ಪದ್ಯ ೩೫: ದ್ರೋಣರ ಹಿರಿಮೆ ಎಂತಹುದು?

ಪ್ರಭೆಯದಾರಿಗೆ ಸೂರ್ಯನಿದಿರಿನೊ
ಳಭವನಿರೆ ತಾನಾರು ಭುವನಕೆ
ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ
ವಿಭವ ನದಿಗಳಿಗುಂಟೆ ಜಲಧಿಯ
ರಭಸದಿದಿರಲಿ ನಮ್ಮ ಬಲದಲಿ
ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ (ದ್ರೋಣ ಪರ್ವ, ೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸೂರ್ಯನಿದಿರಲ್ಲಿ ತೇಜಸ್ವಿಗಳಾರು? ಶಿವನಲ್ಲದೆ ಲೋಕಕ್ಕೆ ವಿಭುಗಳಾರು? ವಿಷ್ಣುವಿನಿದಿರಲ್ಲಿ ಇನ್ನಾವ ದೇವತೆ? ಸಮುದ್ರದಿದಿರಿನಲ್ಲಿ ಯಾವ ನದಿ ನಿಲ್ಲಲು ಸಾಧ್ಯ? ದ್ರೋಣನಿರಲು ನಮ್ಮ ಸೈನ್ಯದಲ್ಲಿ ಸುಭಟರು ಇನ್ನಾರು ಎಂದು ದ್ರೋಣರ ಹಿರಿಮೆಯನ್ನು ಕರ್ಣನು ಹೇಳಿದನು.

ಅರ್ಥ:
ಪ್ರಭೆ: ಪ್ರಕಾಶ; ಎದುರು: ಮುಂದೆ; ಅಭವ: ಶಿವ; ಭುವನ: ಭೂಮಿ; ವಿಭು: ಒಡೆಯ, ಅರಸು; ನದಿ: ಸರೋವರ; ವೈಕುಂಠ: ವಿಷ್ಣುವಿನ ವಾಸಸ್ಥಾನ; ಇದಿರು: ಎದುರು; ದೇವತೆ: ದೈವ; ವಿಭವ: ಸಿರಿ, ಸಂಪತ್ತು; ಜಲಧಿ: ಸಾಗರ; ರಭಸ: ವೇಗ; ಬಲ: ಶಕ್ತಿ; ಸುಭಟ: ಪರಾಕ್ರಮಿ;

ಪದವಿಂಗಡಣೆ:
ಪ್ರಭೆಯದಾರಿಗೆ +ಸೂನ್+ಇದಿರಿನೊಳ್
ಅಭವನಿರೆ+ ತಾನಾರು+ ಭುವನಕೆ
ವಿಭುಗಳೈ +ವೈಕುಂಠನಿದಿರಿನೊಳ್+ಆರು +ದೇವತೆಯೈ
ವಿಭವ+ ನದಿಗಳಿಗುಂಟೆ +ಜಲಧಿಯ
ರಭಸದ್+ಇದಿರಲಿ +ನಮ್ಮ +ಬಲದಲಿ
ಸುಭಟರಾರೈ+ ದ್ರೋಣನ್+ಇರುತಿರಲ್+ಎಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪ್ರಭೆಯದಾರಿಗೆ ಸೂರ್ಯನಿದಿರಿನೊಳ್; ಅಭವನಿರೆ ತಾನಾರು ಭುವನಕೆ
ವಿಭುಗಳೈ; ವೈಕುಂಠನಿದಿರಿನೊಳಾರು ದೇವತೆಯೈ; ವಿಭವ ನದಿಗಳಿಗುಂಟೆ ಜಲಧಿಯ ರಭಸದಿದಿರಲಿ

ಪದ್ಯ ೪೬: ದ್ರೌಪದಿಯನ್ನು ಯಾರು ಸುತ್ತುವರೆದಿದ್ದರು?

