ಪದ್ಯ ೬೭: ಭೀಮನು ಯಾರನ್ನು ಹುಡುಕುತ್ತಾ ಹೋದನು?

ಬಿಡದಲಾ ಕುರುಸೈನ್ಯ ಹಕ್ಕಲು
ಗಡಿಯ ಭಟರೊಗ್ಗಾಯ್ತಲಾ ದೊರೆ
ಮಡಿದನೋ ಬಳಲಿದನೊ ಮಿಗೆ ಪೂರಾಯಘಾಯದಲಿ
ಪಡೆಯ ಜಂಜಡ ನಿಲಲಿ ಕೌರವ
ರೊಡೆಯನಾವೆಡೆ ನೋಡು ನೋಡೆಂ
ದೊಡನೊಡನೆ ಪವಮಾನಸುತನರಸಿದನು ಕುರುಪತಿಯ (ಗದಾ ಪರ್ವ, ೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ನಮ್ಮ ಮೇಲೆ ಬರುವುದನ್ನು ಬಿಡಲಿಲ್ಲ, ಕೊಯ್ಲಾದ ಮೇಲೆ ಹೊಲದಲ್ಲಿ ಅಲ್ಲಿ ಇಲ್ಲಿ ಬಿದ್ದ ತೆನೆಗಳಂತಿರುವ ಯೋಧರು ಒಟ್ಟಾದರು. ಅವರಿರಲಿ, ಕೌರವನು ಸತ್ತನೋ, ಗಾಯಗೊಂಡು ಬಳಲಿರುವನೋ ಎಲ್ಲಿಗೆ ಹೋದ ಎಲ್ಲಿದ್ದಾನೆ ಎಂದು ಭೀಮನು ದುರ್ಯೋಧನನನ್ನು ಹುಡುಕುತ್ತಾ ಹೋದನು.

ಅರ್ಥ:
ಬಿಡು: ತೊರೆ; ಹಕ್ಕಲು: ಬತ್ತ, ರಾಗಿ, ಜೋಳ ಮುಂತಾದುವನ್ನು ಕುಯ್ಯುವಾಗ ಭೂಮಿಗೆ ಬಿದ್ದ ತೆನೆ; ಗಡಿ: ಎಲ್ಲೆ; ಭಟ: ಸೈನ್ಯ; ಒಗ್ಗು: ಒಟ್ಟುಗೂಡು; ದೊರೆ: ರಾಜ; ಮಡಿ: ಸತ್ತ; ಬಳಲು: ಆಯಾಸ; ಮಿಗೆ: ಹೆಚ್ಚು; ಪೂರಾಯ: ಪರಿಪೂರ್ಣ; ಘಾಯ: ಪೆಟ್ಟು; ಪಡೆ: ಸೈನ್ಯ; ಜಂಜಡ: ತೊಂದರೆ, ಕ್ಲೇಶ; ನಿಲಲು: ನಿಲ್ಲು; ಒಡೆಯ: ನಾಯಕ; ನೋಡು: ವೀಕ್ಷಿಸು; ಒಡನೊಡನೆ: ಒಮ್ಮೆಲೆ; ಪವಮಾನಸುತ: ವಾಯುಪುತ್ರ (ಭೀಮ); ಅರಸು: ಹುಡುಕು;

ಪದವಿಂಗಡಣೆ:
ಬಿಡದಲಾ +ಕುರುಸೈನ್ಯ +ಹಕ್ಕಲು
ಗಡಿಯ +ಭಟರ್+ಒಗ್ಗಾಯ್ತಲಾ +ದೊರೆ
ಮಡಿದನೋ +ಬಳಲಿದನೊ+ ಮಿಗೆ +ಪೂರಾಯ+ಘಾಯದಲಿ
ಪಡೆಯ +ಜಂಜಡ +ನಿಲಲಿ +ಕೌರವರ್
ಒಡೆಯನಾವೆಡೆ +ನೋಡು +ನೋಡೆಂದ್
ಒಡನೊಡನೆ +ಪವಮಾನಸುತನ್+ಅರಸಿದನು +ಕುರುಪತಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಕ್ಕಲು ಗಡಿಯ ಭಟರೊಗ್ಗಾಯ್ತಲಾ

ಪದ್ಯ ೪೯: ಪಾಂಡವರ ಸೈನ್ಯದ ಸ್ಥಿತಿ ಹೇಗಿತ್ತು?

ಘಾಯವಾಯ್ತರ್ಜುನಗೆ ಮಿಗೆ ಪೂ
ರಾಯದೇರಿನೊಳೊದೆದು ಕೊಂಡರು
ವಾಯುತನುಜ ಶಿಖಂಡಿ ಸಾತ್ಯಕಿ ದ್ರುಪದನಂದನರು
ಬಾಯ ಬಿಟ್ಟುದು ಭೀತಿಯಲಿ ಕೌಂ
ತೇಯಸುತರಿನ್ನುಳಿದ ಸುಭಟರ
ನಾಯಕರ ಪಾಡೇನು ನಸಿದುದು ಪಾಂಡುಸುತಸೇನೆ (ದ್ರೋಣ ಪರ್ವ, ೧೮ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅರ್ಜುನನು ಗಾಯಗೊಂಡನು, ಬಲವಾದ ಏಟು ಬಿದ್ದು ಭೀಮ, ಶಿಖಂಡಿ, ಸಾತ್ಯಕಿ, ಧೃಷ್ಟದ್ಯುಮ್ನರು ಒದೆದುಕೊಂಡರು. ಪಾಂಡವರು ಭೀತಿಗೊಂಡು ಬಾಯಿಬಿಟ್ಟರು. ಉಳಿದವರ ಪಾಡೇನು, ಪಾಂಡವ ಸೇನೆಯು ನಾಶವಾಯಿತು.

