ಪದ್ಯ ೪: ಕೃಷ್ಣನು ಗಾಂಧಾರಿಯನ್ನು ಎಲ್ಲಿಗೆ ಕರೆದೊಯ್ದನು?

ಎಂದು ಕೈಗೊಟ್ಟಬಲೆಯನು ಹರಿ
ತಂದನಾ ಸಂಗ್ರಾಮಭೂಮಿಗೆ
ಹಿಂದೆ ಬರಲಷ್ಟಾದಶಾಕ್ಷೋಹಿಣಿಯ ನಾರಿಯರು
ಮುಂದೆ ಹೆಣದಿನಿಹಿಗಳು ಖಗಮೃಗ
ವೃಂದ ಚೆಲ್ಲಿತು ಭೂತ ಪೂತನಿ
ವೃಂದ ಕೆದರಿತು ಹೊಕ್ಕರಿವರದ್ಭುತರಣಾಂಗಣವ (ಗದಾ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ, ಶ್ರೀಕೃಷ್ಣನು ಗಾಂಧಾರಿಯ ಕೈಹಿಡಿದುಕೊಂದು ರಣಭೂಮಿಗೆ ಬಂದನು. ಹದಿನೆಂಟು ಅಕ್ಷೋಹಿಣೀ ಸೇನೆಯ ಯೋಧರ ಪತ್ನಿಯರೂ ಹಿಂಬಾಲಿಸಿದರು. ಅವರು ಬರುತ್ತಿದ್ದಮ್ತೆ ಅವರ ಮುಂದೆ ಸೇರಿದ್ದ ಹೆಣವನ್ನು ತಿನ್ನುವ ಪ್ರಾಣಿ, ಪಕ್ಷಿ, ಭೂತ, ರಾಕ್ಷಸಿಗಳ ಗುಂಪು ಚದುರಿಹೋಯಿತು.

ಅರ್ಥ:
ಕೈಗೊಟ್ಟು: ಹಸ್ತವನ್ನು ಚಾಚು; ಅಬಲೆ: ಹೆಣ್ಣು; ಹರಿ: ಕೃಷ್ಣ; ತಂದು: ಬರೆಮಾಡು; ಸಂಗ್ರಾಮಭೂಮಿ: ರಣಭೂಮಿ; ಹಿಂದೆ: ನಡೆದುಹೋದ; ಬರಲು: ಆಗಮಿಸು; ಅಷ್ಟಾದಶ: ಹದಿನೆಂಟು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನಾರಿ: ಹೆಣ್ಣು; ಮುಂದೆ: ಎದುರು; ಹೆಣ: ಜೀವವಿಲ್ಲದ ಶರೀರ; ತಿನಿಹಿ: ತಿನ್ನುವ; ಖಗ: ಪಕ್ಷಿ; ಮೃಗ: ಪ್ರಾಣಿ; ವೃಂದ: ಗುಂಪು; ಚೆಲ್ಲು: ಹರಡು; ಭೂತ: ಪಿಶಾಚಿ; ಪೂತನಿ: ರಾಕ್ಷಸಿ; ಕೆದರು: ಹರಡು; ಹೊಕ್ಕು: ಸೇರು; ಅದ್ಭುತ: ಆಶ್ಚರ್ಯ; ರಣಾಂಗಣ: ಯುದ್ಧಭೂಮಿ;

ಪದವಿಂಗಡಣೆ:
ಎಂದು +ಕೈಗೊಟ್ಟ್+ಅಬಲೆಯನು +ಹರಿ
ತಂದನಾ+ ಸಂಗ್ರಾಮಭೂಮಿಗೆ
ಹಿಂದೆ +ಬರಲ್+ಅಷ್ಟಾದಶ+ಅಕ್ಷೋಹಿಣಿಯ+ ನಾರಿಯರು
ಮುಂದೆ+ ಹೆಣ+ತಿನಿಹಿಗಳು +ಖಗ+ಮೃಗ
ವೃಂದ +ಚೆಲ್ಲಿತು +ಭೂತ +ಪೂತನಿ
ವೃಂದ +ಕೆದರಿತು +ಹೊಕ್ಕರ್+ಇವರ್+ಅದ್ಭುತ+ರಣಾಂಗಣವ

ಅಚ್ಚರಿ:
(೧) ರಣರಂಗದ ಚಿತ್ರಣ – ಹೆಣದಿನಿಹಿಗಳು ಖಗಮೃಗ ವೃಂದ ಚೆಲ್ಲಿತು ಭೂತ ಪೂತನಿ ವೃಂದ ಕೆದರಿತು
(೨) ಚೆಲ್ಲು, ಕೆದರು – ಸಾಮ್ಯಾರ್ಥ ಪದಗಳು

ಪದ್ಯ ೧೧: ಸಂಜಯನು ಯಾರ ನಡಿಗೆಯನ್ನು ನೋಡಿದನು – ೪?