ಹೊಳೆವ ಕಂಗಳ ಕಾಂತಿಗಳ ಥಳ
ಥಳಿಪ ವದನ ಪ್ರಭೆಯ ರತ್ನಾ
ವಳಿಯ ಬಹುವಿಧ ರಶ್ಮಿಗಳ ಲಾವಣ್ಯಲಹರಿಗಳ
ಎಳನಗೆಯ ಸುಲಿಪಲ್ಲ ಮುಕ್ತಾ
ವಳಿಯ ನಖ ದೀಧಿತಿಯ ಬೆಳಗಿನ
ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ (ಸಭಾ ಪರ್ವ, ೧೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಪ್ರಕಾಶಮಾನವಾಗಿ ಹೊಳೆಯುವ ಕಣ್ಣುಗಳ ಕಾಂತಿ, ಮುಖದಲ್ಲಿ ಥಳಥಳಿಸುವ ಬೆಳಕಿನ ಹೊಳಪು, ಧರಿಸಿದ ಆಭರಣಗಳ ರತ್ನಗಳ ಕಿರಣಗಳು, ಸೊಬಗಿನ ಉಲ್ಲಾಸದ ಪ್ರವಾಹ, ಸುಂದರವಾದ ಹಲ್ಲುಗಳು, ಮಂದಸ್ಮಿತ, ಮುತ್ತಿನ ಹಾರ, ಉಗುರುಗಳ ಕಾಂತಿಗಳಿಂದ ಬೆಳಕಿನ ಬಳಗದಂತೆ ಶೋಭಿಸುವ ತರುಣಿಯರು ದ್ರೌಪದಿಯ ಸುತ್ತ ನೆರೆದಿದ್ದರು.

ಅರ್ಥ:
ಹೊಳೆ: ಕಾಂತಿ, ಹೊಳಪು; ಕಂಗಳು: ನಯನ, ಅಂಬಕ; ಕಾಂತಿ: ಪ್ರಕಾಶ; ಥಳಥಳ: ಬೆಳಕು, ಕಾಂತಿಯನ್ನು ವರ್ಣಿಸುವ ಪದ; ವದನ: ಮುಖ; ಪ್ರಭೆ: ಕಾಂತಿ; ರತ್ನ: ಬೆಲೆಬಾಳುವ ಮಣಿ; ಆವಳಿ: ಸಾಲು; ಬಹುವಿಧ: ಬಹಳ, ಹಲವಾರು; ರಶ್ಮಿ: ಕಾಂತಿ; ಲಾವಣ್ಯ: ಚೆಲುವು; ಲಹರಿ: ಕಾಂತಿ, ಪ್ರಭೆ, ಅಲೆ; ಎಳನಗೆ: ಮಂದಸ್ಮಿತ; ಸುಲಿಪಲ್ಲ: ಶುಭ್ರವಾಗಿ ಹೊಳೆಯುವ ಹಲ್ಲು; ಮುಕ್ತಾವಳಿ: ಮುತ್ತಿನಹಾರ; ನಖ: ಉಗುರು; ದೀಧಿತಿ: ಹೊಳಪು, ಕಾಂತಿ; ಬೆಳಗು: ಬೆಳಕು; ಬಳಗ: ಸಂಬಂಧಿಕ, ಗುಂಪು; ಬಾಲಕಿ: ಹುಡುಗಿ; ಸತಿ: ಸ್ತ್ರೀ; ಬಳಸು: ಹತ್ತಿರ;

ಪದವಿಂಗಡಣೆ:
ಹೊಳೆವ +ಕಂಗಳ +ಕಾಂತಿಗಳ+ ಥಳ
ಥಳಿಪ +ವದನ +ಪ್ರಭೆಯ +ರತ್ನಾ
ವಳಿಯ +ಬಹುವಿಧ+ ರಶ್ಮಿಗಳ +ಲಾವಣ್ಯ+ಲಹರಿಗಳ
ಎಳನಗೆಯ +ಸುಲಿಪಲ್ಲ +ಮುಕ್ತಾ
ವಳಿಯ +ನಖ+ ದೀಧಿತಿಯ+ ಬೆಳಗಿನ
ಬಳಗವನೆ+ ಬಾಲಕಿಯರಿದ್ದರು +ಸತಿಯ +ಬಳಸಿನಲಿ

ಅಚ್ಚರಿ:
(೧) ಹೊಳೆ, ಕಾಂತಿ, ಪ್ರಭೆ, ರಶ್ಮಿ, ಲಹರಿ, ದೀಧಿತಿ – ಸಾಮ್ಯಾರ್ಥ ಪದಗಳು
(೨) ಉಪಮಾನದ ಪ್ರಯೋಗ – ಬೆಳಗಿನ ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ

ಪದ್ಯ ೧೯: ಕರ್ಣನು ಹೇಗೆ ಪ್ರಜ್ವಲಿಸಿದನು?

