ಪದ್ಯ ೧೬: ಕೌರವನನ್ನು ಧರ್ಮಜನು ಹೇಗೆ ರೇಗಿಸಿದನು?

ನಾಡೊಳರ್ಧವ ಕೊಡದೆ ಹೋದಡೆ
ಬೇಡಿದೈದೂರುಗಳ ಕೊಡುಯೆನ
ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ
ಕೂಡೆ ನೀ ಕೊಡೆನೆಂದು ದರ್ಪವ
ಮಾಡಿ ಸಕಲ ಮಹೀತಳವ ಹೋ
ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ (ಗದಾ ಪರ್ವ, ೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ನೀನು ಅರ್ಧ ಭೂಮಿಯನ್ನು ಕೊಡಲಿಲ್ಲ, ಬೇಡ, ಐದು ಊರುಗಳನ್ನು ಕೊಡು ಎಂದರೆ ಅದನ್ನು ಕೊಡದೆ ನಮ್ಮನ್ನು ಲೇವಡಿ ಮಾಡಿದೆ. ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡುವುದಿಲ್ಲವೆಂದು ದರ್ಪವನ್ನು ತೋರಿದೆ. ಈಗ ಸಮಸ್ತ ಭೂಮಿಯನ್ನು ಕಳೆದುಕೊಂಡು ನೀರನ್ನು ಹೊಕ್ಕಿರುವೆ. ಎಲ್ಲಿ ಹೋಯಿತು ನಿನ್ನ ಛಲವೆಂದು ಧರ್ಮಜನು ಕೌರವನನ್ನು ರೇಗಿಸಿದನು.

ಅರ್ಥ:
ನಾಡು: ದೇಶ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಕೊಡು: ನೀಡು; ಬೇಡು: ಕೇಳು; ಊರು: ಗ್ರಾಮ, ಪುರ; ಕೊಡು: ನೀಡು; ಏಡಿಸು: ಅವಹೇಳನ ಮಾಡು, ನಿಂದಿಸು; ಸೂಚಿ: ಸೂಜಿ; ಅಗ್ರ: ತುದಿ; ಪ್ರಮಿತ: ಪ್ರಮಾಣಕ್ಕೆ ಒಳಗಾದುದು; ಧಾರುಣಿ: ಭೂಮಿ; ಕೂಡು: ಜೊತೆಯಾಗು; ಕೊಡೆ: ನೀಡು; ದರ್ಪ: ಅಹಂಕಾರ; ಸಕಲ: ಎಲ್ಲಾ; ಮಹೀತಳ: ಭೂಮಿ; ಹೋಗು: ತೆರಳು; ಹೊಕ್ಕು: ಸೇರು; ಜಲ: ನೀರು; ಛಲ: ದೃಢ ನಿಶ್ಚಯ;

ಪದವಿಂಗಡಣೆ:
ನಾಡೊಳ್+ಅರ್ಧವ +ಕೊಡದೆ +ಹೋದಡೆ
ಬೇಡಿದ್+ಐದೂರುಗಳ +ಕೊಡುಯೆನೆಲ್
ಏಡಿಸಿದಲೈ +ಸೂಚಿ+ಅಗ್ರ+ಪ್ರಮಿತ+ಧಾರುಣಿಯ
ಕೂಡೆ +ನೀ +ಕೊಡೆನೆಂದು+ ದರ್ಪವ
ಮಾಡಿ +ಸಕಲ+ ಮಹೀತಳವ +ಹೋ
ಗಾಡಿ +ಹೊಕ್ಕೈ +ಜಲವನ್+ಆವೆಡೆ +ನಿನ್ನ +ಛಲವೆಂದ

ಅಚ್ಚರಿ:
(೧) ಧಾರುಣಿ, ಮಹೀತಳ, ನಾಡು – ಸಮಾನಾರ್ಥಕ ಪದ

ಪದ್ಯ ೧೮: ಕುಂತಿ ಕೃಷ್ಣನನ್ನು ಹೇಗೆ ಹೊಗಳಿದಳು?

