ಪದ್ಯ ೨೫: ಅಭಿಮನ್ಯುವು ಶಿಶುವೆಂದು ಹೇಳಲಾದೀತೆ?

ಹಸುಳೆತನದಲಿ ಹರನ ಮಗನಾ
ವಿಷಮ ದೈತ್ಯನ ಸೀಳಿ ಬಿಸುಡನೆ
ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ
ಶಿಶುವೆ ನೋಡಭಿಮನ್ಯು ಸುಭಟ
ಪ್ರಸರದಿನಿಬರನೊಂದು ಘಾಯದೊ
ಳುಸಿರ ತಗೆಬಗೆ ಮಾಡಿದನು ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಷಣ್ಮುಖನು ತಾರಕಾಸುರನನ್ನು ಸೀಳೀಹಾಕಲಿಲ್ಲವೇ? ಶಿಸುವಾದ ಪ್ರದ್ಯುಮ್ನನು ಶಂಬರಾಸುರನನ್ನು ಸಂಹರಿಸಲಿಲ್ಲವೇ? ಅಭಿಮನ್ಯುವು ಬಾಲಕನೇ? ತನಗೆದುರಾದ ವೀರರನ್ನು ಒಂದೇ ಹೊಡೆತಕ್ಕೆ ಉಸಿರನ್ನು ತೆಗೆಯುವವ ಹಾಗೆ ಹೊಡೆದನು.

ಅರ್ಥ:
ಹಸುಳೆ: ಚಿಕ್ಕ ಮಗು; ಹರ: ಶಿವ; ಮಗ: ಪುತ್ರ; ವಿಷಮ: ಕಷ್ಟಕರವಾದುದು; ದೈತ್ಯ: ರಾಕ್ಷಸ; ಸೀಳು: ಚೂರು, ತುಂಡು; ಬಿಸುಡು: ಹೊರಹಾಕು; ಶಿಶು: ಮಗು; ಮುರಿ: ಸೀಳು; ಅಸುರ: ರಾಕ್ಷಸ; ನೋಡು: ವೀಕ್ಷಿಸು; ಸುಭಟ: ಪರಾಕ್ರಮಿ; ಪ್ರಸರ: ಹರಡು; ಇನಿಬರು: ಇಷ್ಟುಜನ; ಘಾಯ: ಪೆಟ್ಟು, ನೋವು; ಉಸಿರು: ಜೀವ; ತಗೆ: ಹೊರಹಾಕು; ಕೇಳು: ಆಲಿಸು;

ಪದವಿಂಗಡಣೆ:
ಹಸುಳೆತನದಲಿ +ಹರನ +ಮಗನ್+ಆ
ವಿಷಮ +ದೈತ್ಯನ +ಸೀಳಿ +ಬಿಸುಡನೆ
ಶಿಶುವಲಾ +ಪ್ರದ್ಯುಮ್ನ +ಮುರಿಯನೆ +ಶಂಬರಾಸುರನ
ಶಿಶುವೆ ನೋಡ್+ಅಭಿಮನ್ಯು +ಸುಭಟ
ಪ್ರಸರದ್+ಇನಿಬರನೊಂದು +ಘಾಯದೊಳ್
ಉಸಿರ +ತಗೆಬಗೆ +ಮಾಡಿದನು +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಹೋಲಿಕೆಯನ್ನು ನೀಡುವ ಪರಿ – ಹಸುಳೆತನದಲಿ ಹರನ ಮಗನಾ ವಿಷಮ ದೈತ್ಯನ ಸೀಳಿ ಬಿಸುಡನೆ
ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ
(೨) ಹಸುಳೆ, ಶಿಶು – ಸಮಾನಾರ್ಥಕ ಪದ

ಪದ್ಯ ೩೨: ಉಡುಗೊರೆಗಳನ್ನು ಯಾರಿಗೆ ಕಳಿಸಿದ್ದರು?

