ಪದ್ಯ ೩೨: ಭೀಮನ ಎದೆಯನ್ನು ಯಾರು ಸುತ್ತಿದರು?

ತೆಕ್ಕೆ ಸಡಲಿತು ತರಗೆಲೆಯ ಹೊದ
ರಿಕ್ಕಲಿಸೆ ಮೈಮುರಿಯಲನಿಲಜ
ನೆಕ್ಕತುಳದಲಿ ಮೇಲೆ ಹಾಯ್ದನು ಕಾಣದಹಿಪತಿಯ
ಸಿಕ್ಕಿದವು ಹೆದ್ದೊಡೆಗಳುರಗನ
ತೆಕ್ಕೆಯಲಿ ಡೆಂಢಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಹೇರುರವ (ಅರಣ್ಯ ಪರ್ವ, ೧೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹೆಬ್ಬಾವು ತನ್ನ ಮೈಸಡಲಿಸಲು, ಸುತ್ತಲೂ ಇದ್ದ ತರಗೆಲೆಗಳು ಪಕ್ಕಕ್ಕೆ ಸರಿದವು. ಆ ಹಾವನ್ನು ನೋಡದೆ ಭೀಮನು ಅದರ ಮೇಲೆ ಕಾಲಿಟ್ಟನು. ಹಾವು ಅವನೆರಡು ತೋಳುಗಳನ್ನು ಸುತ್ತಿ ಬಿಗಿಯಲು, ಭೀಮನ ತಲೆ ತಿರುಗಿತು, ಆ ಹೆಬ್ಬಾವು ಭೀಮನ ಎದೆಯನ್ನು ಸುತ್ತಿತು.

ಅರ್ಥ:
ತೆಕ್ಕೆ:ಸುರುಳಿಯಾಗಿರುವಿಕೆ; ಸಡಲ:ಕಳಚು, ಬಿಚ್ಚು; ತರಗೆಲೆ: ಒಣಗಿದ ಎಲೆ; ಹೊದರು: ಪೊಟರೆ, ಪೊದೆ; ಮೈ: ತನು, ದೇಹ; ಮೈಮುರಿ: ಸಡಲಿಸು; ಅನಿಲಜ: ವಾಯು ಪುತ್ರ (ಭೀಮ); ಅತುಳ: ಹೋಲಿಕೆಯಿಲ್ಲದ; ಹಾಯು: ನೆಗೆ, ಹೊರಸೂಸು; ಕಾಣು: ತೋರು; ಅಹಿಪತಿ: ನಾಗರಾಜ; ಸಿಕ್ಕು: ಬಂಧಿಸು; ಹೆದ್ದೊಡೆ: ದೊಡ್ಡದಾದ ತೊಡೆ; ಉರಗ: ಹಾವು; ಡೆಂಢಣಿಸು: ಕಂಪಿಸು, ಕೊರಗು; ಫಣಿಪತಿ: ನಾಗರಾಜ; ಡೊಕ್ಕರ: ಗುದ್ದು; ಹಬ್ಬು: ಹರಡು; ಬಿಗಿ: ಬಂಧಿಸು; ಭಟ: ಶೂರ; ಹೇರುರ: ದೊಡ್ಡದಾದ ಎದೆ;

ಪದವಿಂಗಡಣೆ:
ತೆಕ್ಕೆ+ ಸಡಲಿತು +ತರಗೆಲೆಯ +ಹೊದ
ರಿಕ್ಕಲಿಸೆ +ಮೈಮುರಿಯಲ್+ಅನಿಲಜನ್
ಇಕ್ಕತುಳದಲಿ +ಮೇಲೆ +ಹಾಯ್ದನು +ಕಾಣದ್+ಅಹಿಪತಿಯ
ಸಿಕ್ಕಿದವು +ಹೆದ್ದೊಡೆಗಳ್+ಉರಗನ
ತೆಕ್ಕೆಯಲಿ +ಡೆಂಢಣಿಸಿ+ ಫಣಿಪತಿ
ಡೊಕ್ಕರಕೆ+ ಹಬ್ಬಿದನು +ಬಿಗಿದನು +ಭಟನ +ಹೇರುರವ

ಅಚ್ಚರಿ:
(೧) ಅಹಿಪತಿ, ಫಣಿಪತಿ, ಉರಗ – ಸಮಾನಾರ್ಥಕ ಪದ
(೨) ಹಾವು ಸುತ್ತಿದ ಪರಿ – ಸಿಕ್ಕಿದವು ಹೆದ್ದೊಡೆಗಳುರಗನ ತೆಕ್ಕೆಯಲಿ ಡೆಂಢಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಹೇರುರವ
(೩) ಭೀಮನ ಅಂಗವನ್ನು ವಿವರಿಸುವ ಪರಿ – ಹೇರುರವ, ಹೆದ್ದೊಡೆ

ಪದ್ಯ ೬೯: ಶಿವನು ಯಾವ ರೂಪದಲ್ಲಿ ದರುಶನವನ್ನು ನೀಡಿದನು?

