ಪದ್ಯ ೫೩: ಶಬರರನ್ನು ಭೀಮನು ಹೇಗೆ ಸನ್ಮಾನಿಸಿದನು?

ಇತ್ತನವದಿರಿಗಂಗಚಿತ್ತವ
ನುತ್ತಮಾಂಬರ ವೀರ ನೂಪುರ
ಮುತ್ತಿನೇಕಾವಳಿಯ ಕರ್ಣಾಭರಣ ಮುದ್ರಿಕೆಯ
ಹೊತ್ತ ಹರುಷದ ಹೊಳೆವ ಕಂಗಲ
ತೆತ್ತಿಸಿದ ಪುಳಕದ ಸಘಾಡಿಕೆ
ವೆತ್ತ ಸುಮ್ಮಾನದಲಿ ಬಂದನು ರಯನರಮನೆಗೆ (ಗದಾ ಪರ್ವ, ೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಭೀಮನು ಉತ್ತಮವಾದ ಬಟ್ಟೆಗಳು, ವೀರ ನೂಪುರ, ಮುತ್ತಿನ ಏಕಾವಳಿ, ಕರ್ಣಾಭರಣ, ಉಂಗುರಗಳನ್ನು ಇವರಿಗೆ ಉಡುಗೊರೆಯಾಗಿ ನೀಡಿದನು. ಕಣ್ಣುಗಳು ಹೊಳೆಯುತ್ತಿರಲು, ರೋಮಾಂಚನಗೊಂಡು ಅತಿಶಯ ಸಂತೋಷದಿಂದ ಧರ್ಮಜನ ಅರಮನೆಗೆ ಬಂದನು.

ಅರ್ಥ:
ಅಂಗ: ದೇಹದ ಭಾಗ; ಅಂಗಚಿತ್ತ: ಉಡುಗೊರೆಯಾಗಿ ತನ್ನ ಮೈ ಮೇಲಿನಿಂದ ತೆಗೆದು ಕೊಡುವ ವಸ್ತ್ರ; ಉತ್ತಮ: ಶ್ರೇಷ್ಠ; ಅಂಬರ: ಬಟ್ಟೆ; ವೀರ: ಶೂರ; ನೂಪುರ: ಕಾಲಿನ ಗೆಜ್ಜೆ; ಮುತ್ತು: ಮೌಕ್ತಿಕ; ಆಭರಣ: ಒಡವೆ; ಕರ್ಣ: ಕಿವಿ; ಕರ್ಣಾಭರಣ: ಓಲೆ; ಮುದ್ರಿಕೆ: ಸಂಕೇತವನ್ನು ಕೆತ್ತಿದ ಉಂಗುರ; ಹೊತ್ತು: ಪಡೆದು; ಹರುಷ: ಸಂತಸ; ಹೊಳೆ: ಪ್ರಕಾಶ; ಕಂಗಳು: ಕಣ್ಣು; ತೆತ್ತಿಸು: ಜೋಡಿಸು, ಕೂಡಿಸು; ಪುಳಕ: ರೋಮಾಂಚನ; ಸಘಾಡ: ರಭಸ; ಸುಮ್ಮಾನ: ಸಂತಸ; ಬಂದು: ಆಗಮಿಸು; ರಾಯ: ರಾಜ; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಇತ್ತನ್+ಅವದಿರಿಗ್+ಅಂಗಚಿತ್ತವನ್
ಉತ್ತಮ+ಅಂಬರ +ವೀರ +ನೂಪುರ
ಮುತ್ತಿನ್+ಏಕಾವಳಿಯ +ಕರ್ಣಾಭರಣ+ ಮುದ್ರಿಕೆಯ
ಹೊತ್ತ +ಹರುಷದ +ಹೊಳೆವ +ಕಂಗಳ
ತೆತ್ತಿಸಿದ +ಪುಳಕದ +ಸಘಾಡಿಕೆ
ವೆತ್ತ +ಸುಮ್ಮಾನದಲಿ +ಬಂದನು +ರಾಯನ್+ಅರಮನೆಗೆ

ಅಚ್ಚರಿ:
(೧) ೧ ಸಾಲು ಒಂದೇ ಪದವಾಗಿ ರಚನೆ – ಇತ್ತನವದಿರಿಗಂಗಚಿತ್ತವನುತ್ತಮಾಂಬರ
(೨) ಹ ಕಾರದ ತ್ರಿವಳಿ ಪದ – ಹೊತ್ತ ಹರುಷದ ಹೊಳೆವ

ಪದ್ಯ ೪೭: ಪಾಂಡವರ ಸೈನ್ಯವು ಹೇಗೆ ಒಟ್ಟುಗೂಡಿತು?

