ಪದ್ಯ ೨೩: ಕೌರವನು ಭೀಮನ ಯಾವ ಭಾಗಕ್ಕೆ ಹೊಡೆದನು?

ಘಾಯಗತಿ ಲೇಸಾಯ್ತು ಪೂತುರೆ
ವಾಯುಸುತ ದಿಟ ಸೈರಿಸೆನ್ನಯ
ಘಾಯವನು ಘೋರಪ್ರಹಾರಸಹಿಷ್ಣು ಗಡ ನೀನು
ಕಾಯಲಾಪಡೆ ಫಲುಗುಣನನಬು
ಜಾಯತಾಕ್ಷನ ಕರೆಯೆನುತ ಕುರು
ರಾಯನೆರಗಿದನನಿಲಜನ ಕರ್ಣ ಪ್ರದೇಶದಲಿ (ಗದಾ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಿನ್ನ ಹೊಡೆತದ ರೀತಿ ಬಹಳ ಉತ್ತಮವಾಗಿತ್ತು ಭೀಮ, ಭಲೇ, ನನ್ನ ಹೊಡೆತವನ್ನು ಸಹಿಸಿಕೋ ಎಂದು ಹೇಳುತ್ತಾ ಘೋರವಾದ ಪ್ರಹಾವರು ಬಿದ್ದರೂ ನೀನು ಸಹಿಸಿಕೊಳ್ಳಬಲ್ಲೆ ಆದರೆ ನನ್ನ ಹೊಡೆತದಿಂದ ನೀನು ತಪ್ಪಿಸಿಕೊಳ್ಳಲಾರೆ, ನಿನ್ನನ್ನು ಉಳಿಸಿಕೊಳ್ಳಲು ಅರ್ಜುನನನ್ನೋ, ಕೃಷ್ಣನನ್ನೋ ಕರೆ ಎನ್ನುತ್ತಾ ಕೌರವನು ಭೀಮನ ಕಿವಿಯ ಪ್ರದೇಶಕ್ಕೆ ಹೊಡೆದನು.

ಅರ್ಥ:
ಘಾಯ: ಪೆಟ್ಟು; ಗತಿ: ವೇಗ; ಲೇಸು: ಒಳಿತು; ಪೂತು: ಭಲೇ; ವಾಯುಸುತ: ಭೀಮ; ವಾಯು: ಅನಿಲ; ದಿಟ: ಸತ್ಯ; ಸೈರಿಸು: ತಾಳು; ಘೋರ: ಭಯಂಕರ; ಪ್ರಹಾರ: ಹೊಡೆಯುವಿಕೆ, ಪೆಟ್ಟು; ಸಹಿಷ್ಣು: ತಾಳ್ಮೆಯುಳ್ಳವನು; ಗಡ: ಅಲ್ಲವೆ; ತ್ವರಿತವಾಗಿ; ಕಾಯು: ರಕ್ಷಿಸು; ಅಬುಜಾಯತಾಕ್ಷ: ಕಮಲದಂತ ಕಣ್ಣುಳ್ಳ (ಕೃಷ್ಣ); ಕರೆ: ಬರೆಮಾದು; ರಾಯ: ರಾಜ; ಎರಗು: ಬಾಗು; ಅನಿಲಜ: ವಾಯುಪುತ್ರ; ಕರ್ಣ: ಕಿವಿ; ಪ್ರದೇಶ: ಜಾಗ;

ಪದವಿಂಗಡಣೆ:
ಘಾಯಗತಿ +ಲೇಸಾಯ್ತು +ಪೂತುರೆ
ವಾಯುಸುತ +ದಿಟ +ಸೈರಿಸ್+ಎನ್ನಯ
ಘಾಯವನು +ಘೋರ+ಪ್ರಹಾರ+ಸಹಿಷ್ಣು +ಗಡ +ನೀನು
ಕಾಯಲಾಪಡೆ +ಫಲುಗುಣನನ್+ಅಬು
ಜಾಯತಾಕ್ಷನ+ ಕರೆ+ಎನುತ +ಕುರು
ರಾಯನ್+ಎರಗಿದನ್+ಅನಿಲಜನ +ಕರ್ಣ+ ಪ್ರದೇಶದಲಿ

ಅಚ್ಚರಿ:
(೧) ಭೀಮನನ್ನು ಹಂಗಿಸುವ ಪರಿ – ಕಾಯಲಾಪಡೆ ಫಲುಗುಣನನಬುಜಾಯತಾಕ್ಷನ ಕರೆ

ಪದ್ಯ ೨೩: ದುರ್ಯೊಧನನು ಹೇಗೆ ಪಲಾಯನ ಮಾಡಿದನು?

