ಪದ್ಯ ೩೧: ಭೀಮನು ಪ್ರಾತಿಕಾಮಿಕನಿಗೆ ಏನೆಂದು ಹೇಳಿದ?

ಮರಳಿ ಕರೆಸುವುದೆಂದು ಕಂಬನಿ
ವೆರಸಿ ಕುರುಪತಿ ಪಿತನ ಚಿತ್ತವ
ಕರಗಿಸಿದನೋ ಮೇಣು ತಾ ಕರೆಸಿದಳೊ ಗಾಂಧಾರಿ
ಕರೆಸುವವದಿರು ಭಂಡರೋ ಮೇ
ಣ್ಮರಳಿ ಹೋಹರು ಭಂಡರೋ ನೀ
ನರಿವುದೇನೈ ಪ್ರಾತಿಕಾಮಿಕನೆಂದನಾ ಭೀಮ (ಸಭಾ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಭೀಮನು ಪ್ರಾತಿಕಾಮಿಕನ ಮಾತನ್ನು ಕೇಳಿ, ಎಲೈ ಪ್ರಾತಿಕಾಮಿಕ, ನಮ್ಮನ್ನು ಮತ್ತೆ ಕರೆಸಿ ಎಂದು ದುರ್ಯೋಧನನು ಧೃತರಾಷ್ಟ್ರನ ಮನಸ್ಸನ್ನು ಕರಗಿಸಿದನೋ? ಅಥವ ಗಾಂಧಾರಿಯು ನಮ್ಮನ್ನು ಕರೆತರಲು ನಿನ್ನನ್ನು ಕಳಿಸಿದಳೋ? ಇಷ್ಟೆಲ್ಲಾ ಆದಮೇಲೆ, ನಮ್ಮನ್ನು ಕರೆಸುವವರು ಭಂಡರೋ ಅಥವ ಅವರು ಕರೆದರೆಂದು ಮತ್ತೆ ಹೋಗುವವರು ಭಂಡರೋ ಹೇಳು ಎಂದು ಪ್ರಾತಿಕಾಮಿಕನಿಗೆ ಭೀಮ ಕೇಳಿದ.

ಅರ್ಥ:
ಮರಳಿ: ಪುನಃ, ಮತ್ತೆ;ಕರೆಸು: ಬರೆಮಾಡು; ಕಂಬನಿ: ಕಣ್ಣೀರು; ಎರಸು: ಚೆಲ್ಲು; ಪಿತ: ತಂದೆ; ಚಿತ್ತ: ಮನಸ್ಸು; ಕರಗಿಸು: ಕನಿಕರ ಪಡು, ನೀರಾಗಿಸು; ಮೇಣ್: ಅಥವ; ಕರೆಸು: ಬರೆಮಾಡು; ಅವದಿರು: ಅವರು; ಭಂಡ: ನಾಚಿಕೆ, ಲಜ್ಜೆ; ಹೋಹರು: ತೆರಳು; ಅರಿ: ತಿಳಿ;

ಪದವಿಂಗಡಣೆ:
ಮರಳಿ +ಕರೆಸುವುದೆಂದು +ಕಂಬನಿವ್
ಎರಸಿ +ಕುರುಪತಿ +ಪಿತನ +ಚಿತ್ತವ
ಕರಗಿಸಿದನೋ +ಮೇಣು +ತಾ +ಕರೆಸಿದಳೊ +ಗಾಂಧಾರಿ
ಕರೆಸುವ್+ಅವದಿರು +ಭಂಡರೋ +ಮೇಣ್
ಮರಳಿ+ ಹೋಹರು+ ಭಂಡರೋ +ನೀನ್
ಅರಿವುದೇನೈ+ ಪ್ರಾತಿಕಾಮಿಕನೆಂದನಾ +ಭೀಮ

ಅಚ್ಚರಿ:
(೧) ಯಾರು ಭಂಡರು ಎಂದು ಹೇಳುವ ಪರಿ – ಕರೆಸುವವದಿರು ಭಂಡರೋ ಮೇಣ್ಮರಳಿ ಹೋಹರು ಭಂಡರೋ
(೨) ಕುರುಪತಿ ಪಿತನ – ಪತಿ, ಪಿತ ಪದದ ಬಳಕೆ

ಪದ್ಯ ೨೯: ಭೀಮನು ಪ್ರಾತಿಕಾಮಿಕನಿಗೆ ಏನು ಕೇಳಿದ?

