದನುಜರಿಪು ನಸುನಗುತಲಿಂತೆಂದನು ಧನಂಜಯಗೆ (ಉದ್ಯೋಗ ಪರ್ವ, ೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತುಗಳನ್ನು ಕೇಳಿದ ದುರ್ಯೋಧನನು ನಿಮ್ಮ ಕಾಣಿಕೆ (ಸೈನ್ಯ) ಬಹಳ ಒಳ್ಳೆಯದಾಯಿತೆಂದು ಹೇಳಿ, ಬಲರಾಮ ಕೃತವರ್ಮ ಮುಂತಾದ ಯಾದವರನ್ನು ಭೇಟಿಮಾಡಿ ಸಮಸ್ತ ಯಾದವ ಸೈನ್ಯದೊಡನೆ ಹಸ್ತಿನಾಪುರಕ್ಕೆ ಹೋದನು. ಇತ್ತ ಶ್ರೀಕೃಷ್ಣನು ನಸುನಗುತ್ತಾ ಅರ್ಜುನನ ಬಳಿ ಹೀಗೆ ಹೇಳಿದನು.

ಅರ್ಥ:
ಕರ: ಕಾಣಿಕೆ, ವಿಶೇಷ; ಲೇಸು: ಒಳ್ಳೆಯದು; ಕಳುಹಿಸು: ಬೀಳ್ಕೊಡು; ಕಂಡು: ನೋಡು; ನಿಖಿಳ: ಎಲ್ಲಾ; ವಿನುತ: ಸ್ತುತಿಗೊಂಡ; ಬಲ: ಸೈನ್ಯ; ಸಹಿತ: ಜೊತೆ; ಒಲವು: ಸಂತೋಷ; ಹಾಯಿ: ಹೋಗು; ಬಳಿಕ: ನಂತರ; ದನುಜ: ರಾಕ್ಷಸ; ರಿಪು: ವೈರಿ; ನಸುನಗು: ಮಂದಸ್ಮಿತ;

ಪದವಿಂಗಡಣೆ:
ಎನಲು +ಕರ+ ಲೇಸೆಂದು + ದುರಿಯೋ
ಧನನು +ಕಳುಹಿಸಿಕೊಂಡು +ಬಲರಾ
ಮನನು +ಕೃತವರ್ಮನನು+ ಕಂಡನು +ನಿಖಿಳ +ಯಾದವರ
ವಿನುತ +ಬಲಸಹಿತ+ಒಲವಿನಲಿ+ ಹ
ಸ್ತಿನಪುರಿಗೆ+ ಹಾಯಿದನು +ಬಳಿಕೀ
ದನುಜರಿಪು+ ನಸುನಗುತಲ್+ಇಂತೆಂದನು +ಧನಂಜಯಗೆ

ಅಚ್ಚರಿ:
(೧) ಮೊದಲ ಮೂರು ಸಾಲಿನ ೨ನೇ ಪದ ‘ಕ’ ಕಾರದಿಂದ ಪ್ರಾರಂಭ
(೨) ದನುಜರಿಪು, ಧನಂಜಯ – ೬ ಸಾಲಿನ ಮೊದಲ ಮತ್ತು ಕೊನೆ ಪದ ‘ದ’ ಕಾರದಿಂದ ಪ್ರಾರಂಭ

ಪದ್ಯ ೬: ಬಲರಾಮನು ಕೃಷ್ಣನ ಸಲಹೆಗೆ ಹೇಗೆ ಪ್ರತಿಕ್ರಯಿಸಿದನು?

ಎಲೆ ಮರುಳೆ ಮುರವೈರಿ ಕೌರವ
ರೊಲಿಯರೀ ಹದನನು ಯುಧಿಷ್ಠಿರ
ನಿಳೆಯ ಸೋತನು ಜೂಜುಗಾರರ ಮೇರೆ ಮಾರ್ಗದಲಿ
ನೆಲನನಾಳಲಿ ಮತ್ತೆ ಗೆಲಿದೇ
ಕೊಳಲಿ ಮೇಣ್ ಕಾದಲಿ ಸುಯೋಧನ
ನೊಳಗೆ ತಪ್ಪಿಲ್ಲೆಂದು ನುಡಿದನು ನಗುತ ಬಲರಾಮ (ಉದ್ಯೋಗ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಅಯ್ಯೋ ನಿನಗೆಲ್ಲೋ ಹುಚ್ಚು, ಕೌರವರು ನಿಮ್ಮ ಸಂಧಾನವನ್ನು ಒಪ್ಪುವುದಿಲ್ಲ. ಯುಧಿಷ್ಠಿರನು ಜೂಜಿನಲ್ಲಿ ರಾಜ್ಯವನ್ನು ಸೋತಿದ್ದಾನೆ. ದುರ್ಯೋದನನು ರಾಜ್ಯವನ್ನು ಆಳಲಿ, ಇವರು ಗೆದ್ದು ವಶಮಾಡಿಕೊಳ್ಳಲಿ, ಯುದ್ಧವನ್ನೇ ನಿಶ್ಚಯಿಸಲಿ, ಅವನದೇನೂ ತಪ್ಪಿಲ್ಲ ಎಂದು ಬಲರಾಮನು ನಗುತ್ತಾ ನುಡಿದನು.