ಕಂದ ಪಖ್ಖಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ (ಗದಾ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಟ್ಟಿರಕ್ತದಿಂದ ತೋಯಿದ್ದ ಪಾತ್ರೆಯಂತಿದ್ದ ತಲೆಗಳನ್ನು ತಿಂದು ಎಸೆಯುವ ಕೊಬ್ಬನ್ನು ತಿಂದು ಕಾರುವ, ಸತ್ತ ಆನೆಗಳನ್ನು ತಿಂದು ತೆಳ್ಳಗೆ ಮಾಡುವ, ಹೆಣಗಳ ಗಾಯದಲ್ಲಿ ಬಾಯಿಟ್ಟು ಹೀರುವ ಪೂತನಿಗಳನ್ನು ಕಂಡು ಅವನು ಪಕ್ಕಕ್ಕೆ ಸರಿದು ಹೋಗುತ್ತಿದ್ದನು.

ಅರ್ಥ:
ಪಖ್ಖಲೆ: ನೀರಿನ ಚೀಲ, ಕೊಪ್ಪರಿಗೆ; ತೀವು: ತುಂಬು, ಭರ್ತಿಮಾಡು; ಮಂದ: ನಿಧಾನ ಗತಿಯುಳ್ಳದು; ರಕುತ: ನೆತ್ತರು; ತೋದ: ನೆನೆ, ಒದ್ದೆಯಾಗು; ತಲೆ: ಶಿರ; ತಿಂದು: ತಿನ್ನು; ಬಿಸುಡು: ಹೊರಹಾಕು; ನೆಣ: ಕೊಬ್ಬು, ಮೇದಸ್ಸು; ಪೂತನಿ: ರಾಕ್ಷಸಿ; ವೃಂದ: ಗುಂಪು; ಕಂಡು: ನೋಡು; ಓಸರಿಸು: ಓರೆಮಾಡು, ಹಿಂಜರಿ; ದೆಸೆ: ದಿಕ್ಕು; ಬಸೆ: ಕೊಬ್ಬು, ನೆಣ; ಬಾಡಿಸು: ಕಳೆಗುಂದಿಸು; ಸಂದಣಿ: ಗುಂಪು;

ಪದವಿಂಗಡಣೆ:
ಕಂದ +ಪಖ್ಖಲೆಗಳಲಿ +ತೀವಿದ
ಮಂದ +ರಕುತದ+ ತೋದ +ತಲೆಗಳ
ತಿಂದು +ಬಿಸುಡುವ +ನೆಣನ +ಕಾರುವ +ಬಸೆಯ +ಬಾಡಿಸುವ
ಸಂದಣಿಸಿ +ಹರಿದೇರ+ ಬಾಯ್ಗಳೊಳ್
ಒಂದಿ +ಬಾಯ್ಗಳನಿಡುವ +ಪೂತನಿ
ವೃಂದವನು +ಕಂಡ್+ಓಸರಿಸುವನ್+ಅದೊಂದು +ದೆಸೆಗಾಗಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತೋದ ತಲೆಗಳ ತಿಂದು
(೨) ಸಂದಣಿಸು, ವೃಂದ – ಸಮಾನಾರ್ಥಕ ಪದ

ಪದ್ಯ ೩೪: ಪೂತನಿಯರ ಮರಿಗಳು ಹೇಗೆ ನಲಿದರು?

ತೆಳುದೊಗಲ ನಿಡುಸೋಗೆಯುಡುಗೆಯ
ನೆಳಗರುಳ ಸಿಂಗಾರದುರುಬಿನ
ಕೆಳದಿಯರ ಕೈನೇಣ ಕಿರಿದೊಟ್ಟಿಲಿನ ಬೊಂಬೆಗಳ
ಎಳಮಿದುಳ ಕಜ್ಜಾಯ ಮೂಳೆಯ
ಹಳುಕು ಕಾಳಿಜದಟ್ಟುಗುಳಿಗಳ
ಕೆಳೆಗಳೊಳು ಕೊಡಗೂಸು ಪೂತನಿ ನಿಕರವೊಪ್ಪಿದವು (ಭೀಷ್ಮ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಪೂತನಿಗಳ ಮರಿಗಳು ತೆಳುತೊಗಲಿನ ಗರಿಯುಡುಗೆ, ತುರುಬಿನಲ್ಲಿ ಎಳೆ ಕರುಳುಗಳ ಶೃಂಗಾರ, ಕೆಳದಿಯರ ಜೊತೆ ಹಗ್ಗದಲ್ಲಿ ಮೂಳೆಗಳ ಬೊಂಬೆಗಳು, ಎಳೆ ಮಿದುಳ ಕಜ್ಜಾಯ, ಮೂಳೆಗಳ ತುಂಡುಗಳ ಪತ್ತಮಣೆಯಾಟ ಇವುಗಳಿಂದ ಒಪ್ಪಿದವು.

