ಪದ್ಯ ೫೬: ಮಲ್ಲಯುದ್ದವು ಹೇಗೆ ಮುಂದುವರೆಯಿತು?

ಅರರೆ ಸಿಕ್ಕಿದ ವಲಲ ಹೋಹೋ
ಅರರೆ ಸೋತನು ಮಲ್ಲನೆಂಬ
ಬ್ಬರವು ಮಸಗಿರೆ ಭೀಮ ಕೇಳಿದನಧಿಕ ರೋಷದಲಿ
ತಿರುಗಿ ಪೈಸರದಿಂದ ಮಲ್ಲನ
ನೊರಸಿದನು ಮುಷ್ಟಿಯಲಿ ನೆತ್ತಿಯ
ತರಹರಿಸೆ ಸಂತವಿಸಿ ತಿವಿದನು ಮಲ್ಲ ಮಾರುತಿಯ (ವಿರಾಟ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಅರೇ ವಲಲನು ಸಿಕ್ಕ, ಅರೇ ಜೀಮೂತನು ಸೋತ ಎಂದು ನೋಟಕರು ಕೂಗುತ್ತಿರಲು, ಭೀಮನದನ್ನು ಕೇಳಿ ಮಹಾರೋಷದಿಂದ ಮಗ್ಗುಲಿಗೆ ಜಾರಿ, ಜೀಮೂತನ ನೆತ್ತಿಯನ್ನು ಮುಷ್ಟಿಯಿಂದ ಹೊಡೆದನು. ಜೀಮೂತನು ಅತ್ತಿತ್ತ ಅದುರಿ ಭೀಮನನ್ನು ಹೊಡೆದನು.

ಅರ್ಥ:
ಸಿಕ್ಕು: ತೊಡಕು; ಸೋಲು: ಪರಾಭವ; ಮಲ್ಲ: ಜಟ್ಟಿ; ಅಬ್ಬರ: ಆರ್ಭಟ; ಮಸಗು: ತಿಕ್ಕು, ಕೆರಳು; ಕೇಳು: ಆಲಿಸು; ಅಧಿಕ: ಹೆಚ್ಚು; ರೋಷ: ಕೋಪ; ತಿರುಗು: ಸುತ್ತು, ಅಲೆದಾಡು; ಪೈಸರ: ಮಲ್ಲಯುದ್ಧದ ಒಂದು ಪಟ್ಟು, ಕುಗ್ಗು; ಒರಸು: ಸಾರಿಸು, ನಾಶಮಾಡು; ಮುಷ್ಟಿ: ಮುಚ್ಚಿದ ಅಂಗೈ; ನೆತ್ತಿ: ಶಿರ; ತರಹರಿಸು: ತಡಮಾಡು, ಕಳವಳಿಸು; ಸಂತವಿಸು: ಸಾಂತ್ವನಗೊಳಿಸು; ತಿವಿ: ಚುಚ್ಚು; ಮಲ್ಲ: ಜಟ್ಟಿ; ಮಾರುತಿ: ವಾಯುಪುತ್ರ (ಭೀಮ);

ಪದವಿಂಗಡಣೆ:
ಅರರೆ +ಸಿಕ್ಕಿದ +ವಲಲ +ಹೋ+ಹೋ
ಅರರೆ+ ಸೋತನು +ಮಲ್ಲನೆಂಬ್
ಅಬ್ಬರವು +ಮಸಗಿರೆ+ ಭೀಮ +ಕೇಳಿದನ್+ಅಧಿಕ+ ರೋಷದಲಿ
ತಿರುಗಿ +ಪೈಸರದಿಂದ +ಮಲ್ಲನನ್
ಒರಸಿದನು +ಮುಷ್ಟಿಯಲಿ +ನೆತ್ತಿಯ
ತರಹರಿಸೆ+ ಸಂತವಿಸಿ+ ತಿವಿದನು+ ಮಲ್ಲ+ ಮಾರುತಿಯ

ಅಚ್ಚರಿ:
(೧) ಅರೆರೆ – ೧, ೨ ಸಾಲಿನ ಮೊದಲ ಪದ

ಪದ್ಯ ೯೨: ಕೀಚಕನ ಅಂತ್ಯವು ಹೇಗಾಯಿತು?

