ಪದ್ಯ ೯: ಧರ್ಮಜನಿಗೆ ಯಾವ ವಿದ್ಯೆಯನ್ನು ಬೋಧಿಸಲಾಯಿತು?

ನಳ ಮಹೀಪತಿ ಯಕ್ಷ ಹೃದಯವ
ತಿಳಿದು ಋತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕರನ ವಿದ್ಯಾತಿ ಮಹಿಮೆಯಲಿ
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯಕೊಂಡರು ಮರಳಿ ಜೂಜಿಂ
ಗಳುಕಬೇಡೆಂದಕ್ಷಹೃದಯವ ಮುನಿಪ ಕರುಣಿಸಿದ (ಅರಣ್ಯ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ನಳನು ಋತುಪರ್ಣನಿಂದ ಅಕ್ಷಹೃದಯವನ್ನು ಕಲಿತನು, ಕಾಲವು ಕಳೆದ ಮೇಲೆ ಪುಷ್ಕರನನ್ನು ಅಕ್ಷಹೃದಯದ ಮಹಿಮೆಯಿಂದ ಗೆದ್ದನು. ಶಕುನಿ ಕೌರವರು ನಿನ್ನನ್ನು ಪಗಡೆಯಲ್ಲಿ ಸೋಲಿಸಿ ನಿನ್ನ ರಾಜ್ಯವನ್ನು ಗೆದ್ದುಕೊಂಡರು. ಮತ್ತೊಮ್ಮೆ ನಿನ್ನನ್ನು ಜೂಜಿಗೆ ಕರೆದರೂ ನೀನು ಹೆದರಬೇಡ ಎಂದು ಧರ್ಮಜನಿಗೆ ಅಕ್ಷಹೃದಯವನ್ನು ಬೋಧಿಸಿದನು.

ಅರ್ಥ:
ಮಹೀಪತಿ: ರಾಜ; ಹೃದಯ: ವಕ್ಷಸ್ಥಳ; ಅಕ್ಷ: ಪಗಡೆಯ ಜೂಜು; ಅಕ್ಷಹೃದಯ: ಪಗಡೆಯ ಆಟದ ಗುಟ್ಟು; ತಿಳಿ: ಅರ್ಥೈಸು; ಕಾಲ: ಸಮಯ; ಕಳೆ: ತೊರೆ, ಹೋಗಲಾಡಿಸು; ಗೆಲಿ: ಜಯಗಳಿಸು; ವಿದ್ಯ: ಜ್ಞಾನ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಇಳೆ: ಭೂಮಿ; ಮರಳಿ: ಮತ್ತೆ; ಜೂಜು: ದ್ಯೂತ; ಅಳುಕು: ಹೆದರು; ಮುನಿಪ: ಋಷಿ; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ನಳ +ಮಹೀಪತಿ+ ಅಕ್ಷಹೃದಯವ
ತಿಳಿದು +ಋತುಪರ್ಣನಲಿ +ಕಾಲವ
ಕಳೆದು +ಗೆಲಿದನು +ಪುಷ್ಕರನ +ವಿದ್ಯಾತಿ +ಮಹಿಮೆಯಲಿ
ಗೆಲಿದು+ ಕೌರವ+ ಶಕುನಿಗಳು+ ನಿನ್
ಇಳೆಯ+ಕೊಂಡರು +ಮರಳಿ +ಜೂಜಿಂಗ್
ಅಳುಕ+ಬೇಡೆಂದ್+ಅಕ್ಷಹೃದಯವ +ಮುನಿಪ +ಕರುಣಿಸಿದ

ಅಚ್ಚರಿ:
(೧) ಅಕ್ಷಹೃದಯ ವಿದ್ಯೆಯ ಮಹಿಮೆ ಬಗ್ಗೆ ತಿಳಿಸುವ ಪದ್ಯ

ಪದ್ಯ ೬: ಬೃಹದಶ್ವನು ಯಾರ ಕಥೆಯನ್ನು ಹೇಳಲು ಪ್ರಾರಂಭಿಸಿದನು?

ಆತನೀತನ ಸಂತವಿಟ್ಟು
ದ್ಯೂತದಲಿ ನಳಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿಂದ ಪುಷ್ಕರಗೆ
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ (ಅರಣ್ಯ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಬೃಹದಶ್ವನು ಧರ್ಮಜನನ್ನು ಸಂತೈಸಿ ಅವನಿಗೆ ನಳನ ಕಥೆಯನ್ನು ಹೇಳಿದನು. ನಳ ಚಕ್ರವರ್ತಿಯು ಕಲಿಯ ದೆಸೆಯಿಂದ ಪುಷ್ಕರನಿಗೆ ರಾಜ್ಯವನ್ನು ಸೋತು, ಪತ್ನಿಯಾದ ದಮಯಂತಿಯೊಂದಿಗೆ ಕಾಡಿಗೆ ಹೋಗಿ, ಕಾಡಿನಲ್ಲಿ ಅವಳೊಬ್ಬಳನ್ನೇ ತ್ಯಜಿಸಿದನು.

