ಪದ್ಯ ೬೭: ಪುರೋಚನನು ಯಾರು, ಅವನು ವಾರಣಾವತಿಯಲ್ಲಿ ಏನು ನಿರ್ಮಿಸಿದನು?

ಆ ಪುರೋಚನನೆಂಬವನು ಬಲು
ಪಾಪಕರ್ಮನು ಕುರುಪತಿಗೆ ಬಳಿ
ಕಾ ಪುರಾಂತರದಿಂದ ಬಂದನು ವಾರಣಾವತಿಗೆ
ಆ ಪುರದ ಜನವರಿಯದಂತಿರೆ
ಕಾಪುರುಷನಳವಡಿಸಿದನು ನಸು
ದೀಪ ತಾಗಿದೊಡೇಕರೂಪಹ ರಾಜಭವನವನು (ಆದಿ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ದುರ್ಯೋಧನನ ಆಪ್ತ ಸಚಿವರಲ್ಲಿ ಒಬ್ಬನಾದ ಪುರೋಚನನು ಅತ್ಯಂತ ದುಷ್ಟನು, ಪಾಪಕರ್ಮಮಾಡುವುದರಲ್ಲಿ ನಿಸ್ಸೀಮನು. ಆತನು ಹಸ್ತಿನಾಪುರದಿಂದ ವಾರಣಾವತಿಗೆ ಬಂದು ಆ ಊರಿನ ಜನರಿಗೆ ತಿಳಿಯದಂತೆ, ಸ್ವಲ್ಪ ಬೆಂಕಿ ತಾಗಿದರೂ ಒಂದೇ ಬಾರಿಗೆ ಭಸ್ಮವಾಗುವ ರಾಜಭವನವನ್ನು ನಿರ್ಮಿಸಿದನು.

ಅರ್ಥ:
ಬಲು:ಬಹಳ; ಪಾಪ: ಕೆಟ್ಟದ್ದು; ಕರ್ಮ: ಕೆಲಸ; ಅಂತರ: ಸಮೀಪ, ಎಣೆ; ಪುರ: ಊರು; ಅರಿ: ತಿಳಿ; ಕಾಪುರುಷ: ಹೇಡಿ, ಹೀನ ಮನುಷ್ಯ; ಅಳವಡಿಸು: ಹೊಂದಿಸು, ವಶಪಡಿಸು, ಆವರಿಸು; ನಸು: ಕೊಂಚ, ಸ್ವಲ್ಪ; ದೀಪ: ಬೆಂಕಿ, ಉರಿ; ತಾಗು: ಸೋಕಿಸು; ರೂಪ: ಆಕಾರ; ಭವನ: ಆಲಯ;

ಪದವಿಂಗಡನೆ:
ಆ +ಪುರೋಚನನ್+ಎಂಬವನು +ಬಲು
ಪಾಪ+ಕರ್ಮನು +ಕುರುಪತಿಗೆ+ ಬಳಿಕ
ಆ+ ಪುರ+ಅಂತರದಿಂದ+ ಬಂದನು+ ವಾರಣಾವತಿಗೆ
ಆ +ಪುರದ+ ಜನವ್+ಅರಿಯದಂತ್+ಇರೆ
ಕಾಪುರುಷನ್+ಅಳವಡಿಸಿದನು+ ನಸು
ದೀಪ +ತಾಗಿದೊಡ್+ಏಕರೂಪಹ+ ರಾಜಭವನವನು

ಅಚ್ಚರಿ:
(೧) ಆ – ೧, ೩, ೪ ಸಾಲಿನ ಮೊದಲ ಪದ
(೨) ಪಾಪಕರ್ಮನು, ಕಾಪುರುಷ – ದುಷ್ಟಮನುಷ್ಯನಾದ ಪುರೋಚನನ ವರ್ಣನೆ, ೨, ೫ ಸಾಲಿನ ಮೊದಲ ಪದ
(೩) ಪುರೋಚನ, ಪುರಾಂತರ, ಪುರದ, ಕಾಪುರುಷ – ಪುರ ಅಕ್ಷರಗಳಿಂದ ಕೂಡಿರುವ ಪದಗಳು

ಪದ್ಯ ೬೬: ಅರಗಿನ ಮನೆ ಕಾರ್ಯಕ್ಕೆ ಯಾರನ್ನು ನೇಮಿಸಿದನು?

