ಪದ್ಯ ೪: ಬಲರಾಮನು ಕೃಷ್ಣನಿಗೆ ಏನು ಹೇಳಿದ?

ಆಹವದಿ ಪಾಂಡವ ಮಮ ಪ್ರಾ
ಣಾಹಿ ಎಂಬೀ ನುಡಿಯ ಸಲಿಸಿದೆ
ಬೇಹವರನುಳುಹಿದೆ ಕುಮಾರರ ನಿನ್ನ ಮೈದುನರ
ಗಾಹುಗತಕದಲೆಮ್ಮ ಶಿಷ್ಯಂ
ಗೀ ಹದನ ವಿರಚಿಸಿದೆ ನಿನ್ನಯ
ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ (ಗದಾ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಬಲರಾಮನು ಕೃಷ್ಣನಿಗೆ, ಎಲೈ ಕೃಷ್ಣ, ಮಮಪ್ರಾಣಾಹಿ ಪಾಂಡವಾಃ ಎಂಬ ನಿನ್ನ ಪ್ರತಿಜ್ಞೆಯನ್ನು ನೀನು ಉಳಿಸಿಕೊಂಡೆ. ನಿನಗೆ ಬೇಕಾದ ಮೈದುನರನ್ನು ಉಳಿಸಿಕೊಂಡೆ, ಕಪಟದಿಂದ ನನ್ನ ಶಿಷ್ಯನಿಗೆ ಈ ದುರ್ಗತಿಯನ್ನು ತಂದೆ. ನಿನ್ನ ಮೋಹದವರೇ ಗೆಲ್ಲಲಿ ಎಂದನು.

ಅರ್ಥ:
ಆಹವ: ಯುದ್ಧ; ಪ್ರಾಣ: ಜೀವ; ನುಡಿ: ಮಾತು; ಸಲಿಸು: ದೊರಕಿಸಿ ಕೊಡು; ಬೇಹ:ಬೇಕಾದ; ಉಳುಹು: ಕಾಪಾಡು; ಮೈದುನ: ತಂಗಿಯ ಗಂಡ; ಗಾಹುಗತಕ: ಮೋಸ, ಭ್ರಾಂತಿ; ಶಿಷ್ಯ: ಅಭ್ಯಾಸಿ; ಹದ: ರೀತಿ; ವಿರಚಿಸು: ಕಟ್ಟು, ನಿರ್ಮಿಸು; ಮೋಹ: ಆಸೆ; ಗೆಲಲಿ: ವಿಜಯಿಯಾಗಲಿ; ಹರಿ: ಕೃಷ್ಣ;

ಪದವಿಂಗಡಣೆ:
ಆಹವದಿ +ಪಾಂಡವ +ಮಮ +ಪ್ರಾ
ಣಾಹಿ +ಎಂಬೀ +ನುಡಿಯ +ಸಲಿಸಿದೆ
ಬೇಹವರನ್+ಉಳುಹಿದೆ +ಕುಮಾರರ +ನಿನ್ನ+ ಮೈದುನರ
ಗಾಹುಗತಕದಲ್+ಎಮ್ಮ+ ಶಿಷ್ಯಂಗ್
ಈ+ ಹದನ +ವಿರಚಿಸಿದೆ +ನಿನ್ನಯ
ಮೋಹದವರೇ +ಗೆಲಲಿಯೆಂದನು+ ಹರಿಗೆ +ಬಲರಾಮ

ಅಚ್ಚರಿ:
(೧) ಕೃಷ್ಣನ ಮಾತು – ಪಾಂಡವ ಮಮ ಪ್ರಾಣಾಹಿ – ಸಂಸ್ಕೃತದ ಪದಗಳನ್ನು ಸೇರಿಸುವ ಪರಿ

ಪದ್ಯ ೯೫: ಕೃಷ್ಣನ ಸ್ನೇಹಿತರಾರು?

ಮೋಹ ಮಿಗೆ ಪಾಂಡವ ಮಮ ಪ್ರಾ
ಣಾಹಿಯೆಂಬೀ ಬಿರುದ ಸಲಿಸಲು
ಗಾಹಿನಲಿ ಮೇದಿನಿಯ ತಿಣ್ಣವನಿಳುಹಲೋಸುಗರ
ಆಹವದೊಳರ್ಜುನನ ರಥದೊಳು
ವಾಹಕನು ತಾನಾಗಿ ಶರಣ
ಸ್ನೇಹ ಸಂಸಾರಾನುರಾಗನು ಸುಳಿಸಿದನು ರಥವ (ಭೀಷ್ಮ ಪರ್ವ, ೩ ಸಂಧಿ, ೯೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರು ನನ್ನ ಪ್ರಾಣಗಳೇ ಎಂದು ಪ್ರತಿಜ್ಞೆ ಮಾಡಿದ ಪಾಂಡವ ಮೋಹಿ, ಆ ಬಿರುದನ್ನು ಉಳಿಸಿಕೊಳ್ಳಲು ಮತ್ತು ಭೂ ಭಾರವನ್ನಿಳಿಸಲು ಅವನು ಅರ್ಜುನನ ಸಾರಥಿಯಾದನು. ಭಕ್ತರೇ ಅವನ ಸ್ನೇಹಿತರು, ಅವರೇ ಅವನ ಸಂಸಾರ, ಅಂತಹ ದೇವದೇವನು ಅರ್ಜುನನ ರಥವನ್ನು ತಿರುಗಿಸಿದನು.