ಅರ್ಥ:
ತೆಳು: ಕೋಮಲ; ದೊಗಲು: ಚರ್ಮ; ನಿಡುಸೋಗೆ: ದೀರ್ಘವಾದ ಗರಿ; ಉಡುಗೆ: ಬಟ್ಟೆ; ಎಳ: ಎಳೆಯದು, ಚಿಕ್ಕದಾದ; ಕರುಳು: ಪಚನಾಂಗ; ಸಿಂಗಾರ: ಚೆಲುವು, ಅಂದ; ಉರುಬು: ಮೇಲೆ ಬೀಳು; ಕೆಳದಿ: ಗೆಳತಿ; ಕೈ: ಹಸ್ತ; ನೇಣು: ಹಗ್ಗ; ಕಿರಿದು: ಚಿಕ್ಕದ್ದು; ಬೊಂಬೆ: ಗೊಂಬೆ; ಮಿದುಳು: ಮಸ್ತಿಷ್ಕ; ಮೂಳೆ: ಎಲುಬು; ಹಳುಕು: ಚೂರು; ಕಾಳಿಜ: ಪಿತ್ತಾಶಯ; ಅಟ್ಟುಗುಳಿ: ಸಾಲಿಗೆ ಏಳು ಗುಳಿಗಳಂತೆ, ಎರಡು ಸಾಲುಗಳಲ್ಲಿ ಒಟ್ಟು ಹದಿನಾಲ್ಕು ಗುಳಿಗಳಿ; ಕೆಳೆ: ಸ್ನೇಹ; ಪೂತನಿ: ರಾಕ್ಷಸಿ; ನಿಕರ: ಗುಂಪು; ಒಪ್ಪು: ಸಮ್ಮತಿ; ಕೊಡಗೂಸು: ಕನ್ಯೆ, ಬಾಲಕಿ;

ಪದವಿಂಗಡಣೆ:
ತೆಳುದೊಗಲ +ನಿಡುಸೋಗೆ+ಉಡುಗೆಯನ್
ಎಳ+ಕರುಳ +ಸಿಂಗಾರದ್+ಉರುಬಿನ
ಕೆಳದಿಯರ +ಕೈನೇಣ+ ಕಿರಿದೊಟ್ಟಿಲಿನ+ ಬೊಂಬೆಗಳ
ಎಳಮಿದುಳ +ಕಜ್ಜಾಯ +ಮೂಳೆಯ
ಹಳುಕು+ ಕಾಳಿಜದ್+ಅಟ್ಟುಗುಳಿಗಳ
ಕೆಳೆಗಳೊಳು +ಕೊಡಗೂಸು+ ಪೂತನಿ+ ನಿಕರ+ಒಪ್ಪಿದವು

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೆಳದಿಯರ ಕೈನೇಣ ಕಿರಿದೊಟ್ಟಿಲಿನ

ಪದ್ಯ ೩೦: ರಾಕ್ಷಸಿಯರು ಏನನ್ನು ತಂದರು?