ಕೆದರಿತೀ ಬಲ ಬೆರಳ ತುಟಿಗಳೊ
ಳೊದರಿತಾ ಚಲ ತಾಪಶಿಖಿಯಲಿ
ಕುದಿದುದೀ ಬಲ ಭೀತಿಕಂಚುಕ ಕಳೆದುದಾ ಬಲಕೆ
ಕದಡಿತೀ ಬಲ ರೋಮಪುಳಕ
ಹೊದೆದುದಾ ಬಲ ಹಿಂಡೊಡೆದು ನೆರೆ
ಕದುಬಿತೀ ಬಲ ನೆರೆದುದಾ ಬಲ ನರನ ರಥ ಸುಳಿಯೆ (ದ್ರೋಣ ಪರ್ವ, ೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ಅರ್ಜುನನ ರಥವು ಬರಲು, ಕೌರವಸೈನ್ಯವು ಕೆದರಿತು, ತುಟಿಯ ಮೇಲೆ ಬೆರಳಿಟ್ಟು ಸಂತೋಷದಿಂದ ಪಾಂಡವ ಸೈನ್ಯವು ಗರ್ಜಿಸಿತು. ಈ ಸೈನ್ಯವು ತಾಪದ ಬೆಂಕಿಯಲ್ಲಿ ಕುದಿಯಿತು. ಆ ಸೈನ್ಯಕ್ಕೆ ಭೀತಿಯ ಕಂಚುಕ ಬಿಟ್ಟು ಹೋಯಿತು, ಈ ಸೈನ್ಯವು ಕದಡಿತು. ಆ ಸೈನ್ಯವು ರೋಮಾಂಚನಗೊಂಡಿತು. ಈ ಸೈನ್ಯ ಹಿಂದೊಡೆದು ಚೆಲ್ಲಿತು. ಕೆದರಿ ಹೋಗಿದ್ದ ಆ ಸೈನ್ಯ ಒಟ್ಟುಗೂಡಿತು.

ಅರ್ಥ:
ಕೆದರು: ಹರಡು; ಬಲ: ಸೈನ್ಯ; ಬೆರಳು: ಅಂಗುಲಿ; ತುಟಿ: ಅಧರ; ಉದುರು: ಕೆಳಗೆ ಬೀಳು; ಚಲ: ದೃಢತೆ; ತಾಪ: ಬಿಸಿ, ಸೆಕೆ; ಶಿಖಿ: ಬೆಂಕಿ; ಕುದಿ: ಸಂಕಟ, ಮರಳು; ಬಲ: ಸೈನ್ಯ; ರೋಮ: ಕೂದಲು; ಪುಳಕ: ರೋಮಾಂಚನ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಬಲ: ಸೈನ್ಯ; ಹಿಂಡು: ಗುಂಪು; ನೆರೆ: ಗುಂಪು; ಕದುಬು: ಒತ್ತು, ಆವೇಶ; ರಥ: ಬಂಡಿ; ಸುಳಿ: ಆವರಿಸು, ಮುತ್ತು;

ಪದವಿಂಗಡಣೆ:
ಕೆದರಿತ್+ಈ+ ಬಲ +ಬೆರಳ +ತುಟಿಗಳೊಳ್
ಉದರಿತಾ +ಚಲ +ತಾಪ+ಶಿಖಿಯಲಿ
ಕುದಿದುದ್+ಈ+ ಬಲ+ ಭೀತಿ+ಕಂಚುಕ +ಕಳೆದುದ್+ಆ+ ಬಲಕೆ
ಕದಡಿತ್+ಈ+ ಬಲ +ರೋಮ+ಪುಳಕ
ಹೊದೆದುದಾ +ಬಲ +ಹಿಂಡೊಡೆದು +ನೆರೆ
ಕದುಬಿತ್+ಈ+ ಬಲ+ ನೆರೆದುದಾ +ಬಲ +ನರನ+ ರಥ+ ಸುಳಿಯೆ

ಅಚ್ಚರಿ:
(೧) ಈ ಬಲ, ಆ ಬಲ – ಪಾಂಡವ, ಕೌರವ ಸೈನ್ಯವನ್ನು ಕರೆದ ಪರಿ

ಪದ್ಯ ೭೪: ಅರ್ಜುನನು ಯಾವ ಭಾವವನ್ನು ಅನುಭವಿಸಿದನು?

ಅಡಿಗಡಿಗೆ ಕಣ್ದೆರೆದು ಮುಚ್ಚುವ
ನಡಿಗಡಿಗೆ ಮೈಬೆದರಿ ಬೆರಗಹ
ನಡಿಗಡಿಗೆ ಮೆಯ್ಯೊಲೆವನುಬ್ಬಿದ ರೋಮ ಪುಳಕದಲಿ
ಅಡಿಗಡಿಗೆ ಮನ ನಲಿದು ಹೊಂಗುವ
ನಡಿಗಡಿಗೆ ಭಯಗೊಂಡು ಕರಗುವ
ನೊಡಲನವನಿಗೆ ಹರಹಿ ನಿಡುದೋಳುಗಳ ನೀಡಿದನು (ಭೀಷ್ಮ ಪರ್ವ, ೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಅರ್ಜುನನು ಅಡಿಗಡಿಗೆ ಕಣ್ಣುತೆರೆದು ಮುಚ್ಚುವನು. ಅಡಿಗಡಿಗೆ ಬೆದರಿ ಬೆರಗಾಗುವನು. ಮತ್ತೆ ಮತ್ತೆ ರೋಮಾಂಚನಗೊಂಡು ಮೈದೂಗಿದನು. ಅಡಿಗಡಿಗೆ ಸಂತೋಷಿಸಿ ಹೆಚ್ಚುವನು. ಅಡಿಗಡಿಗೆ ಭಯಗೊಂಡು ಕರಗುವನು. ಬಳಿಕ ಅರ್ಜುನನು ನೆಲದ ಮೇಲೆ ದೀರ್ಘದಂಡ ನಮಸ್ಕಾರ ಮಾಡಿ ತನ್ನ ಉದ್ದವಾದ ತೋಳುಗಳನ್ನು ಚಾಚಿದನು.

