ಪದ್ಯ ೬೧: ದ್ರೌಪದಿಯು ಪಾಂಡವರನ್ನು ಯಾರಿಗೆ ಹೋಲಿಸಿದಳು?

ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂರು
ರ್ಚಿಗಳದಾರುಂಟೆಂದು ದ್ರೌಪದಿ ಹಿರಿದು ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ವೈರಿಗಳು ಸುಖವಾಗಿರಲೆಂದು ಬಯಸಿ, ಶಾಂತರಾಗಿ ಬದುಕುವ ಮುಗ್ಧರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ, ಎಲ್ಲರೂ ಮೋಸವನ್ನು ದ್ವೇಷಿಸಿದರೆ, ನೀವು ಭಂಗವನ್ನು ಹೆಗಲುಕೊಟ್ಟು ಹೊರುತ್ತೀರಿ, ವೀರರೆಂಬ ಬಿರುದನ್ನು ದೂರಕ್ಕೆಸೆದು ಹೋರಿಗಳಂತೆ ಹೊಡಿಸಿಕೊಂಡು ಮೂಗುದಾರವನ್ನು ಹಾಕಿಕೊಂಡಿರುವವರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ ಎಂದು ದ್ರೌಪದಿಯು ಅತೀವ ದುಃಖದಿಂದ ಹೇಳಿದಳು.

ಅರ್ಥ:
ಹಗೆ: ವೈರತ್ವ; ತಂಪು: ತೃಪ್ತಿ, ಸಂತುಷ್ಟಿ; ಬದುಕು: ಜೀವಿಸು; ಮುಗುದ: ಕಪಟವರಿಯದ; ಭಂಗ: ಮೋಸ, ವಂಚನೆ; ಹೆಗಲು: ಭುಜ; ವಿರೋಧಿ: ವೈರಿ; ಲೋಕ: ಜಗತ್ತು; ವಿಗಡ: ಶೌರ್ಯ, ಪರಾಕ್ರಮ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಿಸುಟು: ಹೊರಹಾಕು; ಬಡಿ: ಹೊಡೆ, ತಾಡಿಸು; ಬಡಿಹೋರಿ: ಹೋರಿಯಂತೆ ಬಡಿಸಿಕೊಳ್ಳುವವ; ಮೂಗು: ನಾಸಿಕ; ಮೂಗುರ್ಚು: ಮೂಗುದಾರ ಹಾಕಿಸಿಕೊಂಡಿರುವವರು; ಹಿರಿದು: ಹೆಚ್ಚಾಗಿ; ಹಲುಬು: ದುಃಖಪಡು;

ಪದವಿಂಗಡಣೆ:
ಹಗೆಗಳಿಗೆ +ತಂಪಾಗಿ +ಬದುಕುವ
ಮುಗುದರ್+ಇನ್ನಾರುಂಟು +ಭಂಗಕೆ
ಹೆಗಲಕೊಟ್ಟಾನುವ+ ವಿರೋಧಿಗಳುಂಟೆ+ ಲೋಕದಲಿ
ವಿಗಡ+ ಬಿರುದನು +ಬಿಸುಟು +ಬಡಿಹೋ
ರಿಗಳು +ಪಾಂಡವರಂತೆ +ಮೂರು
ರ್ಚಿಗಳದ್+ಆರುಂಟೆಂದು +ದ್ರೌಪದಿ+ ಹಿರಿದು +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ವಿಗಡ ಬಿರುದನು ಬಿಸುಟು ಬಡಿಹೋರಿಗಳು ಪಾಂಡವರಂತೆ

ಪದ್ಯ ೧೮: ಕ್ಷೇಮಧೂರ್ತಿಯು ಭೀಮನನ್ನು ಮೇಲೆ ಹೇಗೆ ಆಕ್ರಮಣ ಮಾಡಿದನು?

