ಪದ್ಯ ೩: ಪಾಂಡವ ಸೇನೆಯು ಹೇಗೆ ಹತವಾಯಿತು?

ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ (ಶಲ್ಯ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಈಚೆಕಡೆಯಲ್ಲಿ ಅಶ್ವತ್ಥಾಮ, ಸುಧರ್ಮ, ದುರ್ಯೋಧನ ಕೃತವರ್ಮ, ಕೃಪನೇ ಮೊದಲಾದವರು ಮುನ್ನುಗ್ಗಿ ಹೊಡೆಯಲು, ಅವರ ಬಾಣಗಳ ಏಟಿಗೆ ಬಿಸಿಗೆ ತುಪ್ಪದ ಸಾಗರವು ಕರಗಿದಂತೆ ಪಾಂಡವ ಸೇನೆಯು ನಾಶವಾಯಿತು.

ಅರ್ಥ:
ಕ್ಷಿತಿಪ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಸುತ: ಮಗ; ಆದಿ: ಮುಂತಾದ; ಮಸಗು: ಕೆರಳು; ತಿಕ್ಕು; ಘೃತ: ತುಪ್ಪ; ಸಮುದ್ರ: ಸಾಗರ; ಸೆರಗು: ಅಂಚು, ತುದಿ; ಸೋಂಕು: ಮುಟ್ಟು, ತಾಗು; ಹುತವಹ: ಅಗ್ನಿ; ಸೊಂಪು: ಸೊಗಸು, ಚೆಲುವು; ವೈರಿ: ಅರಿ, ಶತ್ರು; ಪ್ರತತಿ: ಗುಂಪು; ತರುಬು: ತಡೆ, ನಿಲ್ಲಿಸು; ತರಿ: ಕಡಿ, ಕತ್ತರಿಸು; ಸರಳ: ಬಾಣ; ಸಾರ: ಸತ್ವ;

ಪದವಿಂಗಡಣೆ:
ಕ್ಷಿತಿಪ +ಚಿತ್ತೈಸ್+ಈಚೆಯಲಿ +ಗುರು
ಸುತ +ಸುಶರ್ಮಕ +ಶಲ್ಯ+ ನಿನ್ನಯ
ಸುತನು +ಕೃತವರ್ಮನು +ಕೃಪಾಚಾರ್ಯ+ಆದಿಗಳು+ ಮಸಗಿ
ಘೃತ+ಸಮುದ್ರದ +ಸೆರಗ+ ಸೋಂಕಿದ
ಹುತವಹನ+ ಸೊಂಪಿನಲಿ +ವೈರಿ
ಪ್ರತತಿಯನು +ತರುಬಿದರು +ತರಿದರು+ ಸರಳ+ ಸಾರದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಘೃತಸಮುದ್ರದ ಸೆರಗ ಸೋಂಕಿದ ಹುತವಹನ ಸೊಂಪಿನಲಿ ವೈರಿ ಪ್ರತತಿಯನು ತರುಬಿದರು
(೨) ಸುತ – ೨, ೩ ಸಾಲಿನ ಮೊದಲ ಪದ

ಪದ್ಯ ೨೭: ಶಲ್ಯನು ಕೌರವನಿಗೆ ಏನು ಹೇಳಿದನು?

ಪತಿಕರಿಸಿದೈ ವೀರಸುಭಟ
ಪ್ರತತಿಮಧ್ಯದಲೆಮ್ಮನಹಿತ
ಚ್ಯುತಿಗೆ ಸಾಧನವೆಂದು ನಿಜಸೇನಾಧಿಪತ್ಯದಲಿ
ಕೃತಕವಿಲ್ಲದೆ ಕಾದುವೆನು ಯಮ
ಸುತನ್ಡನೆ ಜಯಸಿರಿಗೆ ನೀನೇ
ಪತಿಯೆನಿಸಿ ತೋರಿಸುವೆನೆಂದನು ಶಲ್ಯ ಕುರುಪತಿಗೆ (ಶಲ್ಯ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಂತುಷ್ಟನಾದ ಶಲ್ಯನು, ವೀರಭಟರ ನಡುವೆ ನನ್ನನ್ನು ಆಯ್ದು ಸೇನಾಧಿಪತ್ಯದ ಪಟ್ಟಕಟ್ಟಿ ಶತ್ರುಗಳನ್ನುರುಳಿಸಲು ನಾನೇ ಸಾಧನವೆಂದು ನಂಬಿ ಗೌರವಿಸಿದೆ. ಧರ್ಮಜನೊಡನೆ ಮರೆಮೋಸವಿಲ್ಲದಂತೆ ಯುದ್ಧಮಾದಿ ನೀನೇ ಜಯಲಕ್ಷ್ಮಿಯ ಒಡೆಯನೆನ್ನುವುದನ್ನು ಸಿದ್ಧಪಡಿಸುತ್ತೇನೆ ಎಂದು ಶಲ್ಯನು ಕೌರವನಿಗೆ ಹೇಳಿದನು.

