ಪದ್ಯ ೪೩: ದುರ್ಯೋಧನನ ಸ್ಥಿತಿ ಹೇಗಾಗಿದೆ ಎಂದು ಆತ ಹೇಳಿದನು?

ಒಡ್ಡವಿಸಿತೆನ್ನಾಟ ನಗೆಯೊಳ
ಗಡ್ಡಬಿದ್ದಳು ಪಾಂಡುಪುತ್ರರ
ಬೊಡ್ಡಿ ಬಿಂಕದಲವರು ಬಿರಿದರು ಭೀಮ ಫಲುಗುಣರು
ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ
ಬಡ್ಡಿಗಿನ್ನಕ ಬದುಕಿದೆನು ಧೃತರಾಷ್ಟ್ರ ಕೇಳೆಂದ (ಸಭಾ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ನನ್ನ ವರ್ತೆನೆಯು ಹೀಗೆ ಗೊಂದಲಮಯವಾಗಲು, ಪಾಂಡವರ ಬೊಡ್ಡಿ ದ್ರೌಪದಿಯ ನಗುವು ಹೆಚ್ಚಾಗಿ ಆಕೆ ಅಡ್ಡಬಿದ್ದಳು. ಭೀಮಾರ್ಜುನರು ಹೆಮ್ಮೆಯಿಂದ ಬೀಗಿದರು. ನಾನೋ ಗೊಡ್ಡು ರೋಷದಿಂದ ಕುದಿದು ಅದರ ಬಡ್ಡಿಯಾಗಿ ಬದುಕಿದ್ದೇನೆ ಎಂದು ದುರ್ಯೋಧನನು ತನ್ನ ನೋವನ್ನು ಧೃತರಾಷ್ಟ್ರನಿಗೆ ಹೇಳಿಕೊಂಡನು.

ಅರ್ಥ:
ಒಡ್ಡ: ಮೂರ್ಖ, ಕೆಲಸಮಾಡುವವ; ನಗೆ: ನಗು, ಸಂತೋಷ, ಹರ್ಷ; ಅಡ್ಡಬೀಳು: ಕೆಳಕ್ಕೆ ಬೀಳು, ಹೊರಳು; ಪುತ್ರ: ಮಕ್ಕಳು; ಬೊಡ್ಡಿ: ವೇಶ್ಯೆ; ಬಿಂಕ: ಗರ್ವ, ಜಂಬ, ಠೀವಿ; ಬಿರಿ: ಬಿರುಕು, ಸೀಳು; ಖಡಿ: ಕತ್ತರಿಸು; ಗರುವ: ಹಿರಿಯ, ಶ್ರೇಷ್ಠ; ರೋಷ: ಕೋಪ; ಗೊಡ್ಡು: ಬಂಜೆ, ನಿಷ್ಫಲತೆ; ವಿಘಾತಿ: ಹೊಡೆತ, ವಿರೋಧ; ಬಡ್ಡಿ: ಸಾಲವಾಗಿ ಕೊಡುವ ಯಾ ಪಡೆಯುವ ಹಣದ ಮೇಲೆ ತೆರುವ ಯಾ ಪಡೆಯುವ ಹೆಚ್ಚಿನ ಹಣ, ಹೆಚ್ಚಾಗಿ; ಬದುಕು: ಜೀವಿಸು; ಕೇಳು: ಆಲಿಸು;

ಪದವಿಂಗಡಣೆ:
ಒಡ್ಡವಿಸಿತೆನ್+ಆಟ +ನಗೆಯೊಳಗ್
ಅಡ್ಡಬಿದ್ದಳು +ಪಾಂಡುಪುತ್ರರ
ಬೊಡ್ಡಿ +ಬಿಂಕದಲ್+ಅವರು +ಬಿರಿದರು+ ಭೀಮ +ಫಲುಗುಣರು
ಖಡ್ಡಿ+ ಗರುವೆನ್ನಿಂದ +ರೋಷದ
ಗೊಡ್ಡು +ನಾನಾದೆನು+ ವಿಘಾತಿಯ
ಬಡ್ಡಿಗಿನ್ನಕ+ ಬದುಕಿದೆನು+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ಪಾಂಡುಪುತ್ರರ ಬೊಡ್ಡಿ
(೨) ದುರ್ಯೋಧನನ ಸ್ಥಿತಿಗೆ ಉಪಮಾನದ ಪ್ರಯೋಗ – ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ ಬಡ್ಡಿಗಿನ್ನಕ ಬದುಕಿದೆನು

ಪದ್ಯ ೩೨: ಕರ್ಣನು ತನ್ನ ಅಹಂಕಾರವನ್ನು ಹೇಗೆ ಬಿಡಬೇಕಾಯಿತು?

