ಪದ್ಯ ೨೨: ಧರ್ಮಜನು ಮುಂದೆ ಯಾರನ್ನು ಪಣಕ್ಕಿಟ್ಟನು?

ಸೋತಿರರಸರೆ ಮತ್ತೆ ಹೇಳೀ
ದ್ಯೂತಶಿಖಿಗಾಹುತಿಯನೆನೆ ಕುಂ
ತೀತನುಜನೊಡ್ಡಿದನು ವಿಗಡ ಬಕಾಸುರಾಂತಕನ
ಆತುದೊಂದರೆಘಳಿಗೆ ಸೌಬಲ
ಸೋತ ಧರ್ಮಜ ಗೆಲಿದ ಧರ್ಮಜ
ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನರಭಸ (ಸಭಾ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶಕುನಿಯು ಧರ್ಮಜನನ್ನು ಹಂಗಿಸುವ ರೀತಿಯಲ್ಲಿ, ಅರಸರೇ ನೀವು ಸೋತಿದ್ದೀರಿ, ಜೂಜೆಂಬ ಅಗ್ನಿಗೆ ಮುಂದಿನ ಆಹುತಿಯೇನೆಂದು ಹೇಳಿರಿ ಎಂದು ಕೇಳಲು, ಧರ್ಮಜನು ಬಕಾಸುರಾಂತಕನಾದ ಭೀಮನನ್ನು ಒಡ್ಡಿದನು. ಒಂದರ್ಧ ಘಂಟೆಗಳ ಕಾಲ ಧರ್ಮರಾಯ ಗೆದ್ದ, ಶಕುನಿ ಸೋತ, ಶಕುನಿ ಗೆದ್ದ, ಧರ್ಮರಾಯ ಸೋತ ಎನ್ನುವ ಹಾಗೆ ಆಟದ ರಭಸ ಸಾಗಿತು.

ಅರ್ಥ:
ಸೋತಿರಿ: ಪರಾಭವಗೊಂಡಿರಿ; ಅರಸ: ರಾಜ; ಹೇಳು: ತಿಳಿಸು; ದ್ಯೂತ: ಜೂಜು; ಶಿಖಿ: ಬೆಂಕಿ; ಆಹುತಿ: ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು, ಬಲಿ; ತನುಜ: ಮಗ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ವಿಗಡ: ಅತಿಶಯ, ಆಧಿಕ್ಯ, ಪರಾಕ್ರಮ; ಅಂತಕ: ನಾಶ; ಬಕಾಸುರಾಂತಕ: ಭೀಮ; ಘಳಿಗೆ: ಸಮಯ; ಗೆಲಿದ: ಜಯಗಳಿಸು; ಘನ: ಭಾರವಾದ, ಮಹತ್ವವುಳ್ಳ; ರಭಸ: ವೇಗ;

ಪದವಿಂಗಡಣೆ:
ಸೋತಿರ್+ಅರಸರೆ +ಮತ್ತೆ +ಹೇಳಿ
ಈ+ದ್ಯೂತ+ಶಿಖಿಗ್+ಆಹುತಿಯನ್+ಎನೆ +ಕುಂತೀ
ತನುಜನ್+ಒಡ್ಡಿದನು +ವಿಗಡ+ ಬಕಾಸುರ+ಅಂತಕನ
ಆತುದ್+ಒಂದ್+ಅರೆ+ಘಳಿಗೆ+ ಸೌಬಲ
ಸೋತ +ಧರ್ಮಜ +ಗೆಲಿದ +ಧರ್ಮಜ
ಸೋತ +ಸೌಬಲ +ಗೆಲಿದನ್+ಎಂಬವೊಲ್+ಆಯ್ತು +ಘನರಭಸ

ಅಚ್ಚರಿ:
(೧) ಆಟವನ್ನು ವಿವರಿಸುವ ಪರಿ – ಆತುದೊಂದರೆಘಳಿಗೆ ಸೌಬಲ ಸೋತ ಧರ್ಮಜ ಗೆಲಿದ ಧರ್ಮಜ ಸೋತ ಸೌಬಲ ಗೆಲಿದನೆಂಬವೊಲಾಯ್ತು ಘನರಭಸ