ಹೊಳೆಹೊಳೆದವಾಭರಣ ತಾರಾ
ವಳಿಗಳಂತಿರೆ ಪೂರ್ಣಶಶಿಮಂ
ಡಲದವೊಲು ತನುಕಾಂತಿ ತಿವಿದುದು ನಿಖಿಳ ದಿಗುತಟವ
ತಳಿತ ವಿಕ್ರಮ ಸುಪ್ರತಾಪೋ
ಜ್ವಲಿತಸೂರ್ಯಪ್ರಭೆ ಜಗತ್ರಯ
ದೊಳಗೆ ಝಳಪಿಸೆ ಕರ್ಣನೆಸೆದನು ದಿವ್ಯತೇಜದಲಿ (ಕರ್ಣ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕರ್ಣನ ಆಭರಣಗಳು ನಕ್ಷತ್ರದಂತೆ ಮಿನುಗುತ್ತಿದ್ದವು. ಅವನ ದೇಹಕಾಂತಿಯು ಚಂದ್ರಮಂಡಲದ ಪ್ರಭೆಯಂತೆ ಸುತ್ತಲೂ ಹಬ್ಬುತ್ತಿತ್ತು. ಅವನ ಪ್ರತಾಪದ ಸೂರ್ಯಕಿರಣಗಳು ಮೂರುಲೋಕದಲ್ಲೂ ಝಳಪಿಸುತ್ತಿತ್ತು, ಹೀಗೆ ಕರ್ಣನು ತನ್ನ ದಿವ್ಯತೇಜಸ್ಸಿನಿಂದ ರಾರಾಜಿಸುತ್ತಿದ್ದನು.

ಅರ್ಥ:
ಹೊಳೆ: ಪ್ರಕಾಶಿಸು; ಆಭರಣ: ಒಡವೆ; ತಾರೆ: ನಕ್ಷತ್ರ: ಆವಳಿ: ಸಾಲು, ಗುಂಪು; ಪೂರ್ಣ: ಪೂರ್ತಿ; ಶಶಿ: ಚಂದ್ರ; ಮಂಡಲ: ವರ್ತುಲಾಕಾರ; ತನು: ದೇಹ; ಕಾಂತಿ: ಪ್ರಕಾಶ; ತಿವಿ: ಚಚ್ಚು, ಹಬ್ಬು; ನಿಖಿಳ: ಎಲ್ಲಾ; ದಿಗುತಟ: ದಿಕ್ಕುಗಳು; ತಳಿತ: ಚಿಗುರಿದ; ವಿಕ್ರಮ: ಗತಿ, ಗಮನ, ಹೆಜ್ಜೆ; ಶೂರ, ಸಾಹಸ; ಸುಪ್ರತಾಪ: ಪೌರುಷ; ಉಜ್ವಲಿತ: ಹೊಳೆಯುವ; ಸೂರ್ಯ: ರವಿ; ಪ್ರಭೆ: ಕಾಂತಿ, ಪ್ರಕಾಶ; ಜಗತ್ರಯ: ಮೂರು ಲೋಕ; ಝಳ: ಪ್ರಕಾಶ, ಕಾಂತಿ; ಎಸೆ: ತೋರು; ದಿವ್ಯ: ಶ್ರೆಷ್ಠ; ತೇಜ: ಕಾಂತಿ;

ಪದವಿಂಗಡಣೆ:
ಹೊಳೆಹೊಳೆದವ್+ಆಭರಣ +ತಾರಾ
ವಳಿಗಳಂತಿರೆ+ ಪೂರ್ಣ+ಶಶಿ+ಮಂ
ಡಲದವೊಲು +ತನುಕಾಂತಿ +ತಿವಿದುದು +ನಿಖಿಳ +ದಿಗುತಟವ
ತಳಿತ+ ವಿಕ್ರಮ+ ಸುಪ್ರತಾಪೋ
ಜ್ವಲಿತ+ಸೂರ್ಯಪ್ರಭೆ +ಜಗತ್ರಯ
ದೊಳಗೆ +ಝಳಪಿಸೆ+ ಕರ್ಣನ್+ಎಸೆದನು +ದಿವ್ಯ+ತೇಜದಲಿ

