ಪದ್ಯ ೫೪: ಕಾಮನ ತಾಪವು ಕೀಚಕನನ್ನು ಹೇಗೆ ಆವರಿಸಿತ್ತು?

ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳುಕುಗಳಮಳಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯೊಲಾದುದು ಬಲಿದ ಚಂದ್ರಿಕೆ
ಬೆರಸಿ ಕರಗಿದ ತವರವಾಯಿತು ಕೀಚಕನ ಮನಕೆ (ವಿರಾಟ ಪರ್ವ, ೨ ಸಂಧಿ, ೫೪ ಪದ್ಯ)

ತಾತ್ಪರ್ಯ:
ತಣ್ಣಗಿರಲೆಂದು ಹಾಕಿಕೊಂಡು ವೀಳೆಯದ ಕರ್ಪೂರದ ಹಳುಕುಗಳು ಉರಿಯನ್ನೇ ತಂದವು. ಸುಗಂಧಪೂರಿತವಾದ ಲೇಪನವನ್ನು ಮೈಗೆ ಹಚ್ಚಿದರೆ ಅದು ಸುಟ್ಟು ಕರುಕಲಾಯಿತು. ನೀರಿನ ಪೊಟ್ಟಣವನ್ನು ಕಟ್ಟಿ ಮೈ ಮೇಲೆ ಆಡಿಸಿದರೆ ಉರಿಯಾಯಿತು. ಬಲಿತ ಬೆಳುದಿಂಗಳು ಕರಗಿದ ತವರದಂತೆ ಮೈಸುಟ್ಟಿತು.

ಅರ್ಥ:
ಉರಿ: ತಾಪ; ಒಡಲು: ದೇಹ; ವೀಳೆ: ತಾಂಬೂಲ; ಕರ್ಪುರ: ಸುಗಂಧ ದ್ರವ್ಯ; ಹಳು: ತಗ್ಗಿದುದು; ಅಮಳ: ನಿರ್ಮಲ; ಗಂಧ: ಸುಗಂಧ; ಸರಸ: ಚೆಲ್ಲಾಟ, ವಿನೋದ; ಕರ್ದಮ: ಸುಗಂಧವನ್ನು ಬೆರೆಸಿದ ನೀರು; ಪೂಸು: ಬಳಿಯುವಿಕೆ, ಲೇಪನ; ಅಂಗ: ದೇಹ; ಹೊರಳು: ತಿರುವು, ಬಾಗು; ನೀರು: ಜಲ; ಪೊಟ್ಟಣ: ದೊನ್ನೆ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಬಲಿದ: ಹೆಚ್ಚಾದ; ಚಂದ್ರಿಕೆ: ಬೆಳದಿಂಗಳು; ಬೆರಸು: ಜೊತೆಗೂಡು; ಕರಗು: ಕಡಿಮೆಯಾಗು; ತವರ: ಒಂದು ಬಗೆಯ ಲೋಹ; ಮನ: ಮನಸ್ಸು;

ಪದವಿಂಗಡಣೆ:
ಉರಿದುದ್+ಒಡಲೊಳು +ವೀಳೆಯದ +ಕ
ರ್ಪುರದ +ಹಳುಕುಗಳ್+ಅಮಳ+ಗಂಧದ
ಸರಸ+ ಕರ್ದಮ +ಕರಿಕುವರಿದುದು+ ಪೂಸಿದಂಗದಲಿ
ಹೊರಳೆ +ನೀರಿನ +ಪೊಟ್ಟಣವು +ದ
ಳ್ಳುರಿಯೊಲಾದುದು +ಬಲಿದ +ಚಂದ್ರಿಕೆ
ಬೆರಸಿ+ ಕರಗಿದ+ ತವರವಾಯಿತು +ಕೀಚಕನ+ ಮನಕೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹೊರಳೆ ನೀರಿನ ಪೊಟ್ಟಣವು ದಳ್ಳುರಿಯೊಲಾದುದು, ಬಲಿದ ಚಂದ್ರಿಕೆ ಬೆರಸಿ ಕರಗಿದ ತವರವಾಯಿತು

ಪದ್ಯ ೯: ಧರ್ಮಜನು ನಕುಲನಿಗೆ ಏನು ಹೇಳಿದ?

