ಪದ್ಯ ೯: ಅರಮನೆಯಲ್ಲಿ ಸಂಭ್ರಮದ ವಾತಾವರಣವು ಏಕಾಯಿತು?

ತುಂಬಿದುದು ನವಮಾಸ ಜನಿಸಿದ
ನಂಬಿಕೆಯ ಬಸುರಿನಲಿ ಸೂನುಗ
ತಾಂಬಕನು ಮಗನಾದನಂಬಾಲಿಕೆಗೆ ಪಾಂಡುಮಯ
ಚುಂಬಿಸಿತು ಪರಿತೋಷ ನವ ಪುಳ
ಕಾಂಬುಗಳು ಜನಜನಿತವದನೇ
ನೆಮ್ಬೆನುತ್ಸವವನು ಕುಮಾರೋದ್ಭವದ ವಿಭವದಲಿ (ಆದಿ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಅಂಬಿಕೆ, ಅಂಬಾಲಿಕೆ ಮತ್ತು ವಿಲಾಸಿನಿಯರಿಗೆ ನವಮಾಸಗಳು ತುಂಬಿದವು. ಅಮ್ಬಿಕೆಗೆ ಒಬ್ಬ ಕುರುಡನೂ, ಅಂಬಾಲಿಕೆಗೆ ಬಿಳಿಮೈಯುಳ್ಳವನೂ ಆದ ಮಕ್ಕಳು ಹುಟ್ಟಿದರು. ಈ ಮಕ್ಕಳು ಹುಟ್ಟಿದುದರಿಂದ ಅಪರಿಮಿತ ಸಂತೋಷವೂ, ಆನಂದಾಶ್ರುಗಳೂ ರಾಜ ಪರಿವಾರಕ್ಕೆ ಉಂಟಾಯಿತು. ಮಹಾವೈಭವದಿಂದ ಉತ್ಸವವಾಯಿತು. ಜನಸಾಮಾನ್ಯರೂ ಸಂಭ್ರಮಿಸಿದರು.

ಅರ್ಥ:
ತುಂಬು: ಪೂರ್ಣಗೊಳ್ಳು; ನವ: ಒಂಬತ್ತು; ಮಾಸ: ತಿಂಗಳು; ಜನಿಸು: ಹುಟ್ಟು; ಬಸುರು: ಹೊಟ್ಟೆ; ಸೂನು: ಮಗ; ಅಂಬಕ: ಕಣ್ಣು; ಮಗ: ಪುತ್ರ; ಪಾಂಡು: ಬಿಳಿಯ ಬಣ್ಣ, ಧವಳವರ್ಣ; ಚುಂಬಿಸು: ಮುತ್ತಿಡು, ಸೇರು; ಪರಿತೋಷ: ಸಂತಸ; ನವ: ಹೊಸ; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಅಂಬು: ನೀರು; ಜನಜನಿತ: ಜನರಲ್ಲಿ ಹಬ್ಬಿರುವ ವಿಷಯ; ಉತ್ಸವ: ಸಂಭ್ರಮ; ಉದ್ಭವ: ಹುಟ್ಟು; ವಿಭವ: ಸಿರಿ, ಸಂಪತ್ತು; ಗತ: ಕಳೆದ, ಇಲ್ಲದ;

ಪದವಿಂಗಡಣೆ:
ತುಂಬಿದುದು+ ನವಮಾಸ +ಜನಿಸಿದನ್
ಅಂಬಿಕೆಯ +ಬಸುರಿನಲಿ +ಸೂನು
ಗತ+ಅಂಬಕನು+ ಮಗನಾದನ್+ಅಂಬಾಲಿಕೆಗೆ +ಪಾಂಡುಮಯ
ಚುಂಬಿಸಿತು +ಪರಿತೋಷ +ನವ +ಪುಳ
ಕಾಂಬುಗಳು +ಜನಜನಿತವ್+ಅದನೇ
ನೆಂಬೆನ್+ಉತ್ಸವವನು +ಕುಮಾರ್+ಉದ್ಭವದ+ ವಿಭವದಲಿ

ಅಚ್ಚರಿ:
(೧) ಕುರುಡ ಎಂದು ಹೇಳಲು – ಗತಾಂಬಕ ಪದದ ಪ್ರಯೋಗ

ಪದ್ಯ ೨೩: ದ್ರೌಪದಿಯು ಕೃಷ್ಣನನ್ನು ಹೇಗೆ ಭಜಿಸಿದಳು?