ಹೆಗಲ ಪಕ್ಕಲೆಗಳಲಿ ಕವಿದುದು
ವಿಗಡ ಪೂತನಿವೃಂದ ಜೀರ್ಕೊಳ
ವಿಗಳ ಕೈರಾಟಳದೊಳೈದಿತು ಶಾಕಿನೀ ನಿಕರ
ತೊಗಲ ಕುನಿಕಿಲ ಬಂಡಿಗಳಲಾ
ದರ್ಗಿದು ಹೊಕ್ಕರು ರಕ್ಕಸರು ಬಾ
ಯ್ದೆಗೆದು ಬಂದುದುಲೂಕ ಜಂಬುಕ ಕಾಕ ಸಂದೋಹ (ಭೀಷ್ಮ ಪರ್ವ, ೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಪೂತನಿಗಳು ಹೆಗಲ ಮೇಲೆ ಪಕ್ಕಲೆಗಳನ್ನು ತಂದವು. ಶಾಕಿನಿಯರು ಜೀರ್ಕೊಳವಿಗಳನ್ನು ಹಿಡಿದು ಬಂದರು. ತೊಗಲ ಚೀಳಗಲನ್ನು ಬಂಡಿಗಳಲ್ಲಿ ತಂದು ರಣರಾಕ್ಷಸರು ರಣರಂಗವನ್ನು ಹೊಕ್ಕರು. ಗೂಬೆ, ನರಿ, ಕಾಗೆಗಳು ಬಾಯ್ದೆರೆದುಕೊಂಡು ಬಂದವು.

ಅರ್ಥ:
ಹೆಗಲು: ಭುಜ; ಪಕ್ಕಲೆ: ಕೊಪ್ಪರಿಗೆ; ಕವಿದುದು: ಆವರಿಸು; ವಿಗಡ: ಶೌರ್ಯ; ಪೂತನಿ: ರಾಕ್ಷಸಿ; ವೃಂದ: ಗುಂಪು; ಕೊಳವಿ: ಪೊಳ್ಳಾದ ಬಿದಿರಿನ ನಾಳ; ಕೈರಾಟಣ: ಸಣ್ಣ ಚಕ್ರ; ಐದು: ಬಂದು ಸೇರು; ಶಾಕಿನಿ: ಕ್ಷುದ್ರ ದೇವತೆ; ನಿಕರ: ಗುಂಪು; ತೊಗಲ: ಚರ್ಮ; ಕುನಿಕಿಲ: ಚೀಳ; ಬಂಡಿ: ರಥ; ಹೊಕ್ಕು: ಸೇರು; ರಕ್ಕಸ: ರಾಕ್ಷಸ; ತೆಗೆ: ಬಿಚ್ಚು; ಬಂದು: ಆಗಮಿಸು; ಉಲೂಕ: ಗೂಬೆ; ಜಂಬುಕ: ನರಿ; ಕಾಕ: ಕಾಗೆ; ಸಂದೋಹ: ಗುಂಪು;

ಪದವಿಂಗಡಣೆ:
ಹೆಗಲ +ಪಕ್ಕಲೆಗಳಲಿ +ಕವಿದುದು
ವಿಗಡ +ಪೂತನಿ+ವೃಂದ +ಜೀರ್ಕೊಳ
ವಿಗಳ +ಕೈರಾಟಳದೊಳ್+ಐದಿತು +ಶಾಕಿನೀ +ನಿಕರ
ತೊಗಲ +ಕುನಿಕಿಲ+ ಬಂಡಿಗಳಲಾ
ದರ್ಗಿದು +ಹೊಕ್ಕರು +ರಕ್ಕಸರು +ಬಾ
ಯ್ದೆಗೆದು +ಬಂದುದ್+ಉಲೂಕ+ ಜಂಬುಕ +ಕಾಕ +ಸಂದೋಹ

ಅಚ್ಚರಿ:
(೧) ವೃಂದ, ನಿಕರ, ಸಂದೋಹ – ಸಮನಾರ್ಥಕ ಪದ
(೨) ಪೂತನಿ, ಶಾಕಿನಿ – ರಾಕ್ಷಸಿಯನ್ನು ಹೇಳಲು ಬಳಸಿದ ಪದಗಳು

ಪದ್ಯ ೫೬: ಬಾಲ್ಯದಲ್ಲಿ ಕೃಷ್ಣನ ಸಾಧನೆಗಳಾವುವು?

