ಪದ್ಯ ೧೩: ಭೀಮನೇಕೆ ಬಂದಿರುವೆನೆಂದ?

ಎಲೆ ಮರುಳೆ ಗುರುವೆಮಗೆ ನೀ ಹೆ
ಕ್ಕಳಿಸಿ ನುಡಿದರೆ ಮೊದಲಲಂಜುವೆ
ನುಳಿದ ಮಾತಿನಲೇನು ನಿಮ್ಮೊಡನೆನಗೆ ಸಂಗ್ರಾಮ
ಬಳಿಕವೀಗಳು ನಿಮ್ಮ ಮೋಹರ
ದೊಳಗೆ ಕೊಡಿ ಬಟ್ಟೆಯನು ಸಿಲುಕಿದ
ಫಲುಗುಣನ ತಹೆನಣ್ಣದೇವನ ನೇಮ ತನಗೆಂದ (ದ್ರೋಣ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಎಲೈ ಹುಚ್ಚನೇ, ನೀನು ನಮಗೆ ಗುರುವಾಗಿರುವೆ, ನೀನು ಹೆಚ್ಚಿನ ಮಾತನ್ನಾಡಿದರೆ ಮೊದಲಿಗೆ ಹೆದರುತ್ತೇನೆ, ಮಿಕ್ಕ ಮಾತು ಹಾಗಿರಲಿ, ನಿಮ್ಮೊಡನೆ ವೃಥಾ ವಾಗ್ಯುದ್ಧ ಬೇಡ, ಈಗ ಸಂದರ್ಭವೇನೆಂದರೆ, ಅಣ್ಣನು ನನಗೆ ಆಜ್ಞೆ ಮಾಡಿದ್ದಾನೆ, ನಿಮ್ಮ ಸೈನ್ಯ ಮಧ್ಯದಲ್ಲಿ ಸಿಕ್ಕಿಹಾಕಿ ಕೊಂಡಿರುವ ಅರ್ಜುನನನ್ನು ಕರೆದು ತಾ ಎಂದು, ಅದಕ್ಕಾಗಿ ನಾನಿಲ್ಲಿಗೆ ಬಂದಿದ್ದೇನೆ, ದಾರಿ ನೀಡಿ ನಾನು ಅರ್ಜುನನನ್ನು ಕರೆತರುತ್ತೇನೆ ಎಂದನು.

ಅರ್ಥ:
ಮರುಳೆ: ಮೂಢ; ಗುರು: ಆಚಾರ್ಯ; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು, ಹಿಗ್ಗು; ನುಡಿ: ಮಾತಾದು; ಅಂಜು: ಹೆದರು; ಉಳಿದ: ಮಿಕ್ಕ; ಮಾತು: ನುಡಿ; ಸಂಗ್ರಾಮ: ಯುದ್ಧ; ಬಳಿಕ: ನಂತರ; ಮೋಹರ: ಉದ್ಧ; ಕೊಡಿ: ನೀಡಿ; ಬಟ್ಟೆ; ಹಾದಿ; ಸಿಲುಕು: ಬಂಧನಕ್ಕೊಳಗಾದುದು; ತಹೆ: ಹಿಂತರು; ಅಣ್ಣ: ಸಹೋದರ; ನೇಮ: ಆಜ್ಞೆ;

ಪದವಿಂಗಡಣೆ:
ಎಲೆ +ಮರುಳೆ +ಗುರುವ್+ಎಮಗೆ +ನೀ +ಹೆ
ಕ್ಕಳಿಸಿ +ನುಡಿದರೆ +ಮೊದಲಲ್+ಅಂಜುವೆನ್
ಉಳಿದ +ಮಾತಿನಲೇನು+ ನಿಮ್ಮೊಡನ್+ಎನಗೆ +ಸಂಗ್ರಾಮ
ಬಳಿಕವ್+ಈಗಳು +ನಿಮ್ಮ +ಮೋಹರ
ದೊಳಗೆ +ಕೊಡಿ +ಬಟ್ಟೆಯನು+ ಸಿಲುಕಿದ
ಫಲುಗುಣನ+ ತಹೆನ್+ಅಣ್ಣದೇವನ +ನೇಮ +ತನಗೆಂದ

ಅಚ್ಚರಿ:
(೧) ಗುರುವನ್ನು ಕರೆದ ಪರಿ – ಎಲೆ ಮರುಳೆ ಗುರುವೆಮಗೆ ನೀ

ಪದ್ಯ ೬೨: ಕೌರವರ ಪರಾಕ್ರಮ ಹೇಗೆ ಮಾಯವಾಯಿತು?