ಅಚ್ಚರಿ:
(೧) ಹೊಳೆ, ಉಜ್ವಲಿತ, ಪ್ರಭೆ, ಝಳ – ಸಮಾನಾರ್ಥಕ ಪದಗಳು
(೨) ಉಪಮಾನದ ಪ್ರಯೋಗ – ಹೊಳೆಹೊಳೆದವಾಭರಣ ತಾರಾವಳಿಗಳಂತಿರೆ; ಪೂರ್ಣಶಶಿಮಂ
ಡಲದವೊಲು ತನುಕಾಂತಿ; ತಳಿತ ವಿಕ್ರಮ ಸುಪ್ರತಾಪೋಜ್ವಲಿತಸೂರ್ಯಪ್ರಭೆ

ಪದ್ಯ ೪೬: ವಿಭೀಷಣನು ಭಂಡಾರದಿಂದ ತೆಗೆದ ಸಾಮಗ್ರಿಗಳಾವುವು?

ತೆಗೆಸಿದನು ಗಜದಂತಮಯ ಪೆ
ಟ್ಟಿಗೆಗಳನು ಕರ್ಪುರದ ತವಲಾ
ಯಿಗಳ ಹವಳದ ಮಂಚವನು ಮಣಿ ಖಚಿತ ರಚನೆಗಳ
ಬಿಗಿದ ವಜ್ರಪ್ರಭೆಯ ಹೊನ್ನಾ
ಯುಗದ ಖಡ್ಗ ಕಠಾರಿಗಳ ಝಗ
ಝಗಿಪ ಹೊಂಗೆಲಸದ ವಿಚಿತ್ರದ ಜೋಡು ಸೀಸಕವ (ಸಭಾ ಪರ್ವ, ೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಆನೆಯ ದಂತನಿಂದ ಮಾಡಿದ ಪೆಟ್ಟಿಗೆಗಳು, ಕರ್ಪುರದ ಭರಣಿಗಳು, ಹವಳದ ಮಂಚ, ಬಂಗಾರ ವಜ್ರಗಳ ಹಿಡಿಕೆಯುಳ್ಳ ಕತ್ತಿ, ಕಠಾರಿಗಳು, ಬಂಗಾರದ ಕೆಲಸದಿಂದ ಕೂಡಿದ ಅಂಗರಕ್ಷೆ, ಶಿರಸ್ತ್ರಾಣಗಳನ್ನು ವಿಭೀಷಣನು ಭಂಡಾರದಿಂದ ತರಿಸಿದನು.

ಅರ್ಥ:
ತೆಗೆಸು: ಹೊರಗೆ ತಾ; ಗಜ: ಆನೆ; ದಂತ: ಹಲ್ಲು; ಪೆಟ್ಟಿಗೆ: ಭರಣಿ, ಕರಂಡಕ; ಕರ್ಪೂರ: ಒಂದು ಬಗೆಯ ಸುಗಂಧ ದ್ರವ್ಯ; ತವಲಾಯಿ: ಕರ್ಪೂರದ ಹಳಕು; ಹವಳ:ಒಂದು ಬಗೆಯ ಕೆಂಪು ಬಣ್ಣದ ಮಣಿ; ಮಂಚ:ಪರ್ಯಂಕ; ಮಣಿ: ರತ್ನ; ಖಚಿತ: ಭರಿತ, ಕೂಡಿಸಿದ; ವಜ್ರ: ನವರತ್ನಗಳಲ್ಲಿ ಒಂದು ರತ್ನ; ಪ್ರಭೆ: ಕಾಂತಿ; ಹೊನ್ನು: ಚಿನ್ನ; ಖಡ್ಗ: ಕತ್ತಿ; ಕಠಾರಿ:ಚೂರಿ; ಝಗ: ಹೊಳೆವ; ಸೀಸಕ: ಶಿರಸ್ತ್ರಾಣ; ಜೋಡು: ಜೊತೆ; ವಿಚಿತ್ರ:ಆಶ್ಚರ್ಯಕರ;