ಅರ್ಥ:
ಪತಿಕರಿಸು: ದಯೆತೋರು; ವೀರ: ಶೂರ; ಸುಭಟ: ಪರಾಕ್ರಮಿ; ಪ್ರತತಿ: ಗುಂಪು; ಮಧ್ಯ: ನಡುವೆ; ಅಹಿತ: ವೈರಿ; ಚ್ಯುತಿ: ನಾಶ; ಸಾಧನ: ಸಿದ್ಧಿಯನ್ನು ಪಡೆಯುವ ಯತ್ನ; ಸೇನಾಧಿಪ: ಸೇನೆಯ ಮುಖ್ಯಸ್ಥ; ಕೃತಕ: ಕಪಟ; ಕಾದು: ಹೋರಾದು; ಸುತ: ಮಗ; ಜಯಸಿರಿ: ವಿಜಯಲಕ್ಷ್ಮಿ; ಪತಿ: ಒಡೆಯ; ತೋರಿಸು: ಪ್ರದರ್ಶಿಸು;

ಪದವಿಂಗಡಣೆ:
ಪತಿಕರಿಸಿದೈ+ ವೀರ+ಸುಭಟ
ಪ್ರತತಿ+ಮಧ್ಯದಲ್+ಎಮ್ಮನ್+ಅಹಿತ
ಚ್ಯುತಿಗೆ+ ಸಾಧನವೆಂದು +ನಿಜ+ಸೇನಾಧಿಪತ್ಯದಲಿ
ಕೃತಕವಿಲ್ಲದೆ +ಕಾದುವೆನು +ಯಮ
ಸುತನೊಡನೆ +ಜಯಸಿರಿಗೆ +ನೀನೇ
ಪತಿಯೆನಿಸಿ +ತೋರಿಸುವೆನೆಂದನು+ ಶಲ್ಯ +ಕುರುಪತಿಗೆ

ಅಚ್ಚರಿ:
(೧) ಶಲ್ಯನ ಭಾಷೆ – ಜಯಸಿರಿಗೆ ನೀನೇ ಪತಿಯೆನಿಸಿ ತೋರಿಸುವೆ
(೨) ಪತಿ, ಚ್ಯುತಿ, ಪ್ರತತಿ – ಪ್ರಾಸ ಪದಗಳು

ಪದ್ಯ ೪೩: ಅಭಿಮನ್ಯುವಿನ ಖಡ್ಗವು ಹೇಗೆ ಶೋಭಿಸಿತು?

ವೈರಿ ವೀರಪ್ರತತಿಗಮರೀ
ನಾರಿಯರಿಗೆ ವಿವಾಹವನು ವಿ
ಸ್ತಾರಿಸುವ ಸಮಯದೊಳಗಾಂತ ಸಿತಾಕ್ಷತಾವಳಿಯ
ತಾರಕಿಗಳೆಸೆದಭ್ರವೆನೆ ರಿಪು
ವಾರಣದ ಮಸ್ತಕದ ಮುತ್ತುಗ
ಳೋರಣಿಸಲೊಪ್ಪಿದುದು ಖಡ್ಗ ಸುರೇಂದ್ರಸುತಸುತನ (ದ್ರೋಣ ಪರ್ವ, ೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶತ್ರುವೀರರಿಗೂ ಅಪ್ಸರೆಯರಿಗೂ ನಡೆಯುವ ವಿವಾಹ ಸಮಯದಲ್ಲಿ ಎರಚುವ ಬಿಳಿಯ ಅಕ್ಷತೆಗಳು ನಕ್ಷತ್ರದಂತೆ ತೋರಿ, ನಕ್ಷತ್ರದಿಂದ ತುಂಬಿದ ಆಗಸವೋ ಎಂಬಂತೆ ಶತ್ರುಸೈನ್ಯದ ಆನೆಗಳ ತಲೆಯ ಮುತ್ತುಗಳ ಸುತ್ತಲೂ ಸಿಡಿಯುತ್ತಿರಲು ಅಭಿಮನ್ಯುವಿನ ಖಡ್ಗವು ಶೋಭಿಸಿತು.

ಅರ್ಥ:
ವೈರಿ: ಶತ್ರು; ವೀರ: ಶೂರ; ಪ್ರತತಿ: ಗುಂಪು, ಸಮೂಹ; ಅಮರೀನಾರಿ: ದೇವಲೋಕದ ಅಪ್ಸರೆ; ವಿವಾಹ: ಮದುವೆ; ವಿಸ್ತಾರ: ವೈಶಾಲ್ಯ; ಸಮಯ: ಗಳಿಗೆ; ಸಿತ: ಬಿಳಿ; ಅಕ್ಷತೆ: ನಕ್ಷತ್ರ; ಆವಳಿ: ಸಾಲು; ತಾರಕಿ: ನಕ್ಷತ್ರ; ಎಸೆ: ತೋರು; ಅಭ್ರ: ಆಗಸ; ರಿಪು: ವೈರಿ; ವಾರಣ: ಆನೆ; ಮಸ್ತಕ: ತಲೆ; ಮುತ್ತು: ಬೆಲೆಬಾಳುವ ರತ್ನ; ಓರಣೆ: ಸಾಲು; ಒಪ್ಪು: ಅಂಗೀಕರಿಸು; ಖಡ್ಗ: ಕತ್ತಿ; ಸುರೇಂದ್ರ: ಇಂದ್ರ; ಸುತ: ಮಗ;

ಪದವಿಂಗಡಣೆ:
ವೈರಿ +ವೀರ+ಪ್ರತತಿಗ್+ಅಮರೀ
ನಾರಿಯರಿಗೆ +ವಿವಾಹವನು +ವಿ
ಸ್ತಾರಿಸುವ +ಸಮಯದೊಳಗಾಂತ+ ಸಿತ+ಅಕ್ಷತಾವಳಿಯ
ತಾರಕಿಗಳ್+ಎಸೆದ್+ಅಭ್ರವೆನೆ +ರಿಪು
ವಾರಣದ +ಮಸ್ತಕದ +ಮುತ್ತುಗಳ್
ಓರಣಿಸಲ್+ಒಪ್ಪಿದುದು +ಖಡ್ಗ+ ಸುರೇಂದ್ರ+ಸುತ+ಸುತನ

