ಪದ್ಯ ೨೫: ಕಷ್ಟದ ಸಮಯದಲ್ಲಿ ಯಾವುದು ನಮ್ಮನ್ನು ರಕ್ಷಿಸುತ್ತದೆ?

ಜಲಧಿಯಲಿ ಪಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ
ಸಿಲುಕಿದಡೆ ಬಿಡುಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ (ಗದಾ ಪರ್ವ, ೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರದಲ್ಲಿ, ಸರ್ಪದ ಬಾಯಲ್ಲಿ, ಶತ್ರು ಸೈನ್ಯದಿದಿರಿನಲ್ಲಿ, ಸಿಡಿಲು ಬಡಿತದಲ್ಲಿ, ಪರ್ವತ ಶಿಖರಾಲ್ಲಿ, ಕಾಡುಗಿಚ್ಚಿನಲ್ಲಿ ಸಿಕ್ಕಾಗ ನಾವು ಹಿಂದೆ ಮಾಡಿದ ಪುಣ್ಯದ ಫಲವು ಫಲಿಸಿ ನಮ್ಮನ್ನು ರಕ್ಷಿಸುತ್ತವೆ ಎಂಬುದು ನನ್ನ ಅನುಭವಕ್ಕೆ ಬಂದಿತು.

ಅರ್ಥ:
ಜಲಧಿ: ಸಾಗರ; ಫಣಿ: ಹಾವು; ವದನ: ಮುಖ; ರಿಪು: ವೈರಿ; ಬಲ: ಶಕ್ತಿ; ಮುಖ: ಆನನ; ಸಿಡಿಲು: ಅಶನಿ; ಹೊಯ್: ಹೊಡೆ; ಹಳುವ: ಕಾಡು; ಗಿರಿ: ಬೆಟ್ಟ; ಶಿಖರ: ತುದಿ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು; ಮಧ್ಯ: ನಡುವೆ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ಬಿಡುಸು: ಕಳಚು, ಸಡಿಲಿಸು; ಪ್ರತಿ: ಸಾಟಿ, ಸಮಾನ; ಫಲಿತ: ಫಲ, ಪ್ರಯೋಜನ; ಪೂರ್ವಾದತ್ತ: ಹಿಂದೆ ಪಡೆದ; ಪುಣ್ಯ: ಸನ್ನಡತೆ; ಆವಳಿ: ಸಾಲು, ಗುಂಪು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜಲಧಿಯಲಿ +ಪಣಿ+ವದನದಲಿ +ರಿಪು
ಬಲದ +ಮುಖದಲಿ+ ಸಿಡಿಲ+ ಹೊಯ್ಲಲಿ
ಹಳುವದಲಿ +ಗಿರಿಶಿಖರದಲಿ+ ದಾವಾಗ್ನಿ +ಮಧ್ಯದಲಿ
ಸಿಲುಕಿದಡೆ+ ಬಿಡುಸುವವಲೇ+ ಪ್ರತಿ
ಫಲಿತ+ ಪೂರ್ವಾದತ್ತ+ ಪುಣ್ಯಾ
ವಳಿಗಳೆಂಬುದು+ ತನ್ನೊಳಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಕಷ್ಟದಿಂದ ನಮ್ಮನ್ನು ರಕ್ಷಿಸುವುದು – ಬಿಡುಸುವವಲೇ ಪ್ರತಿಫಲಿತ ಪೂರ್ವಾದತ್ತ ಪುಣ್ಯಾವಳಿಗಳ್
(೨) ಸಂಸ್ಕೃತದ ಸುಭಾಷಿತವನ್ನು ಈ ಕವನ ಹೋಲುತ್ತದೆ
वने रणे शत्रुजलाग्निमध्ये महार्णवे पर्वतमस्तके वा |
सुप्तं प्रमत्ते विषमस्थितं वा रक्षन्ति पुण्यानि पुराकृतानि ||