ಅರ್ಥ:
ಅಡಿಗಡಿಗೆ: ಹೆಜ್ಜೆಹೆಜ್ಜೆಗೂ; ಕಣ್ಣು: ನಯನ; ಕಣ್ದೆರೆದು: ಕಣ್ಣು ಬಿಟ್ಟು; ಮುಚ್ಚು: ಮರೆಮಾಡು, ಹೊದಿಸು; ಮೈ: ತನು; ಬೆದರು: ಅಂಜಿಕೆ; ಬೆರಗು: ಆಶ್ಚರ್ಯ; ಉಬ್ಬು: ಹಿಗ್ಗು; ರೋಮ: ಕೂದಲು; ಪುಳಕ: ರೋಮಾಂಚನ; ಮನ: ಮನಸ್ಸು; ನಲಿ: ಸಂತಸ; ಹೊಂಗು:ಉತ್ಸಾಹ, ಹುರುಪು; ಭಯ: ಹೆದರಿಕೆ; ಕರಗು: ಕನಿಕರ ಪಡು, ನೀರಾಗಿಸು; ಒಡಲು: ದೇಹ; ಹರಹು: ಹಬ್ಬುವಿಕೆ; ತೋಳು: ಬಾಹು; ನಿಡುದೋಳು: ಉದ್ದವಾದ ತೋಳು; ನೀಡು: ಒಡ್ಡು, ಚಾಚು;

ಪದವಿಂಗಡಣೆ:
ಅಡಿಗಡಿಗೆ+ ಕಣ್ದೆರೆದು+ ಮುಚ್ಚುವನ್
ಅಡಿಗಡಿಗೆ+ ಮೈ+ಬೆದರಿ+ ಬೆರಗಹನ್
ಅಡಿಗಡಿಗೆ+ ಮೆಯ್ಯೊಲೆವನ್+ಉಬ್ಬಿದ +ರೋಮ +ಪುಳಕದಲಿ
ಅಡಿಗಡಿಗೆ+ ಮನ +ನಲಿದು +ಹೊಂಗುವನ್
ಅಡಿಗಡಿಗೆ +ಭಯಗೊಂಡು +ಕರಗುವನ್
ಒಡಲನ್+ಅವನಿಗೆ +ಹರಹಿ +ನಿಡು+ತೋಳುಗಳ+ ನೀಡಿದನು

ಅಚ್ಚರಿ:
(೧) ಅಡಿಗಡಿಗೆ – ೧-೫ ಸಾಲಿನ ಮೊದಲ ಪದ
(೨) ನಮಸ್ಕರಿಸಿದನು ಎಂದು ಹೇಳುವ ಪರಿ – ಒಡಲನವನಿಗೆ ಹರಹಿ ನಿಡುದೋಳುಗಳ ನೀಡಿದನು

ಪದ್ಯ ೫೪: ಶ್ರೀಕೃಷ್ಣನನ್ನು ಕಂಡ ಆನೆ ಕುದುರೆಗಳು ಏನು ಮಾಡಿದವು?

ಬಾಗಿ ನಿಡು ಭರಿ ಕೈಗಳನು ಹಣೆ
ಗಾಗಿ ಮುರುಹಿದವಾನೆಗಳು ತಲೆ
ವಾಗಿ ಗುಡಿಗಟ್ಟಿದವು ಹೇಷಾರವದ ತೇಜಿಗಳು
ತೂಗಿ ತನುವನು ಪುಳಕದಲಿ ಮನ
ಲಾಗುಮಿಗೆ ಮೈಮರೆದು ಹರುಷದ
ಸಾಗರದಲೋಲಾಡುತಿರ್ದುದು ಕೂಡೆ ತಳತಂತ್ರ (ವಿರಾಟ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಆನೆಗಳು ಉದ್ದನೆಯ ಸೊಂಡಿಲುಗಳನ್ನು ಹಿಂದಕ್ಕೆ ಮುದುರಿ ಶ್ರೀಕೃಷ್ಣನಿಗೆ ನಮಸ್ಕರಿಸಿದವು. ಕುದುರೆಗಳು ಹೇಷಾರವವನ್ನು ಮಾಡಿ ಮೈದೂಗಿದವು. ಶ್ರೀಕೃಷ್ಣನ ದರ್ಶನದಿಂದ ಯೋಧರು ರೋಮಾಂಚನಗೊಂಡು ಮೈಮರೆದು ಹರುಷ ಸಾಗರದಲ್ಲಿ ಓಲಾಡಿದರು.