ಅಚ್ಚರಿ:
(೧) ಅಭಿಮನ್ಯುವನ್ನು ಸುರೇಂದ್ರಸುತಸುತ ಎಂದು ಕರೆದಿರುವುದು
(೨) ಶತ್ರುವನ್ನು ಸಾಯಿಸಿದ ಎಂದು ಹೇಳಲು ಮದುವೆಯ ಶುಭ ಸಂದರ್ಭವನ್ನು ಕಲ್ಪಿಸುವ ಪರಿ – ವೈರಿ ವೀರಪ್ರತತಿಗಮರೀನಾರಿಯರಿಗೆ ವಿವಾಹವನು

ಪದ್ಯ ೧೫: ದುರ್ಯೋಧನನು ಯಾರನ್ನು ಸೇನಾಧಿಪತಿಯನ್ನಾಗಿ ಮಾಡಲು ನಿಶ್ಚಯಿಸಿದನು?

ಮತವಹುದು ತಪ್ಪಲ್ಲ ಗಂಗಾ
ಸುತನ ತಿಳುಹುವ ವೀರಪಟ್ಟವ
ನತುಳ ಬಲ ಭೀಷ್ಮಂಗೆ ಕಟ್ಟುವೆನೆನುತ ಕುರುರಾಯ
ಮತದ ನಿಶ್ಚಯದಿಂದ ಗುರು ಗುರು
ಸುತನ ಕಳುಹಿದ ನಿತ್ತಲಬುಜ
ಪ್ರತತಿಯುತ್ಸಹವಡೆಗೆ ಪಡುವಲ ಕಡಲೊಳಿನನಿಳಿದ (ಭೀಷ್ಮ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ದುರ್ಯೋಧನನು ದ್ರೋಣರ ಮಾತನ್ನು ಕೇಳಿ, ನಿಮ್ಮ ಅಭಿಪ್ರಾಯ ತಪ್ಪಲ್ಲ, ಭೀಷ್ಮನನ್ನು ಒಪ್ಪಿಸಿ ಸೇನಾಧಿಪತ್ಯವನ್ನು ಕಟ್ತುತ್ತೇನೆ, ಎಂದು ದುರ್ಯೋಧನನು ನಿರ್ಧರಿಸಿ ದ್ರೋಣ, ಅಶ್ವತ್ಥಾಮರನ್ನು ಕಳುಹಿಸಿದನು, ಇಷ್ಟರ ವೇಳೆಗೆ ಸೂರ್ಯನು ಪಶ್ಚಿಮ ಕಡಲಿನೊಳಗೆ ಸೇರಿದನು.

ಅರ್ಥ:
ಮತ: ವಿಚಾರ; ತಪ್ಪು: ಸರಿಯಿಲ್ಲದ್ದು; ಸುತ: ಮಗ; ತಿಳುಹು: ತಿಳಿಸು; ವೀರ: ಪರಾಕ್ರಮ; ಪಟ್ಟ: ಪದವಿ; ಅತುಳ: ಎಣಿಕೆ ಇಲ್ಲದ; ಬಲ: ಶಕ್ತಿ; ಕಟ್ಟು: ಬಂಧಿಸು, ಧರಿಸು; ರಾಯ: ರಾಜ; ನಿಶ್ಚಯ: ನಿರ್ಣಯ; ಗುರು: ಆಚಾರ್ಯ; ಸುತ: ಮಗ; ಕಳುಹು: ತೆರಳು; ಅಬುಜ: ಕಮಲ; ಪ್ರತತಿ: ಸಮೂಹ; ಉತ್ಸಹ: ಸಂಭ್ರಮ; ಅಡಗು: ಕಡಿಮೆಯಾಗು; ಪಡುವಲ: ಪಶ್ಚಿಮ; ಕಡಲು: ಸಾಗರ; ಇಳಿ: ಜಾರು; ಇನ: ಸೂರ್ಯ;

ಪದವಿಂಗಡಣೆ:
ಮತವಹುದು +ತಪ್ಪಲ್ಲ +ಗಂಗಾ
ಸುತನ +ತಿಳುಹುವ +ವೀರ+ಪಟ್ಟವನ್
ಅತುಳ +ಬಲ +ಭೀಷ್ಮಂಗೆ +ಕಟ್ಟುವೆನೆನುತ +ಕುರುರಾಯ
ಮತದ+ ನಿಶ್ಚಯದಿಂದ +ಗುರು +ಗುರು
ಸುತನ +ಕಳುಹಿದನ್+ಇತ್ತಲ್+ಅಬುಜ
ಪ್ರತತಿ+ಉತ್ಸಹವ್+ಅಡಗೆ+ ಪಡುವಲ +ಕಡಲೊಳ್+ಇನನ್+ಇಳಿದ

ಅಚ್ಚರಿ:
(೧) ಸೂರ್ಯ ಮುಳುಗಿದ ಎಂದು ಹೇಳಲು – ಅಬುಜ ಪ್ರತತಿಯುತ್ಸಹವಡೆಗೆ ಪಡುವಲ ಕಡಲೊಳಿನನಿಳಿದ

ಪದ್ಯ ೪೧: ಕರ್ಣನೇಕೆ ಬೆರಗಾದನು?