ಬಳಿಕ ನೂರಾನೆಯಲಿ ನಿನ್ನವ
ನಳವಿಗೊಟ್ಟನು ಭೀಮಸೇನನ
ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ
ಕಳನೊಳಗೆ ಕೋಡೂರಿ ಮಗ್ಗುಲ
ನೆಲಕೆ ಕೀಲಿಸಲಾನೆಯಿಂದಿಳೆ
ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ (ಗದಾ ಪರ್ವ, ೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಬಳಿಕ ನಿನ್ನ ಮಗನು ನೂರು ಆನೆಗಳೊಡನೆ ಭೀಮನೊಡನೆ ಕಾಳಗಕ್ಕಿಳಿದನು. ಭೀಮನ ಅತಿ ವೇಗದ ಆತುರ್ಯ, ಪದಗಳ ಹೊಡೆತದಿಂದ ಅವನು ಹತ್ತಿದ್ದ ಆನೆಯು ದಂತವನ್ನು ಮಗ್ಗುಲಾಗಿ ನೆಲಕ್ಕೆ ಮಲಗಲು, ಆನೆಯಿಂದಿಳಿದು ಭಯದಿಂದ ಏಕಾಂಗಿಯಾಗಿ ಪಲಾಯನ ಮಾಡಿದನು.

ಅರ್ಥ:
ಬಳಿಕ: ನಂತರ; ನೂರು: ಶತ; ಆನೆ: ಗಜ; ಅಳವಿ: ಶಕ್ತಿ; ಚಲಗತಿ: ಅತಿವೇಗ; ಚಾತುರ: ನಿಪುಣತೆ; ಚಪೇಟ: ಅಭಯಹಸ್ತ; ಪದ: ಪಾದ, ಚರಣ; ಪ್ರಹಾರ: ಹೊಡೆತ, ಪೆಟ್ಟು; ಕಳ: ರಣರಂಗ; ಕೋಡೂರು: ದಂತವನ್ನು ನೆಲಕ್ಕೆ ಊರು; ಮಗ್ಗಲು: ಪಕ್ಕ, ಬದಿ; ನೆಲ: ಭೂಮಿ; ಕೀಲಿಸು: ಜೋಡಿಸು, ಚುಚ್ಚು; ಆನೆ: ಗಜ; ಇಳೆ: ಭೂಮಿ; ಇಳಿ: ಕೆಳಕ್ಕೆ ಬಾ; ಹಾಯ್ದು: ಹೊಡೆ; ಭಯ: ಅಂಜಿಕೆ; ಏಕಾಂಗ: ಒಬ್ಬನೆ; ರಾಯ: ರಾಜ;

ಪದವಿಂಗಡಣೆ:
ಬಳಿಕ +ನೂರಾನೆಯಲಿ+ ನಿನ್ನವನ್
ಅಳವಿಗೊಟ್ಟನು +ಭೀಮಸೇನನ
ಚಲಗತಿಯ +ಚಾತುರ +ಚಪೇಟ +ಪದ+ಪ್ರಹಾರದಲಿ
ಕಳನೊಳಗೆ +ಕೋಡೂರಿ+ ಮಗ್ಗುಲ
ನೆಲಕೆ+ ಕೀಲಿಸಲ್+ಆನೆಯಿಂದ್+ಇಳೆ
ಗಿಳಿದು+ ಹಾಯ್ದನು +ಭಯದಿನ್+ಏಕಾಂಗದಲಿ +ಕುರುರಾಯ

ಅಚ್ಚರಿ:
(೧) ಚ ಕಾರದ ತ್ರಿವಳಿ ಪದ – ಚಲಗತಿಯ ಚಾತುರ ಚಪೇಟ