ಪದ್ಯ ೪: ಊರ್ವಶಿಯ ಚೆಲುವು ಹೇಗಿತ್ತು?

ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತಿಯೊ ಕಾಮುಕರ ಭಾಗ್ಯ ಸುಪಕ್ವ ಫಲರಸವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿದೇವತೆಯೊ ವರ್ಣಿಸುವೊಡರಿದೆಂದ (ಅರಣ್ಯ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಊರ್ವಶಿಯು ಸುಗಂಧದ ಪುತ್ಥಳಿ, ಸೌಂದರ್ಯದ ಎರಕ, ವಿಟರು ಮಾಡಿದ ಪುಣ್ಯದ ಫಲ, ಕಾಮುಕರ ಭಾಗ್ಯದ ಪಕ್ವ ಫಲದ ರಸ, ಮನ್ಮಥನ ವಿಜಯಧ್ವಜ, ಕಾಮಶಾಸ್ತ್ರದ ಮೂಲಮಂತ್ರ, ಅಪ್ಸರ ಸ್ತ್ರೀಯರ ಅಧಿದೇವತೆ ಆಕೆಯನ್ನು ವರ್ಣಿಸಲಸಾಧ್ಯ.

ಅರ್ಥ:
ಪರಿಮಳ: ಸುಗಂಧ; ಪುತ್ಥಳಿ: ಬೊಂಬೆ; ಚೆಲುವು: ಅಂದ; ಕರು: ಎರಕ ಹೊಯ್ಯುವುದಕ್ಕಾಗಿ ಮಾಡಿದ ಅಚ್ಚು; ಎರಕ: ಕಾಯಿಸಿದ ಲೋಹಾದಿಗಳ ದ್ರವವನ್ನು ಅಚ್ಚಿಗೆ ಎರೆಯುವಿಕೆ; ವಿಟ: ಕಾಮುಕ, ವಿಷಯಾಸಕ್ತ; ಪುಣ್ಯ: ಸದಾಚಾರ; ಪರಿಣತಿ: ಅನುಭವಿ, ಬುದ್ಧಿವಂತಿಕೆ; ಕಾಮುಕ: ಕಾಮಾಸಕ್ತನಾದವನು; ಭಾಗ್ಯ: ಸುದೈವ; ಪಕ್ವ: ಹಣ್ಣಾದ; ಫಲ: ಹಣ್ಣು; ರಸ: ಸಾರ; ಸ್ಮರ: ಮನ್ಮಥ; ವಿಜಯ: ಗೆಲುವು; ಧ್ವಜ: ಬಾವುಟ; ಮನ್ಮಥ: ಕಾಮ, ಸ್ಮರ; ಪರಮ: ಶ್ರೇಷ್ಠ; ಶಾಸ್ತ್ರ: ವಿದ್ಯೆ; ಮೂಲ: ಬೇರು; ಮಂತ್ರ: ವಿಚಾರ, ಆಲೋಚನೆ; ಸುರಸತಿ: ಅಪ್ಸರೆ; ಅಧಿದೇವತೆ: ಮುಖ್ಯ ದೇವತೆ; ವರ್ಣಿಸು: ಬಣ್ಣಿಸು, ವಿವರಿಸು; ಅರಿ: ತಿಳಿ;

ಪದವಿಂಗಡಣೆ:
ಪರಿಮಳದ +ಪುತ್ಥಳಿಯೊ +ಚೆಲುವಿನ
ಕರುವಿನ್+ಎರಕವೊ+ ವಿಟರ+ ಪುಣ್ಯದ
ಪರಿಣತಿಯೊ +ಕಾಮುಕರ+ ಭಾಗ್ಯ +ಸುಪಕ್ವ+ ಫಲರಸವೊ
ಸ್ಮರನ+ ವಿಜಯಧ್ವಜವೊ +ಮನ್ಮಥ
ಪರಮ+ ಶಾಸ್ತ್ರದ +ಮೂಲ+ಮಂತ್ರವೊ
ಸುರಸತಿಯರ್+ಅಧಿದೇವತೆಯೊ +ವರ್ಣಿಸುವೊಡ್+ಅರಿದೆಂದ

ಅಚ್ಚರಿ:
(೧) ಉಪಮಾನಗಳ ಬಳಕೆ – ಪರಿಮಳದ ಪುತ್ಥಳಿಯೊ; ಚೆಲುವಿನ ಕರುವಿನೆರಕವೊ; ವಿಟರ ಪುಣ್ಯದ ಪರಿಣತಿಯೊ; ಕಾಮುಕರ ಭಾಗ್ಯ ಸುಪಕ್ವ ಫಲರಸವೊ; ಸ್ಮರನ ವಿಜಯಧ್ವಜವೊ; ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ; ಸುರಸತಿಯರಧಿದೇವತೆಯೊ

ಪದ್ಯ ೩೯: ವನವು ಹೇಗೆ ಕಂಗೊಳಿಸುತ್ತಿತ್ತು?