ಖತಿಯಲುಗಿದನು ದಿವ್ಯ ಬಾಣ
ಪ್ರತತಿಯನು ರಥಸೂತ ಹಯ ಸಂ
ತತಿ ಶರಾಸನ ಕೇತು ದಂಡಚ್ಛತ್ರ ಚಾಮರವ
ಹುತವಹನೊಳೊಟ್ಟಿದನು ಸಮರ
ವ್ಯತಿಕರದೊಳಾಗ್ನೇಯ ಶರ ಚಿ
ಮ್ಮಿತು ಛಡಾಳಿಸಿ ಕೆಂಡಗೆದರಲು ಕರ್ಣ ಬೆರಗಾದ (ಅರಣ್ಯ ಪರ್ವ, ೨೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಚಿತ್ರಸೇನನು ದಿವ್ಯ ಶರಗಳಿಂದ ಕರ್ಣನ ರಥ, ಕುದುರೆಗಳು, ಬಿಲ್ಲು, ಧ್ವಜಸ್ಥಂಭ, ಛತ್ರ, ಚಾಮರಗಳನ್ನು ಸುಟ್ಟನು. ಅವನ ಆಗ್ನೇಯಾಸ್ತ್ರವು ಉರಿಯನ್ನು ಚಿಮ್ಮಿಸಿ ಎರಗಲು ಕರ್ಣನು ಬೆರಗಾದನು.

ಅರ್ಥ:
ಖತಿ: ಕೋಪ; ಅಲುಗು: ಅದುರು; ದಿವ್ಯ: ಶ್ರೇಷ್ಠ; ಬಾಣ: ಸರಳು; ಪ್ರತತಿ: ಗುಂಪು, ಸಮೂಹ; ರಥ: ಬಂಡಿ; ಸೂತ: ರಥವನ್ನು ನಡೆಸುವವನು, ಸಾರ; ಹಯ: ಕುದುರೆ; ಸಂತತಿ: ಗುಂಪು, ಸಮೂಹ; ಶರಾಸನ: ಬಾಣವು ನೆಲೆಸುವ ಸ್ಥಳ, ಬಿಲ್ಲು; ಕೇತು: ಬಾವುಟ; ದಂಡ: ಕೋಲು; ಛತ್ರ: ಕೊಡೆ; ಚಾಮರ: ಕುಂಚ; ಹುತವಹ: ಅಗ್ನಿ; ಸಮರ: ಯುದ್ಧ; ವ್ಯತಿಕರ: ಪರಸ್ಪರ ಕೊಡುಕೊಳ್ಳುವುದು; ಆಗ್ನೇಯ: ಅಗ್ನಿ; ಶರ: ಬಾಣ; ಚಿಮ್ಮು: ಹೊರಹಾಕು; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಕೆಂಡ: ಉರಿಯುತ್ತಿರುವ ಇದ್ದಿಲು; ಕೆದರು: ಹರಡು; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಖತಿಯಲ್+ಉಗಿದನು +ದಿವ್ಯ+ ಬಾಣ
ಪ್ರತತಿಯನು +ರಥಸೂತ +ಹಯ +ಸಂ
ತತಿ +ಶರಾಸನ +ಕೇತು +ದಂಡ+ಚ್ಛತ್ರ +ಚಾಮರವ
ಹುತವಹನೊಳ್+ಒಟ್ಟಿದನು +ಸಮರ
ವ್ಯತಿಕರದೊಳ್+ಆಗ್ನೇಯ +ಶರ +ಚಿ
ಮ್ಮಿತು +ಛಡಾಳಿಸಿ+ ಕೆಂಡ+ಕೆದರಲು +ಕರ್ಣ +ಬೆರಗಾದ

ಅಚ್ಚರಿ:
(೧) ಖತಿ, ಸಂತತಿ, ಪ್ರತತಿ – ಪ್ರಾಸ ಪದಗಳು

ಪದ್ಯ ೧೫: ಬ್ರಾಹ್ಮಣರನ್ನು ಯಾರು ಕೊಂದರು?

ವಿತತ ಸತ್ಯದ ವಿಷಯಭೇದ
ಸ್ಥಿತಿಯನರಿಯದ ಮುನಿಪ ವನಚರ
ತತಿಗೆ ಭೂಸುರಜನದ ಮಾರ್ಗವನರುಹಿದನು ಬಳಿಕ
ಅತಿ ದುರಾತ್ಮಕರವದಿರನಿಬರು
ಕ್ಷಿತಿಸುರರ ಕೊಂದಮಳ ಭೂಪ
ಪ್ರತತಿಯನು ಕೊಂಡೊಯ್ದರೆಲೆ ಕೌಂತೇಯ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಆ ಕೌಶಿಕ ಮುನಿಯು ಸತ್ಯದ ಸೂಕ್ಷ್ಮವನ್ನರಿಯದೆ ಮುನಿಯು ಬ್ರಾಹ್ಮಣರು ಹೋದ ಮಾರ್ಗವನ್ನು ತೋರಿಸಿದನು. ಆ ದುರಾತ್ಮರು ಬ್ರಾಹ್ಮಣರನ್ನು ಕೊಂದು ಅವರ ಆಭರಣಗಳನ್ನು ತೆಗೆದುಕೊಂಡು ಹೋದರು.

