ಪದ್ಯ ೯: ಯಾವ ಬೆಳಕನ್ನು ವಿರಾಟನು ಕಂಡನು?

ಕರೆಸಿಕೊಂಡು ಪುರೋಹಿತನನು
ತ್ತರನಖಿಳ ಮಹಾಪ್ರಧಾನರ
ನರಮನೆಯ ಹೊರವಂಟು ವೋಲಗ ಶಾಲೆಗೈತರುತ
ಕರಗಿ ಸೂಸಿದ ಚಂದ್ರ ಬಿಂಬದ
ಕಿರಣ ಲಹರಿಗಳೆನಲು ವಿವಿಧಾ
ಭರಣ ಮುಕ್ತಾಪ್ರಭೆಯ ಕಂಡನು ನೃಪತಿ ದೂರದಲಿ (ವಿರಾಟ ಪರ್ವ, ೧೧ ಸಂಧಿ, ೯ ಪದ್ಯ)

ತಾತ್ಪರ್ಯ:
ಪುರೋಹಿತರು, ಪ್ರಧಾನರು ಮತ್ತು ಉತ್ತರನನ್ನು ಕರೆಸಿಕೊಂಡು ವಿರಾಟನು ಸಭಾಸ್ಥಾನಕ್ಕೆ ಬಂದನು. ಚಂದ್ರಕಿರಣಗಳು ಕರಗಿ ಹೊರ ಹೊಮ್ಮುತ್ತಿರುವಂತೆ ಕಾಣುವ ಆಭರಣಗಳ ಮುತ್ತಿನ ಬೆಳಕನ್ನು ದೂರದಿಂದ ಕಂಡನು.

ಅರ್ಥ:
ಕರೆಸು: ಬರೆಮಾಡು; ಪುರೋಹಿತ: ವೇದೋಕ್ತ ವಿಧಿ, ಧಾರ್ಮಿಕ ವ್ರತ ಶುಭಕಾರ್ಯಗಳನ್ನು ಮಾಡಿಸುವವನು; ಅಖಿಳ: ಎಲ್ಲಾ; ಪ್ರಧಾನ: ಮಹಾಮಾತ್ರ, ಪ್ರಮುಖ; ಅರಮನೆ: ರಾಜರ ಆಲಯ; ಹೊರವಂಟು: ತೆರಳು; ಓಲಗ: ದರ್ಬಾರು; ಐತುರು: ಬಂದು ಸೇರು; ಕರಗು: ಕನಿಕರ ಪಡು, ನೀರಾಗಿಸು; ಸೂಸು: ಎರಚು, ಚಲ್ಲು; ಚಂದ್ರ: ಶಶಿ; ಬಿಂಬ: ಸೂರ್ಯ ಯಾ ಚಂದ್ರನ ಸುತ್ತಲೂ ಇರುವ ಪ್ರಭಾವ ವಲಯ; ಕಿರಣ: ರಶ್ಮಿ; ಲಹರಿ: ರಭಸ, ಆವೇಗ; ವಿವಿಧ: ಹಲವಾರು; ಆಭರಣ: ಒಡವೆ; ಮುಕ್ತಾಪ್ರಭೆ: ಮುತ್ತಿನ ಬೆಳಕು; ಕಂಡು: ನೋಡು; ನೃಪತಿ: ರಾಜ; ದೂರ: ಅಂತರ;

ಪದವಿಂಗಡಣೆ:
ಕರೆಸಿಕೊಂಡು +ಪುರೋಹಿತನನ್
ಉತ್ತರನ್+ಅಖಿಳ+ ಮಹಾ+ಪ್ರಧಾನರನ್
ಅರಮನೆಯ +ಹೊರವಂಟು +ಓಲಗ+ ಶಾಲೆಗ್+ಐತರುತ
ಕರಗಿ +ಸೂಸಿದ+ ಚಂದ್ರ +ಬಿಂಬದ
ಕಿರಣ+ ಲಹರಿಗಳೆನಲು +ವಿವಿಧಾ
ಭರಣ+ ಮುಕ್ತಾಪ್ರಭೆಯ+ ಕಂಡನು+ ನೃಪತಿ+ ದೂರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕರಗಿ ಸೂಸಿದ ಚಂದ್ರ ಬಿಂಬದ ಕಿರಣ ಲಹರಿಗಳೆನಲು ವಿವಿಧಾ
ಭರಣ ಮುಕ್ತಾಪ್ರಭೆಯ ಕಂಡನು

ಪದ್ಯ ೭೦: ಯಾವ ರಾಜನ ಐಶ್ವರ್ಯವು ಗಾಳಿಗೊಡ್ಡಿದ ದೀಪದಂತಿರುತ್ತದೆ?

