ಪದ್ಯ ೯೬: ಭೀಮನು ಏನು ಹೇಳಿ ಗರ್ಜಿಸಿದನು?

ಎನುತ ಬಿಟ್ಟನು ರಥವ ದುರಿಯೋ
ಧನನ ಮೋಹರಕಾಗಿ ಬಂಡಿಯ
ಬಿನುಗುಗಳು ಕೈದೋರಿರೈ ಪುನ್ನಾಮನಾರಿಯರು
ಅನುಜರಾವೆಡೆ ಕರಸು ಕೌರವ
ಜನಪ ಕರ್ಣಾದಿಗಳ ಬಿಂಕವ
ನೆನಗೆ ತೋರಾಯೆನುತ ಮೊಳಗಿದನರಸನಿದಿರಿನಲಿ (ಕರ್ಣ ಪರ್ವ, ೧೯ ಸಂಧಿ, ೯೬ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ಭೀಮನು ದುರ್ಯೋಧನನ ಸೈನ್ಯದತ್ತ ರಥವನ್ನು ಬಿಟ್ಟು, ಗಂಡಸರೆಮ್ಬ ಹೆಸರಿನ ಹೆಣ್ಣಾಳುಗಳೇ, ರಥಿಕರೆಂಬ ಅಲ್ಪರೇ, ನಿಮ್ಮ ಕೈಬಲವನ್ನು ತೋರಿಸಿರಿ. ದುರ್ಯೋಧನ, ನಿನ್ನ ತಮ್ಮಂದಿರೆಲ್ಲಿ? ಅವರನ್ನು ಕರೆಸಿ ತೋರಿಸು, ನೋಡುತ್ತೇನೆ, ಕರ್ಣ ಮೊದಲಾದವರ ಬಿಂಕವೆಲ್ಲಿ? ನನಗೆ ತೋರಿಸು ಎಂದು ಗರ್ಜಿಸಿದನು.

ಅರ್ಥ:
ಬಿಟ್ಟನು: ತೆರಳಿದನು; ರಥ: ಬಂಡಿ; ಮೋಹರ: ಕಾಳಗ; ಬಂಡಿ: ರಥ; ಬಿನುಗು: ಕ್ಷುದ್ರವ್ಯಕ್ತಿ; ಕೈ: ಹಸ್ತ; ತೋರು ಪ್ರದರ್ಶಿಸು; ಪುನ್ನಾಮನಾರಿ: ಗಂಡನಂತಿರುವ ಹೆಣ್ಣು; ಅನುಜ: ಸಹೋದರ, ತಮ್ಮ; ಎಡೆ: ಎಲ್ಲಿ; ಕರಸು: ಬರೆಮಾಡು; ಬಿಂಕ: ಸೊಕ್ಕು, ಗರ್ವ, ಜಂಬ; ಜನಪ: ರಾಜ; ಆದಿ: ಮುಂತಾದ; ಮೊಳಗು: ಧ್ವನಿ, ಸದ್ದು; ಅರಸ: ರಾಜ; ಇದಿರು: ಎದುರು;

ಪದವಿಂಗಡಣೆ:
ಎನುತ +ಬಿಟ್ಟನು +ರಥವ +ದುರಿಯೋ
ಧನನ +ಮೋಹರಕಾಗಿ +ಬಂಡಿಯ
ಬಿನುಗುಗಳು +ಕೈದೋರಿರೈ +ಪುನ್ನಾಮನಾರಿಯರು
ಅನುಜರ್+ಆವೆಡೆ+ ಕರಸು+ ಕೌರವ
ಜನಪ+ ಕರ್ಣಾದಿಗಳ +ಬಿಂಕವನ್
ಎನಗೆ+ ತೋರಾಯೆನುತ+ ಮೊಳಗಿದನ್+ಅರಸನ್+ಇದಿರಿನಲಿ

ಅಚ್ಚರಿ:
(೧) ಕೌರವರನ್ನು ಕೆಣಕುವ ಪರಿ – ಕೈದೋರಿರೈ ಪುನ್ನಾಮನಾರಿಯರು