ಅರ್ಥ:
ವಿತತ: ಹರಡಿಕೊಂಡಿರುವ, ವಿಸ್ತಾರವಾದ; ಸತ್ಯ: ದಿಟ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ; ಭೇದ: ವ್ಯತ್ಯಾಸ; ಸ್ಥಿತಿ: ರೀತಿ; ಅರಿ: ತಿಳಿ; ಮುನಿ: ಋಷಿ; ವನಚರ: ಬೇಟೆಗಾರ; ತತಿ: ಗುಂಪು; ಭೂಸುರ: ಬ್ರಾಹ್ಮಣ; ಮಾರ್ಗ: ದಾರಿ; ಅರುಹು: ತಿಳಿಸು, ಹೇಳು; ಬಳಿಕ: ನಂತರ; ಅತಿ: ಬಹಳ; ದುರಾತ್ಮ: ದುಷ್ಟ; ಅನಿಬರು: ಅಷ್ಟು ಜನ; ಕ್ಷಿತಿಸುರ: ಬ್ರಾಹ್ಮಣ; ಕೊಂದು: ಸಾಯಿಸು; ಅಮಳ: ಪರಿಶುದ್ಧ; ಭೂಪ: ರಾಜ; ಪ್ರತತಿ: ಗುಂಪು; ಕೊಂಡು: ತೆಗೆದು; ಒಯ್ದು: ಹೋಗು; ಕೇಳು: ಆಲಿಸು; ಕೌಂತೇಯ: ಅರ್ಜುನ;

ಪದವಿಂಗಡಣೆ:
ವಿತತ +ಸತ್ಯದ +ವಿಷಯ+ಭೇದ
ಸ್ಥಿತಿಯನ್+ಅರಿಯದ +ಮುನಿಪ +ವನಚರ
ತತಿಗೆ+ ಭೂಸುರ+ಜನದ +ಮಾರ್ಗವನ್+ಅರುಹಿದನು +ಬಳಿಕ
ಅತಿ +ದುರಾತ್ಮಕರವದಿರ್+ಅನಿಬರು
ಕ್ಷಿತಿಸುರರ+ ಕೊಂದ್+ಅಮಳ +ಭೂಪ
ಪ್ರತತಿಯನು +ಕೊಂಡೊಯ್ದರ್+ಎಲೆ +ಕೌಂತೇಯ +ಕೇಳೆಂದ

ಅಚ್ಚರಿ:
(೧) ತತಿ, ಅತಿ, ಕ್ಷಿತಿ, ಪ್ರತತಿ, ಸ್ಥಿತಿ – ಪ್ರಾಸ ಪದಗಳು
(೨) ಭೂಸುರ, ಕ್ಷಿತಿಸುರ – ಸಮನಾರ್ಥಕ ಪದ
(೩) ಕ ಕಾರದ ತ್ರಿವಳಿ ಪದ – ಕೊಂಡೊಯ್ದರೆಲೆ ಕೌಂತೇಯ ಕೇಳೆಂದ

ಪದ್ಯ ೯: ಶಿವನ ಪಾದಕ್ಕೆ ಯಾರು ಏನನ್ನು ಅರ್ಪಿಸಿದರು?

ಶ್ರುತವೆ ನಿಮಗಿದು ಮಾವ ಬಹಳಾ
ದ್ಭುತದ ರಥ ನಿರ್ಮಾಣ ದೇವ
ಪ್ರತತಿ ನೆರೆದುದು ನೆರೆ ಚತುರ್ದಶಭುವನವಾಸಿಗಳ
ಶತಮಖಬ್ರಹ್ಮಾದಿಗಳು ತ
ಮ್ಮತಿಶಯದ ತೇಜೋರ್ಧವನು ಪಶು
ಪತಿಯ ಪದಕೋಲೈಸಿದರು ಮಾದ್ರೇಶ ಕೇಳೆಂದ (ಕರ್ಣ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ಬಹಳ ಅದ್ಭುತವಾದ ರಥದ ನಿರ್ಮಾಣವನ್ನು ನೀವು ಕೇಳಿದಿರಿ. ಮಾವ ತದನಂತರ ಎಲ್ಲಾ ದೇವತೆಗಳು, ಹದಿನಾಲ್ಕು ಲೋಕದ ಸಮಸ್ತರೊಡಗೂಡಿ ಅಲ್ಲಿ ಸೇರಿದರು. ಇಂದ್ರ ಬ್ರಹ್ಮಾದಿಗಳು ತಮ್ಮ ತೇಜಸ್ಸಿನ ಅರ್ಧವನ್ನು ಶಿವನ ಪಾದಗಳಿಗೆ ಅರ್ಪಿಸಿದರು.

ಅರ್ಥ:
ಶ್ರುತ: ಪ್ರಸಿದ್ಧವಾದ, ಕೇಳಿದ; ಮಾವ: ತಾಯಿಯ ತಮ್ಮ; ಬಹಳ: ತುಂಬ; ಅದ್ಭುತ: ಆಶ್ಚರ್ಯ; ರಥ: ಬಂಡಿ; ನಿರ್ಮಾಣ: ಕಟ್ಟುವುದು, ರಚನೆ; ದೇವ: ಸುರರ; ಪ್ರತತಿ: ಗುಂಪು, ಸಮೂಹ; ನೆರೆ: ಸೇರು; ನೆರೆ: ಗುಂಪು; ಚತುರ್ದಶ: ಹದಿನಾಲ್ಕು; ಭುವನ: ಲೋಕ, ಜಗತ್ತು;
ವಾಸಿ: ವಾಸಿಸುವ, ಜೀವಿಸುವ; ಶತ: ನೂರು; ಮಖ: ಯಜ್ಞ; ಶತಮಖ: ಇಂದ್ರ; ಆದಿ: ಮುಂತಾದ; ಅತಿಶಯ: ವಿಶೇಷವಾದ; ತೇಜಸ್ಸು: ಕಾಂತಿ, ಪ್ರಕಾಶ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಪಶುಪತಿ: ಶಂಕರ; ಪದ: ಚರಣ; ಓಲೈಸು: ಒಪ್ಪಿಸು, ಉಪಚರಿಸು; ಮಾದ್ರೇಶ: ಶಲ್ಯ; ಕೇಳು: ಆಲಿಸು;

