ಪದ್ಯ ೨: ಧರ್ಮಜನನ್ನು ನೋಡಲು ಯಾವ ಋಷಿಗಳು ಬಂದರು?

ಚ್ಯವನ ಮುದ್ಗಲ ಕಣ್ವ ಕಠ ಭಾ
ರ್ಗವ ಭರದ್ವಾಜಾಂಗಿರಸ ಗಾ
ಲವ ಪುಲಸ್ತ್ಯ ರುಮಣ್ವ ಗೌತಮ ಯಾಜ್ಞವಲ್ಕ್ಯಮುನಿ
ಧ್ರುವ ವಿಭಾಂಡಕ ಗಾರ್ಗ್ಯ ಘಟಸಂ
ಭವ ಮೃಕಂಡುಸುತಾದಿ ಭೂಮಿ
ಪ್ರವರ ಮುನಿಗಳು ಬಂದು ಕಂಡರು ಧರ್ಮನಂದನನ (ಗದಾ ಪರ್ವ, ೧೩ ಸಂಧಿ, ೨ ಪದ್ಯ)

ತಾತ್ಪರ್ಯ:
ಚ್ಯವನ, ಮುದ್ಗಲ, ಕಣ್ವ, ಕಠ, ಭಾರ್ಗವ, ಭಾರದ್ವಾಜ, ಅಂಗಿರಸ, ಗಾಲವ, ಪುಲಸ್ತ್ಯ, ರುಮಣ್ವ, ಗೌತಮ, ಯಾಜ್ಞವಲ್ಕ್ಯ, ಧ್ರುವ, ವಿಭಾಂಡಕ, ಗಾರ್ಗ್ಯ, ಅಗಸ್ತ್ಯ, ಮಾರ್ಕಂಡೇಯನೇ ಮೊದಲಾದ ಬ್ರಹ್ಮರ್ಷಿಗಳು ಬಂದು ಧರ್ಮಪುತ್ರನನ್ನು ಕಂಡು ಆಶೀರ್ವದಿಸಿದರು.

ಅರ್ಥ:
ಆದಿ: ಮುಂತಾದ; ಭೂಮಿ: ಧರಿತ್ರೀ; ಪ್ರವರ: ಪ್ರಧಾನ ವ್ಯಕ್ತಿ; ಮುನಿ: ಋಷಿ; ಬಂದು: ಆಗಮಿಸು; ಕಂಡು: ನೋಡು; ನಂದನ: ಮಗ; ಸುತ: ಮಗ;

ಪದವಿಂಗಡಣೆ:
ಚ್ಯವನ +ಮುದ್ಗಲ+ ಕಣ್ವ +ಕಠ +ಭಾ
ರ್ಗವ +ಭರದ್ವಾಜ+ಅಂಗಿರಸ +ಗಾ
ಲವ +ಪುಲಸ್ತ್ಯ+ ರುಮಣ್ವ+ ಗೌತಮ +ಯಾಜ್ಞವಲ್ಕ್ಯ+ಮುನಿ
ಧ್ರುವ +ವಿಭಾಂಡಕ +ಗಾರ್ಗ್ಯ +ಘಟಸಂ
ಭವ +ಮೃಕಂಡುಸುತ+ಆದಿ +ಭೂಮಿ
ಪ್ರವರ +ಮುನಿಗಳು +ಬಂದು +ಕಂಡರು +ಧರ್ಮನಂದನನ

ಅಚ್ಚರಿ:
(೧) ೧೭ ಮುನಿಗಳ ಹೆಸರನ್ನು ಹೇಳುವ ಪದ್ಯ

ಪದ್ಯ ೬೦: ಅಶ್ವತ್ಥಾಮ ಏನು ಯೋಚಿಸಿ ಹಿಂದಿರುಗಿದನು?

ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ಕೃಪ, ಅಶ್ವತ್ಥಾಮ, ಕೃತವರ್ಮರು, ದೈವ ಸಂಕಲ್ಪದಂತೆಯೇ ನಡೆದೀತು. ಅನ್ಯಥಾ ನಡೆಯಲಾರದು. ಕೌರವನ ಜಯಲಕ್ಷ್ಮಿಯ ವಿಲಾಸವು ವೇಶ್ಯೆಯ ವಿಭ್ರಮವನ್ನು ಸ್ವೀಕರಿಸಿತು. ಪುಞ ಪ್ರವರನಾದ ಗದುಗಿನ ವೀರನಾರಾಯಣನ ಕರುಣೆಯಿರುವುದರಿಂದ ಪಾಂಡವರಿಗೆ ಯಾವ ಕೊರತೆಯುಂಟಾದೀತು? ಎಂದುಕೊಂಡು ದೂರಕ್ಕೆ ಹೋದರು.