ವಿಲಸದಭ್ರದಲಿಹ ಮಹಾತರು
ಕುಲದಿನಮರನದೀ ಸ್ತನಂಧಯ
ಫಲರಸದ ಸವಿಗಳಲಿ ದಿಕ್ಕೂಲಂಕಷೋನ್ನತಿಯ
ಸುಳಿವ ಪರಿಮಳ ಪವನನಿಂ ಕಂ
ಗೊಳಿಸಿತರ್ಜುನ ಕಾಮ್ಯ ಸಿದ್ಧಿ
ಸ್ಥಳದೊಳಂತರ್ಮಿಳಿತ ಕಾನನವರಸ ಕೇಳೆಂದ (ಅರಣ್ಯ ಪರ್ವ, ೫ ಸಂಧಿ, ೩೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಶೋಭಾಯಮಾನಗಾವಿ ಬೆಳೆದು ಆಗಸವನ್ನು ಮುಟ್ಟುತ್ತಿರುವ ದೊಡ್ಡ ಮರಗಳಿಂದಲೂ, ಸುರನದಿಯ ಮೊಲೆ ಉಂಡು ಮಕ್ಕಳಂತಿರುವ ರಸಭರಿತ ಹಣ್ಣುಗಳಿಂದಲೂ, ದಿಕ್ಕು ದಿಕ್ಕಿಗೆ ಸುಳಿವ ಸುಗಂಧಪೂರಿತ ವಾಯುವಿನಿಂದಲೂ ಕೂಡಿ ಆ ವನವು ರಮಣೀಯವಾಗಿ ತೋರಿತು.

ಅರ್ಥ:
ವಿಲಾಸ: ಚೆಲುವು; ಅಭ್ರ: ಆಕಾಶ; ಮಹಾ: ದೊಡ್ಡ; ತರು: ಮರ; ಕುಲ: ವಂಶ; ಅಮರ: ದೇವತೆ; ನದೀ: ಸರೋವರ; ಸ್ತನ: ಮೊಲೆ; ಫಲ: ಹಣ್ಣು; ರಸ: ಸಾರ, ಮಧು; ಸವಿ: ಸಿಹಿ; ಉನ್ನತಿ: ಏಳಿಗೆ; ದಿಕ್ಕು: ದಿಶೆ; ಸುಳಿ: ಹರಡು,ಬೀಸು, ತೀಡು; ಪರಿಮಳ: ಸುಗಂಧ; ಪವನ: ಗಾಳಿ, ಯಾವು; ಕಂಗೊಳಿಸು: ಗೋಚರಿಸು; ಕಾಮ್ಯ: ಮನೋರಥ, ಬಯಸಿದ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಸ್ಥಳ: ಜಾಗ; ಅಂತರ್ಮಿಳಿತ: ಕೂಡು; ಕಾನನ: ಕಾಡು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ವಿಲಸದ್+ಅಭ್ರದಲ್+ಇಹ +ಮಹಾ+ತರು
ಕುಲದಿನ್+ಅಮರ+ನದೀ +ಸ್ತನಂಧಯ
ಫಲರಸದ+ ಸವಿಗಳಲಿ +ದಿಕ್ಕೂಲಂಕಷ+ಉನ್ನತಿಯ
ಸುಳಿವ +ಪರಿಮಳ+ ಪವನನಿಂ+ ಕಂ
ಗೊಳಿಸಿತ್+ಅರ್ಜುನ +ಕಾಮ್ಯ +ಸಿದ್ಧಿ
ಸ್ಥಳದೊಳ್+ಅಂತರ್ಮಿಳಿತ +ಕಾನನವ್+ಅರಸ +ಕೇಳೆಂದ

ಅಚ್ಚರಿ:
(೧) ಮರ ಹಣ್ಣಿನ ವರ್ಣನೆಯ ಸೊಬಗು – ವಿಲಸದಭ್ರದಲಿಹ ಮಹಾತರು ಕುಲದಿನಮರನದೀ ಸ್ತನಂಧಯ ಫಲರಸದ ಸವಿಗಳಲಿ ದಿಕ್ಕೂಲಂಕಷೋನ್ನತಿಯ