ದರುಶನವನಿತ್ತವನಿಪಾಲನ
ಚರಣದಲಿ ಮೈಯಿಕ್ಕಿ ನಿಂದನು
ನರ ವೃಕೋದರ ನಕುಲ ಸಹದೇವರಿಗೆ ಕೈಮುಗಿದು
ಧರಣಿಪನ ಮೊಗಸನ್ನೆಯಲಿ ಕು
ಳ್ಳಿರಲಿದೇನೈ ಪ್ರಾತಿಕಾಮಿಕ
ಬರವು ಬೇಗದೊಳಾಯ್ತೆನುತ ಬೆಸಗೊಂಡನಾ ಭೀಮ (ಸಭಾ ಪರ್ವ, ೧೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು ಸಭೆಗೆ ಬಂದು ಯುಧಿಷ್ಠಿರನಿಗೆ ವಂದಿಸಿದನು, ಅಲ್ಲಿ ನೆರೆದಿದ್ದ ಅರ್ಜುನ, ಭೀಮ, ನಕುಲ, ಸಹದೇವರಿಗೆ ನಮಸ್ಕರಿಸಿದನು, ಯುಧಿಷ್ಠಿರನ ಕಣ್ಣಸನ್ನೆಯಂತೆ ಆತನು ಕುಳಿತುಕೊಂಡನು. ನಂತರ ಭೀಮನು ಇದೇನು ಪ್ರಾತಿಕಾಮಿಕ ಇಷ್ಟು ಬೇಗ ಬಂದೆ ಎಂದು ಕೇಳಿದನು.

ಅರ್ಥ:
ದರುಶನ: ನೋಡು; ಅವನಿಪಾಲ: ರಾಜ; ಚರಣ: ಪಾದ; ಮೈಯಿಕ್ಕು: ನಮಸ್ಕರಿಸು; ನಿಂದು: ನಿಲ್ಲು; ನರ: ಅರ್ಜುನ; ವೃಕೋದರ: ಭೀಮ; ಕೈಮುಗಿ: ಎರಗು, ನಮಸ್ಕರಿಸು; ಧರಣಿಪ: ರಾಜ; ಮೊಗ: ಮುಖ; ಸನ್ನೆ: ಚಿಹ್ನೆ, ಗುರುತು; ಕುಳ್ಳಿರು: ಆಸೀನನಾಗು; ಬರವು: ಆಗಮನ; ಬೇಗ: ಶೀಘ್ರ; ಬೆಸ: ವಿಚಾರಿಸು;

ಪದವಿಂಗಡಣೆ:
ದರುಶನವನಿತ್ತ್+ಅವನಿಪಾಲನ
ಚರಣದಲಿ +ಮೈಯಿಕ್ಕಿ +ನಿಂದನು
ನರ+ ವೃಕೋದರ+ ನಕುಲ ಸಹದೇವರಿಗೆ ಕೈಮುಗಿದು
ಧರಣಿಪನ +ಮೊಗ+ಸನ್ನೆಯಲಿ +ಕು
ಳ್ಳಿರಲಿದ್+ಏನೈ +ಪ್ರಾತಿಕಾಮಿಕ
ಬರವು+ ಬೇಗದೊಳಾಯ್ತ್+ಎನುತ+ ಬೆಸಗೊಂಡನ್+ಆ+ ಭೀಮ

ಅಚ್ಚರಿ:
(೧) ಮೈಯಿಕ್ಕು, ಕೈಮುಗಿ; ಅವನಿಪ, ಧರಣಿಪ – ಸಮನಾರ್ಥಕ ಪದ

ಪದ್ಯ ೨೮: ಪ್ರಾತಿಕಾಮಿಕನು ಓಲಗಕ್ಕೆ ಹೇಗೆ ಪ್ರವೇಶ ಪಡೆದನು?