ಅರ್ಥ:
ತಿರುಗು: ಮರಳು; ಹಿಂದಿರುಗು; ದೈವ: ಭಗವಂತ; ವ್ಯವಸಿತ: ಸಂಕಲ್ಪ; ಫಲಿಸು: ಹೊರಹೊಮ್ಮು; ಸಿರಿ: ಐಶ್ವರ್ಯ; ಪಣ್ಯ: ಮಾರಾಟ, ವ್ಯಾಪಾರ; ವಿಭ್ರಮ: ಅಲೆದಾಟ, ಸುತ್ತಾಟ; ವರಿಸು: ಕೈಹಿಡಿ; ಅರುಹು: ಹೇಳು; ಕೊರತೆ: ನ್ಯೂನ್ಯತೆ; ಪುಣ್ಯ: ಸದಾಚಾರ; ಪ್ರವರ: ಶ್ರೇಷ್ಠ, ಮೊದಲಿಗ; ಕರುಣ: ದಯೆ;

ಪದವಿಂಗಡಣೆ:
ಇವರು +ತಿರುಗಿದರ್+ಇನ್ನು +ದೈವ
ವ್ಯವಸಿತವೆ +ಫಲಿಸುವುದಲಾ+ ಕೌ
ರವನ+ ಸಿರಿ+ ಪಣ್ಯಾಂಗನಾ+ವಿಭ್ರಮವ +ವರಿಸಿತಲಾ
ಅವರಿಗ್+ಇದನ್+ಆರ್+ಅರುಹಿದರೊ +ಪಾಂ
ಡವರಿಗ್+ಆವುದು +ಕೊರತೆ +ಪುಣ್ಯ
ಪ್ರವರ +ಗದುಗಿನ +ವೀರನಾರಾಯಣನ+ ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕೌರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
(೨) ಪಾಂಡವರ ಶ್ರೇಷ್ಠತೆ – ಪಾಂಡವರಿಗಾವುದು ಕೊರತೆ ಪುಣ್ಯ ಪ್ರವರ ಗದುಗಿನ ವೀರನಾರಾಯಣನ ಕರುಣದಲಿ

ಪದ್ಯ ೧೫: ದ್ವಾರಕೆಯ ಸೈನ್ಯದ ಗಾತ್ರವೇನು?

ಅವರೊಳೊಂದಕ್ಷೋಹಿಣಿಯದು ಮಾ
ಧವನ ಮನೆಯದು ಧೃಷ್ಟಕೇತು
ಪ್ರವರನಾತನು ಚೈದ್ಯನಂದನನವರ ಕಂಡಿಹನು
ಅವರ ಹೊರೆಯಲಿ ವೀರಸೇನಾ
ನಿವಹದೊಳು ಸಹದೇವನಾತನ
ಸವಹರೆಯ ನಕುಲಾಂಕನಿವರಾಹವ ಧುರಂಧರರು (ಭೀಷ್ಮ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅವರ ಬಳಿ ಒಂದು ಅಕ್ಷೋಹಿಣಿ ಸೈನ್ಯವಿದೆ, ಅದು ಕೃಷ್ಣನ ಮನೆಯಾದ ದ್ವಾರಕೆಯದು, ಧೃಷ್ಟಕೇತು, ಚೈದ್ಯನ ಮಗ ಅಲ್ಲಿದ್ದಾರೆ, ಅವರ ಬಳಿ ಯುದ್ಧದಲ್ಲಿ ಧುರಂಧರರಾದ ಸಹದೇವ ನಕುಲರಿದ್ದಾರೆ.

ಅರ್ಥ:
ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಮಾಧವ: ಕೃಷ್ಣ; ಮನೆ: ಆಲಯ; ಪ್ರವರ: ಪ್ರಧಾನ ವ್ಯಕ್ತಿ; ನಂದನ: ಮಗ; ಹೊರೆ: ಸಮೀಪ; ವೀರ: ಪರಾಕ್ರಮ; ಸೇನ: ಸೈನ್ಯ; ನಿವಹ: ಗುಂಪು; ಹರೆ: ವಿಸ್ತಾರ; ಆಹವ: ಯುದ್ಧ; ಧುರಂಧರ: ಪರಾಕ್ರಮಿ;