ಅರ್ಥ:
ಬಾಗು: ಬಗ್ಗು, ಮಣಿ; ನಿಡು: ಉದ್ದವಾದ, ದೀರ್ಘ; ಭರಿ: ಆನೆಯ ಸೊಂಡಿಲು; ಕೈ: ಹಸ್ತ; ಹಣೆ: ಲಲಾಟ; ಮುರುಹು: ತಿರುಗಿಸು; ಆನೆ: ಗಜ; ತಲೆ: ಶಿರ; ಗುಡಿ: ಸುತ್ತು ಹಾಕು, ಪ್ರದಕ್ಷಿಣೆ ಮಾಡು; ಹೇಷಾರವ: ಕುದುರೆಯ ಕೆನೆತ; ತೇಜಿ: ಕುದುರೆ; ತೂಗು: ಅಲ್ಲಾಡು; ತನು: ದೇಹ; ಪುಳಕ: ರೋಮಾಂಚನ; ಮನ: ಮನಸ್ಸು; ಲಾಗು: ಲಂಘನ; ಮೈ: ದೇಹ; ಮರೆ: ನೆನಪಿನಿಂದ ದೂರವಾಗು; ಹರುಷ: ಸಂತಸ; ಸಾಗರ: ಸಮುದ್ರ; ಓಲಾಡು: ಸುಖದಿಂದ ಆಡು; ಕೂಡೆ: ಜೊತೆ; ತಳತಂತ್ರ: ಕಾಲಾಳುಗಳ, ಪದಾತಿ, ಸೈನ್ಯ;

ಪದವಿಂಗಡಣೆ:
ಬಾಗಿ +ನಿಡು +ಭರಿ+ ಕೈಗಳನು+ ಹಣೆ
ಗಾಗಿ +ಮುರುಹಿದವ್+ಆನೆಗಳು +ತಲೆ
ವಾಗಿ +ಗುಡಿಗಟ್ಟಿದವು +ಹೇಷಾರವದ+ ತೇಜಿಗಳು
ತೂಗಿ +ತನುವನು +ಪುಳಕದಲಿ+ ಮನ
ಲಾಗುಮಿಗೆ +ಮೈಮರೆದು +ಹರುಷದ
ಸಾಗರದಲ್+ಓಲಾಡುತಿರ್ದುದು +ಕೂಡೆ +ತಳತಂತ್ರ

ಅಚ್ಚರಿ:
(೧) ಆನೆ ನಮಸ್ಕರಿಸುವ ಪರಿ – ಬಾಗಿ ನಿಡು ಭರಿ ಕೈಗಳನು ಹಣೆಗಾಗಿ ಮುರುಹಿದವಾನೆಗಳು
(೨) ಕುದುರೆಯು ನಡತೆಯನ್ನು ವಿವರಿಸುವ ಪರಿ – ತಲೆವಾಗಿ ಗುಡಿಗಟ್ಟಿದವು ಹೇಷಾರವದ ತೇಜಿಗಳು

ಪದ್ಯ ೬೬: ಭೀಮನು ದ್ರೌಪದಿಯ ಮಾತನ್ನು ಕೇಳಿ ಏನು ಮಾಡಿದನು?

ಎನಲು ಕಂಬನಿದುಂಬಿದನು ಕಡು
ನೆನೆದುದಂತಃಕರಣ ರೋಷದ
ಘನತೆ ಹೆಚ್ಚಿತು ಹಿಂಡಿದನು ಹಗೆಗಳನು ಮನದೊಳಗೆ
ತನು ಪುಳಕವುಬ್ಬರಿಸೆ ದಿಮ್ಮನೆ
ವನಿತೆಯನು ತೆಗೆದಪ್ಪಿ ವರಲೋ
ಚನ ಪಯೋಧಾರೆಗಳ ತೊಡೆದನು ಭೀಮ ಸೆರಗಿನಲಿ (ವಿರಾಟ ಪರ್ವ, ೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ದ್ರೌಪದಿಯು ಪಾಂಡವರನ್ನು ಹಂಗಿಸಿ ಕೊನೆಯದಾಗಿ ಸಾಯುವೆನೆಂದು ಹೇಳಿ ನಮಸ್ಕರಿಸಲು, ಭೀಮನ ಅಂತಃಕರಣ ಕಲುಕಿ ಅವನ ಕಣ್ಣು ದುಃಖಭರಿತವಾಗಿ ನೀರಿನಿಂದ ತುಂಬಿತು, ಅವನ ಮನಸ್ಸು ಕರಗಿತು, ಶತ್ರುಗಳ ಮೇಲೆ ಕೋಪವು ಹೆಚ್ಚಿತು, ಅವರೆಲ್ಲರನ್ನೂ ಮನಸ್ಸಿನಲ್ಲೇ ಹಿಂಡಿ ಹಾಕಿದನು. ಅದರಿಂದ ರೋಮಾಂಚನಗೊಂಡು ದ್ರೌಪದಿಯನ್ನು ಬರಸೆಳೆದು ಬಿಗಿದಪ್ಪಿಕೊಂಡು ಅವಳ ಕಣ್ಣೀರನ್ನು ಉತ್ತರೀಯದ ಸೆರಗಿನಿಂದ ಒರೆಸಿದನು.