ತಿರುಗಿ ಪೈಸರವೋಗಿ ಪವನಜ
ಮರಳಿ ತಿವಿದನು ಕೀಚಕನ ಪೇ
ರುರವನೆದೆ ಜರ್ಝರಿತವಾಗಲು ಕಾರಿದನು ಕರುಳ
ಬರಿದು ವಾಲಿಗಳೊಲೆದೊಲೆದು ಕ
ಣ್ಣುರುಗಿ ಧೊಪ್ಪನೆ ಕೆಡೆದು ನಿಮಿಷಕೆ
ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ (ವಿರಾಟ ಪರ್ವ, ೩ ಸಂಧಿ, ೯೨ ಪದ್ಯ)

ತಾತ್ಪರ್ಯ:
ಭೀಮನು ಹಿಮ್ಮೆಟ್ಟಿ, ಕೀಚಕನ ವಿಶಾಲವಾದ ಎದೆಯನ್ನು ಮತ್ತೆ ತಿವಿಯಲು ಎದೆಯು ಸೀಳಿತು, ಕೀಚಕನು ಕರುಳನ್ನು ಹೊಟ್ಟೆಯಿಂದ ತೆಗೆದನು, ಕಣ್ಣುಗುಡ್ಡೆ ನೆಟ್ಟುಕೊಂಡಿತು, ದೇಹವು ಆಚೆ ಈಚೆ ಅಲುಗಾಡಿ ಒಮ್ಮೆಲೆ ಜೋರಾಗಿ ಕೆಳಕ್ಕೆ ಬಿದ್ದು ಪಕ್ಕಕ್ಕೆ ತಿರುಗಿತು. ಕೀಚಕನ ಪ್ರಾಣವು ಆತನ ದೇಹದಿಂದ ಹಾರಿಹೋಯಿತು.

ಅರ್ಥ:
ತಿರುಗಿ: ಸುತ್ತು, ದಿಕ್ಕನ್ನು ಬದಲಾಯಿಸು; ಪೈಸರ: ಮಲ್ಲಯುದ್ಧದ ಒಂದು ಪಟ್ಟು; ಪವನಜ: ಭೀಮ, ವಾಯುಪುತ್ರ; ಮರಳಿ: ಪುನಃ; ತಿವಿ: ಚುಚ್ಚು; ಪೇರುರ: ವಿಶಾಲವಾದ ಎದೆ; ಎದೆ: ಹೃದಯ; ಜರ್ಝರಿತ: ಭಗ್ನ, ಚೂರು; ಕಾರು: ಅಗೆದದ್ದು, ಕೊಲ್ಲಿ; ಕರುಳು: ಪಚನಾಂಗದ ಭಾಗ; ಬಿರಿ: ಸೀಳು; ಆಲಿ: ಕಣ್ಣು ಗುಡ್ಡೆ; ಒಲೆ: ತೂಗಾಡು; ಕಣ್ಣು: ನಯನ; ಉರುಗು: ಬಾಗು; ಧೊಪ್ಪನೆ: ಜೋರಾಗಿ, ಒಮ್ಮೆಲೆ; ಕೆಡೆ: ಬೀಳು; ನಿಮಿಷ: ಕ್ಷಣಮಾತ್ರ; ಹೊರಳು: ಉರುಳು, ತಿರುಗು; ಹರಣ: ಜೀವ, ಪ್ರಾಣ; ಕಳುಹು: ತೆರಳು; ಕಳೆ: ತೊರೆ; ಕಾಯ: ದೇಹ;

ಪದವಿಂಗಡಣೆ:
ತಿರುಗಿ +ಪೈಸರವೋಗಿ +ಪವನಜ
ಮರಳಿ+ ತಿವಿದನು +ಕೀಚಕನ+ ಪೇ
ರುರವನ್+ಎದೆ +ಜರ್ಝರಿತವಾಗಲು +ಕಾರಿದನು +ಕರುಳ
ಬರಿದುವ್ + ಆಲಿಗಳ್+ಒಲೆದೊಲೆದು +ಕಣ್ಣ್
ಉರುಗಿ+ ಧೊಪ್ಪನೆ +ಕೆಡೆದು +ನಿಮಿಷಕೆ
ಹೊರಳಿ +ಹರಣವ+ ಕಳುಹಿ +ಕಳೆದುದು +ಕಾಯ +ಕೀಚಕನ

ಅಚ್ಚರಿ:
(೧) ಕ ಕಾರದ ಸಾಲು ಪದ – ಕಳುಹಿ ಕಳೆದುದು ಕಾಯ ಕೀಚಕನ

ಪದ್ಯ ೨೮: ಧೃತರಾಷ್ಟ್ರನು ದುರ್ಯೋಧನನನ್ನು ಹೇಗೆ ವಿಚಾರಿಸಿದನು?