ಬಲು ಪ್ರಧಾನರ ವೈರ ಹಿತವಹ
ಲಲನೆಯರ ಮನದಳಲು ಹಗೆಯಲಿ
ಬಳಸುವಂತಸ್ಥತೆಯನಾಮಿಕರೊಡನೆ ಕೆಳೆ ಗೋಷ್ಠಿ
ಬಲದೊಡನೆ ನಿರ್ಬಂಧ ಧರ್ಮದ
ನೆಲೆಯನರಿಯದ ದಾನಿಗಳ ಸಿರಿ
ಸುಳಿವ ಗಾಳಿಗೆ ಮಲೆವ ದೀಪವು ಕೇಳು ಧೃತರಾಷ್ಟ್ರ (ಉದ್ಯೋಗ ಪರ್ವ, ೩ ಸಂಧಿ, ೭೦ ಪದ್ಯ)

ತಾತ್ಪರ್ಯ:
ರಾಜನ ಐಶ್ವರ್ಯವು ಹೇಗೆ ಕ್ಷೀಣಿಸುತ್ತದೆ ಎಂದು ವಿದುರ ಇಲ್ಲಿ ತಿಳಿಸುತ್ತಾರೆ. ಪ್ರಧಾನರ ವೈರವನ್ನು ಬೆಳೆಸಿಕೊಂಡವನು, ಹಿತವರಾದ ಸ್ತ್ರೀಯರು ಸಂತಾಪಕ್ಕೊಳಗಾಗುವಂತೆ ನಡೆಯುವವನು, ಶತ್ರುಗಳೊಡನೆ ಆಪ್ತತೆಯನ್ನು ಬೆಳೆಸುವವನು, ತಿಳಿಯದವರೊಡನೆ ಸ್ನೇಹ ಮಾದುವವನು, ಸೈನ್ಯದೊಂದಿಗೆ ನಿರ್ಬಂಧವನ್ನು ಬೆಳೆಸುವವನು, ಧರ್ಮವನ್ನರಿಯದೆ ದಾನಮಾದುವವನು, ಇಂತಹ ರಾಜನ ಐಶ್ವರ್ಯವು ಗಾಳಿಗೊಡಿದ ದೀಪದಂತೆ ಆರಿ ಹೋಗುತ್ತದೆ.

ಅರ್ಥ:
ಬಲು: ಬಹಳ; ಪ್ರಧಾನ: ಮುಖ್ಯ; ವೈರ: ಹಗೆ; ಹಿತ: ಒಳಿತು; ಲಲನೆ: ಸ್ತ್ರೀ; ಮನ: ಮನಸ್ಸು; ಅಳಲು: ದುಃಖ, ಅಳು; ಬಳಸು: ಸುತ್ತುವರಿ; ಅನಾಮಿಕ: ಅಪ್ರಸಿದ್ಧ; ಕೆಳೆ: ಸ್ನೇಹ, ಗೆಳೆತನ; ಗೋಷ್ಠಿ: ಗುಂಪು, ಕೂಟ; ಬಲ: ಶಕ್ತಿ; ನಿರ್ಬಂಧ: ತಡೆ; ಧರ್ಮ: ಧಾರಣೆ ಡಿದುದು, ನಿಯಮ, ಆಚಾರ ; ನೆಲೆ: ಆಶ್ರಯ, ಆಧಾರ; ಅರಿ: ತಿಳಿ; ದಾನಿ: ಕೊಡುವವ; ಸಿರಿ: ಐಶ್ವರ್ಯ; ಸುಳಿ: ನುಸುಳು, ಬೀಸು; ಗಾಳಿ: ವಾಯು; ಮಲೆ: ಎದುರಿಸು; ದೀಪ: ಹಣತೆ;

ಪದವಿಂಗಡಣೆ:
ಬಲು +ಪ್ರಧಾನರ+ ವೈರ+ ಹಿತವಹ
ಲಲನೆಯರ +ಮನದಳಲು+ ಹಗೆಯಲಿ
ಬಳಸುವಂತಸ್ಥತೆಯ+ಅನಾಮಿಕರೊಡನೆ+ ಕೆಳೆ+ ಗೋಷ್ಠಿ
ಬಲದೊಡನೆ+ ನಿರ್ಬಂಧ+ ಧರ್ಮದ
ನೆಲೆಯನರಿಯದ +ದಾನಿಗಳ+ ಸಿರಿ
ಸುಳಿವ+ ಗಾಳಿಗೆ+ ಮಲೆವ+ ದೀಪವು+ ಕೇಳು+ ಧೃತರಾಷ್ಟ್ರ

ಅಚ್ಚರಿ:
(೧) ಪ್ರಧಾನ, ಲಲನೆ, ಅನಾಮಿಕ, ಬಲ, ದಾನಿ, ಹಗೆ – ಈ ಆರರ ಜೊತೆ ಸರಿಯಾಗಿ ನಡೆದುಕೊಳ್ಳಬೇಕು ಎಂದು ವಿದುರ ನೀತಿ ತಿಳಿಸುತ್ತದೆ.