ಪದ್ಯ ೧೧೧: ಶಿವನು ಅರ್ಜುನನಿಗೆ ಯಾವ ಆಜ್ಞೆಯನ್ನು ನೀಡಿ ತೆರಳಿದನು?

ಪುರಹರನು ಕರೆದರ್ಜುನನ ಸುರ
ಪುರಕೆ ಹೋಗುತೆ ನೀನು ಬಳಿಕಾ
ಸುರಸಮಿತಿಗಳ ವೈರಿಗಳ ವಧಿಸೆಂದು ಬೆಸಸುತ್ತ
ಹರಿಯಜರುಸಹಿತ ಭವ ರಜತಾ
ಚಲಕೆ ಬಿಜಯಂಗೈದನಿತ್ತಲು
ನರನು ಸೈವೆರಗಾಗಿ ಚಿಂತಾಚಿತ್ರದಂತಿರ್ದ (ಅರಣ್ಯ ಪರ್ವ, ೭ ಸಂಧಿ, ೧೧೧ ಪದ್ಯ)

ತಾತ್ಪರ್ಯ:
ಶಿವನು ಅರ್ಜುನನನ್ನು ಕರೆದು, ನೀನು ಅಮರಾವತಿಗೆ ಹೋಗಿ ದೇವಗಣಗಳ ವೈರಿಗಳಾದ ಅಸುರರನ್ನು ಸಂಹರಿಸು ಎಂದು ಹೇಳಿ ಬ್ರಹ್ಮ, ವಿಷ್ಣುಗಳೊಂದಿಗೆ ಹಿಮಾಲಯಕ್ಕೆ ತೆರಳಿದನು. ಅರ್ಜುನನು ಅತಿಶಯವಾಗಿ ವಿಸ್ಮಯಗೊಂಡು ಚಿಂತೆಯ ಚಿತ್ರದಂತಿದ್ದನು.

ಅರ್ಥ:
ಪುರಹರ: ಈಶ್ವರ; ಕರೆ: ಬರೆಮಾಡು; ಸುರಪುರ: ಅಮರಾವತಿ; ಸುರ: ದೇವತೆ; ಹೋಗು: ತೆರಳು; ಬಳಿಕ: ನಂತರ; ಸಮಿತಿ: ಗುಂಪು; ವೈರಿ: ಶತ್ರು; ವಧಿಸು: ಸಂಹರಿಸು; ಬೆಸಸು: ಹೇಳು; ಹರಿ: ವಿಷ್ಣು; ಅಜ: ಬ್ರಹ್ಮ; ಸಹಿತ: ಜೊತೆ; ಭವ: ಶಿವ; ರಜತಾಚಲ: ಹಿಮಾಲಯ; ಬಿಜಯಂಗೈ: ದಯಮಾಡಿಸು; ನರ: ಅರ್ಜುನ; ಸೈವೆರಗು: ಆತಿಯಾದ ತಳಮಳ; ಚಿಂತೆ: ಯೋಚನೆ;

ಪದವಿಂಗಡಣೆ:
ಪುರಹರನು +ಕರೆದ್+ಅರ್ಜುನನ +ಸುರ
ಪುರಕೆ +ಹೋಗುತೆ +ನೀನು +ಬಳಿಕ್
ಆ+ಸುರಸಮಿತಿಗಳ +ವೈರಿಗಳ+ ವಧಿಸೆಂದು +ಬೆಸಸುತ್ತ
ಹರಿ+ಅಜರು+ಸಹಿತ+ ಭವ+ ರಜತಾ
ಚಲಕೆ +ಬಿಜಯಂಗೈದನ್+ಇತ್ತಲು
ನರನು +ಸೈವೆರಗಾಗಿ+ ಚಿಂತಾಚಿತ್ರದಂತಿರ್ದ

ಅಚ್ಚರಿ:
(೧) ಅರ್ಜುನನ ಸ್ಥಿತಿ – ನರನು ಸೈವೆರಗಾಗಿ ಚಿಂತಾಚಿತ್ರದಂತಿರ್ದ

ಪದ್ಯ ೩೧: ಅರ್ಜುನನ ಶಿವನಿಂದ ಯಾವ ಅಸ್ತ್ರವನ್ನು ಪಡೆಯುವೆನೆಂದನು?

ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯ ಮಾರ್ಗಣವ
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ (ಅರಣ್ಯ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅತ್ಯಂತ ಕಷ್ಟಕರವಾದ ತಪಸ್ಸನ್ನಾಚರಿಸಿ, ಶಿವನನ್ನು ಭಜಿಸಿ ಅವನ ಕೃಪೆಯಿಂದ ಪಾಶುಪತಾಸ್ತ್ರವೇ ಮೊದಲಾದ ಮಹಾ ಬಾಣಗಳನ್ನು ಪಡೆಯುತ್ತೇನೆ. ಎಲೈ ದ್ರೌಪದಿ ಆ ಅಸ್ತ್ರಗಳಿಂದ ಆ ನರಿಗಳಾದ ಕೌರವರನ್ನು ಸಂಹರಿಸಿ, ನಿನ್ನ ಅಪಮಾನದ ಅಗ್ನಿಯನ್ನು ನಂದಿಸುತ್ತೇನೆ ಎಂದು ಅರ್ಜುನನು ಹೇಳಿದನು.

ಅರ್ಥ:
ಹರ: ಶಿವ; ಚರಣ: ಪಾದ; ಭಜಿಸು: ಆರಾಧಿಸು; ದುರ್ಧರ: ಕಷ್ಟ, ಕಠಿಣ; ತಪಸ್ಸು: ಧ್ಯಾನ, ಏಕಾಗ್ರಚಿತ್ತ; ನಿಷ್ಠೆ: ದೃಢತೆ, ಸ್ಥಿರತೆ, ಶ್ರದ್ಧೆ; ಕೇಳು: ಆಲಿಸು; ತರುಣಿ: ಹೆಣ್ಣು; ಅಸ್ತ್ರ: ಆಯುಧ; ದಿವ್ಯ: ಶ್ರೇಷ್ಠ; ಮಾರ್ಗಣ: ಬಾಣ; ಪುರಹರ: ಶಿವ; ಕೃಪೆ: ದಯೆ; ನರಿ: ಒಂದು ಪ್ರಾಣಿ, ಇಲ್ಲಿ ಕೌರವರನ್ನು ಹೇಳಲು ಬಳಸಿದ ಪದ; ಸಂಹರಿಸು: ಸಾಯಿಸು; ಪರಿವವ: ಸೋಲು, ಅಪಮಾನ; ಅಗ್ನಿ: ಬೆಂಕಿ; ನಂದಿಸು: ಆರಿಸು; ನಿಲ್ಲು: ತಡೆ;

ಪದವಿಂಗಡಣೆ:
ಹರನ+ ಚರಣವ+ ಭಜಿಸುವೆನು +ದು
ರ್ಧರ+ ತಪೋನಿಷ್ಠೆಯಲಿ +ಕೇಳ್+ಎಲೆ
ತರುಣಿ+ ಪಾಶುಪತಾಸ್ತ್ರವ್+ ಆದಿಯ+ ದಿವ್ಯ+ ಮಾರ್ಗಣವ
ಪುರಹರನ+ ಕೃಪೆಯಿಂದ +ಪಡೆದ್+ಆ
ನರಿಗಳನು +ಸಂಹರಿಸಿ +ನಿನ್ನಯ
ಪರಿಭವಾಗ್ನಿಯ +ನಂದಿಸುವೆ +ನಿಲ್ಲೆಂದನ್+ಆ+ ಪಾರ್ಥ

ಅಚ್ಚರಿ:
(೧) ಹರ, ಪುರಹರ – ಶಿವನಿಗೆ ಬಳಸಿದ ಹೆಸರು
(೨) ದ್ರೌಪದಿಯನ್ನು ತರುಣಿ, ಕೌರವರನ್ನು ನರಿ ಎಂದು ಕರೆದಿರುವುದು

ಪದ್ಯ ೪೬: ಶಿವನು ಯಾವ ರೀತಿ ಉರಿಯನ್ನು ಶಾಂತಗೊಳಿಸಿದನು?