ಮರಳಿ ಶಲ್ಯನನೆಚ್ಚನಾತನ
ಕರದ ವಾಘೆಯ ಕಡಿದನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ಹೊರೆಯ ಹಡಪಿಗ ಚಾಹಿಯರ ಚಾ
ಮರಿಯರನು ನೋಯಿಸಿದ ಗೆಲವಿನ
ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ (ಕರ್ಣ ಪರ್ವ, ೨೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬಾಣ ಪ್ರತಾಪವನ್ನು ಮುಂದುವರೆಸುತ್ತಾ, ಶಲ್ಯನನ್ನು ಹೊಡೆದನು, ಅವನ ಕೈಯಲ್ಲಿದ್ದ ವಾಘೆಯನ್ನು ಕತ್ತರಿಸಿ, ರಥದ ಕುರುರೆಗಳ ಮೈಯಲ್ಲಿ ಬಾಣಗಳನ್ನು ನೆಟ್ಟನು. ಅಕ್ಕ ಪಕ್ಕದ ತಾಂಬೂಲ ಛತ್ರ ಚಾಮರಧಾರಿಗಳನ್ನು ನೋಯಿಸಿದನು. ಗೆದ್ದೆನೆಂಬ ಅಹಂಕಾರವನ್ನು ಕರ್ಣನು ಬಡ್ಡಿಸಮೇತ ಉಗುಳಬೇಕಾಯಿತು.

ಅರ್ಥ:
ಮರಳಿ: ಮತ್ತೆ, ಪುನಃ; ಎಚ್ಚು: ಬಾಣಬಿಡು; ಕರ: ಕೈ; ವಾಘೆ: ಲಗಾಮು; ಕಡಿ: ಚೂರಾಗು, ತುಂಡು, ಹೋಳು; ರಥ: ಬಂಡಿ; ತುರಗ: ಕುದುರೆ; ಒಡಲು: ದೇಹ; ಹೂಳು: ಹೂತು ಹಾಕು, ಮುಚ್ಚು; ಹೇರಾಳು: ದೊಡ್ಡ, ವಿಶೇಷ; ಅಂಬು: ಬಾಣ; ಹೊರೆ: ರಕ್ಷಣೆ, ಆಶ್ರಯ; ಹಡಪಿಗ: ಚೀಲವನ್ನಿಟ್ಟುಕೊಂಡಿರುವವನು; ಚಾಹಿ: ಛತ್ರಹಿಡಿದವ; ಚಾಮರಿ: ಚಾಮರ ಬೀಸುವವ; ನೋವು: ಪೆಟ್ಟು; ಗೆಲುವು: ಜಯ; ಗರುವ: ಅಹಂಕಾರ; ಬಡ್ಡಿ:ಸಾಲವಾಗಿ ಕೊಡುವ ಯಾ ಪಡೆಯುವ ಹಣದ ಮೇಲೆ ತೆರುವ ಯಾ ಪಡೆಯುವ ಹೆಚ್ಚಿನ ಹಣ; ಸಹಿತ: ಜೊತೆ; ಉಗುಳಿಸು: ಹೊರಹಾಕು;

ಪದವಿಂಗಡಣೆ:
ಮರಳಿ +ಶಲ್ಯನನ್+ಎಚ್ಚನ್+ಆತನ
ಕರದ+ ವಾಘೆಯ +ಕಡಿದನಾ +ರಥ
ತುರಗದ್+ಒಡಲಲಿ +ಹೂಳಿದನು +ಹೇರಾಳದ್+ಅಂಬುಗಳ
ಹೊರೆಯ +ಹಡಪಿಗ+ ಚಾಹಿಯರ +ಚಾ
ಮರಿಯರನು +ನೋಯಿಸಿದ+ ಗೆಲವಿನ
ಗರುವತನವನು+ ಬಡ್ಡಿ+ಸಹಿತ್+ಉಗುಳಿಚಿದನಾ +ಪಾರ್ಥ

ಅಚ್ಚರಿ:
(೧) ಅಹಂಕಾರವನ್ನು ಮಣ್ಣುಮಾಡಿದನು ಎಂದು ಹೇಳುವ ಪರಿ, ಬಡ್ಡಿ ಪದದ ಬಳಕೆ – ಗೆಲವಿನ ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ
(೨) ಜೋಡಿ ಪದಗಳು – ಹೊರೆಯ ಹಡಪಿಗ; ಚಾಹಿಯರ ಚಾಮರಿಯರನು