ಬಲಿದ ಚಂದ್ರಿಕೆಯೆರಕವೆನೆ ತೊಳ
ತೊಳಗಿ ಬೆಳಗುವ ಕಾಯಕಾಂತಿಯ
ಪುಲಿದೊಗಲ ಕೆಂಜಡೆಯ ಕೇವಣರಿಂದು ಫಣಿಪತಿಯ
ಹೊಳೆವ ಹರಿಣನಕ್ಷಮಾಲಾ
ವಲಯಾಭಯ ವರದಕರ ಪರಿ
ಕಲಿತನೆಸೆದನು ಶಂಭುಸದ್ಯೋಜಾತ ರೂಪಿನಲಿ (ಅರಣ್ಯ ಪರ್ವ, ೭ ಸಂಧಿ, ೬೯ ಪದ್ಯ)

ತಾತ್ಪರ್ಯ:
ಚೆನ್ನಾಗಿ ಬೆಳೆದ ಚಂದ್ರನ ಬೆಳುದಿಂಗಳಿನಂತೆ ಹೊಳೆಹೊಳೆಯುವ ಕಾಂತಿ, ವ್ಯಾಘ್ರಾಜಿನ, ಕೆಂಜೆಡೆಯಲ್ಲಿ ಸೇರಿಸಿದ ಚಂದ್ರ, ನಾಗರಾಜನನ್ನು ಭೂಷಣವಾಗಿ ತೋರುವ, ಕೈಯಲ್ಲಿ ಹಿಡಿದ ಜಿಂಕೆ, ಕೊರಳಲ್ಲಿ ಧರಿಸಿದ ಮಣಿಮಾಲೆ, ವರದ ಅಭಯ ಮುದ್ರೆಯನ್ನು ತೋರಿಸುವ ಕೈಗಳು, ಇವುಗಳಿಂದ ಶಿವನು ಸದ್ಯೋಜಾತ ರೂಪಿನಿಂದ ದರುಶನವನ್ನಿತ್ತನು.

ಅರ್ಥ:
ಬಲಿದ: ಚೆನ್ನಾಗಿ ಬೆಳೆದ; ಚಂದ್ರಿಕೆ: ಬೆಳದಿಂಗಳು; ಎರಕ: ಸುರಿ, ತುಂಬು; ತೊಳತೊಳಗು: ಹೊಳೆವ; ಬೆಳಗು: ಹೊಳಪು, ಕಾಂತಿ; ಕಾಯ: ದೇಹ; ಕಾಂತಿ: ಹೊಳಪು; ಪುಲಿ: ಹುಲಿ; ದೊಗಲು: ಚರ್ಮ; ಕೆಂಜಡೆ: ಕೆಂಪಾದ ಜಟೆ; ಕೇವಣ: ಕುಂದಣ, ಕೂಡಿಸುವುದು; ಫಣಿಪತಿ: ನಾಗರಾಜ; ಹೊಳೆ: ಪ್ರಕಾಶಿಸು; ಹರಿಣ: ಜಿಂಕೆ; ಅಕ್ಷಮಾಲ: ಜಪಮಾಲೆ; ವಲಯ: ಕಡಗ, ಬಳೆ; ಅಭಯ: ನಿರ್ಭಯತೆ; ವರ: ಶ್ರೇಷ್ಠ; ಕರ: ಹಸ್ತ; ಪರಿಕಲಿತ: ಕೂಡಿದುದು, ಸೇರಿದುದು; ಎಸೆ: ತೋರು; ಶಂಭು: ಶಂಕರ; ಸದ್ಯೋಜಾತ: ಶಿವನ ಪಂಚಮುಖಗಳಲ್ಲಿ ಒಂದು; ರೂಪ: ಆಕಾರ;

ಪದವಿಂಗಡಣೆ:
ಬಲಿದ +ಚಂದ್ರಿಕೆ+ಎರಕವೆನೆ +ತೊಳ
ತೊಳಗಿ +ಬೆಳಗುವ +ಕಾಯ+ಕಾಂತಿಯ
ಪುಲಿದೊಗಲ+ ಕೆಂಜಡೆಯ +ಕೇವಣರಿಂದು +ಫಣಿಪತಿಯ
ಹೊಳೆವ +ಹರಿಣನ್+ಅಕ್ಷಮಾಲಾ
ವಲಯ+ಅಭಯ +ವರದ+ಕರ +ಪರಿ
ಕಲಿತನ್+ಎಸೆದನು +ಶಂಭು+ಸದ್ಯೋಜಾತ +ರೂಪಿನಲಿ

ಅಚ್ಚರಿ:
(೧) ಶಿವನ ರೂಪವನ್ನು ವರ್ಣಿಸುವ ಪರಿ – ಬಲಿದ ಚಂದ್ರಿಕೆಯೆರಕವೆನೆ ತೊಳ
ತೊಳಗಿ ಬೆಳಗುವ ಕಾಯಕಾಂತಿಯಪುಲಿದೊಗಲ ಕೆಂಜಡೆಯ ಕೇವಣರಿಂದು ಫಣಿಪತಿಯ

ಪದ್ಯ ೧೫: ಆದಿಶೇಷನು ಏಕೆ ಅಳುಕಿದನು?