ಅರ್ಥ:
ಘಾಯ: ಪೆಟ್ಟು; ಮಿಗೆ: ಮತ್ತು, ಅಧಿಕವಾಗಿ; ಪೂರಾಯ: ಪರಿಪೂರ್ಣ; ಏರು: ಹೆಚ್ಚಾಗು; ಒದೆ: ತುಳಿ, ಮೆಟ್ಟು; ವಾಯುತನುಜ: ಭೀಮ; ತನುಜ: ಮಗ; ನಂದನ: ಮಗ; ಭೀತಿ: ಭಯ; ಸುತ: ಮಗ; ಉಳಿದ: ಮಿಕ್ಕ; ಸುಭಟ: ಪರಾಕ್ರಮಿ; ನಾಯಕ: ಒಡೆಯ; ಪಾಡು: ಸ್ಥಿತಿ; ನಸಿ: ಹಾಳಾಗು; ಸೇನೆ: ಸೈನ್ಯ;

ಪದವಿಂಗಡಣೆ:
ಘಾಯವಾಯ್ತ್+ಅರ್ಜುನಗೆ +ಮಿಗೆ +ಪೂ
ರಾಯದ್+ಏರಿನೊಳ್+ಒದೆದು +ಕೊಂಡರು
ವಾಯುತನುಜ+ ಶಿಖಂಡಿ+ ಸಾತ್ಯಕಿ +ದ್ರುಪದ+ನಂದನರು
ಬಾಯ +ಬಿಟ್ಟುದು +ಭೀತಿಯಲಿ +ಕೌಂ
ತೇಯ+ಸುತರ್+ಇನ್ನುಳಿದ +ಸುಭಟರ
ನಾಯಕರ +ಪಾಡೇನು +ನಸಿದುದು +ಪಾಂಡುಸುತ+ಸೇನೆ

ಅಚ್ಚರಿ:
(೧) ತನುಜ, ನಂದನ, ಸುತ – ಸಮಾನಾರ್ಥಕ ಪದ
(೨) ಬ ಕಾರದ ತ್ರಿವಳಿ ಪದ – ಬಾಯ ಬಿಟ್ಟುದು ಭೀತಿಯಲಿ
(೩) ಪಾಂಡವರನ್ನು ಕರೆದ ಪರಿ – ಪಾಂಡುಸುತ, ಕೌಂತೇಯಸುತ

ಪದ್ಯ ೨೯: ಭೀಮನೇಕೆ ಗರ್ಜಿಸಿದನು?

ರಾಯನೊಡಹುಟ್ಟಿದರಲಾ ಪೂ
ರಾಯವಿವದಿರ ಕೈ ಮಹಾದೇ
ವಾಯುಧದ ಮಳೆಗರೆದರೈ ನಿಲಲರಿದು ನಮಗೆನುತ
ವಾಯುಸುತನಬ್ಬರಿಸೆ ಗಾಳಿಯ
ಘಾಯ ಮೇಘದ ಮೇಲೆ ಬಿದ್ದವೊ
ಲಾಯಿತೇನೆಂಬೆನು ಕುಮಾರರ ಹೊಯಿಲ ಬೆಳೆ ಸಿರಿಯ (ದ್ರೋಣ ಪರ್ವ, ೧೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ನುಡಿದನು, ನೀವೆಲ್ಲಾ ರಾಜನ ತಮ್ಮಂದಿರಲ್ಲವೇ! ಇವರು ಮಹಾ ಭುಜಬಲರಲ್ಲವೇ! ಆಯುಧಗಲ ಮಳೆಯನ್ನೇ ಕರೆದರು. ನಮಗೆ ನಿಮ್ತು ಎದುರಿಸಲು ಅಸಾಧ್ಯ ಎಂದು ಅಬ್ಬರಿಸಿದನು. ಅವನ ಗರ್ಜನೆ ಮೇಘದ ಮೇಲೆ ಗಾಳಿಯು ಎರಗಿದಂತಾಯಿತು, ಅವರ ಪ್ರಹಾರ ನಿಷ್ಫಲವಾಯಿತು.