ಈಸು ಕಳವಳವೇನು ಚಿತ್ತದ
ಬೈಸಿಕೆಗೆ ಡೊಳ್ಳಾಸವೇಕೆ ವಿ
ಳಾಸ ಕೂಣೆಯವೇನು ಹೇಳಾ ನೆನಹಿನಭಿರುಚಿಯ
ವಾಸಿಗಳ ಪೈಸರವನೆನ್ನಲಿ
ಸೂಸಬಾರದೆ ನಿನ್ನ ಹರುಷಕೆ
ಪೈಸರವದೇನೆಂದು ಬೆಸಗೊಂಡನು ಸುಯೋಧನನ (ಸಭಾ ಪರ್ವ, ೧೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ಮಗನೇ ನಿನಗೇಕೆ ಇಂತಹ ಗೊಂದಲ, ಹೇಳು. ನೀನು ನಿನ್ನ ಮನಸ್ಥಿತಿಯನ್ನು ಏಕೆ ಕದಡಿಕೊಂಡಿದ್ದೀಯ? ನಿನ್ನ ಸಂತೋಷಕ್ಕೆ ಏನು ಕೊರತೆ? ನೀನು ಏನನ್ನು ಬಯಸುವೆ ಹೇಳು ನಿನ್ನ ಹಿರಿಮೆಯು ಛಲವು ಪಂಥವು ಏಕೆ ಜಾರಿಹೋಗಿವೆ? ಅದನ್ನು ನನಗೆ ಹೇಳಬಾರದೆ ನಿನ್ನ ಸಂತೋಷವು ಜಾರಿಹೋಗಲು ಕಾರಣವಾದರು ಏನು ಎಂದು ತನ್ನ ಮಗನನ್ನು ಕೇಳಿದನು.

ಅರ್ಥ:
ಕಳವಳ: ಗೊಂದಲ, ತೊಂದರೆ; ಚಿತ್ತ: ಮನಸ್ಸು; ಬೈಸಿಕೆ: ಅಚಲತೆ, ದೃಢತೆ; ಡೊಳ್ಳಾಸ: ಮೋಸ, ಕಪಟ; ವಿಳಾಸ: ವಿಹಾರ, ಚೆಲುವು; ಕೂಣೆ: ಕೊರತೆ; ಹೇಳು: ತಿಳಿಸು; ನೆನಹು: ನೆನಪು; ಅಭಿರುಚಿ: ಆಸಕ್ತಿ, ಒಲವು, ಪ್ರೀತಿ; ವಾಸಿ:ಕೀರ್ತಿ; ಪೈಸರ: ವಿಸ್ತಾರ, ವ್ಯಾಪ್ತಿ, ಹರಹು; ಸೂಸು: ಎರಚುವಿಕೆ, ಚಲ್ಲುವಿಕೆ; ಹರುಷ: ಸಂತೋಷ; ಪೈಸರ: ಹಿಂದಕ್ಕೆ ಸರಿಯುವುದು, ಸೋಲು, ಭಂಗ; ಬೆಸ: ಕೇಳುವುದು;

ಪದವಿಂಗಡಣೆ:
ಈಸು +ಕಳವಳವೇನು +ಚಿತ್ತದ
ಬೈಸಿಕೆಗೆ+ ಡೊಳ್ಳಾಸವೇಕೆ+ ವಿ
ಳಾಸ+ ಕೂಣೆಯವೇನು+ ಹೇಳಾ+ ನೆನಹಿನ್+ಅಭಿರುಚಿಯ
ವಾಸಿಗಳ+ ಪೈಸರವನ್+ಎನ್ನಲಿ
ಸೂಸಬಾರದೆ+ ನಿನ್ನ +ಹರುಷಕೆ
ಪೈಸರವದೇನೆಂದು+ ಬೆಸಗೊಂಡನು+ ಸುಯೋಧನನ

ಅಚ್ಚರಿ:
(೧) ಹೇಳು ಎನ್ನಲು ಬಳಸಿದ ಪದಗಳು – ಸೂಸಬಾರದೆ, ಬೆಸಗೊಂಡು, ಹೇಳಾ