ಪದ್ಯ ೪೧: ಬಲರಾಮನು ಕೃಷಂಗೆ ಏನು ಹೇಳಿದನು?

ದುಗುಡದಲಿ ಹರಿ ರೌಹಿಣೀಯನ
ಮೊಗವ ನೋಡಿದಡಾತನಿದು ಕಾ
ಳೆಗವಲೇ ಕೃತಸಮಯರಾದಿರಿ ಪೂರ್ವಕಾಲದಲಿ
ಹಗೆಯ ಬಿಡಿ ಕುರುಪತಿಯ ಸಂಧಿಗೆ
ಸೊಗಸಿ ನಿಲಲಿ ಯುಧಿಷ್ಠಿರನ ಮಾ
ತುಗಳ ಕೆಡಿಸದಿರೆಂದನಾ ಕೃಷಂಗೆ ಬಲರಾಮ (ಗದಾ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದುಃಖಿಸುತ್ತಾ ಬಲರಾಮನ ಕಡೆಗೆ ನೋಡಲು, ಅವನು, ಇದು ಯುದ್ಧ, ಹಿಂದೆ ನೀವು ಗೆದ್ದಿದ್ದಿರಿ, ಈಗ ನಿಮ್ಮ ಕಾಲ ಕೆಟ್ಟಿತು, ವೈರವನ್ನು ಬಿಟ್ಟು ಕೌರವನೊಂದಿಗೆ ಸಂಧಿಯನ್ನು ಮಾಡಿಕೊಳ್ಳಿರಿ, ಧರ್ಮಜನ ಮಾತನ್ನು ಕೆಡಿಸಬೇಡಿ ಎಂದನು.

ಅರ್ಥ:
ದುಗುಡ: ದುಃಖ; ಹರಿ: ವಿಷ್ಣು; ರೌಹಿಣೀಯ: ಬಲರಾಮ; ಮೊಗ: ಮುಖ; ನೋಡು: ವೀಕ್ಷಿಸು; ಕಾಳೆಗ: ಯುದ್ಧ; ಕೃತ: ಕಾರ್ಯ; ಸಮಯ: ಕಾಲ; ಪೂರ್ವ: ಹಿಂದಿನ; ಹಗೆ: ವೈರಿ; ಬಿಡಿ: ತೊರೆ; ಸಂಧಿ: ರಾಜಿ, ಒಡಂಬಡಿಕೆ; ಸೊಗಸು: ಅಂದ, ಚೆಲುವು; ನಿಲುವು: ಅಭಿಪ್ರಾಯ, ಅಭಿಮತ; ನಿಲು: ತಡೆ; ಮಾತು: ನುಡಿ; ಕೆಡಸು: ಹಾಳುಮಾಡು;

ಪದವಿಂಗಡಣೆ:
ದುಗುಡದಲಿ +ಹರಿ +ರೌಹಿಣೀಯನ
ಮೊಗವ +ನೋಡಿದಡ್+ಆತನ್+ಇದು +ಕಾ
ಳೆಗವಲೇ +ಕೃತ+ಸಮಯರಾದಿರಿ +ಪೂರ್ವಕಾಲದಲಿ
ಹಗೆಯ +ಬಿಡಿ +ಕುರುಪತಿಯ +ಸಂಧಿಗೆ
ಸೊಗಸಿ +ನಿಲಲಿ +ಯುಧಿಷ್ಠಿರನ+ ಮಾ
ತುಗಳ +ಕೆಡಿಸದಿರ್+ಎಂದನಾ +ಕೃಷಂಗೆ +ಬಲರಾಮ

ಅಚ್ಚರಿ:
(೧) ಬಲರಾಮನ ಕಿವಿಮಾತು – ಹಗೆಯ ಬಿಡಿ ಕುರುಪತಿಯ ಸಂಧಿಗೆ ಸೊಗಸಿ ನಿಲಲಿ
(೨) ರೌಹಿಣೀಯ – ಬಲರಾಮನನ್ನು ಕರೆದ ಪರಿ

ಪದ್ಯ ೨೫: ಕಶ್ಯಪನು ದ್ರುಪದನಿಗೆ ಏನು ಮಾಡುಲು ಹೇಳಿದನು?