ಅರ್ಥ:
ರಾಯ: ಒಡೆಯ, ರಾಜ; ಒಡಹುಟ್ಟು: ಜೊತೆಯಲ್ಲಿ ಜನಿಸು, ತಮ್ಮ, ಅನುಜ; ಪೂರಾಯ: ಪೂರ್ಣ; ಇವದಿರು: ಇಷ್ಟುಜನ; ಕೈ: ಹಸ್ತ; ಆಯುಧ: ಶಸ್ತ್ರ; ಮಹಾದೇವ: ಶಂಕರ; ಮಳೆಗರೆ: ವರ್ಷ; ನಿಲು: ತಡೆ; ಅರಿ: ತಿಳಿ; ವಾಯುಸುತ: ಪವನಜ, ಭೀಮ; ಅಬ್ಬರಿಸು: ಗರ್ಜಿಸು; ಗಾಳಿ: ವಾಯು; ಘಾಯ: ಪೆಟ್ಟು; ಮೇಘ: ಮೋಡ; ಬಿದ್ದು: ಬೀಳು; ಕುಮಾರ: ಪುತ್ರ; ಹೊಯಿಲು: ಏಟು, ಹೊಡೆತ; ಬೆಳೆ: ಅಭಿವೃದ್ಧಿ; ಸಿರಿ: ಐಶ್ವರ್ಯ;

ಪದವಿಂಗಡಣೆ:
ರಾಯನ್+ಒಡಹುಟ್ಟಿದರಲಾ +ಪೂ
ರಾಯವ್+ಇವದಿರ +ಕೈ +ಮಹಾದೇವ
ಆಯುಧದ+ ಮಳೆಗರೆದರೈ +ನಿಲಲ್+ಅರಿದು +ನಮಗೆನುತ
ವಾಯುಸುತನ್+ಅಬ್ಬರಿಸೆ +ಗಾಳಿಯ
ಘಾಯ +ಮೇಘದ +ಮೇಲೆ +ಬಿದ್ದವೊ
ಲಾಯಿತ್+ಏನೆಂಬೆನು +ಕುಮಾರರ +ಹೊಯಿಲ +ಬೆಳೆ +ಸಿರಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಾಳಿಯ ಘಾಯ ಮೇಘದ ಮೇಲೆ ಬಿದ್ದವೊಲಾಯಿತೇನೆಂಬೆನು ಕುಮಾರರ ಹೊಯಿಲ ಬೆಳೆ ಸಿರಿಯ

ಪದ್ಯ ೨೮: ಕೌರವಾನುಜರು ಏನೆಂದು ಕೂಗಿದರು?

ಎಲವೊ ಕರ್ಣನ ಗೆಲಿದ ಗರ್ವವ
ಕಲಕುವೆವು ಫಡ ನಿಲ್ಲೆನುತ ಕೈ
ಚಳಕಿಗರು ಪೂರಾಯಚಾಪದ ಬೆರಳ ಕಿವಿಗಡಿಯ
ಬಲುಸರಳ ಸರಿವಳೆಯ ಸಾಹಸಿ
ಗಳು ಭರದಿ ಕವಿದೆಸುತ ಬರೆ ಕಂ
ಡೆಲೆಮಿಡುಕನಾ ಭೀಮ ಮೂಗಿನ ಬೆರಳ ಬೆರಗಿನಲಿ (ದ್ರೋಣ ಪರ್ವ, ೧೩ ಸಂಧಿ, ೨೮ ಪದ್ಯ
)

ತಾತ್ಪರ್ಯ:
ಕೌರವಾನುಜರು, “ಎಲವೋ ಕರ್ಣನನ್ನು ಗೆದ್ದ ಗರ್ವವನ್ನು ಇಳಿಸುತ್ತೇವೆ ನಿಲ್ಲು, ಎನ್ನುತ್ತಾ ಬಿಲ್ಲಿನಲ್ಲಿ ಬಾಣಗಳನ್ನು ಹೂಡಿ ಕಿವಿವರೆಗೆಳೆದು ಕೈಚಳಕವನ್ನು ತೋರಿಸುತ್ತಾ, ಶರವರ್ಷವನ್ನು ಕರೆಯುತ್ತಾ ವೇಗದಿಂದ ಮುನ್ನುಗ್ಗಿದರೆ, ಭೀಮನು ಮೂಗಿನ ಮೇಲೆ ಬೆರಳನ್ನಿಟ್ಟು, ಒಂದು ಎಲೆಯಷ್ಟೂ ಮಿಸುಕಲಿಲ್ಲ.

ಅರ್ಥ:
ಗೆಲಿದ: ಜಯಿಸಿದ; ಗರ್ವ: ಅಹಂಕಾರ; ಕಲಕು: ಅಲ್ಲಾಡಿಸು; ಫಡ: ತಿರಸ್ಕಾರದ ಮಾತು; ನಿಲ್ಲು: ತಡೆ; ಕೈಚಳಕ: ಹಸ್ತಕೌಶಲ, ನೈಪುಣ್ಯ; ಪೂರಾಯ: ಪರಿಪೂರ್ಣ; ಚಾಪ: ಬಿಲ್ಲು; ಬೆರಳು: ಅಂಗುಲಿ; ಕಿವಿ: ಕರ್ಣ; ಬಲು: ಬಹಳ; ಸರಳ: ಬಾಣ; ಸರಿವಳೆ: ವರ್ಷ; ಸಾಹಸಿ: ಪರಾಕ್ರಮಿ; ಭರ: ವೇಗ; ಕವಿ: ಆವರಿಸು; ಎಸು: ಬಾಣ ಪ್ರಯೋಗ ಮಾಡು; ಬರೆ: ಗೆರೆ, ರೇಖೆ; ಕಂಡು: ನೋಡು; ಮಿಡುಕು: ಅಲುಗು, ಕದಲು; ಬೆರಗು: ವಿಸ್ಮಯ, ಸೋಜಿಗ; ಎಲೆ: ಪರ್ಣ;