ಅರ್ಥ:
ಎನಲು: ಹೀಗೆ ಹೇಳಿ; ಕಂಬನಿ: ಕಣ್ಣೀರು; ತುಂಬು: ಭರ್ತಿಯಾಗು; ಕಡು: ಬಹಳ; ನೆನೆ: ಒದ್ದೆಯಾಗು; ಅಂತಃಕರಣ: ಮನಸ್ಸು; ರೋಷ: ಕೋಪ; ಘನತೆ: ಶ್ರೇಷ್ಠತೆ; ಹೆಚ್ಚು: ಅಧಿಕವಾಗು; ಹಿಂಡು: ತಿರುಚು; ಹಗೆ: ವೈರಿ; ಮನ: ಮನಸ್ಸು; ತನು: ದೇಹ; ಪುಳಕ: ರೋಮಾಂಚನ; ಉಬ್ಬರಿಸು: ಹೆಚ್ಚಾಗು; ದಿಮ್ಮನೆ: ಒಮ್ಮೆಲೆ; ವನಿತೆ: ಹೆಣ್ಣು; ಅಪ್ಪು: ತಬ್ಬಿಕೋ; ವರ: ಶ್ರೇಷ್ಠ; ಲೋಚನ: ಕಣ್ಣು; ಪಯೋಧಾರೆ: ನೀರಿನ ಪ್ರವಾಹ; ತೊಡೆ:ಸವರು; ಸೆರಗು: ಉತ್ತರೀಯ;

ಪದವಿಂಗಡಣೆ:
ಎನಲು +ಕಂಬನಿ+ತುಂಬಿದನು +ಕಡು
ನೆನೆದುದ್+ಅಂತಃಕರಣ +ರೋಷದ
ಘನತೆ +ಹೆಚ್ಚಿತು +ಹಿಂಡಿದನು +ಹಗೆಗಳನು +ಮನದೊಳಗೆ
ತನು+ ಪುಳಕವ್+ಉಬ್ಬರಿಸೆ+ ದಿಮ್ಮನೆ
ವನಿತೆಯನು +ತೆಗೆದಪ್ಪಿ+ ವರ+ಲೋ
ಚನ +ಪಯೋಧಾರೆಗಳ+ ತೊಡೆದನು +ಭೀಮ +ಸೆರಗಿನಲಿ

ಅಚ್ಚರಿ:
(೧) ಕಂಬನಿ, ಲೋಚನ ಪಯೋಧಾರೆ – ಸಮನಾರ್ಥಕ ಪದ
(೨) ಭೀಮನ ಕ್ರೋಧ – ರೋಷದ ಘನತೆ ಹೆಚ್ಚಿತು ಹಿಂಡಿದನು ಹಗೆಗಳನು ಮನದೊಳಗೆ
(೩) ಭೀಮನ ಪ್ರೇಮ – ದಿಮ್ಮನೆ ವನಿತೆಯನು ತೆಗೆದಪ್ಪಿ ವರಲೋಚನ ಪಯೋಧಾರೆಗಳ ತೊಡೆದನು ಭೀಮ ಸೆರಗಿನಲಿ

ಪದ್ಯ ೮: ಧರ್ಮಜನು ವ್ಯಾಸರನ್ನು ಹೇಗೆ ಬರೆಮಾಡಿಕೊಂಡನು?

ಹಾ ಮಹಾದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ (ಅರಣ್ಯ ಪರ್ವ, ೫ ಸಂಧಿ, ೮ ಪದ್ಯ)

ತಾತ್ಪರ್ಯ:
ಅಲ್ಲಿ ನೆರೆದಿದ್ದ ಋಷಿಮುನಿಗಳು ವ್ಯಾಸರನ್ನು ನೋಡಿ, ಹಾ ಭಗವಂತ, ಮಹಾದೇವ, ಇವರಾರು, ಇವರು ಮಹಾ ಮುನಿಗಳಂತೆ ತೋರುತ್ತಿರುವವರು ಎಂದು ತಿಳಿದು ಅಲ್ಲಿದ್ದ ಮುನಿಗಳ ಗುಂಪು ಎದ್ದು ನಿಂತರು. ಧರ್ಮಜನು ವ್ಯಾಸರ ಬಳಿ ತೆರಳಿ ಮುಖಾಮುಖಿಯಾದನು. ಪ್ರೇಮದಿಂದ ರೋಮಾಂಚನಗೊಂಡು, ಸಂತಸದ ಕಣ್ಣೀರಿನ ಹನಿಯನ್ನು ಹೊರಹಾಕುತ್ತಾ, ಸತ್ಯವೇ ಭಾವವಾಗಿದ್ದ ಧರ್ಮಜನು ವ್ಯಾಸರ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಮಹಾ: ಶ್ರೇಷ್ಠ; ಮುನಿ: ಋಷಿ; ಈಶ್ವರ: ಒಡೆಯ, ಪ್ರಭು; ಸ್ತೋಮ: ಗುಂಪು; ಎದ್ದು: ಮೇಲೇಳು; ನಂದನ: ಮಗ; ಇದಿರು: ಎದುರು; ಪ್ರೇಮ: ಒಲವು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಸಲಿಲ: ನೀರು; ನಯನ: ಕಣ್ಣು; ರೋಮ: ಕೂದಲು; ಹರ್ಷ: ಸಂತಸ; ಸತ್ಯ: ನಿಜ; ಭಾವ: ಭಾವನೆ; ಭೂಮಿಪತಿ: ರಾಜ; ಮೈಯಿಕ್ಕು: ನಮಸ್ಕರಿಸು; ವರ: ಶ್ರೇಷ್ಠ; ಚರಣ: ಪಾದ;