ಜನಕನನು ಬೀಳ್ಕೊಂಡು ಕೌರವ
ಜನಪ ತನ್ನರಮನೆಯ ಸಚಿವರೊ
ಳನುಪಮಿತ ವಿಶ್ವಾಸ ಸೂಚಕನನು ಪುರೋಚನನ
ನೆನೆದ ಕೌರವ ರಾಜಕಾರ್ಯದ
ಘನವನರುಹಿ ಸಮಗ್ರ ಧನ ಸಾ
ಧನವ ಜೋಡಿಸಿಕೊಟ್ಟು ಕಳುಹಿದನವನ ಗುಪ್ತದಲಿ (ಆದಿ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ತಂದೆಯ ಬೆಂಬಲ ಸಿಕ್ಕ ಮೇಲೆ, ದುರ್ಯೋಧನನು ತಂದೆಯನ್ನು ಬೀಳ್ಕೊಟ್ಟು, ತನ್ನ ಅರಮನೆಯ ಅತ್ಯಂತ ಆಪ್ತ ಸಚಿವರನಾದ ಪುರೋಚನನನ್ನು ಈ ಕಾರ್ಯಕ್ಕೆ ನೇಮಿಸಿ, ಮಾಡಬೇಕಾದ ಅತ್ಯಂತ ಘನ,ಭಯಂಕರವಾದ ರಾಜಕಾರ್ಯವನ್ನು ವಿವರಿಸಿ, ಅದಕ್ಕೆ ಅಗತ್ಯವಾದ ಧನವನ್ನು, ಸಾಧನಗಳನ್ನು ಜೋಡಿಸಿಕೊಟ್ಟು ಅತ್ಯಂತ ಗುಪ್ತ ರೀತಿಯಲ್ಲಿ ಕಳುಹಿಸಿದನು.

ಅರ್ಥ:
ಜನಕ: ತಂದೆ; ಜನಪ: ರಾಜ; ಅರಮನೆ: ಆಲಯ; ಸಚಿವ: ಮಂತ್ರಿ; ಅನುಪಮ: ಅಸಮಾನ; ವಿಶ್ವಾಸ: ನಂಬಿಕೆ, ಭರವಸೆ; ಸೂಚಕ: ಸುಳಿವು, ಸೂಚನೆ; ನೆನೆ: ಜ್ಞಾಪಿಸಿಕೊ; ಕಾರ್ಯ: ಕೆಲಸ; ಘನ: ಭಾರ; ಅರುಹಿ: ತಿಳಿಸಿ; ಸಮಗ್ರ: ಸಕಲ; ಧನ:ದುಡ್ಡು; ಸಾಧನ: ಸಾಮಗ್ರಿ, ಉಪಕರಣ; ಜೋಡಿಸು: ಹೊಂದಿಸು;

ಪದವಿಂಗಡನೆ:
ಜನಕನನು+ ಬೀಳ್ಕೊಂಡು +ಕೌರವ
ಜನಪ+ ತನ್ನ್+ಅರಮನೆಯ+ ಸಚಿವರೊಳ್
ಅನುಪಮಿತ +ವಿಶ್ವಾಸ+ ಸೂಚಕನನು+ ಪುರೋಚನನ
ನೆನೆದ +ಕೌರವ+ ರಾಜ+ಕಾರ್ಯದ
ಘನವನ್+ಅರುಹಿ+ ಸಮಗ್ರ+ ಧನ+ ಸಾ
ಧನವ +ಜೋಡಿಸಿ+ಕೊಟ್ಟು +ಕಳುಹಿದನ್+ಅವನ +ಗುಪ್ತದಲಿ

ಅಚ್ಚರಿ:
(೧) ಜನಕ, ಜನಪ – ‘ಜನ’ ಪದದಿಂದ ಕೂಡಿರುವ ೧, ೨ ಸಾಲಿನ ಮೊದಲ ಪದಗಳು
(೨) ಪುರೋಚನನ ವಿವರಣೆ: ಅನುಪಮ, ಅಮಿತ ವಿಶ್ವಾಸ, ಸೂಚಕ
(೩) ಘನವ, ಧನವ – “ನವ” ಪದದಿಂದ ಕೊನೆಗೊಳ್ಳುವ, ೫, ೬ ಸಾಲಿನ ಮೊದಲ ಪದಗಳು