ಪದವಿಂಗಡಣೆ:
ಎಲವೊ +ಕರ್ಣನ +ಗೆಲಿದ +ಗರ್ವವ
ಕಲಕುವೆವು+ ಫಡ +ನಿಲ್ಲೆನುತ +ಕೈ
ಚಳಕಿಗರು +ಪೂರಾಯ+ಚಾಪದ +ಬೆರಳ +ಕಿವಿಗಡಿಯ
ಬಲುಸರಳ +ಸರಿವಳೆಯ +ಸಾಹಸಿ
ಗಳು +ಭರದಿ +ಕವಿದೆಸುತ +ಬರೆ +ಕಂಡ್
ಎಲೆ+ಮಿಡುಕನಾ +ಭೀಮ +ಮೂಗಿನ +ಬೆರಳ +ಬೆರಗಿನಲಿ

ಅಚ್ಚರಿ:
(೧) ಸರಳ ಸರಿವಳೆಯ ಸಾಹಸಿಗಳು – ಸ ಕಾರದ ತ್ರಿವಳಿ ಪದ

ಪದ್ಯ ೬: ರಣಭೂಮಿಯು ಯಾವುದರಿಂದ ಅಲಂಕೃತಗೊಂಡಿತು?

ಏರುಗಳು ಬುದುಬುದಿಸಿ ರಕುತವ
ಕಾರಿ ಕಾಳಿಜ ಖಂಡ ನೆಣ ಜಿಗಿ
ದೋರಿ ಬೆಳುನೊರೆ ಮಸಗಿ ನಸುಬಿಸಿರಕುತ ಹೊನಲಿಡಲು
ಕೌರಿಡಲು ಕಡಿದುಡಿದವೆಲು ಮೊಗ
ದೋರುಗಳ ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಲ ರಂಜಿಸಿತು (ದ್ರೋಣ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಕೌರವ ಯೋಧರ ಗಾಯಗಳು ರಕ್ತವನ್ನು ಕಾರಿದವು. ಮಾಂಸಖಂಡ, ನೆಣ, ಪಿತ್ತಕೋಶಗಳು ಹೊರಬಂದು ಬಿಳಿಯ ನೊರೆ ಕಾಣಿಸಿದವು. ಕೆಟ್ಟವಾಸನೆ ಹಬ್ಬಿತು. ಎಲುಬುಗಳು ತುಂಡಾಗಿ ಚರ್ಮದಿಂದ ಹೊರಕ್ಕೆ ಇಣುಕಿದವು. ಪೂರ್ತಿಯಾಗಿ ಗಾಯಗೊಂಡು ಬಿದ್ದ ಹೆಣಗಳ ರಾಶಿ ಎಲ್ಲೆಲ್ಲೂ ಕಾಣಿಸುತ್ತಿತ್ತು.

ಅರ್ಥ:
ಏರು: ಹತ್ತು, ಆರೋಹಿಸು; ಬುದುಬುದಿಸು: ಒಂದೇ ಸಮನೆ, ದಪದಪ; ರಕುತ: ನೆತ್ತರು; ಕಾರು: ಹರಿ; ಕಾಳಿಜ: ಪಿತ್ತಾಶಯ; ಖಂಡ: ತುಂಡು; ನೆಣ: ಕೊಬ್ಬು, ಮೇದಸ್ಸು; ಜಿಗಿ: ಹಾರು; ತೋರು: ಕಾಣಿಸು; ಬೆಳು: ಬಿಳುಪು; ನೊರೆ: ಬುರುಗು, ಫೇನ; ಮಸಗು: ಹರಡು; ನಸು: ಕೊಂಚ; ಬಿಸಿ: ಕಾವು; ಹೊನಲು: ಕಾಂತಿ; ಕೌರು: ಸುಟ್ಟವಾಸನೆ, ಕೆಟ್ಟ ನಾತ; ಕಡಿ: ಸೀಳು; ಮೊಗ: ಮುಖ; ತೋರು: ಗೋಚರ; ಪೂರಾಯ: ಪರಿಪೂರ್ಣ; ಘಾಯ: ಪೆಟ್ಟು; ತಾರು: ಸೊರಗು, ಬಡಕಲಾಗು; ಥಟ್ಟು: ಪಕ್ಕ, ಕಡೆ, ಗುಂಪು; ಹೆಣ: ಜೀವವಿಲ್ಲದ ಶರೀರ; ರಂಜಿಸು: ಹೊಳೆ, ಪ್ರಕಾಶಿಸು; ಎಲು: ಮೂಳೆ;

ಪದವಿಂಗಡಣೆ:
ಏರುಗಳು +ಬುದುಬುದಿಸಿ +ರಕುತವ
ಕಾರಿ +ಕಾಳಿಜ +ಖಂಡ +ನೆಣ +ಜಿಗಿ
ದೋರಿ +ಬೆಳುನೊರೆ +ಮಸಗಿ +ನಸು+ಬಿಸಿ+ರಕುತ +ಹೊನಲಿಡಲು
ಕೌರಿಡಲು +ಕಡಿದುಡಿದವ್+ಎಲು +ಮೊಗ
ದೋರುಗಳ+ ಪೂರಾಯ +ಘಾಯದ
ತಾರುಥಟ್ಟಿನ +ಹೆಣನ +ಮೆದೆ +ಹೇರಾಲ +ರಂಜಿಸಿತು

ಅಚ್ಚರಿ:
(೧) ರಣಭೂಮಿಯಲ್ಲು ರಂಜನೆಯ ಕಲ್ಪನೆಯನ್ನು ತೋರುವ ಕವಿ – ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಲ ರಂಜಿಸಿತು

ಪದ್ಯ ೨೮: ಕರ್ಣನೇಕೆ ಆಯಾಸಗೊಂಡನು?