ದಿಟ್ಟತನ ಪೊಳ್ಳಾಯ್ತು ಶೌರ್ಯದ
ಘಟ್ಟಿ ಕರಗಿತು ಸುಭಟಧರ್ಮದ
ಬಟ್ಟೆಯನು ಹೂಳಿದರು ಹಂಗಿಗರಾದರಿಹಪರಕೆ
ಬೆಟ್ಟವಾಯಿತು ಭಂಗ ಭರದಲಿ
ಬಿಟ್ಟುಹೋಯಿತು ರಾಯದಳ ಜಗ
ಜಟ್ಟಿಗಳು ಭಗದತ್ತ ಸೈಂಧವ ಗುರುಸುತಾದಿಗಳ (ಭೀಷ್ಮ ಪರ್ವ, ೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ಧೈರ್ಯ ಪೊಳ್ಳಾಯಿತು, ಶೌರ್ಯದ ಗಟ್ಟಿ ಕರಗಿತು. ವೀರಯೋಧರ ಧರ್ಮವನ್ನು ತ್ಯಜಿಸಿದರು. ಇಹದಲ್ಲಿ ತಮ್ಮ ಒಡೆಯನಿಗೂ, ಪರದಲ್ಲಿ ಸದ್ಗತಿಗೂ ಹಂಗಿಗರಾದರು. ತೇಜೋಭಂಗವು ಬೆಟ್ಟದಂತೆ ಬೆಳೆಯಿತು. ಕೌರವ ಸೈನ್ಯದಲ್ಲಿ ಜಗಜಟ್ಟಿಗಳೆಂದು ಮೆರೆಯುತ್ತಿದ್ದ ಅಶ್ವತ್ಥಾಮ, ಭಗದತ್ತ, ಸೈಂಧವರು ಪಲಾಯನ ಮಾಡಿದರು.

ಅರ್ಥ:
ದಿಟ್ಟ: ಧೈರ್ಯ; ಪೊಳ್ಳು: ತಿರುಳಿಲ್ಲದುದು, ಟೊಳ್ಳು; ಶೌರ್ಯ: ಪರಾಕ್ರಮ; ಘಟ್ಟಿ: ಹೆಪ್ಪುಗಟ್ಟಿದುದು; ಕರಗು: ಕಡಿಮೆಯಾಗು; ಸುಭಟ: ಪರಾಕ್ರಮಿ; ಧರ್ಮ: ಧಾರಣೆ ಮಾಡಿದುದು; ಬಟ್ಟೆ: ವಸ್ತ್ರ; ಹೂಳು: ಮುಚ್ಚು; ಹಂಗು: ದಾಕ್ಷಿಣ್ಯ, ಆಭಾರ; ಇಹಪರ: ಈ ಲೋಕ ಮತ್ತು ಪರಲೋಕ; ಬೆಟ್ಟ: ಗಿರಿ; ಭಂಗ: ಮುರಿಯುವಿಕೆ; ಭರ: ವೇಗ; ಬಿಟ್ಟು: ಬಿಡು, ತ್ಯಜಿಸು; ರಾಯ: ರಾಜ; ದಳ: ಸೈನಿಕ; ಜಗಜಟ್ಟಿ: ಪರಾಕ್ರಮಿ; ಸುತ: ಮಕ್ಕಳು;

ಪದವಿಂಗಡಣೆ:
ದಿಟ್ಟತನ +ಪೊಳ್ಳಾಯ್ತು +ಶೌರ್ಯದ
ಘಟ್ಟಿ +ಕರಗಿತು +ಸುಭಟ+ಧರ್ಮದ
ಬಟ್ಟೆಯನು +ಹೂಳಿದರು+ ಹಂಗಿಗರ್+ಆದರ್+ಇಹಪರಕೆ
ಬೆಟ್ಟವಾಯಿತು +ಭಂಗ +ಭರದಲಿ
ಬಿಟ್ಟುಹೋಯಿತು+ ರಾಯದಳ+ ಜಗ
ಜಟ್ಟಿಗಳು +ಭಗದತ್ತ+ ಸೈಂಧವ +ಗುರುಸುತಾದಿಗಳ

ಅಚ್ಚರಿ:
(೧) ರೂಪಕದ ಪ್ರಯೋಗ – ಸುಭಟಧರ್ಮದ ಬಟ್ಟೆಯನು ಹೂಳಿದರು
(೨) ಬ ಕಾರದ ಸಾಲು ಪದ – ಬೆಟ್ಟವಾಯಿತು ಭಂಗ ಭರದಲಿ ಬಿಟ್ಟುಹೋಯಿತು

ಪದ್ಯ ೧೭: ಭೀಮನು ಏನೆಂದು ಗರ್ಜಿಸಿದನು?