ಕರೆದು ಹೇಳಿದನಾತ ಪಡಿಹಾ
ರರಿಗೆ ತಾನೈ ಪ್ರಾತಿಕಾಮಿಕ
ನರಸ ಕಳುಹಲು ಬಂದೆನಗ್ಗದ ರಾಜಕಾರಿಯಕೆ
ಧರಣಿ ಪಾಲಂಗರುಹಿಯೆನೆ ನೃಪ
ವರಗೆ ಬಿನ್ನಹಮಾಡೆ ಕರೆಸಿದ
ಡಿರದೆ ಹೊಕ್ಕನು ದೂತನಂದಾ ರಾಯನೋಲಗವ (ಸಭಾ ಪರ್ವ, ೧೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು, ರಾಜನ್ ಬೀಡಿನ ಕಾವಲುಗಾರರನ್ನು ಕರೆದು, ನಾನು ಪ್ರಾತಿಕಾಮಿಕ, ಧೃತರಾಷ್ಟನು ನನ್ನನ್ನು ಅತಿಮುಖ್ಯವಾದ ರಾಜಕಾರ್ಯಕ್ಕೆ ಇಲ್ಲಿಗೆ ಕಳಿಸಿದ್ದಾನೆ ಆದ್ದರಿಂದ ನಾನು ಇಲ್ಲಿಗೆ ಬಂದಿದ್ದೇನೆಂದು ನಿಮ್ಮ ರಾಜರಿಗೆ ತಿಳಿಸು ಎಂದು ಹೇಳಲು, ಕಾವಲುಗಾರನು ಯುಧಿಷ್ಠಿರನಿಗೆ ಈ ವಿಷಯವನ್ನು ಮುಟ್ಟಿಸಲು, ಯುಧಿಷ್ಠಿರನು ಪ್ರಾತಿಕಾಮಿಕನನ್ನು ಓಲಗಕ್ಕೆ ಕರೆದನು.

ಅರ್ಥ:
ಕರೆ: ಬರೆಮಾಡು; ಹೇಳು: ತಿಳಿಸು; ಪಡಿ: ಬಾಗಿಲು; ಪಡಿಹಾರ: ಕಾವಲುಗಾರ; ಅರಸ: ರಾಜ; ಕಳುಹು: ಕಳಿಸು; ಬಂದೆ: ಆಗಮಿಸು; ಅಗ್ಗ: ದೊಡ್ಡ, ಶ್ರೇಷ್ಠ; ರಾಜಕಾರಿಯ: ರಾಜಕಾರಣ; ಧರಣಿ: ಭೂಮಿ; ಪಾಲಕ: ಕಾಪಾಡುವವ; ಅರುಹು: ತಿಳಿಸು; ನೃಪ: ರಾಜ; ಬಿನ್ನಹ: ವಿಜ್ಞಾಪನೆ; ಕರೆಸು: ಬರೆಮಾಡು; ಹೊಕ್ಕು: ಸೇರು; ದೂತ: ಸೇವಕ; ರಾಯ: ರಾಜ; ಓಲಗ: ದರ್ಬಾರು; ಇರದೆ: ತಕ್ಷಣ;

ಪದವಿಂಗಡಣೆ:
ಕರೆದು +ಹೇಳಿದನ್+ಆತ +ಪಡಿಹಾ
ರರಿಗೆ +ತಾನೈ +ಪ್ರಾತಿಕಾಮಿಕನ್
ಅರಸ+ ಕಳುಹಲು +ಬಂದೆನ್+ಅಗ್ಗದ +ರಾಜಕಾರಿಯಕೆ
ಧರಣಿ+ ಪಾಲಂಗ್+ಅರುಹಿ+ಎನೆ +ನೃಪ
ವರಗೆ+ ಬಿನ್ನಹಮಾಡೆ +ಕರೆಸಿದಡ್
ಇರದೆ+ ಹೊಕ್ಕನು +ದೂತನ್+ಅಂದ್+ಆ +ರಾಯನ್+ಓಲಗವ

ಅಚ್ಚರಿ:
(೧) ಅರಸ, ಧರಣಿಪಾಲ, ನೃಪ, ರಾಯ – ಸಮನಾರ್ಥಕ ಪದ

ಪದ್ಯ ೫೩: ದ್ರೌಪದಿಯ ಚಿಂತನೆ ಹೇಗಿತ್ತು?