ಅಮಿತ ಕರುಣಾಸಿಂಧುವಿನ ಪದ
ಕಮಲದಲಿ ಬಂದೆರಗಿ ಪುಳಕೋ
ದ್ಗಮದ ತನಿ ಸುಖಪಾನರಸ ಸೌರಂಭದಲಿ ಮುಳುಗಿ
ಗಮಿಸಲರಿಯವು ಗರುವ ವೇದ
ಪ್ರಮಿತಿಗಳು ನೀವೆಂತು ನಡೆತಂ
ದೆಮಗೆ ಗೋಚರವಾದಿರೆನುತವೆ ಹೊಗಳಿದಳು ಕುಂತಿ (ಉದ್ಯೋಗ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಿತವಿಲ್ಲದ ಕರುಣೆಯ ಸಾಗರನಾದ ಶ್ರೀಕೃಷ್ಣನ ಪದಕಮಲಕ್ಕೆ ಬಂದು ನಮಸ್ಕರಿಸಿ ಅತ್ಯಂತ ರೋಮಾಂಚನ ಗೊಂಡು ಅಮಿತ ಸುಖದಸಾರವನ್ನು ಹೀರಿದನುಭವದಿಂದ ಕುಂತಿ ಸಂಭ್ರಮಿಸಿದಳು. ಶ್ರೇಷ್ಠವಾದ ವೇದಗಳಿಗೆ ನಿಮ್ಮನ್ನು ಅಳೆಯಲು ಸಾಧ್ಯವಿಲ್ಲ ಅಂತಹ ಮಹಿಮಾನ್ವಿತನಾದ ನೀವು ನಡೆದು ಇಲ್ಲಿಗೆ ಬಂದು ದರ್ಶನ ನೀಡುತ್ತಿದ್ದೀರಿ ಎಂದು ಕುಂತಿ ಕೃಷ್ಣನನ್ನು ಹೊಗಳಿದಳು.

ಅರ್ಥ:
ಅಮಿತ: ಬಹಳ; ಕರುಣ: ದಯೆ, ಕಾರುಣ್ಯ; ಸಿಂಧು: ಸಾಗರ; ಪದಕಮಲ: ಚರಣ ಪದ್ಮ; ಬಂದು: ಆಗಮಿಸಿ, ಎರಗು: ನಮಸ್ಕರಿಸಿ; ಪುಳಕ: ರೋಮಾಂಚನ; ತನಿ: ಸವಿಯಾದುದು; ಸುಖ: ಸಂತೋಷ, ನಲಿವು; ಪಾನ:ಪಾನೀಯ, ಪೇಯ; ರಸ: ಸಾರ; ಸೌರಂಭ: ಸಂಭ್ರಮ, ಸಡಗರ; ಮುಳುಗು: ಮೀಯು, ಮರೆಯಾಗು; ಗಮಿಸು: ಹೋಗು; ಅರಿ: ತಿಳಿ; ಗರುವ: ಹಿರಿಯ, ಶ್ರೇಷ್ಠ; ವೇದ: ಶೃತಿ; ಪ್ರಮಿತಿ: ಅಳತೆ, ಪ್ರಮಾಣ; ಗೋಚರ: ಕಾಣುವುದು; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ಅಮಿತ +ಕರುಣಾ+ಸಿಂಧುವಿನ+ ಪದ
ಕಮಲದಲಿ +ಬಂದ್+ಎರಗಿ+ ಪುಳಕೋದ್
ಗಮದ +ತನಿ +ಸುಖಪಾನರಸ+ ಸೌರಂಭದಲಿ+ ಮುಳುಗಿ
ಗಮಿಸಲ್+ಅರಿಯವು +ಗರುವ +ವೇದ
ಪ್ರಮಿತಿಗಳು +ನೀವೆಂತು +ನಡೆತಂ
ದೆಮಗೆ+ ಗೋಚರವಾದಿರ್+ಎನುತವೆ+ ಹೊಗಳಿದಳು+ ಕುಂತಿ

ಅಚ್ಚರಿ:
(೧) ಅಮಿತ, ಪ್ರಮಿತ – ಪ್ರಾಸ ಪದಗಳು
(೨) ಸಂತೋಷಪಟ್ಟಳು ಎಂದು ಹೇಳಲು – ಪುಳಕೋದ್ಗಮದ ತನಿ ಸುಖಪಾನರಸ ಸೌರಂಭದಲಿ ಮುಳುಗಿ