ಗಾರುಗೆಡೆದರೆ ಮೆರೆಯದೋಲೆಯ
ಕಾರತನವೆಮ್ಮೊಡನೆ ನೀ ಮೈ
ದೋರಿ ಮಡಮುರಿವಿಲ್ಲದೆಚ್ಚಾಡಿದರೆ ಸಫಲವಿದು
ತೋರುವೆನು ಕೈಗುಣವನೆನುತೈ
ದಾರು ಶರದಲಿ ಕರ್ಣನೆದೆಯನು
ಡೋರುಗಳೆಯಲು ಬಳಲಿದನು ಪೂರಾಯ ಘಾಯದಲಿ (ದ್ರೋಣ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕರ್ಣನ ಮಾತುಗಳನ್ನು ಕೇಳಿ ಅಭಿಮನ್ಯು ನುಡಿಯುತ್ತಾ, ಕೌರವನ ಓಲೆಕಾರತನವು ಬಾಯಿಗೆ ಬಂದಂತೆ ಒದರಿದರೆ ನಮ್ಮ ಮುಂದೆ ನಡೆಯುವುದಿಲ್ಲ, ಭುಅಬಲಕ್ಕೆ ಕುಂದುಬಾರದಂತೆ ಹೋರಾಡಿದರೆ ಆಡಿದ ಮಾತು ಸಫಲವಾದೀತು, ನನ್ನ ಕೈತೋರಿಸುತ್ತೇನೆ ನೋಡು ಎಂದು ಅಭಿಮನ್ಯುವು ಐದಾರು ಬಾಣಗಳನ್ನು ಕರ್ಣನೆದೆಯಲ್ಲಿ ನಾಟಿಸಲು, ಕರ್ಣನು ಅತೀವ ಆಯಾಸಗೊಂಡು ಗಾಯದಿಂದ ಬಳಲಿದನು.

ಅರ್ಥ:
ಗಾರು: ಹಿಂಸೆ, ನಿಂದೆ; ಕೆಡೆ: ಬಾಯಿಗೆ ಬಂದಂತೆ ಮಾತನಾಡು; ಮೆರೆ: ಪ್ರಕಾಶಿಸು; ಓಲೆಯಕಾರ: ಆಳು, ಸೈನಿಕ; ಎಮ್ಮೊಡನೆ: ನನ್ನೊಂದಿಗೆ; ಮೈದೊರು: ಕಾಣಿಸಿಕೊ; ಮಡ: ಹಿಮ್ಮಡಿ; ಮುರಿ: ಸೀಳು; ಎಚ್ಚು: ಬಾಣ ಪ್ರಯೋಗ ಮಾಡು; ಸಫಲ: ಪ್ರಯೋಜನ; ತೋರು: ಕಾಣಿಸಿಕೋ; ಕೈಗುಣ: ಚಾತುರ್ಯ; ಶರ: ಬಾಣ; ಎದೆ: ವಕ್ಷಸ್ಥಳ; ಡೋರುಗಳೆ: ತೂತುಮಾಡು; ಬಳಲು: ಆಯಾಸಗೊಳ್ಳು; ಪೂರಾಯ: ಪರಿಪೂರ್ಣ; ಘಾಯ: ಪೆಟ್ಟು;

ಪದವಿಂಗಡಣೆ:
ಗಾರುಗೆಡೆದರೆ +ಮೆರೆಯದ್+ಓಲೆಯ
ಕಾರತನವ್+ಎಮ್ಮೊಡನೆ +ನೀ +ಮೈ
ದೋರಿ +ಮಡಮುರಿವಿಲ್ಲದ್+ಎಚ್ಚಾಡಿದರೆ +ಸಫಲವಿದು
ತೋರುವೆನು +ಕೈಗುಣವನ್+ಎನುತ್+
ಐದಾರು +ಶರದಲಿ +ಕರ್ಣನ್+ಎದೆಯನು
ಡೋರುಗಳೆಯಲು +ಬಳಲಿದನು +ಪೂರಾಯ +ಘಾಯದಲಿ

ಅಚ್ಚರಿ:
(೧) ಅಭಿಮನ್ಯುವಿನ ವೀರ ನುಡಿ – ಗಾರುಗೆಡೆದರೆ ಮೆರೆಯದೋಲೆಯಕಾರತನವೆಮ್ಮೊಡನೆ

ಪದ್ಯ ೨೮: ಸೈನಿಕರ ಸ್ಥಿತಿ ಏನಾಯಿತು?