ಕರುಣರಸದಲಿ ನನೆದು ನಗೆಯಂ
ಕುರಿಸಲಾಜ್ಞಾಹಸ್ತದಲಿ ಶಂ
ಕರನ ಹೂಂಕರಣೆಯಲಿ ತಳಿತುರಿ ತಗ್ಗಿತಲ್ಲಲ್ಲಿ
ಶಿರವ ತಡಹುತ ದೇವತತಿ ಪುರ
ಹರನ ಬೀಳ್ಕೊಂಡರು ಮಹಾರಥ
ಹರಿದು ನಿಜ ಸಂಸ್ಥಾನ ಸಂಗತವಾಯ್ತು ನಿಮಿಷದಲಿ (ಕರ್ಣ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಭುವನಜನರ ಅಳಲನ್ನು ಕೇಳಿದ ಪರಮೇಶ್ವರನು ಲೋಕಗಳ ಮೇಲಿನ ಕರುಣೆಯಿಂದ ಶಿವನು ನಸುನಕ್ಕು ಹೂಂಕಾರ ಮಾಡಿ ಆಜ್ಞಾಹಸ್ತವನ್ನು ತೋರಿಸಲು ಉರಿಯು ಅಲ್ಲಲ್ಲೇ ಶಾಂತವಾಯಿತು. ದೇವತೆಗಳು ತಮ್ಮ ತಲೆಯನ್ನು ಮುಟ್ಟಿ ಕೊಳ್ಳುತ್ತಾ ಶಿವನನ್ನು ಬೀಳ್ಕೊಂಡರು. ಮಹಾರಥದ ಅಂಗಗಳು ಸ್ವಸ್ಥಾನಕ್ಕೆ ತಿರುಗಿದವು.

ಅರ್ಥ:
ಕರುಣ: ದಯೆ; ರಸ: ಸಾರ; ನನೆ: ಮನನ, ಜ್ಞಾಪಿಸು; ನಗೆ: ಸಂತೋಷ; ಅಂಕುರ: ಚಿಗುರು, ಹುಟ್ಟು; ಹಸ್ತ: ಕೈ, ಕರ; ಶಂಕರ: ಶಿವ; ಹೂಂಕರ: ಶಬ್ದ; ತಳಿತ:ಚಿಗುರಿದ; ಉರಿ: ಬೆಂಕಿ; ತಗ್ಗು: ಕಡಿಮೆಯಾಗು; ಶಿರ: ತಲೆ; ತಡಹುತ: ಸವರುತ್ತಾ; ದೇವ: ಸುರರು; ತತಿ:ಗುಂಪು; ಪುರಹರ: ಶಿವ (ತ್ರಿಪುರ ಊರನ್ನು ದಹನ ಮಾಡಿದವ); ಬೀಳ್ಕೊಂಡು: ಹೊರಹೋಗು; ಮಹಾರಥ: ಪರಾಕ್ರಮಿ; ಹರಿ: ಗತಿ, ನಡೆ; ನಿಜ: ಸ್ವಂತ; ಸಂಸ್ಥಾನ: ರಾಜ್ಯ; ಸಂಗತ:ಯೋಗ್ಯವಾದುದು; ನಿಮಿಷ: ಕ್ಷಣ ಮಾತ್ರ;

ಪದವಿಂಗಡಣೆ:
ಕರುಣ+ರಸದಲಿ +ನನೆದು +ನಗೆಯಂ
ಕುರಿಸಲ್+ ಆಜ್ಞಾಹಸ್ತದಲಿ +ಶಂ
ಕರನ +ಹೂಂಕರಣೆಯಲಿ +ತಳಿತ್+ಉರಿ +ತಗ್ಗಿತಲ್ಲಲ್ಲಿ
ಶಿರವ+ ತಡಹುತ +ದೇವತತಿ+ ಪುರ
ಹರನ+ ಬೀಳ್ಕೊಂಡರು +ಮಹಾರಥ
ಹರಿದು +ನಿಜ +ಸಂಸ್ಥಾನ +ಸಂಗತವಾಯ್ತು +ನಿಮಿಷದಲಿ

ಅಚ್ಚರಿ:
(೧) ಶಂಕರ, ಪುರಹರ, ಹರ – ಶಿವನನ್ನು ಕರೆದ ಬಗೆ