ಮುಗುದೆ ಮಿಗೆ ನಿಂದಿರ್ದು ಸಮಪದ
ಯುಗಳದಲಿ ಸೂರ್ಯನ ನಿರೀಕ್ಷಿಸಿ
ಮಗುಳೆವೆಯ ನೆರೆಮುಚ್ಚಿ ನಾಸಿಕದಗ್ರದಲಿ ನಿಲಿಸಿ
ನೆಗಹಿ ಪುಳಕಾಂಬುಗಳು ಮೈಯಲಿ
ಬಿಗಿದುವೊನಲಾಗಿರಲು ಹಿಮ್ಮಡಿ
ಗೊಗುವ ಕೇಶದ ಬಾಲೆ ಭಾವಿಸಿ ನೆನೆದಳುಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ದ್ರೌಪದಿಯು ಪಾದಗಳನ್ನು ಸಮವಾಗಿ ನಿಲ್ಲಿಸಿ, ಕಣ್ಣಿನ ರೆಪ್ಪೆಯನ್ನು ಸ್ವಲ್ಪ ಮುಚ್ಚಿ, ಸೂರ್ಯನನ್ನು ನೋಡಿ, ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸಿ, ರೋಮಾಂಚನದ ಜಲವು ಹರಿಯುತ್ತಿರಲು, ಹಿಮ್ಮಡಿಯನ್ನು ಮುಟ್ಟುವ ಕೇಷರಾಶಿಯ ಅಬಲೆಯು ಶ್ರೀಕೃಷ್ಣನನ್ನು ಸ್ಮರಿಸಿದಳು.

ಅರ್ಥ:
ಮುಗುದೆ: ಕಪಟವರಿಯದವಳು; ಮಿಗೆ: ಮತ್ತು, ಅಧಿಕವಾಗಿ; ನಿಂದಿರ್ದು: ನಿಲ್ಲು; ಸಮ: ಸಮನಾಗಿ; ಪದ: ಪಾದ, ಚರಣ; ಯುಗಳ: ಎರಡು; ಸೂರ್ಯ: ರವಿ; ನಿರೀಕ್ಷಿಸಿ: ನೋಡಿ; ಮಗುಳೆ: ಮತ್ತೆ, ಪುನಃ; ನೆರೆ: ಪಕ್ಕ, ಪಾರ್ಶ್ವ; ನಾಸಿಕ: ಮೂಗು; ನೆಗಹು: ಮೇಲೆತ್ತು; ಪುಳಕ: ರೋಮಾಂಚನ; ಅಂಬು: ನೀರು; ಮೈ: ತನು; ಬಿಗಿ: ಕಟ್ತು; ಹಿಮ್ಮಡಿ: ಹಿಂದಿನ ಪಾದ; ಒಗು: ಚೆಲ್ಲು, ಸುರಿ; ಕೇಶ: ಕೂದಲು; ಬಾಲೆ: ಅಬಲೆ, ಹೆಣ್ಣು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಚ್ಯುತ: ಚ್ಯುತಿಯಿಲ್ಲದ (ಕೃಷ್ಣ);

ಪದವಿಂಗಡಣೆ:
ಮುಗುದೆ +ಮಿಗೆ +ನಿಂದಿರ್ದು +ಸಮಪದ
ಯುಗಳದಲಿ +ಸೂರ್ಯನ +ನಿರೀಕ್ಷಿಸಿ
ಮಗುಳೆವೆಯ +ನೆರೆಮುಚ್ಚಿ +ನಾಸಿಕದ್+ಅಗ್ರದಲಿ +ನಿಲಿಸಿ
ನೆಗಹಿ +ಪುಳಕಾಂಬುಗಳು+ ಮೈಯಲಿ
ಬಿಗಿದುವೊನಲಾಗಿರಲು +ಹಿಮ್ಮಡಿ
ಗೊಗುವ +ಕೇಶದ +ಬಾಲೆ +ಭಾವಿಸಿ+ ನೆನೆದಳ್+ಅಚ್ಯುತನ

ಅಚ್ಚರಿ:
(೧) ದ್ರೌಪದಿಯ ಕೇಶವನ್ನು ವಿವರಿಸುವ ಪರಿ – ಹಿಮ್ಮಡಿಗೊಗುವ ಕೇಶದ ಬಾಲೆ

ಪದ್ಯ ೫೦: ಭೀಮನು ದುಶ್ಯಾಸನನನ್ನು ನೋಡಿ ಏನು ಹೇಳಿದ?

