ಪದ್ಯ ೧೫: ಭೀಮನನ್ನು ಯಾರು ಬೈದರು?

ಉಚಿತವೆಂದರು ಕೆಲವು ಕೆಲರಿದ
ನುಚಿತವೆಂದರು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ (ಗದಾ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಮಾಡಿದುದು ಸರಿ ಎಂದು ಕೆಲವರು ಹೊಗಳಿದರು, ಇದು ಅನುಚಿತವೆಂದು ಕೆಲವರು ಹೇಳಿದರು. ಪೂರ್ವಜನ್ಮದ ಸಂಚಿತ ಪಾಪವಲ್ಲವೇ ಶಿವ ಶಿವಾ ಎಂದು ಕೆಲರು ಉದ್ಗರಿಸಿದರು. ದೇವತೆಗಳು, ಕಿನ್ನರರು, ಯಕ್ಷರು, ಭೀಮನನ್ನು ಬೈದು ಕೌರವನನ್ನು ಹೊಗಳುತ್ತಾ ತಮ್ಮ ನಿವಾಸಗಳಿಗೆ ಹೋದರು.

ಅರ್ಥ:
ಉಚಿತ: ಸರಿಯಾದುದು; ಕೆಲವು: ಸ್ವಲ್ಪ; ಅನುಚಿತ: ಸರಿಯಲ್ಲದ್ದು; ಪೂರ್ವ: ಹಿಂದಿನ; ಜನ್ಮ: ಹುಟ್ಟು; ದುಷ್ಕೃತ: ಪಾಪ; ಐಸಲೇ: ಅಲ್ಲವೇ; ಖಚರ: ಗಂಧರ್ವ; ಕಿನ್ನರ: ದೇವತೆಗಳ ಒಂದುವರ್ಗ; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ನಿರ್ಜರ: ದೇವತೆ; ನಿಚಯ: ಗುಂಪು; ಬೈದು: ಜರೆದು; ಅಚಲ: ಸ್ಥಿರವಾದ; ಬಲ: ಶಕ್ತಿ; ಬಣ್ಣಿಸು: ವರ್ಣಿಸು, ಹೊಗಳು; ಹೊಕ್ಕು: ಸೇರು; ಆಲಯ: ಮನೆ;

ಪದವಿಂಗಡಣೆ:
ಉಚಿತವ್+ಎಂದರು +ಕೆಲವು +ಕೆಲರ್+ಇದ್
ಅನುಚಿತವೆಂದರು +ಪೂರ್ವಜನ್ಮೋ
ಪಚಿತ+ ದುಷ್ಕೃತವ್+ಐಸಲೇ +ಶಿವ +ಎಂದು +ಕೆಲಕೆಲರು
ಖಚರ +ಕಿನ್ನರ+ ಯಕ್ಷ+ ನಿರ್ಜರ
ನಿಚಯ +ಭೀಮನ +ಬೈದು +ಕುರುಪತಿ
ಅಚಳ +ಬಲವನು +ಬಣ್ಣಿಸುತ +ಹೊಕ್ಕರು +ನಿಜಾಲಯವ

ಅಚ್ಚರಿ:
(೧) ಉಚಿತ, ಅನುಚಿತ – ವಿರುದ್ಧ ಪದಗಳು
(೨) ದೇವತೆಗಳ ಗುಂಪುಗಳು – ಖಚರ ಕಿನ್ನರ ಯಕ್ಷ

ಪದ್ಯ ೧೯: ದ್ರೋಣನು ಸೈನ್ಯವನ್ನು ಹೇಗೆ ಕಡಿದು ಹಾಕಿದನು?

ನುಡಿಗೆ ಮುಂಚುವ ಬಾಣ ಮಾರುತ
ನಡಸಿ ಬೀಸುವ ಲಾಗು ತಲೆಗಳ
ತೊಡಬೆಗಳಚುವ ಬೇಗವನು ಬಣ್ಣಿಸುವರೆನ್ನಳವೆ
ಕಡಲ ಕಡಹದಲುರಿವ ಗರಳವ
ನುಡುಗಿದವರಿವರೋ ಶಿವಾಯೆಂ
ದೊಡನೊಡನೆ ಪಡೆ ನಡುಗಲೊರಸಿದನಾ ಮಹಾರಥರ (ದ್ರೋಣ ಪರ್ವ, ೧೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಾತಿಗಿಂತ ಮೊದಲೇ ಹೋಗುವ ಬಾಣಗಳು, ಅವುಗಳಿಂದ ಬೀಸುವ ಗಾಳಿ, ತಲೆಗಳ ತೊಡಕನ್ನು ಕತ್ತರಿಸುವ ವೇಗಗಳನ್ನು ಹೇಳಲು ಅಸಾಧ್ಯ. ಸಮುದ್ರ ಮಥನದಲ್ಲಿ ಉದಿಸಿದ ವಿಷವನ್ನು ಕುಡಿದವನು ಇವನೋ ಶಿವನೋ ಎನ್ನುವಂತೆ ಮೇಲಿಂದ ಮೇಲೆ ಆ ಸೈನ್ಯವನ್ನು ಕಡಿದು ಹಾಕಿದನು.

ಅರ್ಥ:
ನುಡಿ: ಮಾತು; ಮುಂಚು: ಮುಂದೆ; ಬಾಣ: ಅಂಬು; ಮಾರುತ: ಗಾಳಿ; ಅಡಸು: ಬಿಗಿಯಾಗಿ ಒತ್ತು; ಬೀಸು: ತೂರು, ತೂಗಾದು; ಲಾಗು: ನೆಗೆಯುವಿಕೆ; ತಲೆ: ಶಿರ; ತೊಡಬೆಳಗಚು: ಆಯುಧಗಳ ಸಮೂಹವನ್ನು ಕಳಚು; ಬೇಗ: ಶೀಘ್ರ; ಬಣ್ಣಿಸು: ವಿವರಿಸು; ಅಳವು: ಶಕ್ತಿ; ಕಡಲು: ಸಾಗರ; ಕಡಹು:ಅಲ್ಲಾಡಿಸು; ಉರಿ: ಜ್ವಾಲೆ, ಸಂಕಟ; ಗರಳ: ವಿಷ; ಉಡುಗು: ಒಳಹೋಗು; ಶಿವ: ಶಂಕರ; ಪಡೆ: ಸೈನ್ಯ; ನಡುಗು: ಹೆದರು; ಒರಸು: ನಾಶ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ನುಡಿಗೆ +ಮುಂಚುವ +ಬಾಣ +ಮಾರುತನ್
ಅಡಸಿ +ಬೀಸುವ +ಲಾಗು +ತಲೆಗಳ
ತೊಡಬೆಗಳಚುವ +ಬೇಗವನು +ಬಣ್ಣಿಸುವರೆನ್ನ್+ಅಳವೆ
ಕಡಲ +ಕಡಹದಲ್+ಉರಿವ +ಗರಳವನ್
ಉಡುಗಿದವರ್+ಇವರೋ +ಶಿವಾ+ಯೆಂ
ದೊಡನೊಡನೆ+ ಪಡೆ +ನಡುಗಲ್+ಒರಸಿದನಾ +ಮಹಾರಥರ

ಅಚ್ಚರಿ:
(೧) ರೂಪಕದ ಪ್ರಯೋಗ – ಕಡಲ ಕಡಹದಲುರಿವ ಗರಳವನುಡುಗಿದವರಿವರೋ ಶಿವಾ