ಪದವಿಂಗಡಣೆ:
ಶ್ರುತವೆ +ನಿಮಗಿದು +ಮಾವ +ಬಹಳ
ಅದ್ಭುತದ +ರಥ +ನಿರ್ಮಾಣ +ದೇವ
ಪ್ರತತಿ +ನೆರೆದುದು +ನೆರೆ +ಚತುರ್ದಶ+ಭುವನ+ವಾಸಿಗಳ
ಶತಮಖ+ಬ್ರಹ್ಮಾದಿಗಳು +ತಮ್ಮ್
ಅತಿಶಯದ +ತೇಜೋರ್ಧವನು+ ಪಶು
ಪತಿಯ +ಪದಕ್+ಓಲೈಸಿದರು +ಮಾದ್ರೇಶ +ಕೇಳೆಂದ

ಅಚ್ಚರಿ:
(೧) ಶ್ರುತ, ಕೇಳು – ಪದ್ಯದ ಮೊದಲ ಮತ್ತು ಕೊನೆ ಪದ
(೨) ಮಾದ್ರೇಶ, ಮಾವ – ಶಲ್ಯನನ್ನು ಕರೆದಿರುವ ಬಗೆ
(೩) ನೆರೆದುದು, ನೆರೆ – ನೆರೆ ಪದದ ಬಳಕೆ
(೪) ಇಂದ್ರನನ್ನು ಶತಮಖ ನೆಂದು ಕರೆದಿರುವುದು

ಪದ್ಯ ೫: ದುರ್ಯೋಧನನು ಹೇಗೆ ಮಾತನ್ನು ಪ್ರಾರಂಭಿಸಿದನು?

ಬಂದುದಿರುಳೋಲಗಕೆ ರಾಯನ
ಮಂದಿ ದಳಪತಿ ಶಕುನಿ ಕೃಪ ಗುರು
ನಂದನಾದಿ ಪ್ರತತಿ ಸಚಿವ ಪಸಾಯಿತರು ಸಹಿತ
ಇಂದಿನಾಹವದೊಳಗೆ ಕುಂತೀ
ನಂದನರ ಬೊಬ್ಬಾಟ ಬಲುಹಾ
ಯ್ತೆಂದು ಮೆಲ್ಲನೆ ಮಾತ ತೆಗೆದನು ಕೌರವರ ರಾಯ (ಕರ್ಣ ಪರ್ವ, ೫ ಸಂಧಿ, ೫ ಪದ್ಯ)

ತಾತ್ಪರ್ಯ:
ಎಲ್ಲರೂ ಆ ದಿನದ ಯುದ್ಧವನ್ನು ಮುಗಿಸಿ ರಾತ್ರಿಯ ಹೊತ್ತು ಎಲ್ಲರು ಓಲಗದಲ್ಲಿ ಸೇರಿದರು, ಸೇನಾಧಿಪತಿ ಕರ್ಣ, ಶಕುನಿ, ಕೃಪಾಚಾರ್ಯರು, ಅಶ್ವತ್ಥಾಮ, ಮಂತ್ರಿಗಳು, ಸಾಮಂತರಾಜರು, ದುರ್ಯೋಧನಾದಿಯಾಗಿ ಸೇರಿದರು. ದುರ್ಯೋಧನನು ಮಾತನ್ನು ಮೆಲ್ಲನೆ ಪ್ರಾರಂಭಿಸುತ್ತಾ, ಈ ದಿನದ ಯುದ್ಧದಲ್ಲಿ ಪಾಂಡವರ ಆರ್ಭಟ ಹೆಚ್ಚಾಯಿತು ಎಂದು ಪ್ರಾರಂಭದ ನುಡಿಗಳನ್ನು ತೆಗೆದನು.

ಅರ್ಥ:
ಬಂದು: ಆಗಮಿಸು; ಇರುಳು: ರಾತ್ರಿ; ಓಲಗ: ದರ್ಬಾರು; ರಾಯ: ರಾಜ; ಮಂದಿ: ಜನ; ದಳಪತಿ: ಸೇನಾಧಿಪತಿ; ನಂದನ: ಮಗ; ಪ್ರತತಿ: ಸಮೂಹ; ಸಚಿವ: ಮಂತ್ರಿ; ಪಸಾಯಿತ: ಸಾಮಂತರಾಜ; ಸಹಿತ: ಜೊತೆ; ಇಂದಿನ: ಇವತ್ತು; ಆಹವ: ಯುದ್ಧ; ಬೊಬ್ಬಾಟ: ಜೋರು, ಆರ್ಭಟ; ಬಲುಹು: ಬಹಳ, ತುಂಬ; ಮೆಲ್ಲನೆ: ನಿಧಾನ; ಮಾತ: ನುಡಿ; ತೆಗೆ: ಪ್ರಾರಂಭಿಸು;