ಉಕ್ಕಿದುದು ತನಿಹರುಷ ಮೈಯೊಳ
ಗೊಕ್ಕವಾ ಪುಳಕಾಂಬು ಕಂಗಳು
ಮುಕ್ಕುಳಿಸಿದುವು ಮುನ್ನ ದುಶ್ಯಾಸನನ ಶೋಣಿತವ
ಬಿಕ್ಕುವಹಿತನನಡಿಗಡಿಗೆ ಎವೆ
ಯಿಕ್ಕದೀಕ್ಷಿಸಿ ತಣಿಯದಿನ್ನಕ
ಸಿಕ್ಕಿ ಸಿಡಿಮಿಡಿಗೊಂಬ ರೋಷವೆ ರಾಜ್ಯಮಾಡೆಂದ (ಕರ್ಣ ಪರ್ವ, ೧೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಭೀಮನಿಗೆ ಅತಿಶಯವಾದ ಆನಂದವಾಯಿತು, ಮೈಯಲ್ಲಿ ರೋಮಾಂಚನದ ಬೆವರು ತೋರಿದವು, ನೋಡುವ ಮೊದಲೇ ಕಣ್ಣುಗಳು ದುಶ್ಯಾಸನನ ರಕ್ತವನ್ನು ಮುಕ್ಕುಳಿಸಿದವು, ಬಿಕ್ಕುಳಿಸುತ್ತಿದ್ದ ಶತ್ರವನ್ನು ಮತ್ತೆ ಮತ್ತೆ ಬಿಡುಗಣ್ಣಿನಿಂದ ನೋಡಿ, ಎಲೇ ರೋಷವೇ ಇದುವರೆಗೂ ಬಂಧನದಲ್ಲಿದ್ದು ಸಿಡಿಮಿಡಿಗೊಳ್ಳುತ್ತಿದ್ದೆ, ಇನ್ನು ನಿನ್ನದೇ ರಾಜ್ಯ ಎಂದು ಹೇಳಿದನು.

ಅರ್ಥ:
ಉಕ್ಕು: ಮೇಲಕ್ಕೆ ಉಬ್ಬು, ಹಿಗ್ಗು; ತನಿ: ಹೆಚ್ಚಾಗು, ಅತಿಶಯವಾಗು; ಹರುಷ: ಸಂತೋಷ; ಮೈ: ತನು, ದೇಹ; ಒಕ್ಕು: ಹರಿ, ಪ್ರವಹಿಸು; ಪುಳಕ: ರೋಮಾಂಚನ ; ಅಂಬು: ನೀರು; ಕಂಗಳು: ಕಣ್ಣು, ನಯನ; ಮುಕ್ಕುಳಿಸು: ಹೊರಹಾಕು; ಮುನ್ನ: ಮೊದಲೇ; ಶೋಣಿತ: ರಕ್ತ; ಬಿಕ್ಕುವಹಿತ: ಬಿಕ್ಕುಳಿಸುತ್ತಿದ್ದ; ಅಡಿಗಡಿ: ಹೆಜ್ಜೆ ಹೆಜ್ಜೆಗೆ; ಈಕ್ಷಿಸು: ನೋಡು; ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ಸಿಕ್ಕಿ: ಬಂಧಿಸು; ಸಿಡಿಮಿಡಿ: ಕೋಪ, ಅಸಹನೆ; ರೋಷ: ಕೋಪ; ರಾಜ್ಯ: ರಾಷ್ಟ್ರ; ರಾಜ್ಯಮಾಡು: ರಾಜ್ಯಭಾರ;

ಪದವಿಂಗಡಣೆ:
ಉಕ್ಕಿದುದು+ ತನಿ+ಹರುಷ +ಮೈಯೊಳಗ್
ಒಕ್ಕವಾ+ ಪುಳಕಾಂಬು +ಕಂಗಳು
ಮುಕ್ಕುಳಿಸಿದುವು +ಮುನ್ನ +ದುಶ್ಯಾಸನನ +ಶೋಣಿತವ
ಬಿಕ್ಕುವ್+ಅಹಿತನನ್ +ಅಡಿಗಡಿಗೆ+ ಎವೆ
ಯಿಕ್ಕದ್+ಈಕ್ಷಿಸಿ +ತಣಿಯದಿನ್ನಕ
ಸಿಕ್ಕಿ+ ಸಿಡಿಮಿಡಿಗೊಂಬ +ರೋಷವೆ+ ರಾಜ್ಯಮಾಡೆಂದ

ಅಚ್ಚರಿ:
(೧) ಕಂಗಳು ಮುಕ್ಕುಳಿಸಿದುವು – ಕಣ್ಣುಗಳು ಮೊದಲು ಅವನ ರಕ್ತವನ್ನು ನೋಡಿ ಹೊರಹಾಕಿದವು ಎಂದು ಹೇಳಲು ಮುಕ್ಕುಳಿಸಿದುವು ಪದದ ಬಳಕೆ
(೨) ರೋಷವನ್ನು ಪ್ರಶ್ನಿಸುವ ಬಗೆ-