ಪದವಿಂಗಡಣೆ:
ತೆಗೆಸಿದನು +ಗಜದಂತಮಯ+ ಪೆ
ಟ್ಟಿಗೆಗಳನು +ಕರ್ಪುರದ+ ತವಲಾ
ಯಿಗಳ +ಹವಳದ+ ಮಂಚವನು+ ಮಣಿ +ಖಚಿತ +ರಚನೆಗಳ
ಬಿಗಿದ +ವಜ್ರಪ್ರಭೆಯ +ಹೊನ್ನಾ
ಯುಗದ+ ಖಡ್ಗ +ಕಠಾರಿಗಳ +ಝಗ
ಝಗಿಪ+ ಹೊಂಗೆಲಸದ+ ವಿಚಿತ್ರದ +ಜೋಡು +ಸೀಸಕವ

ಪದ್ಯ ೪೧: ಬೃಹದ್ರಥನ ಮುಖವು ಪ್ರಜ್ವಲಿಸಲು ಕಾರಣವೇನು?

ಕಂದೆರೆದು ಮುನಿ ಬಳಿಕ ಭೂಪತಿ
ಗೆಂದನಿದಕೋ ಪುತ್ರಸಂತತಿ
ಗೆಂದು ಸಾಧನವಿದನುಕೊಡು ನಿನ್ನರಸಿಯರಿಗೆನಲು
ಕಂದಿದಾನನ ಉಜ್ವಲ ಪ್ರಭೆ
ಯಿಂದ ಬೆಳಗಿತು ರಾಣಿಯರು ಸಹಿ
ತಂದು ಮುನಿಪದಕೆರಗಿ ಪರಿತೋಷದಲಿ ನಿಂದಿರ್ದ (ಸಭಾ ಪರ್ವ, ೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ಚಂಡಕೌಶಿಕನ ಅಂಗೈಗೆ ಮಾವಿನ ಹಣ್ಣು ಬೀಳಲು, ಅವನು ತನ್ನ ಕಣ್ಣನ್ನು ತೆರೆದು ರಾಜನಿಗೆ, “ನಿನಗೆ ಮಕ್ಕಳಾಗಲು ಇದುವೆ ಸಾಧನ, ಈ ಹಣ್ಣನ್ನು ನಿನ್ನ ರಾಣಿಯರಿಗೆ ಕೊಡು” ಎಂದನು. ಇದನ್ನು ಕೇಳಿ, ಬಾಡಿಹೋಗಿದ್ದ ರಾಜನ ಮುಖವು ಉಜ್ವಲವಾದ ಪ್ರಭೆಯಿಂದ ಬೆಳಗಿತು. ರಾಣಿಯರ ಸಮೇತ ಮುನಿಯ ಪಾದಕ್ಕೆರಗಿ ಸಂತೋಷದಿಂದ ನಿಂತನು.

ಅರ್ಥ:
ಕಂದೆರೆದು: ಕಣ್ಣುಬಿಟ್ಟು; ಮುನಿ: ಋಷಿ; ಬಳಿಕ: ನಂತರ; ಭೂಪತಿ: ರಾಜ; ಕೋ: ತೆಗೆದುಕೋ; ಪುತ್ರ: ಸುತ; ಸಂತತಿ: ವಂಶ; ಸಾಧನ: ಗುರಿಮುಟ್ಟುವ ಪ್ರಯತ್ನ; ಕೊಡು: ನೀಡು; ಅರಸಿ: ರಾಣಿ; ಕಂದು: ಬಾಡು; ಆನನ: ಮುಖ: ಉಜ್ಜ್ವಲ: ತೇಜಸ್ಸು; ಪ್ರಭೆ: ಪ್ರಕಾಶ; ಬೆಳಗು: ಹೊಳೆ; ರಾಣಿ: ಅರಸಿ; ಸಹಿತ: ಜೊತೆ; ಪದ: ಪಾದ; ಎರಗು: ಬೀಳು, ನಮಸ್ಕರಿಸು; ಪರಿತೋಷ: ಸಂತೋಷ;