ಪದವಿಂಗಡಣೆ:
ಹಾ +ಮಹಾದೇವಾ+ಇದಾರು +ಮ
ಹಾ +ಮುನೀಶ್ವರರ್+ಎನುತ+ ಮುನಿಪ
ಸ್ತೋಮವ್+ಎದ್ದುದು +ಧರ್ಮನಂದನನ್+ಅವರಿಗ್+ಇದಿರಾಗಿ
ಪ್ರೇಮ +ಪುಳಕದ +ನಯನ +ಸಲಿಲದ
ರೋಮಹರ್ಷದ+ ಸತ್ಯಭಾವದ
ಭೂಮಿಪತಿ+ ಮೈಯಿಕ್ಕಿದನು +ಮುನಿವರನ +ಚರಣದಲಿ

ಅಚ್ಚರಿ:
(೧) ರೋಮಾಂಚನದ ವರ್ಣನೆ – ಪ್ರೇಮ ಪುಳಕದ ನಯನ ಸಲಿಲದ ರೋಮಹರ್ಷದ
(೨) ನಮಸ್ಕರಿಸಿದನು ಎಂದು ಹೇಳಲು – ಮೈಯಿಕ್ಕಿದನು ಪದದ ಬಳಕೆ
(೩) ಮ ಕಾರದ ಸಾಲು ಪದಗಳು – ಮಹಾದೇವಾಯಿದಾರು ಮಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು

ಪದ್ಯ ೩೨: ವಿಶ್ವರೂಪ ತೋರಿದ ಕೃಷ್ಣನ ಪದಗಳಿಗೆ ಯಾರು ಹೇಗೆ ಎರಗಿದರು?

ತಳುಕನುಗಿದೀಡಾಡಿ ಪರಿಣತ
ಪುಳಕ ಜಲದೊಳು ನೆನೆದು ಹರುಷದ
ಜಲಧಿಯೊಳು ಮನಮುಳುಗಿ ಭಕ್ತಿಯ ಭಾರದೊಳು ಕುಸಿದು
ಅಳುಕಿ ತಮತಮಗೆದ್ದು ಮುನಿಸಂ
ಕುಲ ಸಹಿತ ಗಾಂಗೇಯ ಕೃಪ ನಿ
ರ್ಮಲ ವಿದುರ ಗುರು ಸಂಜಯಾದಿಗಳೆರಗಿದರು ಪದಕೆ (ಉದ್ಯೋಗ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಷ್ಮ, ದ್ರೋಣ, ಕೃಪ, ವಿದುರ, ಸಂಜಯ, ಸಮಸ್ತ ಋಷಿಸಮೂಹವು ಬಿಗುಮಾನ ಹೆದರಿಕೆಗಳನ್ನು ಅತ್ತ ನೂಕಿ ರೋಮಾಂಚನದ ಜಲದಿಂದ ಕೂಡಿ, ಹರ್ಷ ಸಮುದ್ರದಲ್ಲಿ ಮುಳುಗಿ, ಭಕ್ತಿಯ ಭಾರದಿಂದ ಕುಸಿದು ಅಳುಕಿ, ಶ್ರೀಕೃಷ್ಣನ ಪಾದಗಳಿಗೆರಗಿದರು.

ಅರ್ಥ:
ತಳುಕು: ಬಿಗುಮಾನ; ಉಗಿದು: ಹೊರಹಾಕಿ; ಈಡಾಡು: ಒಗೆ, ಚೆಲ್ಲು; ಪರಿಣತ: ತಿಳಿದ, ಪಾಂಡಿತ್ಯ; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಜಲಧಿ: ಸಮುದ್ರ; ಜಲ: ನೀರು; ನೆನೆ: ಮಿಂದು; ಹರುಷ: ಸಂತೋಷ; ಮನ: ಮನಸ್ಸು; ಮುಳುಗು: ನೀರಿನಲ್ಲಿ ಮೀಯು; ಭಕ್ತಿ:ಗುರುಹಿರಿಯರಲ್ಲಿ ತೋರುವ ನಿಷ್ಠೆ; ಭಾರ: ಹೊರೆ; ಕುಸಿ: ಕೆಳಕ್ಕೆ ಬೀಳು; ಅಳುಕು: ಹೆದರಿಕೆ; ಮುನಿ: ಋಷಿ; ಸಂಕುಲ: ಗುಂಪು; ಸಹಿತ: ಜೊತೆ; ಗಾಂಗೇಯ: ಭೀಷ್ಮ; ನಿರ್ಮಲ: ಪರಿಶುದ್ಧನಾದವನು; ಆದಿ: ಮುಂತಾದ; ಪದಕೆ: ಚರಣ; ಎರಗು: ನಮಸ್ಕರಿಸು;

ಪದವಿಂಗಡಣೆ:
ತಳುಕನ್+ಉಗಿದ್+ಈಡಾಡಿ +ಪರಿಣತ
ಪುಳಕ+ ಜಲದೊಳು +ನೆನೆದು +ಹರುಷದ
ಜಲಧಿಯೊಳು +ಮನಮುಳುಗಿ +ಭಕ್ತಿಯ +ಭಾರದೊಳು +ಕುಸಿದು
ಅಳುಕಿ +ತಮತಮಗೆದ್ದು +ಮುನಿ+ಸಂ
ಕುಲ +ಸಹಿತ +ಗಾಂಗೇಯ +ಕೃಪ +ನಿ
ರ್ಮಲ +ವಿದುರ +ಗುರು +ಸಂಜಯಾದಿಗಳ್+ಎರಗಿದರು +ಪದಕೆ