ಕಳುಹಿದುಡುಗೊರೆ ಜೀಯ ನಿಮ್ಮಡಿ
ಗಳಿಗೆ ರಾಣೀವಾಸ ವರ್ಗಕೆ
ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ
ಕುಲಗುರುಗಳಕ್ರೂರನುದ್ಧವ
ಬಲುಭುಜನು ಕೃತವರ್ಮ ಸಾತ್ಯಕಿ
ಲಲಿತ ಸಾಂಬಕುಮಾರ ಕಂದರ್ಪಾನಿರುದ್ಧರಿಗೆ (ವಿರಾಟ ಪರ್ವ, ೧೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರು ಉಡುಗೊರೆಗಳನ್ನು ಕೃಷ್ಣನ ಎಲ್ಲಾ ಪರಿಜನರಿಗೆ ಕಳಿಸಿದ್ದರು. ಒಡೆಯಾ ಪಾಂಡವರು ನಿಮ್ಮ ಪಾದಗಳಿಗೆ, ರಾಣೀವಾಸದವರಿಗೆ, ಬಲರಾಮ, ವಸುದೇವ, ದೇವಕಿ, ಉಗ್ರಸೇನ, ಕುಲಗುರುಗಳಾದ ಅಕ್ರೂರ ಉದ್ಧವರಿಗೆ, ಕೃತವರ್ಮ, ಸಾತ್ಯಕಿ, ಸಾಂಬ, ಪ್ರದ್ಯುಮ್ನ, ಅನಿರುದ್ಧರಿಗೆ ಈ ಉಡುಗೊರೆಗಳನ್ನು ಕಳಿಸಿದ್ದಾರೆ ಎಂದು ದೂತರು ಹೇಳಿದರು.

ಅರ್ಥ:
ಕಳುಹು: ಕೊಡು; ಉಡುಗೊರೆ: ಕಾಣಿಕೆ, ಬಳುವಳಿ; ಜೀಯ: ಒಡೆಯ; ನಿಮ್ಮಡಿ: ನಿಮ್ಮ ಪಾದ; ರಾಣಿ: ಅರಸಿ; ವರ್ಗ: ಗುಂಪು; ಬಲ: ಬಲರಾಮ; ಕುಲ: ವಂಶ; ಗುರು: ಆಚಾರ್ಯ; ಬಲುಭುಜ: ಮಹಾಪರಾಕ್ರಮ; ಲಲಿತ: ಸುಂದರವಾದ; ಕುಮಾರ: ಮಗ; ಕಂದರ್ಪ: ಮನ್ಮಥ, ಕಾಮ;

ಪದವಿಂಗಡಣೆ:
ಕಳುಹಿದ್+ಉಡುಗೊರೆ +ಜೀಯ +ನಿಮ್ಮಡಿ
ಗಳಿಗೆ+ ರಾಣೀವಾಸ +ವರ್ಗಕೆ
ಬಲಗೆ +ವಸುದೇವರಿಗೆ+ ದೇವಕಿ+ಉಗ್ರಸೇನರಿಗೆ
ಕುಲಗುರುಗಳ್+ಅಕ್ರೂರನುದ್ಧವ
ಬಲುಭುಜನು +ಕೃತವರ್ಮ +ಸಾತ್ಯಕಿ
ಲಲಿತ +ಸಾಂಬ+ಕುಮಾರ+ ಕಂದರ್ಪ+ಅನಿರುದ್ಧರಿಗೆ

ಅಚ್ಚರಿ:
(೧) ಕೃಷ್ಣನ ಪರಿವಾರದ ಪರಿಚಯ – ಬಲರಾಮ, ವಸುದೇವ, ದೇವಕಿ, ಉಗ್ರಸೇನ, ಅಕ್ರೂರ ಉದ್ಧವ, ಕೃತವರ್ಮ, ಸಾತ್ಯಕಿ, ಸಾಂಬ, ಪ್ರದ್ಯುಮ್ನ, ಅನಿರುದ್ಧ

ಪದ್ಯ ೨೪: ಶ್ರೀಕೃಷ್ಣನ ಸುತ್ತಲೂ ಯಾರಿದ್ದರು?