ಕೆಲಬರಾಯುಧ ಮುರಿದು ಸಾರಥಿ
ಯಳಿದು ಕೆಲಬರು ರಥ ವಿಸಂಚಿಸಿ
ಕೆಲರು ಕೆಲಬರು ಬಳಲಿದರು ಪೂರಾಯ ಘಾಯದಲಿ
ಕೆಲರು ಜುಣುಗಿತು ಕಂಡ ಮುಖದಲಿ
ಕೆಲರು ಹರೆದರು ಕೈಮನದ ಕಡು
ಗಲಿಗಳಚ್ಚಾಳಾಗಿ ನಿಂದರು ಕೆಲರು ಕಾಳೆಗಕೆ (ಭೀಷ್ಮ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕೆಲವರ ಆಯುಧಗಳು ಮುರಿದವು, ಕೆಲವರ ಸಾರಥಿಗಳು ಸತ್ತರು, ರಥಗಳು ಮುರಿದವು, ಅತಿ ಹೆಚ್ಚಿನ ಹೊಡೆತದಿಂದ ಗಾಯಗೊಂಡ ಕೆಲವರು ಬಳಲಿದರು ಕೆಲವರು ಜಾರಿಕೊಂದು ಹೋದರು, ಕೆಲವರು ಎತ್ತೆತ್ತಲೋ ಹೋದರು, ಇನ್ನು ಕೆಲವರು ಧೈರ್ಯವನ್ನವಲಂಬಿಸಿ ಯುದ್ಧಕ್ಕೆ ನಿಂತರು.

ಅರ್ಥ:
ಕೆಲರು: ಸ್ವಲ್ಪ ಜನ; ಆಯುಧ: ಶಸ್ತ್ರ; ಮುರಿ: ಸೀಳು; ಸಾರಥಿ: ಸೂತ; ಅಳಿ: ನಾಶವಾಗು; ರಥ: ಬಂಡಿ ಘಾಯ: ಪೆಟ್ಟು; ವಿಸಂಚಿಸು: ಚೂರುಮಾಡು; ಬಳಲು: ಆಯಾಸ; ಪೂರಾಯ: ಪರಿಪೂರ್ಣ; ಜುಣುಗು: ಜಾರಿಕೊಳು; ಕಂಡು: ನೋಡು; ಮುಖ: ಆನನ; ಹರೆ: ಚೆದುರು; ಕೈ: ಹಸ್ತ; ಮನ: ಮನಸ್ಸು; ಕಡು: ತುಂಬ; ಕಲಿ: ಪರಾಕ್ರಮಿ; ಅಚ್ಚಾಳು: ಪಕ್ಕಾಯೋಧ; ಕಾಳೆಗ: ಯುದ್ಧ;

ಪದವಿಂಗಡಣೆ:
ಕೆಲಬರ್+ಆಯುಧ +ಮುರಿದು +ಸಾರಥಿ
ಅಳಿದು +ಕೆಲಬರು +ರಥ +ವಿಸಂಚಿಸಿ
ಕೆಲರು +ಕೆಲಬರು +ಬಳಲಿದರು +ಪೂರಾಯ +ಘಾಯದಲಿ
ಕೆಲರು +ಜುಣುಗಿತು +ಕಂಡ +ಮುಖದಲಿ
ಕೆಲರು +ಹರೆದರು +ಕೈ+ಮನದ +ಕಡು
ಕಲಿಗಳ್+ಅಚ್ಚಾಳಾಗಿ +ನಿಂದರು +ಕೆಲರು +ಕಾಳೆಗಕೆ

ಅಚ್ಚರಿ:
(೧) ಕೆಲರು – ೩-೫ ಸಾಲಿನ ಮೊದಲ ಪದ

ಪದ್ಯ ೭: ಧರ್ಮಜನು ಕೃಷ್ಣನ ಬಳಿ ಹೇಗೆ ತಲುಪಿದನು?

ಹಳುವವನು ಹೊರವಂಟು ಗರುಡನ
ಹಲವಿಗೆಯ ದೂರದಲಿ ಕಂಡನು
ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ
ತಳಿತರೋಮಾಂಚದಲಿ ಸಮ್ಮುದ
ಪುಳಕದಲಿ ಪೂರಾಯದುಬ್ಬಿನ
ಲಿಳೆಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ (ಅರಣ್ಯ ಪರ್ವ, ೧೫ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮಜನು ತಾನಿದ್ದ ಕಾಡಿನಿಂದ ಹೊರಟು ಕೃಷ್ಣನ ಬರುವ ಮಾರ್ಗದಲ್ಲಿ ಮುನ್ನಡೆದನು, ದೂರದಲ್ಲಿ ಗರುಡ ಧ್ವಜವನ್ನು ಕಂಡನು. ಆನಂದ ಬಾಷ್ಪಗಳು ಸೂಸಲು, ರೋಮಾಂಚನಗೊಂಡು ಮತ್ತೆ ಮತ್ತೆ ನಮಸ್ಕರಿಸುತ್ತಾ ಶ್ರೀಕೃಷ್ಣನತ್ತ ನಡೆತಂದನು.