ಪದವಿಂಗಡಣೆ:
ಬಂದುದ್+ಇರುಳ್+ಓಲಗಕೆ +ರಾಯನ
ಮಂದಿ +ದಳಪತಿ+ ಶಕುನಿ+ ಕೃಪ +ಗುರು
ನಂದನಾದಿ +ಪ್ರತತಿ +ಸಚಿವ +ಪಸಾಯಿತರು +ಸಹಿತ
ಇಂದಿನ್+ಆಹವದೊಳಗೆ+ ಕುಂತೀ
ನಂದನರ +ಬೊಬ್ಬಾಟ +ಬಲುಹಾ
ಯ್ತೆಂದು +ಮೆಲ್ಲನೆ +ಮಾತ +ತೆಗೆದನು +ಕೌರವರ+ ರಾಯ

ಅಚ್ಚರಿ:
(೧) ರಾಯ – ೧, ೬ ಸಾಲಿನ ಕೊನೆ ಪದ
(೨) ಜೋಡಿ ಪದಗಳು – ಬೊಬ್ಬಾಟ ಬಲುಹಾಯ್ತೆಂದು; ಮೆಲ್ಲನೆ ಮಾತ

ಪದ್ಯ ೯೦: ಕುಂತಿಗೇಕೆ ವೈಧವ್ಯವಿಲ್ಲ?

ಪತಿ ಮುನಿಯ ಶಾಪದಲಿರಲು ತ
ತ್ಪತಿಯ ಸಮ್ಮತದಿಂದ ದೇವ
ಪ್ರತತಿಯಿಂ ಸುತರಾಯ್ತು ಕುಂತಿಗದಿಲ್ಲ ವೈಧವ್ಯ
ಗತಿಗೆ ಬಾರದು ಪಾರ್ಥನತಿರಥ
ಸುತರೊಳಗ್ಗಳ ಭೀಷ್ಮ ಕುಂತೀ
ಸತಿಗೆ ಸಲುವುದು ನೋಂಪಿ ನೋನಲಿಯೆಂದು ಮುನಿ ನುಡಿದ (ಆದಿ ಪರ್ವ, ೨೧ ಸಂಧಿ ೯೦ ಪದ್ಯ)

ತಾತ್ಪರ್ಯ:
ನಾರದರು ಭೀಷ್ಮನ ಮಾತಿಗೆ ಉತ್ತರಕೊಡುತ್ತಾ, ಹಿಂದೆ ಪಾಂಡುವು ಮುನಿಯ ಶಾಪಕ್ಕೆ ತುತ್ತಾಗಿ ಅಸುಗೈದ. ಪಾಂಡುವಿನ ಸಮ್ಮತಿಯಿಂದ ಕುಂತಿಯು ದೇವತೆಗಳಿಂದ ಪುತ್ರರನ್ನು ಪಡೆದಳು, ಆದುದರಿಂದ ಕುಂತಿಗೆ ವೈದವ್ಯವಿಲ್ಲ. ಅರ್ಜುನನು ಅತಿರಥರಲ್ಲಿ ಶ್ರೇಷ್ಠ. ಆದುದರಿಂದ ಕುಂತಿಯು ವ್ರತವನ್ನಾಚರಿಸಬಹುದು ಎಂದು ನಾರದರು ಹೇಳಿದರು.

ಅರ್ಥ:
ಪತಿ: ಯಜಮಾನ, ಗಂಡ; ಮುನಿ: ಋಷಿ; ಶಾಪ: ನಿಷ್ಠುರದ ನುಡಿ; ಸಮ್ಮತ: ಒಪ್ಪಿಗೆ; ದೇವ: ಸುರರು; ಪ್ರತತಿ: ಗುಂಪು; ಸುತ: ಮಕ್ಕಳು; ವೈದವ್ಯ: ಹೆಂಡತಿಗೆ ಗಂಡನಿಲ್ಲದಿರುವ ಸ್ಥಿತಿ; ಗತಿ: ಇರುವ ಸ್ಥಿತಿ; ಅತಿರಥ: ಪರಾಕ್ರಮಿ; ಅಗ್ಗ:ಶ್ರೇಷ್ಠ; ಸತಿ: ಸ್ತ್ರೀ; ಸಲುವುದು: ಸೇರುವುದು; ನೋಂಪು: ವ್ರತ; ನೋನು: ವ್ರತಮಾಡು; ನುಡಿ: ಮಾತಾಡು;

ಪದವಿಂಗಡಣೆ:
ಪತಿ +ಮುನಿಯ +ಶಾಪದಲ್+ಇರಲು +ತತ್
ಪತಿಯ +ಸಮ್ಮತದಿಂದ +ದೇವ
ಪ್ರತತಿಯಿಂ +ಸುತರಾಯ್ತು +ಕುಂತಿಗದಿಲ್ಲ+ ವೈಧವ್ಯ
ಗತಿಗೆ+ ಬಾರದು+ ಪಾರ್ಥನ್+ಅತಿರಥ
ಸುತರೊಳ್+ಅಗ್ಗಳ+ ಭೀಷ್ಮ +ಕುಂತೀ
ಸತಿಗೆ +ಸಲುವುದು +ನೋಂಪಿ +ನೋನಲಿ+ಯೆಂದು +ಮುನಿ +ನುಡಿದ

ಅಚ್ಚರಿ:
(೧) ಪತಿ, ತತ್ಪತಿ, ಪ್ರತತಿ – ಪ್ರಾಸ ಪದಗಳು – ೧,೨,೩ ಸಾಲಿನ ಮೊದಲ ಪದ
(೨) ಸತಿಗೆ ಸಲುವುದು, ನೋಂಪಿ ನೋನಲಿಯೆಂದು – ಸ, ನ ಕಾರದ ಜೋಡಿ ಪದಗಳು

ಪದ್ಯ ೫೧: ಶಿವನು ನಾರಾಯಣಿಗೆ ಹೇಗೆ ಇದು ವಿಧಿ ಸಮ್ಮತ ಎಂದು ವಿವರಿಸಿದನು?