ಇದು ವಿನೋದವಲೇ ಮದೀಯಾ
ಭ್ಯುದಯವಿದಲೇ ನಮ್ಮ ಕೋಪವ
ನಿದಿರುಗೊಂಡವನಿವನಲೇ ಎನುತೆಚ್ಚನಾ ಭೀಮ
ಸದೆಗ ನೀ ಸಾರೆಲವೊ ಭಾರಿಯ
ಮದಗಜದ ಬಡಿಹೋರಿ ಹೋಗೆನು
ತೊದರಿ ಭೀಮನ ಮುಸುಕಿದನು ನಾರಾಚಸೋನೆಯಲಿ (ಕರ್ಣ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಇದು ಸಂತೋಷವಲ್ಲವೇ, ನಮ್ಮ ಏಳಿಗೆಯ ಕಾಲ, ಇವನು ನಮಗೆ ವಿರೋಧಿಯಾಗಿ ಬಂದವನಲ್ಲವೇ ಎನ್ನುತ್ತಾ ಭೀಮನು ಕ್ಷೇಮಧೂರ್ತಿಯ ಮೇಲೆ ಬಾಣಗಳನ್ನು ಬಿಟ್ಟನು. ಎಲವೋ ತುಚ್ಛ, ನಮ್ಮ ಆನೆಯನ್ನು ಬಡಿದು ಅದನ್ನೇರಿ ಬಂದವನೇ ಎನ್ನುತ್ತಾ ಕ್ಷೇಮಧೂರ್ತಿಯು ಭೀಮನನ್ನು ಬಾಣಗಳಿಂದ ಹೊಡೆದನು.

ಅರ್ಥ:
ವಿನೋದ:ಹಾಸ್ಯ, ತಮಾಷೆ; ಮದೀಯ: ತನ್ನ; ಅಭ್ಯುದಯ: ಏಳಿಗೆ; ಕೋಪ: ರೋಷ; ಇದಿರು: ಎದುರು; ಅವನಿವನು: ಸಿಕ್ಕವರು; ಎನುತ: ಹೇಳುತ್ತಾ; ಎಚ್ಚು: ಸವರು, ಬಾಣಬಿಡು; ಸದೆ:ಹೊಡಿ, ಬಡಿ; ಸಾರೆ: ಹತ್ತಿರ, ಸಮೀಪ, ಬಾರಿ; ಭಾರಿ: ಹೆಚ್ಚು; ಮದ: ಮತ್ತು, ಸೊಕ್ಕು; ಗಜ: ಆನೆ; ಬಡಿಹೋರಿ: ಹೋರಿಯಂತೆ ಹೊಡಿಸಿಕೊಳ್ಳುವವನು; ಹೋಗು: ತೆರಳು; ಒದರು:ಕೂಗು; ಮುಸುಕು: ಆವರಿಸು; ನಾರಾಚ: ಬಾಣ; ಸೋನೆ: ಮಳೆ;

ಪದವಿಂಗಡಣೆ:
ಇದು +ವಿನೋದವಲೇ +ಮದೀಯ
ಅಭ್ಯುದಯವ್+ಇದಲೇ +ನಮ್ಮ +ಕೋಪವನ್
ಇದಿರುಗೊಂಡವನ್+ಇವನಲೇ +ಎನುತ್+ಎಚ್ಚನಾ +ಭೀಮ
ಸದೆಗ+ ನೀ +ಸಾರೆಲವೊ +ಭಾರಿಯ
ಮದಗಜದ +ಬಡಿಹೋರಿ +ಹೋಗೆನುತ್
ಒದರಿ+ ಭೀಮನ +ಮುಸುಕಿದನು+ ನಾರಾಚ+ಸೋನೆಯಲಿ

ಅಚ್ಚರಿ:
(೧) ಇಬ್ಬರು ಬಾಣ ಬಿಟ್ಟರು ಎಂದು ಹೇಳಲು – ಎಚ್ಚನಾ ಭೀಮ, ನಾರಾಚ ಸೋನೆಯಲಿ
(೨) ಕ್ಷೇಮಧೂರ್ತಿಯು ಭೀಮನನ್ನು ಕರೆಯುವ ಬಗೆ – ಬಡಿಹೋರಿ, ಭಾರಿಯ ಮದಗಜ