ದೂರವಾದುದು ನಿಳಯವೀ ಕಾಂ
ತಾರ ನಿರ್ಜಲವೈದಲಂಘ್ರಿಗೆ
ಭಾರ ಪಥವಿನ್ನೇನು ಹದನೆಂದರಸನಳವಳಿದು
ನೀರ ತಾರೈ ಹೋಗು ನಕುಲ ಸ
ರೋರುಹದ ಪತ್ರದಲಿ ಪೊಟ್ಟಣ
ವಾರಿಯನು ಕಟ್ಟೆಂದು ಕುಂತೀಸೂನು ನೇಮಿಸಿದ (ಅರಣ್ಯ ಪರ್ವ, ೨೬ ಸಂಧಿ, ೯ ಪದ್ಯ)

ತಾತ್ಪರ್ಯ:
ಧರ್ಮಜನು, ಮನೆ ತುಂಬ ದೂರದಲ್ಲಿದೆ, ಇದು ನಿರ್ಜಲವಾದ ಕಾಡು, ಮುಂದೆ ಹೋಗಿ ನೀರನ್ನು ಹುಡುಕೋಣವೆಂದರೆ ಆಯಾಸವಾಗಿರುವುದರಿಂದ ಕಾಲು ಎತ್ತಿಡುವಂತಿಲ್ಲ, ನಕುಲ ನೀನು ಹೋಗಿ ನೀರನ್ನು ಕಮಲದೆಲೆಯ ದೊನ್ನೆಯಲ್ಲಿ ತೆಗೆದುಕೊಂಡು ಬಾ ಎಂದು ಧರ್ಮಜನು ಆಜ್ಞಾಪಿಸಿದನು.

ಅರ್ಥ:
ದೂರ: ಅಂತರ; ನಿಳಯ: ಆಲಯ; ಕಾಂತಾರ: ಅಡವಿ; ನಿರ್ಜಲ: ನೀರಿಲ್ಲದ ಸ್ಥಿತಿ; ಐದು: ಬಂದು ಸೇರು; ಅಂಘ್ರಿ: ಪಾದ; ಭಾರ: ಹೊರೆ; ಪಥ: ಮಾರ್ಗ; ಹದ: ಸ್ಥಿತಿ; ಅರಸ: ರಾಜ; ಅಳವಳಿ: ಶಕ್ತಿಗುಂದು; ನೀರು: ಜಲ; ತಾರೈ: ತೆಗೆದುಕೊಂಡು ಬಾ; ಹೋಗು: ತೆರಳು; ಸರೋರುಹ: ಕಮಲ; ಪತ್ರ: ಎಲೆ; ಪೊಟ್ಟಣ: ದೊನ್ನೆ; ವಾರಿ: ನೀರು; ಕಟ್ಟು: ಬಂಧಿಸು; ಸೂನು: ಮಗ; ನೇಮಿಸು: ಆಜ್ಞಾಪಿಸು;

ಪದವಿಂಗಡಣೆ:
ದೂರವಾದುದು +ನಿಳಯವ್+ಈ+ ಕಾಂ
ತಾರ +ನಿರ್ಜಲವ್+ಐದಲ್+ಅಂಘ್ರಿಗೆ
ಭಾರ +ಪಥವ್+ಇನ್ನೇನು +ಹದನೆಂದ್+ಅರಸನ್+ಅಳವಳಿದು
ನೀರ+ ತಾರೈ +ಹೋಗು +ನಕುಲ+ ಸ
ರೋರುಹದ +ಪತ್ರದಲಿ +ಪೊಟ್ಟಣ
ವಾರಿಯನು +ಕಟ್ಟೆಂದು +ಕುಂತೀಸೂನು +ನೇಮಿಸಿದ

ಅಚ್ಚರಿ:
(೧) ಪೊಟ್ಟಣವಾರಿ – ಪದದ ರಚನೆ
(೨) ನೀರು, ವಾರಿ, ಜಲ – ಸಮನಾರ್ಥಕ ಪದ