ಶ್ರುತಿಗಳೆಂಬುದುಯೆಮ್ಮ ನುಡಿ ಸಂ
ಸೃತಿಗಳೆಮ್ಮಯ ಚೇಷ್ಟೆ ಧರ್ಮದ
ಗತಿ ವಿಚಾರಿಸಲೆಮ್ಮ ನೇಮವು ವಿಹಿತ ವಿಧಿಯೆಂದು
ಕ್ರತುಗಳೀ ಮನ್ವಾದಿಗಳು ಸುರ
ತತಿಗಳಬುಜಭವಾದಿ ದೇವ
ಪ್ರತತಿಯೆನ್ನಾಜ್ಞೆಯೊಳೆನುತಲಾ ಸತಿಗೆ ಶಿವ ನುಡಿದ (ಆದಿ ಪರ್ವ, ೧೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಭಯಭೀತಳಾದ ನಾರಾಯಣಿಗೆ ಶಿವನು ಅಭಯವನ್ನು ನೀಡುತ್ತಾ, ನನ್ನ ವಾಕ್ಯಗಳೆ ವೇದಗಳು, ಸಂಸಾರ ಚಕ್ರವು ನನ್ನ ಲೀಲೆ, ನಾನು ಸರಿಯಾದುದೆಂದು ವಿಧಿಸಿದುದೇ ಧರ್ಮದ ಆಚರಣೆ, ಯಜ್ಞಗಳು, ಮನುಗಳು, ದೇವತೆಗಳು, ಬ್ರಹ್ಮಾದಿಯಾಗಿ ಸಕಲ ದೇವವೃಂದವು ನನ್ನ ಆಜ್ಞೆಯೇ ಮೂಲ ಎಂದು ಶಿವನು ನಾರಾಯಣಿಗೆ ತಿಳಿಸಿದನು.

ಅರ್ಥ:
ಶ್ರುತಿ: ವೇದ; ನುಡಿ: ಮಾತು; ಸಂಸೃತಿ:ಸಂಸಾರ; ಚೇಷ್ಟೆ: ಲೀಲೆ; ಧರ್ಮ: ಧಾರಣವಾದ, ಒಳ್ಲೆಯ ನಡೆ; ಗತಿ: ವೇಗ; ವಿಚಾರ: ವಿಮರ್ಶೆ; ನೇಮ: ನಿಯಮ; ವಿಹಿತ: ಔಚಿತ್ಯಪೂರ್ಣ;ವಿಧಿ: ಆದೇಶ, ಆಜ್ಞೆ; ಕ್ರತು:ಯಾಗ, ಯಜ್ಞ; ಮನು: ಮಂತ್ರ; ಮನುಷ್ಯಕುಲದ ಮೂಲಪುರುಷ; ಸುರ: ದೇವತೆಗಳು; ತತಿ: ಗುಂಪು; ಅಬುಜಭವ: ಬ್ರಹ್ಮ; ಅಬುಜ: ಕಮಲ;ಆದಿ: ಮುಂತಾದ; ದೇವ: ಸುರರು; ಪ್ರತತಿ: ಗುಂಪು; ಆಜ್ಞೆ: ಆದೇಶ; ಸತಿ: ಗರತಿ, ಹೆಣ್ಣು;

ಪದವಿಂಗಡಣೆ:
ಶ್ರುತಿಗಳ್+ಎಂಬುದು+ಯೆಮ್ಮ +ನುಡಿ+ ಸಂ
ಸೃತಿಗಳ್+ಎಮ್ಮಯ+ ಚೇಷ್ಟೆ +ಧರ್ಮದ
ಗತಿ+ ವಿಚಾರಿಸಲ್+ಎಮ್ಮ +ನೇಮವು +ವಿಹಿತ+ ವಿಧಿಯೆಂದು
ಕ್ರತುಗಳ್+ಈ+ ಮನ್ವಾದಿಗಳು+ ಸುರ
ತತಿಗಳ್+ಅಬುಜಭವ+ಆದಿ+ ದೇವ
ಪ್ರತತಿ+ಯೆನ್+ಆಜ್ಞೆಯೊಳ್+ಎನುತಲಾ +ಸತಿಗೆ +ಶಿವ +ನುಡಿದ

ಅಚ್ಚರಿ:
(೧) ತತಿ, ಪ್ರತತಿ – ಸಮನಾರ್ಥಕ ಪದ (ಗುಂಪು), ೫, ೬ ಸಾಲಿನ ಮೊದಲ ಪದ
(೨) ಎಮ್ಮ – ಮೊದಲ ೩ ಸಾಲಿನಲ್ಲು ಬರುವ ಪದ
(೩) ಬ್ರಹ್ಮನನ್ನು ಅಬುಜಭವ ಎಂದು ವರ್ಣಿಸಿರುವುದು
(೪) ಸುರ, ದೇವ – ಸಮನಾರ್ಥಕ ಪದ, ೪,೫ ಸಾಲಿನ ಕೊನೆಯ ಪದಗಳು