ಗದೆಯ ಮೊನೆಯಲಿ ನೂಕಿದನು ರೋ
ಮದಲಿ ಚಲಿಸದು ಬಾಲ ನೋಡಿದ
ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ
ಒದೆದಡದ್ರಿಗಳಳಿವವೆನ್ನಂ
ಗದಲಿ ನಾ ಬಲ್ಲಿದನು ಬಾಲದ
ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ (ಅರಣ್ಯ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ಹನುಮನ ಬಾಲವನ್ನು ಗದೆಯ ತುದಿಯಿಂದ ನೂಕಿದನು, ಅವನ ಆಶ್ಚರ್ಯಕ್ಕೆ ಬಾಲದ ಕೂದಲೂ ಸಹ ಅಲ್ಲಾಡಲಿಲ್ಲ, ಈ ವಿಚಿತ್ರವನ್ನು ಕಂಡು ಬೆರಗಾಗಿ, ನಾನು ಕಾಲಿನಿಂದ ಒದೆದರೆ ಬೆಟ್ಟಗಳು ನಾಶವಾಗುತ್ತವೆ, ನಾನು ಮಹಾ ಬಲಶಾಲಿ, ನಿನ್ನ ಬಾಲವನ್ನು ದಾರಿಯಿಂದ ಎಳೆದುಕೋ ಎಂದು ಹನುಮನಿಗೆ ಹೇಳಿದನು.

ಅರ್ಥ:
ಗದೆ: ಮುದ್ಗರ; ಮೊನೆ: ತುದಿ; ನೂಕು: ತಳ್ಳು; ರೋಮ: ಕೂದಲು; ಚಲಿಸು: ಅಲ್ಲಾಡು; ಬಾಲ: ಪುಚ್ಛ; ನೋಡು: ವೀಕ್ಷಿಸು; ವಿಚಿತ್ರ: ಆಶ್ಚರ್ಯ; ನುಡಿಸು: ಮಾತನಾಡಿಸು; ಕಪಿ: ಹನುಮ; ಒದೆ: ಕಾಲಿನಿಂದ ಹೊಡೆ, ನೂಕು; ಅದ್ರಿ: ಬೆಟ್ಟ; ಅಳಿ: ನಾಶ; ಅಂಗ: ದೇಹದ ಭಾಗ; ಬಲ್ಲಿದ: ಬಲಿಷ್ಠ; ಕದ: ಬಾಗಿಲು; ತೆಗೆ: ಈಚೆಗೆ ತರು, ಹೊರತರು; ಬಟ್ಟೆ: ಹಾದಿ, ಮಾರ್ಗ; ಗರ್ಜಿಸು: ಜೋರಾಗಿ ಕೂಗು;

ಪದವಿಂಗಡಣೆ:
ಗದೆಯ +ಮೊನೆಯಲಿ +ನೂಕಿದನು +ರೋ
ಮದಲಿ +ಚಲಿಸದು +ಬಾಲ +ನೋಡಿದನ್
ಇದು +ವಿಚಿತ್ರವಲಾ+ಎನುತ +ನುಡಿಸಿದನು +ಕಪಿವರನ
ಒದೆದಡ್+ಅದ್ರಿಗಳ್+ಅಳಿವವ್+ಎನ್ನಂ
ಗದಲಿ+ ನಾ +ಬಲ್ಲಿದನು+ ಬಾಲದ
ಕದವ +ತೆಗೆ +ಬಟ್ಟೆಯಲೆನುತ +ಗರ್ಜಿಸಿದನಾ +ಭೀಮ

ಅಚ್ಚರಿ:
(೧) ಬಾಲವನ್ನು ತೆಗೆ ಎಂದು ಹೇಳುವ ಪರಿ – ಬಾಲದ ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