ಅರ್ಥ:
ಮರುಳೆ: ಹುಚ್ಚು; ವೈರಿ: ಹಗೆ, ಶತ್ರು; ಒಲಿ: ಸಮ್ಮತಿಸು; ಹದ: ಸರಿಯಾದ ಸ್ಥಿತಿ; ಇಳೆ: ಭೂಮಿ; ಸೋತು: ಪರಾಜಯ; ಜೂಜು: ಏನಾದರು ಒತ್ತೆ ಇಟ್ಟು ಆಡುವುದು; ಮೇರೆ:ಎಲ್ಲೆ, ಗಡಿ; ಮಾರ್ಗ: ದಾರಿ; ನೆಲ: ಭೂಮಿ; ಆಳು: ಅಧಿಕಾರ ನಡೆಸು; ಗೆಲಿ: ಜಯಿಸು; ಮೇಣ್: ಮತ್ತು; ಕಾದು: ಜಗಳ, ಯುದ್ಧ; ತಪ್ಪು: ಸರಿಯಿಲ್ಲದ; ನುಡಿ: ಮಾತು; ನಗು: ಸಂತೋಷ;

ಪದವಿಂಗಡಣೆ:
ಎಲೆ +ಮರುಳೆ +ಮುರವೈರಿ +ಕೌರವರ್
ಒಲಿಯರೀ +ಹದನನು +ಯುಧಿಷ್ಠಿರನ್
ಇಳೆಯ +ಸೋತನು +ಜೂಜುಗಾರರ+ ಮೇರೆ +ಮಾರ್ಗದಲಿ
ನೆಲನನ್+ಆಳಲಿ +ಮತ್ತೆ +ಗೆಲಿದೇ
ಕೊಳಲಿ +ಮೇಣ್ +ಕಾದಲಿ +ಸುಯೋಧನನ್
ಒಳಗೆ+ ತಪ್ಪಿಲ್ಲೆಂದು +ನುಡಿದನು +ನಗುತ+ ಬಲರಾಮ

ಅಚ್ಚರಿ:
(೧) ಸೋತು, ಗೆಲಿ – ವಿರುದ್ಧ ಪದಗಳು
(೨) ‘ಮ’ ಕಾರದ ಜೋಡಿ ಪದ – ಮರುಳೆ ಮುರವೈರಿ, ಮೇರೆ ಮಾರ್ಗ

ಪದ್ಯ ೧೫: ದುರ್ಯೋಧನನ ಪ್ರಕಾರ ಕೀಚಕನನ್ನು ಯಾರು ಸಂಹರಿಸಿದರು?

ಭೀಮ ಕೀಚಕ ಶಲ್ಯ ನೀ ಬಲ
ರಾಮನೆಂಬೀ ನಾಲುವರು ಸಂ
ಗ್ರಾಮದೊಳು ಸರಿ ಖಚರರೆಂಬುದು ಬಯಲಿನಪವಾದ
ಭೀಮನಾಗಲು ಬೇಕು ಕೀಚಕ
ಕಾಮುಕನ ದುರುಪದಿಗೆ ಅಳುಪಿದ
ತಾಮಸನ ಹಿಡಿದೊರೆಸಿದವನೆಂದನು ಸುಯೋಧನನು (ವಿರಾಟ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸುಯೋಧನನು ಎಲ್ಲರನ್ನು ಕರೆಸಿ ತನ್ನ ವಿಚಾರವನ್ನು ಮುಂದಿಡಲು ತನ್ನ ಮಾತನ್ನು ಶುರುಮಾಡಿದನು. ಭೀಮ, ಕೀಚಕ, ಶಲ್ಯ ಮತ್ತು ಬಲರಾಮರು ಯುದ್ಧದಲ್ಲಿ ಎಲ್ಲರೂ ಸಮಬಲರು. ಅವರು ಗಂಧರ್ವರೆಂಬುದು ಕೇವಲ ಗಾಳಿಮಾತು. ಕಾಮುಕನಾದ ಕೀಚಕನು ದ್ರೌಪದಿಯನ್ನು ಕೆಟ್ಟದೃಷ್ಟಿಯಿಂದ ನೋಡುವಾಗ ಭೀಮನೇ ಇರಬೇಕು ಅವನನ್ನು ಸಂಹರಿಸಿದ್ದು.

ಅರ್ಥ:
ನಾಲುವರು: ಚತುರ್; ಸಂಗ್ರಾಮ: ಯುದ್ಧ; ಸರಿ: ಸಮಾನರು; ಅಪವಾದ: ನಿಂದೆ, ಆರೋಪ; ಕಾಮುಕ: ಅತಿ ಮೋಹಿಸುವ, ವಿಷಯಲಂಪಟ; ಅಳುಪು: ಬಯಸು; ತಾಮಸ: ಸೋಮಾರಿತನ; ಒರೆಸು: ಸಂಪೂರ್ಣ ನಾಶಮಾಡು; ಖಚರ: ಗಂಧರ್ವ;

ಪದವಿಂಗಡಣೆ:
ಭೀಮ +ಕೀಚಕ +ಶಲ್ಯನ್ +ಈ +ಬಲ
ರಾಮನೆಂಬ+ಈ+ ನಾಲುವರು +ಸಂ
ಗ್ರಾಮದೊಳು +ಸರಿ +ಖಚರರ್+ಎಂಬುದು +ಬಯಲಿನಪವಾದ
ಭೀಮನಾಗಲು +ಬೇಕು +ಕೀಚಕ
ಕಾಮುಕನ +ದುರುಪದಿಗೆ+ ಅಳುಪಿದ
ತಾಮಸನ +ಹಿಡಿದ್+ಒರೆಸಿದವನೆಂದನು +ಸುಯೋಧನನು

ಅಚ್ಚರಿ:
(೧) ಗಾಳಿಸುದ್ದಿ ಎಂದು ಹೇಳಲು ಬಯಲಿನಪವಾದ ಪದದ ಬಳಕೆ
(೨) ಭೀಮ – ೧, ೪ ಸಾಲಿನ ಮೊದಲ ಪದ