ಅಚ್ಚರಿ:
(೧) ಎರಗುವ ಪರಿ: ತಳುಕನುಗಿದೀಡಾಡಿ ಪರಿಣತ ಪುಳಕ ಜಲದೊಳು ನೆನೆದು ಹರುಷದ
ಜಲಧಿಯೊಳು ಮನಮುಳುಗಿ ಭಕ್ತಿಯ ಭಾರದೊಳು ಕುಸಿದು

ಪದ್ಯ ೮೭: ನಾರದರ ಮಾತು ಕೇಳಿದ ಯುಧಿಷ್ಠಿರನ ಮನಸ್ಸು ಹೇಗೆ ಸ್ಪಂದಿಸಿತು?

ಆ ಮುನೀಂದ್ರನ ವಚನ ರಚನಾ
ತಾಮರಸ ಮಕರಂದ ಕೇಳಿಯ
ಲೀ ಮಹೀಶ ಮನೋಮಧುವ್ರತವುಬ್ಬಿತೊಲವಿನಲಿ
ರೋಮಪುಳಕದ ರುಚಿರ ಭಾವ
ಪ್ರೇಮ ಪೂರಿತ ಹರುಷ ರಸದು
ದ್ದಾಮ ನದಿಯಲಿ ಮುಳುಗಿ ಮೂಡಿದನರಸ ಕೇಳೆಂದ (ಸಭಾ ಪರ್ವ, ೧ ಸಂಧಿ, ೮೭ ಪದ್ಯ)

ತಾತ್ಪರ್ಯ:
ನಾರದರು ರಾಜಧರ್ಮದ ಬಗ್ಗೆ ಸವಿಸ್ತ್ರಾರವಾಗಿ ವಿವರಿಸಿದನ್ನು ಕೇಳಿದ ಧರ್ಮರಾಯನ ಮನಸ್ಸು ದುಂಬಿಯಹಾಗೆ ನಾರದರ ವಚನ ರಚನೆಯೆಂಬ ಕಮಲದ ಮಕರಂದವನ್ನು ಸವಿದು ಉಬ್ಬಿತು. ಧರ್ಮಜನು ರೋಮಾಂಚನಗೊಂಡನು. ಚಿತ್ತದ ಭಾವವು ಪ್ರೇಮಪೂರ್ಣವಾಯಿತು, ಹರ್ಷದ ಮಹಾನದಿಯಲ್ಲಿ ಧರ್ಮರಾಯನ ಮನಸ್ಸು ಮುಳುಗಿ ಎದ್ದಹಾಗೆ ಅನುಭವವಾಯಿತು.

ಅರ್ಥ:
ಮುನೀಂದ್ರ: ಮುನಿಶ್ರೇಷ್ಠ; ಮುನಿ: ಋಷಿ; ವಚನ: ಮಾತು; ರಚನ: ಸೃಷ್ಠಿ, ನಿರ್ಮಾಣ; ತಾಮರಸ: ಕಮಲ; ಮಕರಂದ: ಜೇನು; ಕೇಳಿ: ಆಲಿಸಿ; ಮಹೀಶ: ರಾಜ; ಮನ: ಮನಸ್ಸು, ಚಿತ್ತ; ಮಧು: ಜೇನು, ಮಕರಂದ; ಉಬ್ಬು: ಹಿಗ್ಗು; ಒಲವು:ಪ್ರೀತಿ, ಪ್ರೇಮ; ರೋಮ: ಕೂದಲು; ಪುಳಕ:ಮೈನವಿರೇರುವಿಕೆ, ರೋಮಾಂಚನ; ರುಚಿರ:ಸೌಂದರ್ಯ, ಚೆಲುವು; ಭಾವ: ಭಾವನೆ; ಪ್ರೇಮ:ಒಲವು; ಪೂರಿತ: ತುಂಬಿದ; ಹರುಷ: ಸಂತೋಷ; ರಸ:ರುಚಿ; ಉದ್ದಾಮ:ಶ್ರೇಷ್ಠ; ನದಿ: ಸರೋವರ; ಮುಳುಗು: ನೀರಿನಲ್ಲಿ ಮೀಯು; ಮೂಡು: ತೋರು, ಹೊರಬರುವುದು; ಅರಸ: ರಾಜ; ಮಧುವ್ರತ: ಜೇನು, ಭ್ರಮರ;

ಪದವಿಂಗಡಣೆ:
ಆ+ ಮುನೀಂದ್ರನ+ ವಚನ+ ರಚನಾ
ತಾಮರಸ +ಮಕರಂದ +ಕೇಳಿಯಲ್
ಈ +ಮಹೀಶ +ಮನೋ+ಮಧುವ್ರತವ್+ಉಬ್ಬಿತ್+ಒಲವಿನಲಿ
ರೋಮಪುಳಕದ+ ರುಚಿರ+ ಭಾವ
ಪ್ರೇಮ +ಪೂರಿತ +ಹರುಷ +ರಸದ್
ಉದ್ದಾಮ +ನದಿಯಲಿ+ ಮುಳುಗಿ +ಮೂಡಿದನ್+ಅರಸ+ ಕೇಳೆಂದ