ಅರ್ಥ:
ಮೋಹ: ಆಸೆ; ಮಿಗೆ: ಅಧಿಕ; ಮಮ: ನನ್ನ; ಪ್ರಾಣ: ಜೀವ; ಬಿರುದು: ಗೌರವಸೂಚಕ ಹೆಸರು; ಸಲಿಸು: ದೊರಕಿಸಿಕೊಡು; ಗಾಹಿಸು: ಹರಡು; ಮೇದಿನಿ: ಭೂಮಿ; ತಿಣ್ಣ: ಹೊರೆ, ಭಾರ; ಇಳುಹು: ಕಡಿಮೆ ಮಾಡು; ಓಸುಗ: ಓಸ್ಕರ; ಆಹವ: ಯುದ್ಧ; ರಥ: ಬಂಡಿ; ವಾಹಕ: ಸಾರಥಿ; ಶರಣ: ಆಶ್ರಯ, ಕಾಪಾಡುವವನು; ಸ್ನೇಹ: ಮಿತ್ರ; ಅನುರಾಗ: ಪ್ರೀತಿ; ಸುಳಿಸು: ತಿರುಗಿಸು;

ಪದವಿಂಗಡಣೆ:
ಮೋಹ +ಮಿಗೆ +ಪಾಂಡವ +ಮಮ+ ಪ್ರಾ
ಣಾಹಿ+ಎಂಬೀ +ಬಿರುದ +ಸಲಿಸಲು
ಗಾಹಿನಲಿ+ ಮೇದಿನಿಯ +ತಿಣ್ಣವನ್+ಇಳುಹಲೋಸುಗರ
ಆಹವದೊಳ್+ ಅರ್ಜುನನ +ರಥದೊಳು
ವಾಹಕನು +ತಾನಾಗಿ +ಶರಣ
ಸ್ನೇಹ +ಸಂಸಾರ+ಅನುರಾಗನು +ಸುಳಿಸಿದನು +ರಥವ

ಅಚ್ಚರಿ:
(೧) ಕೃಷ್ಣನ ಗುಣಗಾನ – ಶರಣಸ್ನೇಹ ಸಂಸಾರಾನುರಾಗನು ಸುಳಿಸಿದನು ರಥವ

ಪದ್ಯ ೧೩: ಕೃಷ್ಣನು ಎಲ್ಲಿಗೆ ಹೊರಟನು?

ಇತ್ತಲಾ ದ್ವಾರಕೆಯೊಳಗೆ ದೇ
ವೋತ್ತಮನು ತಾನರಿದು ತನ್ನಯ
ಚಿತ್ತದಲಿ ಕೃತ್ರಿಮದ ಮಖದೊಳಗಳಿವರಿವರೆನುತ
ಮೃತ್ಯುವಿರಹಿತ ರೂಪನಾಕ್ಷಣ
ಕಿತ್ತಲೊಬ್ಬನೆ ನಡೆದು ಬಂದನು
ಭಕ್ತವತ್ಸಲನಾಗ ಮಮ ಪ್ರಾಣಾಹಿ ಬಿರುದೆನಿಸಿ (ಅರಣ್ಯ ಪರ್ವ, ೨೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ಇತ್ತ ಶ್ರೀಕೃಷ್ಣನು ಇದನ್ನು ಅರಿತು, ಈ ಮೋಸದ ಯಜ್ಞದಿಂದ ಪಾಂಡವರು ಮಡಿಯುವರೆಂದು ಕಳವಳಗೊಂಡನು. ಅಮೃತ ಸ್ವರೂಪನಾದ ಅವನು ಮಮ ಪ್ರಾಣಾಹಿ ಪಾಂಡವಾ ಎನ್ನುವ ಬಿರುದನ್ನು ಸಾರ್ಥಕ ಪಡಿಸಲು ಏಕಾಂಗಿಯಾಗಿ ಬಂದನು.

ಅರ್ಥ:
ದೇವೋತ್ತಮ: ದೇವರಲ್ಲಿ ಶ್ರೇಷ್ಠನಾದವ; ಅರಿ: ತಿಳಿ; ಚಿತ್ತ: ಮನಸ್ಸು; ಕೃತ್ರಿಮ: ಕಪಟ; ಮಖ: ಯಜ್ಞ; ಅಳಿ: ನಾಶ; ಮೃತ್ಯು: ಸಾವು; ವಿರಹಿತ: ಸುಮ್ಮನೆ; ರೂಪ: ಆಕಾರ; ಕ್ಷಣ: ಸಮಯ; ನಡೆ: ಚಲಿಸು; ಬಂದು: ಆಗಮಿಸು; ಭಕ್ತವತ್ಸಲ: ವಿಷ್ಣು; ಮಮ: ನನ್ನ; ಪ್ರಾಣ: ಉಸಿರಾಟ, ವಾಯು; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು;

ಪದವಿಂಗಡಣೆ:
ಇತ್ತಲಾ+ ದ್ವಾರಕೆಯೊಳಗೆ+ ದೇ
ವೋತ್ತಮನು+ ತಾನ್+ಅರಿದು+ ತನ್ನಯ
ಚಿತ್ತದಲಿ +ಕೃತ್ರಿಮದ +ಮಖದೊಳಗ್+ಅಳಿವರ್+ಇವರೆನುತ
ಮೃತ್ಯು+ವಿರಹಿತ+ ರೂಪನ್+ಆ+ಕ್ಷಣಕ್
ಇತ್ತಲೊಬ್ಬನೆ +ನಡೆದು +ಬಂದನು
ಭಕ್ತವತ್ಸಲನ್+ಆಗ +ಮಮ +ಪ್ರಾಣಾಹಿ +ಬಿರುದೆನಿಸಿ

ಅಚ್ಚರಿ:
(೧) ಕೃಷ್ಣನ ಬಿರುದು – ಮಮ ಪ್ರಾಣಾಹಿ