ಪದವಿಂಗಡಣೆ:
ಕಂ+ತೆರೆದು +ಮುನಿ +ಬಳಿಕ +ಭೂಪತಿಗ್
ಎಂದನ್+ಇದ+ಕೋ +ಪುತ್ರ+ಸಂತತಿಗ್
ಎಂದು +ಸಾಧನವ್+ಇದನು+ಕೊಡು +ನಿನ್+ಅರಸಿ+ಯರಿಗ್+ಎನಲು
ಕಂದಿದ್+ಆನನ+ ಉಜ್ವಲ+ ಪ್ರಭೆ
ಯಿಂದ +ಬೆಳಗಿತು+ ರಾಣಿಯರು+ ಸಹಿತ್
ಅಂದು +ಮುನಿ+ಪದಕ್+ಎರಗಿ+ ಪರಿತೋಷದಲಿ+ ನಿಂದಿರ್ದ

ಅಚ್ಚರಿ:
(೧) ಅಂದು, ಎಂದು, ಇಂದ,ಎಂದ – ಪ್ರಾಸ ಪದಗಳ ಪ್ರಯೋಗ
(೨) ಅರಸಿ, ರಾಣಿ – ಸಮನಾರ್ಥಕ ಪದ, ೩, ೫ ಸಾಲು
(೩) ಉಜ್ಜ್ವಲ, ಪ್ರಭೆ – ಸಾಮ್ಯಾರ್ಥ ಪದಗಳು
(೪) ಮುನಿ – ೧, ೬ ಸಾಲಿನ ೨ನೇ ಪದ

ಪದ್ಯ ೬೧: ಪಂಚಪಾಂಡವರು ದ್ರುಪದನಿಗೆ ಹೇಗೆ ಗೋಚರಿಸಿದರು?

ಮೆರೆವ ದೇಹಪ್ರಭೆಗಳಲಿ ಮಿರು
ಮಿರುಪ ದಿವ್ಯಾಭರಣ ಕಿರಣದ
ತುರುಗಿನಲಿ ತನಿಹೊಳೆವ ದಿವ್ಯಾಂಬರದ ಕಾಂತಿಯಲಿ
ಅರಿವಡಾಯ್ತೆಲ್ಲವಯವದ ಕಂ
ದೆರೆವ ತೇಜಃಪುಂಜ ರಸಮಯ
ದೆರಕವೆನಲಿವರೈವರೊಪ್ಪಿದರಿಂದ್ರ ತೇಜದಲಿ (ಆದಿ ಪರ್ವ, ೧೬ ಸಂಧಿ, ೬೧ ಪದ್ಯ)

ತಾತ್ಪರ್ಯ:
ವ್ಯಾಸರು ನೀಡಿದ ದಿವ್ಯನಯನಗಳಿಂದ ಪಂಚ ಪಾಂಡವರನ್ನು ನೋಡಿದಾಗ ಅವನಿಗೆ ಅವರ ದೇಹಗಳು ದಿವ್ಯ ಪ್ರಭೆಯಿಂದ ಬೆಳಗಿದವು. ದಿವ್ಯಾಭರಣಗಳನ್ನು ಅವರು ಧರಿಸಿದ್ದರು, ದಿವ್ಯ ವಸ್ತ್ರಗಳನ್ನುಟ್ಟಿದ್ದರು, ತೇಜಸ್ಸಿನಿಂದ ಮಾಡಿದ ಎರಕದಂತೆ ಅವರ ಸಮಸ್ತ ಅವಯವಗಳು ಹೊಳೆಯುತ್ತಿರಲು ಅವರೈವರು ಇಂದ್ರತೇಜಸ್ಸಿನಿಂದ ಪ್ರಕಾಶಿಸುತ್ತಿದ್ದರು.

ಅರ್ಥ:
ಮೆರೆ:ಹೊಳೆ, ಪ್ರಕಾಶಿಸು; ದೇಹ: ಅಂಗ; ಪ್ರಭೆ: ತೇಜಸ್ಸು,ಕಾಂತಿ; ಮಿರುಮಿರುಪ: ಹೊಳೆವ; ದಿವ್ಯ: ಶ್ರೇಷ್ಠ; ಆಭರಣ: ಒಡವೆ; ಕಿರಣ: ಕಾಂತಿ; ತುರುಗು: ಹೆಚ್ಚಾಗು, ಅಧಿಕವಾಗು; ತನಿ: ಹೆಚ್ಚಾಗು, ಮಾಗು, ಅತಿಶಯ; ಹೊಳೆ: ಮಿನುಗು; ಅಂಬರ: ಬಟ್ಟೆ; ಕಾಂತಿ: ಹೊಳಪು; ಅರಿ: ತಿಳಿ; ಅವಯವ:ಅಂಗ, ಭಾಗ; ಕಂದೆರೆವ: ಕಣ್ಣು ತರೆಯುವುದು; ತೇಜ: ತೇಜಸ್ಸು, ಕಾಂತಿ, ಪ್ರಭೆ; ಪುಂಜ: ರಾಶಿ; ರಸ: ಸಾರ; ಎರಕ:ಪ್ರೀತಿ, ಅನುರಾಗ; ಒಪ್ಪು: ಸಮ್ಮತಿಸು;