ಸೇದಿದನು ಪೂತನಿಯಸುವ ನವ
ಳಾದರಿಸಿ ಮೊಲೆವಾಲನೊಡಿಸೆ
ಪಾದತಳ ಸೋಂಕಿನಲಿ ತೊಟ್ಟಿಲ ಬಂಡಿ ನುಗ್ಗಾಯ್ತು
ಸೇದಿ ಕಟ್ಟಿದ್ದೊರಳನೆಳೆದರೆ
ಬೀದಿಯಲಿ ಮರಮುರಿದುದೀ ಕರು
ಗಾದವನ ಕೈಯಿಂದ ಮಡಿದುದು ಕಂಸ ಪರಿವಾರ (ಸಭಾ ಪರ್ವ, ೧೦ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕೃಷ್ಣನು ತನ್ನನ್ನು ಹಾಲು ಕುಡಿಸಲು ಬಂದ ಪೂತನಿಯ ಎದೆಹಾಲನ್ನು ಕುಡಿಯುವ ನೆವದಲ್ಲಿ ಅವಳ ಪ್ರಾಣವಾಯುಗಳನ್ನೇ ಎಳೆದುಬಿಟ್ಟನು. ಇವನ ಪಾದಗಳು ಸೋಕಿದ ಮಾತ್ರಕ್ಕೆ ತೊಟ್ಟಿಲ ಬಂಡಿ ಶಕಟಾಸುರ ಮುರಿದು ಬಿದ್ದಿತು. ಎಲ್ಲಿಯೂ ಹೋಗದಂತೆ ತುಂಟಾಟ ಮಾದದಿರಲೆಂದು ಯಶೋದೆಯು ಇವನನ್ನು ಒರಳು ಕಲ್ಲಿಗೆ ಕಟ್ಟಿದ್ದಳು, ಬಾಲಕ ಕೃಷ್ಣನು ಈ ಒರಳುಕಲ್ಲನ್ನು ಎಳೆದುಕೊಂಡು ಎರಡು ಮರಗಳ ನಡುವೆ ಹೋಗಲು ಯಮಳಾರ್ಜುನ ವೃಕ್ಷವು ಮುರಿದವು. ಕರುಗಳನ್ನು ಕಾಯುವ ಇವನಿಂದಲೇ ಕಂಸ ಪರಿವಾರವು ನಾಶವಾಯಿತು ಎಂದು ಕೃಷ್ಣನ ಹಿರಿಮೆಯನ್ನು ಭೀಷ್ಮರು ತಿಳಿಸಿದರು.

ಅರ್ಥ:
ಸೇದು: ಸೇಂದು, ಮುದುಡು; ಅಸು: ಪ್ರಾಣ; ಆದರ: ಪ್ರೀತಿ, ಆಸಕ್ತಿ; ಮೊಲೆ: ಸ್ತನ; ವಾಲನೂಡಿಸೆ: ಹಾಲು ಕುಡಿಸು; ಪಾದತಳ: ಚರಣ; ಸೋಂಕು: ಮುಟ್ಟುವಿಕೆ, ಸ್ಪರ್ಶ; ತೊಟ್ಟಿಲು: ಮಕ್ಕಳನ್ನು ತೂಗಿ ಮಲಗಿಸುವ ಸಾಧನ; ಬಂಡಿ: ರಥ; ನುಗ್ಗು: ಒಳಗೆ ಪ್ರವೇಶಿಸು; ಕಟ್ಟು: ಬಂಧಿಸು; ಒರಳು: ಒರಳುಕಲ್ಲು; ಎಳೆ: ತನ್ನ ಕಡೆಗೆ ಸೆಳೆದುಕೊ, ಆಕರ್ಷಿಸು; ಅರೆ:ಅರ್ಧಭಾಗ; ಬೀದಿ: ರಸ್ತೆ; ಮರ: ತರು; ಮುರಿ: ಸೀಳು; ಕರು: ಚಿಕ್ಕ ದನ; ಕಾದು: ಕಾಯುವ; ಕೈ: ಕರ, ಹಸ್ತ; ಮಡಿ: ಸಾವು; ಪರಿವಾರ: ವಂಶ;

ಪದವಿಂಗಡಣೆ:
ಸೇದಿದನು +ಪೂತನಿ+ಅಸುವ +ನವ
ಳಾದರಿಸಿ+ ಮೊಲೆವಾಲನ್+ಊಡಿಸೆ
ಪಾದತಳ+ ಸೋಂಕಿನಲಿ+ ತೊಟ್ಟಿಲ +ಬಂಡಿ +ನುಗ್ಗಾಯ್ತು
ಸೇದಿ +ಕಟ್ಟಿದ್+ಒರಳನ್+ಎಳೆದರೆ
ಬೀದಿಯಲಿ +ಮರಮುರಿದುದ್+ಈ+ ಕರು
ಕಾದವನ +ಕೈಯಿಂದ +ಮಡಿದುದು +ಕಂಸ +ಪರಿವಾರ (ಸಭಾ ಪರ್ವ, ೧೦ ಸಂಧಿ, ೫೬ ಪದ್ಯ)

ಅಚ್ಚರಿ:
(೧) ಕ ಕಾರದ ಸಾಲು ಪದ – ಕರುಗಾದವನ ಕೈಯಿಂದ ಮಡಿದುದು ಕಂಸ ಪರಿವಾರ