ತಾಗಿದುದಲಾ ನಾರದಾದ್ಯರ
ನಾಗತವನರುಹಿದರು ಹಿಂದೆ ವಿ
ಯೋಗವಾಯಿತೆ ಲಕ್ಷ್ಮಿಗಿಂದ್ರ ಪ್ರಸ್ಥಪುರವರದ
ಹೋಗಲದು ಮುನ್ನೇನ ನೊಡ್ಡಿದ
ನೀಗಿದನು ಗಡ ತನ್ನನೆಂತಿದ
ರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ (ಸಭಾ ಪರ್ವ, ೧೫ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಯ್ಯೋ ಹಿಂದೆ ನಾರದಾದಿಗಳು ಎಚ್ಚರಿಸಿದ ಮಾತು ಸತ್ಯವಾಯಿತೇ? ಅವರು ಮುಂದೆ ಬರುವ ಅನಾಹುತಕ್ಕೆ ಎಚ್ಚರಿಸಿದ್ದರು, ಇಂದ್ರಪ್ರಸ್ಥನಗರಕ್ಕೂ ರಾಜ್ಯಲಕ್ಷ್ಮಿಗೂ ಅಗಲಿಕೆಯಾಯಿತೇ? ಅದು ಹಾಗಿರಲಿ, ಎಲೈ ಪ್ರಾತಿಕಾಮಿಕ, ರಾಜನು ಮೊದಲು ಏನನ್ನು ಪಣಕ್ಕೆ ಒಡ್ಡಿ ಸೋತನು? ನಂತರ ತನ್ನನ್ನು ಸೋತನೇ? ಇದರ ವಿಷಯವನ್ನು ತಿಳಿಸು ಎಂದು ಪ್ರಾತಿಕಾಮಿಕನನ್ನು ದ್ರೌಪದಿ ಕೇಳಿದಳು.

ಅರ್ಥ:
ತಾಗು: ಮುಟ್ಟು; ಆದಿ: ಮುಂತಾದ; ಆಗತ: ಬರುವುದನ್ನು; ಅರುಹು: ಹೇಳು; ಹಿಂದೆ: ಮೊದಲು; ವಿಯೋಗ: ಬೇರಾಗುವಿಕೆ; ಲಕ್ಷ್ಮ: ರಾಜ್ಯಲಕ್ಷ್ಮಿ; ಪುರ: ಊರು; ವರ: ಶ್ರೇಷ್ಠ; ಹೋಗಲುದು: ಹಾಗಿರಲಿ; ಮುನ್ನ: ಮೊದಲು; ಒಡ್ಡು: ದ್ಯೂತದಲ್ಲಿ ಪಣಕ್ಕೆ ಇಡು; ಆಗುಹೋಗು: ನಡೆದ; ನುಡಿ: ಮಾತಾಡು; ನೀಗು: ಕಳೆದುಕೊಳ್ಳು; ಗಡ: ಅಲ್ಲವೆ, ಬೇಗನೆ;

ಪದವಿಂಗಡಣೆ:
ತಾಗಿದುದಲಾ +ನಾರದಾದ್ಯರನ್
ಆಗತವನ್+ಅರುಹಿದರು +ಹಿಂದೆ +ವಿ
ಯೋಗವಾಯಿತೆ +ಲಕ್ಷ್ಮಿಗ್ + ಇಂದ್ರಪ್ರಸ್ಥ+ಪುರವರದ
ಹೋಗಲದು +ಮುನ್+ಏನನ್+ಒಡ್ಡಿದ
ನೀಗಿದನು +ಗಡ +ತನ್ನನ್+ಎಂತಿದರ್
ಆಗು ಹೋಗ್+ಏನೆಂದು +ನುಡಿದಳು +ಪ್ರಾತಿಕಾಮಿಕನ

ಅಚ್ಚರಿ:
(೧) ದ್ರೌಪದಿಯು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವಿವೇಚಿಸುವ ಪರಿ – ಮುನ್ನೇನ ನೊಡ್ಡಿದ
ನೀಗಿದನು ಗಡ ತನ್ನನೆಂತಿದರಾಗು ಹೋಗೇನೆಂದು ನುಡಿದಳು ಪ್ರಾತಿಕಾಮಿಕನ
(೨) ದ್ರೌಪದಿ ದುಃಖಿತಳಾದಳೆಂದು ಹೇಳುವ ಪರಿ – ವಿಯೋಗವಾಯಿತೆ ಲಕ್ಷ್ಮಿಗಿಂದ್ರ ಪ್ರಸ್ಥಪುರವರದ

ಪದ್ಯ ೪೪: ದುರ್ಯೋಧನನು ದ್ರೌಪದಿಯನ್ನು ಕರೆತರಲು ಯಾರನ್ನು ಕಳಿಸಿದನು?