ಪದವಿಂಗಡಣೆ:
ಮೆರೆವ +ದೇಹ+ಪ್ರಭೆಗಳಲಿ +ಮಿರು
ಮಿರುಪ +ದಿವ್ಯಾಭರಣ+ ಕಿರಣದ
ತುರುಗಿನಲಿ+ ತನಿಹೊಳೆವ+ ದಿವ್ಯಾಂಬರದ+ ಕಾಂತಿಯಲಿ
ಅರಿವಡಾಯ್ತ್+ಎಲ್ಲ+ಅವಯವದ +ಕಂ
ದೆರೆವ +ತೇಜಃಪುಂಜ+ ರಸಮಯದ್
ಎರಕವ್+ಎನಲ್+ಇವರ್+ಐವರ್+ಒಪ್ಪಿದರ್+ಇಂದ್ರ +ತೇಜದಲಿ

ಅಚ್ಚರಿ:
(೧) ೬ ಸಾಲಿನ ಮೊದಲನೆ ಪದ ಒಟ್ಟಾಗಿ ರಚಿತವಾಗಿರುವುದು
(೨) ಪ್ರಭೆ, ಮಿರುಮಿರುಪ, ಹೊಳೆ, ಕಾಂತಿ, ತೇಜ, ಕಿರಣ, ಕಾಂತಿ – ಕಾಂತಿ ಯನ್ನು ಅರ್ಥೈಸುವ ಪದಗಳ ಬಳಕೆ

ಪದ್ಯ ೨೪: ದ್ರೌಪದಿಯ ಕಣ್ಣಿನ ಕಾಂತಿ ಹೇಗೆ ಹೊಳೆಯುತ್ತಿತ್ತು?

ಹೊಳೆಹೊಳೆದುದಾಭರಣ ರತ್ನಾ
ವಳಿಯರುಚಿ ತನ್ಮಣಿರುಚಿಯ ಮು
ಕ್ಕುಳಿಸಿತಂಗಚ್ಛವಿ ತದಂಗಪ್ರಭೆಯನಡಹಾಯ್ದು
ಥಳಥಳಿಸಿದುದು ವದನ ಮುಖ ಮಂ
ಡಳದ ಕಾಂತಿಯನೊದೆದು ಕಂಗಳ
ಬೆಳಗು ವಿಸಟಂಬರಿದುದೇನೆಂಬೆನು ನಿತಂಬಿನಿಯ (ಆದಿ ಪರ್ವ, ೧೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ದ್ರೌಪದಿಯ ಆಭರಣಗಳು ಹೊಳೆಯುತ್ತಿದ್ದವು, ಆ ರತ್ನಾಭರಣಗಳ ಕಾಂತಿಯು ಆಕೆಯ ದೇಹದ ಕಾಂತಿಯ ಮುಂದೆ ಮಂಕಾಗಿತ್ತು, ಅವಳ ದೇಹದ ಕಾಂತಿಯನ್ನು ಮೀರಿಸುವಷ್ಟು ಕಾಂತಿ ಆಕೆಯ ಮುಖದಲ್ಲಿ ತೇಜಸ್ಸಿನಲ್ಲಿ ತೋರುತ್ತಿತ್ತು, ಆ ಚೆಲುವೆಯ ಮುಖದ ಕಾಂತಿಯನ್ನು ಹಿಂದಿಟ್ಟು ಆಕೆಯ ಕಣ್ಣಿನ ಕಾಂತಿ ಎಲ್ಲವನ್ನು ಮೀರಿ ಹೊಳೆಯುತ್ತಿತ್ತು, ಇಂತಹ ಸೌಂದರ್ಯವನ್ನು ಹೊಂದಿದ ದ್ರೌಪದಿಯನ್ನು ಹೇಗೆ ತಾನೆ ವರ್ಣಿಸಲು ಸಾಧ್ಯ?