ಅಚ್ಚರಿ:
(೧) ೧, ೩, ೬ ಸಾಲು, ಆ, ಈ, ಉ ಕಾರದಿಂದ ಪ್ರಾರಂಭ
(೨) “ಮ” ಕಾರದ ಜೋಡಿ ಪದಗಳು – ಮಹೀಶ ಮನೋಮಧುವ್ರತ, ಮುಳುಗಿ ಮೂಡಿದ
(೩) ಯುಧಿಷ್ಠಿರನ ಮನಸ್ಸಿನ ಚಿತ್ರಣ: ಹರುಷ ರಸದುದ್ದಾಮ ನದಿಯಲಿ ಮುಳುಗಿ ಮೂಡಿದನರಸ

ಪದ್ಯ ೬೮: ಕುಂತಿಯ ಸಂತೋಷದ ಪರಿ ಹೇಗಿತ್ತು?

ತನುಜ ತನ್ನಯ ಜಠರದಲಿ ನೀ
ಜನಿಸಿದುದರಿಂ ಮೂರುಲೋಕದೊ
ಳೆನಗೆ ಕೀರ್ತಿಯು ಸುಗತಿಗಳ ಮಾಡಿದೆಯೆಲಾ ಎನುತ
ತನುಪುಳಕದಿಂದುಬ್ಬಿ ತನ್ನಯ
ಮನದ ಹರ್ಷದ ಹರಹಿನಲಿ ಮ
ಜ್ಜನವ ಮಾಡಿದಳಾಗ ವಸ್ತ್ರವನುಟ್ಟಳಾ ಕುಂತಿ (ಆದಿ ಪರ್ವ, ೨೧ ಸಂಧಿ, ೬೮ ಪದ್ಯ)

ತಾತ್ಪರ್ಯ:
ಮಗನನ್ನು ಸಂತೋಷದಿಂದ ತಬ್ಬಿಕೊಂಡ ಕುಂತಿ ಸಂತೋಷದಿಂದ ಉಬ್ಬಿ, ರೋಮಾಂಚನಗೊಂಡು, ಮಗನೇ ನನ್ನ ಹೊಟ್ಟೆಯಲ್ಲಿ ಹುಟ್ಟಿ ಮೂರುಲೋಕಗಳಲ್ಲೂ ನನಗೆ ಕೀರ್ತಿಯನ್ನು ಬರುವಂತೆ ಮಾಡಿದೆ, ನನಗೆ ಸದ್ಗತಿಯು ದೊರೆಯುವಂತೆ ಮಾಡಿದೆ, ಎಂದು ಹೇಳಿ ಸ್ನಾನಾದಿಗಳನ್ನು ಪೂರೈಸಿ ಶುಭ್ರಬಟ್ಟೆಯನ್ನು ತೊಟ್ಟಳು.

ಅರ್ಥ:
ತನುಜ: ಮಗ; ತನ್ನಯ: ಎನ್ನ; ಜಠರ: ಹೊಟ್ಟೆ; ಜನಿಸು: ಹುಟ್ಟು; ಮೂರು: ತ್ರಿ; ಲೋಕ: ಜಗತ್ತು; ಕೀರ್ತಿ: ಖ್ಯಾತಿ; ಸುಗತಿ: ಒಳ್ಳೆಯ ನಡೆಗೆ; ತನು: ದೇಹ; ಪುಳಕ: ರೋಮಾಂಚನ; ಉಬ್ಬು: ಹೆಚ್ಚಾಗು; ಮನ: ಚಿತ್ತ; ಹರ್ಷ: ಸಂತೋಷ; ಹರಹು: ವಿಸ್ತಾರ, ಹಬ್ಬುವಿಕೆ; ಮಜ್ಜನ: ಸ್ನಾನ; ವಸ್ತ್ರ: ಬಟ್ಟೆ; ಉಟ್ಟು: ತೊಡು;

ಪದವಿಂಗಡಣೆ:
ತನುಜ +ತನ್ನಯ +ಜಠರದಲಿ+ ನೀ
ಜನಿಸಿದುದರಿಂ +ಮೂರು+ಲೋಕದೊಳ್
ಎನಗೆ +ಕೀರ್ತಿಯು +ಸುಗತಿಗಳ+ ಮಾಡಿದೆಯೆಲಾ +ಎನುತ
ತನು+ಪುಳಕದಿಂದ್+ಉಬ್ಬಿ +ತನ್ನಯ
ಮನದ +ಹರ್ಷದ +ಹರಹಿನಲಿ+ ಮ
ಜ್ಜನವ +ಮಾಡಿದಳಾಗ+ ವಸ್ತ್ರವನ್+ಉಟ್ಟಳಾ+ ಕುಂತಿ

ಅಚ್ಚರಿ:
(೧) “ತನು” ೧, ೪ ಸಾಲಿನ ಮೊದಲ ಪದ
(೨) ತನುಜ ತನ್ನಯ; ತನುಪುಳಕದಿಂದುಬ್ಬಿ ತನ್ನಯ; ಹರ್ಷದ ಹರಹಿನಲಿ; ಮಜ್ಜನವ ಮಾದಿದಳಾಗ – ಜೋಡಿ ಪದಗಳು