ಅರ್ಥ:
ಹಳುವ: ಕಾಡು; ಹೊರವಂಟು: ಹೊರಟು; ಗರುಡ: ವಿಷ್ಣುವಿನ ವಾಹನ; ಹಳವಿಗೆ: ಬಾವುಟ; ದೂರ: ಅಂತರ; ಕಂಡು: ನೋಡು; ತುಳುಕು: ಹೊರ ಚೆಲ್ಲು; ಸಂತೋಷ: ಹರ್ಷ; ಜಲ: ನೀರು; ನಿಟ್ಟೆಸಳುಗಂಗಳು: ಹೂವಿನದಳದಂತೆ ದೀರ್ಘವಾದ ಕಣ್ಣುಗಳು; ತಳಿತ: ಚಿಗುರಿದ; ರೋಮಾಂಚನ: ಪುಳಕ; ಸಮ್ಮುದ: ಸಂತೋಷ; ಪುಳಕ: ಮೈನವಿರೇಳುವಿಕೆ; ಪೂರಾಯ: ಪರಿಪೂರ್ಣ; ಉಬ್ಬು: ಅಧಿಕ; ಇಳೆ: ಭೂಮಿ; ಇಳೆಯೊಡೆಯ: ರಾಜ; ಮೈಯಿಕ್ಕು: ನಮಸ್ಕರಿಸು; ಐದು: ಬಂದುಸೇರು; ಅಖಿಳ: ಎಲ್ಲಾ; ಜನ: ಜನರು; ಸಹಿತ; ಜೊತೆ;

ಪದವಿಂಗಡಣೆ:
ಹಳುವವನು +ಹೊರವಂಟು +ಗರುಡನ
ಹಳವಿಗೆಯ+ ದೂರದಲಿ +ಕಂಡನು
ತುಳುಕಿದವು +ಸಂತೋಷಜಲ+ ನಿಟ್ಟೆಸಳುಗಂಗಳಲಿ
ತಳಿತ+ರೋಮಾಂಚದಲಿ+ ಸಮ್ಮುದ
ಪುಳಕದಲಿ+ ಪೂರಾಯದ್+ಉಬ್ಬಿನಲ್
ಇಳೆಯೊಡೆಯ+ ಮೈಯಿಕ್ಕುತ್+ಐದಿದನ್+ಅಖಿಳ +ಜನಸಹಿತ

ಅಚ್ಚರಿ:
(೧) ಧರ್ಮಜನ ಸಂಭ್ರಮ – ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ ತಳಿತರೋಮಾಂಚದಲಿ ಸಮ್ಮುದ ಪುಳಕದಲಿ ಪೂರಾಯದುಬ್ಬಿನಲಿಳೆಯೊಡೆಯ ಮೈಯಿಕ್ಕುತೈದಿದನ

ಪದ್ಯ ೩೬: ಶಿವನು ಮರುಗಲು ಕಾರಣವೇನು?

ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ
ನೋಯೆನೊಂದನು ಮೀರಿ ಮುನಿಯಲಿ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ (ಅರಣ್ಯ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನ ಘಾತದಿಂದ ಆದ ಪೆಟ್ಟನ್ನು ಸೈರಿಸಿ, ಶಿವನು ಅರ್ಜುನನನ್ನು ಪೂರ್ಣ ಶಕ್ತಿಯಿಂದ ಮೆಟ್ಟಿದನು. ಅರ್ಜುನನ ಬಾಯಲ್ಲಿ ಮೂಗಿನ ಎರಡು ಹೊಳ್ಳೆಗಳಲ್ಲಿ ರಕ್ತ ಬಂದಿತು. ಅರ್ಜುನನಿಗೆ ನೋವಾಯಿತೆಂದುಕೊಂಡು ಶಿವನು ಬಹಳವಾಗಿ ನೊಂದನು. ನಾನು ಸ್ವಲ್ಪ ಕೋಪಗೊಂಡುದರಿಂದ ತಪ್ಪಾಯಿತೇ, ನನ್ನಿಂದೇನಾದರೂ ತಪ್ಪಾಯಿತೇ ಎಂದು ಶಿವನು ಮರುಗಿದನು.

ಅರ್ಥ:
ಗಾಯ: ಪೆಟ್ಟು; ಮನ್ನಿಸು: ಒಪ್ಪು, ಅಂಗೀಕರಿಸು; ಶಿವ: ಶಂಕರ; ಪೂರಾಯ: ಪರಿಪೂರ್ಣ; ಮೆಟ್ಟು: ತುಳಿತ; ಬಾಯಿ: ಮುಖದ ಅವಯವ; ಉಕ್ಕು: ಹೊಮ್ಮಿ ಬರು; ರುಧಿರ: ರಕ್ತ; ನಾಸಿಕ: ಮೂಗು; ಬಾಹೆ: ಪಾರ್ಶ್ವ, ಹೊರವಲಯ; ಮೀರು: ಉಲ್ಲಂಘಿಸು; ಮುನಿ: ಸಿಟ್ಟಾಗು, ಕೋಪಗೊಳ್ಳು; ಅಪಾಯ: ಕೇಡು, ತೊಂದರೆ; ಅಕಟಕಟಾ: ಅಯ್ಯೋ; ತಪ್ಪು: ಸುಳ್ಳಾಗು; ಮರುಗು: ತಳಮಳ, ಸಂಕಟ; ಮದನಾರಿ: ಶಿವ, ಮದನ ವೈರಿ;