ಅರ್ಥ:
ಹೊಳೆ: ಮಿಂಚು; ಆಭರಣ: ಒಡವೆ; ರತ್ನ: ಬೆಲೆಬಾಳುವ ವಸ್ತು, ಮುತ್ತು, ಹವಳ; ಆವಳಿ: ಸಾಲು, ಗುಂಪು; ರುಚಿ: ಕಾಂತಿ, ಪ್ರಕಾಶ; ಮುಕ್ಕುಳಿಸು: ಮುಗ್ಗುರಿಸು, ಎಡವು; ಅಂಗ: ದೇಹದ ಭಾಗ; ಚ್ಛವಿ: ಕಾಂತಿ; ಪ್ರಭೆ: ಕಾಂತಿ; ಅಡಹಾಯ್: ಅಡ್ಡಬರು, ಇದಿರಿಸು; ಥಳ: ಹೊಳೆ; ವದನ: ಮುಖ; ಮಂಡಳ: ವರ್ತುಲಾಕಾರವಾದುದು; ಕಾಂತಿ: ಪ್ರಕಾಶ, ಚ್ಛವಿ; ಒದೆ: ಹೊರಹಾಕು, ಕಾಲಿನಿಂದ ತಳ್ಳು; ಕಂಗಳು: ಕಣ್ಣು, ನಯನ; ಬೆಳಗು: ಕಾಂತಿ; ವಿಸಟಂಬರಿ: ಮನಬಂದಂತೆ ಹರಿ; ನಿತಂಬಿನಿ: ಹೆಣ್ಣು, ಚೆಲುವೆ;ನಿತಂಬ: ಸ್ತ್ರೀಯರ ಸೊಂಟದ ಕೆಳಗಿನ ಹಿಂಬಾಗ, ಕಟಿಪ್ರದೇಶ;

ಪದವಿಂಗಡಣೆ:
ಹೊಳೆಹೊಳೆದುದ್+ಆಭರಣ +ರತ್ನಾ
ವಳಿಯ+ರುಚಿ +ತನ್+ಮಣಿರುಚಿಯ +ಮು
ಕ್ಕುಳಿಸಿತ್+ಅಂಗಚ್ಛವಿ +ತದ್+ಅಂಗಪ್ರಭೆಯನ್+ಅಡಹಾಯ್ದು
ಥಳಥಳಿಸಿದುದು +ವದನ +ಮುಖ +ಮಂ
ಡಳದ +ಕಾಂತಿಯನ್+ಒದೆದು +ಕಂಗಳ
ಬೆಳಗು +ವಿಸಟಂಬರಿದುದ್+ಏನೆಂಬೆನು +ನಿತಂಬಿನಿಯ

ಅಚ್ಚರಿ:
(೧) ಜೋಡಿ ಪದಗಳು – ಹೊಳೆಹೊಳೆ; ರತ್ನಾವಳಿಯ ರುಚಿ, ಮಣಿರುಚಿ; ಅಂಗಚ್ಛವಿ, ತದಂಗ ಪ್ರಭೆ;
(೨) ಹೊಳೆ, ರುಚಿ, ಚ್ಛವಿ, ಪ್ರಭೆ, ಕಾಂತಿ, ಬೆಳಗು – ಸಮಾನಾರ್ಥಕ ಪದಗಳು
(೩) ವದನ ಮುಖ – ಸಮಾನಾರ್ಥಕ ಪದ, ಒಂದರ ಪಕ್ಕ ಒಂದರಂತೆ ಪದಗಳ ರಚನೆ
(೪) ಮುಕ್ಕುಳಿಸು, ಅಡಹಾಯ್, ಒದೆ, ವಿಸಟಂಬರಿ – ಸಾಮ್ಯ ಅರ್ಥವುಳ್ಳ ಪದಗಳು
(೫) ಹೊಳೆಹೊಳೆ, ಥಳಿ ಥಳಿ – ೧, ೩ ಸಾಲಿನ ಮೊದಲ ಪದಗಳು