ಕಲಿವಿಡೂರಥ ಸಾಂಬ ಸಾತ್ಯಕಿ
ದಳಪತಿ ಪ್ರದ್ಯುಮ್ನ ಯಾದವ
ಕುಲಸಚಿವನಕ್ರೂರನುದ್ಧವ ಚಾರು ಕೃತವರ್ಮ
ಬಲು ಪದಾತಿಯ ರಥ ನಿಕರದ
ಗ್ಗಳೆಯ ಗಜ ವಾಜಿಗಳ ಸಂದಣಿ
ಯೊಳಗೆ ನಿಂದರು ಕೃಷ್ಣರಾಯನ ರಥದ ಬಳಸಿನಲಿ (ಸಭಾ ಪರ್ವ, ೧೨ ಸಂಧಿ, ಪದ್ಯ)

ತಾತ್ಪರ್ಯ:
ಶೂರನಾದ ವಿಡೂರಥ, ಸಾಂಬ, ಸಾತ್ಯಕಿ, ಪ್ರದ್ಯುಮ್ನ, ಯಾದವಕುಲಕ್ಕೆ ಸಚಿವನಾದ ಅಕ್ರೂರ, ಉದ್ಧವ, ಕೃತವರ್ಮ ಇವರೆಲ್ಲರೂ ಅಪಾರವಾಗಿದ್ದ ಚತುರಂಗ ಸೈನ್ಯದೊಡನೆ ಶ್ರೀಕೃಷ್ಣನ ಸುತ್ತಲೂ ನಿಂತಿದ್ದರು.

ಅರ್ಥ:
ಕಲಿ: ಶೂರ; ದಳಪತಿ: ಸೇನಾಧಿಪತಿ; ಕುಲ: ವಂಶ; ಸಚಿವ: ಮಂತ್ರಿ; ಚಾರು: ಸುಂದರ; ಬಲು: ಬಹಳ; ಪದಾತಿ: ಸೈನ್ಯ; ರಥ: ಬಂಡಿ; ನಿಕರ: ಗುಂಪು, ಸಮೂಹ; ಅಗ್ಗಳೆ: ಶ್ರೇಷ್ಠ; ಗಜ: ಆನೆ; ವಾಜಿ: ಕುದುರೆ; ಸಂದಣಿ: ಗುಂಪು; ನಿಂದರು: ನಿಲ್ಲು; ಬಳಸು:ಸುತ್ತುವರಿ, ಸುತ್ತುಗಟ್ಟು;

ಪದವಿಂಗಡಣೆ:
ಕಲಿ+ವಿಡೂರಥ +ಸಾಂಬ +ಸಾತ್ಯಕಿ
ದಳಪತಿ +ಪ್ರದ್ಯುಮ್ನ +ಯಾದವ
ಕುಲ+ಸಚಿವನ್+ಅಕ್ರೂರನ್+ಉದ್ಧವ +ಚಾರು +ಕೃತವರ್ಮ
ಬಲು +ಪದಾತಿಯ +ರಥ +ನಿಕರದ್
ಅಗ್ಗಳೆಯ +ಗಜ+ ವಾಜಿಗಳ +ಸಂದಣಿ
ಯೊಳಗೆ +ನಿಂದರು +ಕೃಷ್ಣರಾಯನ +ರಥದ +ಬಳಸಿನಲಿ

ಅಚ್ಚರಿ:
(೧) ಕೃಷ್ಣನ ಸುತ್ತವಿದ್ದ ಪರಾಕ್ರಮಿಗಳು – ವಿಡೂರಥ, ಸಾಂಬ, ಸಾತ್ಯಕಿ, ಪ್ರದ್ಯುಮ್ನ, ಅಕ್ರೂರ, ಉದ್ಧವ, ಕೃತವರ್ಮ