ಪದವಿಂಗಡಣೆ:
ಅವರೊಳ್+ಒಂದಕ್ಷೋಹಿಣಿಯದು+ ಮಾ
ಧವನ +ಮನೆಯದು +ಧೃಷ್ಟಕೇತು
ಪ್ರವರನ್+ಆತನು +ಚೈದ್ಯ+ನಂದನನ್+ಅವರ+ ಕಂಡಿಹನು
ಅವರ+ ಹೊರೆಯಲಿ +ವೀರ+ಸೇನಾ
ನಿವಹದೊಳು +ಸಹದೇವನ್+ಆತನ
ಸವಹರೆಯ +ನಕುಲಾಂಕನಿವರ+ಆಹವ +ಧುರಂಧರರು

ಅಚ್ಚರಿ:
(೧) ದ್ವಾರಕೆ ಎಂದು ಹೇಳಲು – ಮಾಧವನ ಮನೆ ಪದದ ಬಳಕೆ

ಪದ್ಯ ೧೧: ಹಸ್ತಿನಾಪುರಕ್ಕೆ ಯಾರು ಬಂದರು?

ಇವರು ತಿರುಗಿದರಿತ್ತಲಡವಿಯ
ಭವಣಿಗೆಯ ಭಾರಾಂಕ ಭಾಷೆಯ
ಲವಿರಳಿತ ಜನಜಾಲ ಸಹಿತಾರಣ್ಯ ಮಾರ್ಗದಲಿ
ಅವನಿಪತಿ ಕೇಳತ್ತಲಾ ಕೌ
ರವನ ನಗರಿಗೆ ಪಾರಿಕಾಂಕ್ಷಿ
ಪ್ರವರನೊಬ್ಬರು ಬಂದು ಹೊಕ್ಕನು ರಾಜಮಂದಿರವ (ಅರಣ್ಯ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಇತ್ತ ಕಾಡಿನಲ್ಲಿ ತಾವು ನುಡಿದ ಮಾತಿನಂತೆ ಪಾಂಡವರು ಅನೇಕ ಜನರೊಡನೆ ಕಾಡಿನ ಕಡು ಕಷ್ಟಮಾರ್ಗದಲ್ಲಿ ತಿರುಗಾಡಿದರು. ಇತ್ತ ಹಸ್ತಿನಾಪುರಕ್ಕೆ ಯತಿಶ್ರೇಷ್ಠರೊಬ್ಬರು ಊರನ್ನು ಪ್ರವೇಶಿಸಿ ಕೌರವನ ಅರಮನೆಗೆ ಬಂದರು.

ಅರ್ಥ:
ತಿರುಗು: ಮರಳು, ದಿಕ್ಕನ್ನು ಬದಲಾಯಿಸು; ಅಡವಿ: ಕಾಡು; ಭವಣಿ: ತೊಂದರೆ, ಸಂಕಟ; ಭಾರಾಂಕ: ಮಹಾಯುದ್ಧ; ಭಾಷೆ: ಪ್ರತಿಜ್ಞೆ, ಮಾತು; ಅವಿರಳ: ಬಿಡುವಿಲ್ಲದೆ; ಜನಜಾಲ: ಜನರ ಗುಂಪು; ಸಹಿತ: ಜೊತೆ; ಅರಣ್ಯ: ಕಾಡು; ಮಾರ್ಗ: ದಾರಿ; ಅವನಿಪತಿ: ರಾಜ: ಕೇಳು: ಆಲಿಸು; ನಗರ: ಊರು; ಪಾರಿಕಾಂಕ್ಷಿ: ಸನ್ಯಾಸಿ, ಯತಿ; ಪ್ರವರ: ಶ್ರೇಷ್ಠ; ಬಂದು: ಆಗಮಿಸು; ಹೊಕ್ಕು: ಸೇರು; ರಾಜಮಂದಿರ: ಅರಮನೆ;

ಪದವಿಂಗಡಣೆ:
ಇವರು +ತಿರುಗಿದರ್+ಇತ್ತಲ್+ಅಡವಿಯ
ಭವಣಿಗೆಯ +ಭಾರಾಂಕ +ಭಾಷೆಯಲ್
ಅವಿರಳಿತ+ ಜನಜಾಲ+ ಸಹಿತ+ಅರಣ್ಯ +ಮಾರ್ಗದಲಿ
ಅವನಿಪತಿ +ಕೇಳ್+ಅತ್ತಲ್+ಆ+ ಕೌ
ರವನ+ ನಗರಿಗೆ+ ಪಾರಿಕಾಂಕ್ಷಿ
ಪ್ರವರನೊಬ್ಬರು+ ಬಂದು +ಹೊಕ್ಕನು +ರಾಜಮಂದಿರವ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭವಣಿಗೆಯ ಭಾರಾಂಕ ಭಾಷೆಯ