ಪದವಿಂಗಡಣೆ:
ಗಾಯವನು +ಮನ್ನಿಸುತ +ಶಿವ +ಪೂ
ರಾಯದಲಿ+ ಮೆಟ್ಟಿದನು +ಪಾರ್ಥನ
ಬಾಯೊಳ್+ಉಕ್ಕುದು +ರುಧಿರ +ನಾಸಿಕದ್+ಎರಡು+ ಬಾಹೆಯಲಿ
ನೋಯೆನೊಂದನು +ಮೀರಿ +ಮುನಿಯಲಿ
ಪಾಯವಾದುದ್+ಅಕಟಕಟಾ+ ತ
ಪ್ಪಾಯಿತೇ +ತಪ್ಪಾಯ್ತೆನುತ +ಮರುಗಿದನು +ಮದನಾರಿ

ಅಚ್ಚರಿ:
(೧) ಶಿವನು ದುಃಖಿಸಿದ ಪರಿ – ನೋಯೆನೊಂದನು ಮೀರಿ ಮುನಿಯಲಿ ಪಾಯವಾದುದಕಟಕಟಾ ತಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ

ಪದ್ಯ ೪೭: ಕೃಷ್ಣನು ದತ್ತಾತ್ರೇಯಾವತಾರದಲ್ಲಿ ಏನು ಮಾಡಿದ?

ರಾಯ ಕೇಳೈ ವಿಮಲ ದತ್ತಾ
ತ್ರೇಯವೆಸರಲಿ ಧರ್ಮವನು ಪೂ
ರಾಯದಲಿ ಪಲ್ಲವಿಸಿದನು ಹೈಹಯನ ರಾಜ್ಯದಲಿ
ಬಾಯಿಬಡುಕರು ಬಗುಳಿದರೆ ಹರಿ
ಯಾಯತಿಕೆ ಪಾಸಟಿಯೆ ನಿಗಮದ
ಬಾಯ ಬೀಯಗವೀ ಮುಕುಂದನನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೪೭ ಪದ್ಯ)

ತಾತ್ಪರ್ಯ:
ಧರ್ಮರಾಜನೇ ಕೇಳು, ಶ್ರೀಕೃಷ್ಣನು ದತ್ತಾತ್ರೇಯನೆಂಬ ಹೆಸರಿನಿಂದ ಅವತರಿಸಿ ಹೈಹಯ ಕಾರ್ತಿವೀರ್ಯನ ರಾಜ್ಯದಲ್ಲಿ ಧರ್ಮವನ್ನು ನಾಲ್ಕು ಕಾಲುಗಳ ಮೇಲೆ ನಿಲ್ಲಿಸಿದನು. ಶಿಶುಪಾಲನಂತಹ ಬಾಯಬಡುಕರು ಬೊಗಳಿದರೆ ಶ್ರೀಕೃಷ್ಣನ ಘನತೆಗೆ ಯಾರು ಸರಿಯಾದಾರು? ಇವನು ವೇದಗಳ ಬಾಯಿಗೇ ಬೀಗಹಾಕಿದವನು, ವೇದಗಳೇ ಇವನನ್ನು ಅರಿಯಲು ಸಾಧ್ಯವಾಗಲಿಲ್ಲ, ಇನ್ನಾರಿಗೆ ಇವನನ್ನು ಅರಿಯಲು ಸಾಧ್ಯ ಎಂದು ಭೀಷ್ಮರು ಹೇಳಿದರು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ವಿಮಲ: ನಿರ್ಮಲ, ಶುದ್ಧ; ಧರ್ಮ: ಧಾರಣೆಮಾಡಿದುದು; ಪೂರಾಯ: ಪರಿಪೂರ್ಣ; ಪಲ್ಲವಿಸು: ವಿಕಸಿಸು; ರಾಜ್ಯ: ರಾಷ್ಟ್ರ; ಬಾಯಿಬಡುಕ: ವೃಥಾಮಾತಾಡುವವರು; ಬಗುಳು: ಬೊಗಳು; ಆಯತಿ: ಸಾಮರ್ಥ್ಯ; ಪಾಸಟಿ: ಸಮಾನ, ಹೋಲಿಕೆ; ನಿಗಮ: ವೇದ; ಬೀಯಗ: ಕೀಲಿ; ಅರಿ: ತಿಳಿ;

ಪದವಿಂಗಡಣೆ:
ರಾಯ +ಕೇಳೈ +ವಿಮಲ +ದತ್ತಾ
ತ್ರೇಯವೆಸರಲಿ+ ಧರ್ಮವನು +ಪೂ
ರಾಯದಲಿ +ಪಲ್ಲವಿಸಿದನು +ಹೈಹಯನ +ರಾಜ್ಯದಲಿ
ಬಾಯಿಬಡುಕರು+ ಬಗುಳಿದರೆ +ಹರಿ
ಯಾಯತಿಕೆ+ ಪಾಸಟಿಯೆ+ ನಿಗಮದ
ಬಾಯ +ಬೀಯಗವ್+ಈ+ ಮುಕುಂದನನ್+ಅರಿವರಾರೆಂದ

ಅಚ್ಚರಿ:
(೧) ಶಿಶುಪಾಲನನ್ನು ಬಯ್ಯುವ ಪರಿ – ಬಾಯಿಬಡುಕರು ಬಗುಳಿದರೆ
(೨) ಕೃಷ್ಣನ ಗುಣಗಾನ – ನಿಗಮದಬಾಯ ಬೀಯಗವೀ ಮುಕುಂದನನರಿವರಾರೆಂದ