ಅರ್ಥ:
ಸಂತವಿಡು: ಸಂತೈಸು; ದ್ಯೂತ: ಪಗಡೆಯಾಟ; ಚಕ್ರವರ್ತಿ: ರಾಜ; ಮಹೀತಳ: ಭೂಮಿ; ಸೋತು: ಪರಾಭವ; ಭೂತಳ: ಭೂಮಿ; ಬಿಸುಟು: ತ್ಯಜಿಸು, ಹೊರಹಾಕು; ಅಡವಿ: ಅರಣ್ಯ; ವಧು: ಹೆಂಡತಿ, ಹೆಣ್ಣು; ಸಹಿತ; ಜೊತೆ; ವನ: ಕಾಡು; ಕಾತರ: ಕಳವಳ; ಸತಿ: ಹೆಂಡತಿ; ಬಿಸುಟು: ಹೊರಹಾಕು; ಹಾಯ್ದು: ಮೇಲೆಬಿದ್ದು; ಅಡವಿ: ಕಾಡು;

ಪದವಿಂಗಡಣೆ:
ಆತನ್+ಈತನ +ಸಂತವಿಟ್ಟು
ದ್ಯೂತದಲಿ +ನಳ+ಚಕ್ರವರ್ತಿ +ಮ
ಹೀತಳವ +ಸೋತನು +ಕಣಾ +ಕಲಿಯಿಂದ +ಪುಷ್ಕರಗೆ
ಭೂತಳವ +ಬಿಸುಟ್+ಅಡವಿಗೈದಿದನ್
ಆತ +ನಿಜವಧು +ಸಹಿತ +ವನದಲಿ
ಕಾತರಿಸಿ +ನಿಜಸತಿಯ +ಬಿಸುಟನು +ಹಾಯ್ದನ್+ಅಡವಿಯಲಿ

ಅಚ್ಚರಿ:
(೧) ವಧು, ಸತಿ; ಅಡವಿ, ವನ; ಮಹೀತಳ, ಭೂತಳ – ಸಮನಾರ್ಥಕ ಪದ

ಪದ್ಯ ೯೨: ಭೀಮನು ಏನೆಂದು ಘೋಷಿಸಿದನು?

ಇವನ ನೆತ್ತರ ಕುಡಿವ ರಿಪುಕೌ
ರವರ ನೂರ್ವರ ಕಡಿವ ಭಾಷೆಗ
ಳೆವಗೆ ಪೂರಾಯವು ಸುಯೋಧನಹರಣವೊಂದುಳಿಯೆ
ಅವನಿ ಜಳ ಶಿಖಿ ಪವನ ಪುಷ್ಕರ
ದಿವಿಜ ದನುಜೋರಗಮುಖಾಖಿಳ
ಭುವನಜನ ನೀವ್ ಕೇಳಿಯೆಂದನು ಭೀಮ ಮೊಗನೆಗಹಿ (ಕರ್ಣ ಪರ್ವ, ೧೯ ಸಂಧಿ, ೯೨ ಪದ್ಯ)

ತಾತ್ಪರ್ಯ:
ನಾನು ಮಾಡಿದ ಪ್ರತಿಜ್ಞೆಯಂತೆ ದುಶ್ಯಾಸನನ ರಕ್ತವನ್ನು ಕುಡಿದು, ನೂರುಜನ ಕೌರವರರನ್ನು ಸಂಹಾರಮಾಡಿದ್ದೇನೆ, ಇನ್ನು ಉಳಿದಿರುವುದು ಸುಯೋಧನನ ವಧೆ ಮಾತ್ರ ಇದಕ್ಕೆ ಭೂಮಿ, ಜಲ, ಅಗ್ನಿ, ವಾಯು, ಆಕಾಶಗಳು, ಸುರ, ಅಸುರ, ಪನ್ನಗ ಮೊದಲಾದ ವಿಶ್ವದ ಸಮಸ್ತ ಜನರೇ ಕೇಳಿ ಎಂದು ಮುಖಮೇಲೆತ್ತಿ ಘೋಷಿಸಿದನು.

ಅರ್ಥ:
ನೆತ್ತರ: ರಕ್ತ; ಕುಡಿ: ಪಾನ; ರಿಪು: ವೈರಿ; ಕಡಿ: ಸೀಳು, ಸಾವು; ಭಾಷೆ: ನುಡಿ; ಪೂರಾಯ: ಪರಿಪೂರ್ಣ; ಹರಣ: ಅಪಹರಿಸುವದು; ಅವನಿ: ಭೂಮಿ; ಜಳ: ನೀರು; ಶಿಖಿ: ಅಗ್ನಿ; ಪವನ: ವಾಯು; ಪುಷ್ಕರ: ಆಕಾಶ, ದಿವಿಜ: ದೇವತೆ; ‍ದನುಜ: ದಾನವ; ಉರಗ: ಹಾವು; ಮುಖ: ಆನನ; ಅಖಿಳ: ಸರ್ವ, ಎಲ್ಲಾ; ಭುವನ: ಭೂಮಿ; ಜನ: ಪ್ರಜೆ, ಮಾನುಷ; ಕೇಳಿ: ಆಲಿಸಿ ಮೊಗ: ಮುಖ; ನೆಗಹು: ಮೇಲಕ್ಕೆತ್ತು; ಮೊಗನೆಗಹಿ: ಮುಖಮೇಲೆತ್ತು;

ಪದವಿಂಗಡಣೆ:
ಇವನ +ನೆತ್ತರ +ಕುಡಿವ +ರಿಪುಕೌ
ರವರ +ನೂರ್ವರ +ಕಡಿವ +ಭಾಷೆಗ
ಳೆವಗೆ +ಪೂರಾಯವು +ಸುಯೋಧನ+ಹರಣ+ಒಂದುಳಿಯೆ
ಅವನಿ +ಜಳ +ಶಿಖಿ +ಪವನ+ ಪುಷ್ಕರ
ದಿವಿಜ +ದನುಜ+ಉರಗ+ಮುಖ+ಅಖಿಳ
ಭುವನಜನ +ನೀವ್ +ಕೇಳಿಯೆಂದನು+ ಭೀಮ +ಮೊಗನೆಗಹಿ

ಅಚ್ಚರಿ:
(೧) ಪಂಚಭೂತಗಳನ್ನು ಕರೆದ ಬಗೆ – ಅವನಿ, ಜಳ, ಶಿಖಿ, ಪವನ, ಪುಷ್ಕರ