ಇವನವರ ಬಹಿರಂಗ ಜೀವ
ವ್ಯವಹರಣೆಯಾತನು ವೃಥಾ ತಾ
ನಿವನ ಕೆಣಕಿದೆನಕಟ ಬೋಧಭ್ರಾಂತಿ ಬಾಹಿರನ
ಇವನಿರಲಿ ಬಾ ಪ್ರಾತಿಕಾಮಿಕ
ಯುವತಿಯನು ಕರೆಹೋಗು ನೀನೆನ
ಲವ ಹಸಾದವ ಹಾಯ್ಕಿ ಬಂದನು ದೇವಿಯರಮನೆಗೆ (ಸಭಾ ಪರ್ವ, ೧೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರನ ಮಾತಿಗೆ ಕಿಮ್ಮತ್ತು ಕೊಡದೆ, ವಿದುರನು ಪಾಂಡವರ ದೇಹದ ಹೊರಗಿರುವ ಜೀವದಂತೆ ವ್ಯವಹರಿಸುತ್ತಿದ್ದಾನೆ, ತಿಳಿದಿದ್ದರೂ ಬುದ್ಧಿಭ್ರಮಣೆಯಾಗಿರುವವ, ನಮ್ಮ ಗುಂಪಿನ ಹೊರಗಿನವನಾಗಿದ್ದಾನೆ, ಇವನನ್ನು ನಾನೇಕೆ ಕೆಣಕಿದೆ, ಎಲೈ ಪಾತಿಕಾಮಿಕ, ಈ ವಿದುರ ಇಲ್ಲಿರಲಿ, ನೀನು ಹೋಗಿ ದ್ರೌಪದಿಯನ್ನು ಕರೆದುಕೊಂಡು ಬಾ ಎನಲು, ಪ್ರತಿಕಾಮಿಕನು ಅಪ್ಪಣೆ ಜೀಯ ಎಂದು ಹೇಳಿ ದ್ರೌಪದಿಯ ಅರಮನೆಗೆ ತೆರಳಿದನು.

ಅರ್ಥ:
ಬಹಿರಂಗ: ಹೊರಗೆ; ಜೀವ: ಉಸಿರು; ವ್ಯವಹರಣೆ: ಉದ್ಯೋಗ; ವೃಥ: ಸುಮ್ಮನೆ; ಕೆಣಕು: ರೇಗಿಸು, ಪ್ರಚೋದಿಸು; ಬೋಧ: ಬೋಧಿಸುವಿಕೆ, ವಿಚಾರ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಬಾಹಿರ: ಹೊರಗಿನವ; ಯುವತಿ: ಹೆಣ್ಣು; ಕರೆ: ಬರೆಮಾಡು: ಹೋಗು: ತೆರಳು; ಹಸಾದ: ಅಪ್ಪಣೆ; ಹಾಯ್ಕು: ತೊಡು; ಬಂದನು: ಆಗಮಿಸು; ದೇವಿ: ಸ್ತ್ರೀ, ಲಲನೆ; ಅರಮನೆ: ಆಲಯ;

ಪದವಿಂಗಡಣೆ:
ಇವನ್+ಅವರ +ಬಹಿರಂಗ+ ಜೀವ
ವ್ಯವಹರಣೆ+ ಆತನು+ ವೃಥಾ +ತಾನ್
ಇವನ +ಕೆಣಕಿದೆನ್+ಅಕಟ +ಬೋಧ+ಭ್ರಾಂತಿ +ಬಾಹಿರನ
ಇವನಿರಲಿ+ ಬಾ +ಪ್ರಾತಿಕಾಮಿಕ
ಯುವತಿಯನು +ಕರೆಹೋಗು +ನೀನ್+ಎನಲ್
ಅವ+ ಹಸಾದವ+ ಹಾಯ್ಕಿ +ಬಂದನು +ದೇವಿ+ಅರಮನೆಗೆ

ಅಚ್ಚರಿ:
(೧) ವಿದುರನನ್ನು ಬಯ್ಯುವ ಪರಿ – ಬೋಧಭ್ರಾಂತಿ ಬಾಹಿರನ
(೨) ವಿದುರನು ಪಾಂಡವರ ಪಕ್ಷಪಾತಿ ಎಂದು ಹೇಳುವ ಪರಿ – ಇವನವರ ಬಹಿರಂಗ ಜೀವ
ವ್ಯವಹರಣೆ