ಎಲೆಲೆ ನೆಲ ಬೆಸಲಾದುದೆನೆ ಬಲು
ದಳದ ತೆರಳಿಕೆ ತೀವಿತವನಿಯ
ತಳಪಟದ ಹಬ್ಬುಗೆಯೊಳಬ್ಬರಿಸಿದವು ಬೊಬ್ಬೆಗಳು
ತಲೆವರೆಯ ತೂಕದೊಳು ಫಣಿಪತಿ
ಯಳುಕೆ ತೊಟ್ಟನು ತರಣಿ ಸೇನೋ
ಚ್ಚಳಿತ ಧೂಳಿಯ ಝಗೆಯನದ್ಭುತವಾಯ್ತು ದೆಖ್ಖಾಳ (ಉದ್ಯೋಗ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂಮಿಯು ಈದಿತೋ ಎಂಬಂತೆ ಸೈನ್ಯಗಳು ಚಲಿಸಿದವು; ಸೈನಿಕರ ಗರ್ಜನೆಗಳು ರಣಭೂಮಿಯನ್ನಾವರಿಸಿದವು. ಸೈನ್ಯವು ತಲೆಯ ಮೇಲೆ ಸೇರಲು ಆದಿಶೇಷನಿಗೆ ತೂಕ ತಡೆಯದೆ ಅಳುಕಬೇಕಾಯಿತು. ಸೇನೆಯ ತುಳಿತದಿಂದ ಮೇಲೆ ಹಬ್ಬಿದ ಧೂಳಿನ ಉಡುಪನ್ನು ಸೂರ್ಯನು ಉಟ್ಟನು.

ಅರ್ಥ:
ನೆಲ: ಭೂಮಿ; ಬೆಸ: ಕೆಲಸ, ಕಾರ್ಯ; ಬಲು: ಬಹಳ; ದಳ: ಸೈನ್ಯ; ತೆರಳು: ಹೋಗುವಿಕೆ; ತೀವಿ: ಚುಚ್ಚು; ಅವನಿ: ಭೂಮಿ; ತಳಪಟ: ಅಂಗಾತವಾಗಿ ಬೀಳು; ಸೋಲು; ಹಬ್ಬುಗೆ: ಹರವು, ವಿಸ್ತಾರ; ಅಬ್ಬರ: ಗರ್ಜನೆ; ಬೊಬ್ಬೆ: ಆರ್ಭಟ; ತಲೆ: ಶಿರ; ತೂಕ: ಭಾರ; ಫಣಿಪತಿ: ಆದಿಶೇಷ; ಅಳುಕು: ಹೆದರು, ನಡುಗು; ತರಣಿ: ಸೂರ್ಯ; ಸೇನೆ: ಸೈನ್ಯ; ಉಚ್ಛಳಿತ: ಹೊರಹೊಮ್ಮಿದ; ಧೂಳು: ಸಣ್ಣ ಮಣ್ಣಿನ ಪುಡಿ; ದೆಖ್ಖಾಳ: ನೋಟ, ವೈಭವ;

ಪದವಿಂಗಡಣೆ:
ಎಲೆಲೆ +ನೆಲ +ಬೆಸಲಾದುದ್+ಎನೆ +ಬಲು
ದಳದ +ತೆರಳಿಕೆ +ತೀವಿತ್+ಅವನಿಯ
ತಳಪಟದ +ಹಬ್ಬುಗೆಯೊಳ್+ಅಬ್ಬರಿಸಿದವು +ಬೊಬ್ಬೆಗಳು
ತಲೆವರೆಯ +ತೂಕದೊಳು +ಫಣಿಪತಿ
ಯಳುಕೆ+ ತೊಟ್ಟನು+ ತರಣಿ+ ಸೇನೋ
ಚ್ಚಳಿತ+ ಧೂಳಿಯ +ಝಗೆಯನ್+ಅದ್ಭುತವಾಯ್ತು +ದೆಖ್ಖಾಳ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಲೆವರೆಯ ತೂಕದೊಳು ಫಣಿಪತಿ ಯಳುಕೆ ತೊಟ್ಟನು ತರಣಿ ಸೇನೋಚ್ಚಳಿತ ಧೂಳಿಯ ಝಗೆಯನದ್ಭುತವಾಯ್ತು ದೆಖ್ಖಾಳ
(೨) ಅವನಿ, ನೆಲ – ಸಮನಾರ್ಥಕ ಪದ