ಇವರು ಪಾರ್ಥಿವರೊಳಗೆ ಕೆಳ್ಪಾಂ
ಡವರು ನಿಸ್ಸಂದೇಹವೆಂದೇ
ನಿವಗೆ ನಾವೆನ್ನೆವೆ ವಿವಾಹದ ಪೂರ್ವಕಾಲದಲಿ
ಅವರನುಪಚರಿಸೇಳು ರಚಿಸು
ತ್ಸವವನಾಯ್ತಿದೆ ಪೂರ್ವಗಿರಿಯಲಿ
ರವಿಯುದಯವೆಂದಾ ಪುರೋಹಿತ ತಿಳುಹಿದನು ನೃಪನ (ಆದಿ ಪರ್ವ, ೧೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕಶ್ಯಪನು ದ್ರುಪದನ ಜೋತೆ ಮಾತು ಮುಂದುವರೆಸುತ್ತಾ, ರಾಜ ಇವರು ರಾಜರೊಳಗೆ ಪಾಂಡವರು ಇದನ್ನು ನಾನು ನಿಮಗೆ ಮದುವೆಯ ಮುಂಚೆಯೆ ತಿಳಿಸಿದ್ದೆ, ಇದು ನಿಸ್ಸಂದೇಹ, ಈಗ ಅವರನ್ನು ಉಪಚರಿಸು, ಮದುವೆಗೆ ಅನುವು ಮಾಡು ಆಗಲೆ ಪೂರ್ವದಿಕ್ಕಿನಲಿ ಸೂರ್ಯನು ಉದಯಿಸುತ್ತಿದ್ದಾನೆ, ಬೇಗ ಪುರೋಹಿತರಿಗೆ ತಿಳಿಸಿ ವಿವಾಹಮಹೋತ್ಸವಕ್ಕೆ ಸಿದ್ಧಮಾಡಿಕೊ ಎಂದು ಕಶ್ಯಪ ಮುನಿಯು ದ್ರುಪದ ರಾಜನಿಗೆ ಹೇಳಿದನು.

ಅರ್ಥ:
ಪಾರ್ಥಿವ:ರಾಜ, ಭೂಮಿಯನ್ನು ಆಳುವವರು; ನಿಸ್ಸಂದೇಹ: ಸಂಶಯವಿಲ್ಲ; ಪೂರ್ವ: ಹಿಂದೆ; ಕಾಲ: ಸಮಯ; ಉಪಚರಿಸು: ಸತ್ಕರಿಸು; ರಚಿಸು: ನಿರ್ಮಿಸು, ಏರ್ಪಾಟುಮಾಡು; ಉತ್ಸವ: ಮಹೋತ್ಸವ; ಪೂರ್ವ: ಮೂಡಣ ದಿಕ್ಕು; ಗಿರಿ: ಬೆಟ್ಟ; ರವಿ: ಸೂರ್ಯ; ಉದಯ: ಹುಟ್ಟು; ಪುರೋಹಿತ: ಅರ್ಚಕ; ನೃಪ: ರಾಜ

ಪದವಿಂಗಡಣೆ:
ಇವರು +ಪಾರ್ಥಿವ+ರೊಳಗೆ+ ಕೆಳ್+
ಪಾಂಡವರು +ನಿಸ್ಸಂದೇಹ+ವೆಂದೇ
ನಿವಗೆ+ ನಾವೆನ್ನೆವೆ+ ವಿವಾಹದ +ಪೂರ್ವ+ಕಾಲದಲಿ
ಅವರನ್+ಉಪಚರಿಸ್+ಏಳು +ರಚಿಸ್
ಉತ್ಸವವನ್+ಆಯ್ತಿದೆ +ಪೂರ್ವ+ಗಿರಿಯಲಿ
ರವಿ+ಉದಯವ್+ಎಂದಾ +ಪುರೋಹಿತ+ ತಿಳುಹಿದನು+ ನೃಪನ

ಅಚ್ಚರಿ:
(೧) ಪಾರ್ಥಿವ, ನೃಪ – ಸಮನಾರ್ಥಕ ಪದ
(೨) ಪೂರ್ವ – ೨ ಬಾರಿ ಪ್ರಯೋಗ, ಪೂರ್ವಕಾಲ, ಪೂರ್ವಗಿರಿ;
(೩) ಇವರು, ಅವರು – ೧, ೪ ಸಾಲಿನ ಮೊದಲ ಪದ