ಪದ್ಯ ೪: ಊರ್ವಶಿಯ ಚೆಲುವು ಹೇಗಿತ್ತು?

ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತಿಯೊ ಕಾಮುಕರ ಭಾಗ್ಯ ಸುಪಕ್ವ ಫಲರಸವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿದೇವತೆಯೊ ವರ್ಣಿಸುವೊಡರಿದೆಂದ (ಅರಣ್ಯ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಊರ್ವಶಿಯು ಸುಗಂಧದ ಪುತ್ಥಳಿ, ಸೌಂದರ್ಯದ ಎರಕ, ವಿಟರು ಮಾಡಿದ ಪುಣ್ಯದ ಫಲ, ಕಾಮುಕರ ಭಾಗ್ಯದ ಪಕ್ವ ಫಲದ ರಸ, ಮನ್ಮಥನ ವಿಜಯಧ್ವಜ, ಕಾಮಶಾಸ್ತ್ರದ ಮೂಲಮಂತ್ರ, ಅಪ್ಸರ ಸ್ತ್ರೀಯರ ಅಧಿದೇವತೆ ಆಕೆಯನ್ನು ವರ್ಣಿಸಲಸಾಧ್ಯ.

ಅರ್ಥ:
ಪರಿಮಳ: ಸುಗಂಧ; ಪುತ್ಥಳಿ: ಬೊಂಬೆ; ಚೆಲುವು: ಅಂದ; ಕರು: ಎರಕ ಹೊಯ್ಯುವುದಕ್ಕಾಗಿ ಮಾಡಿದ ಅಚ್ಚು; ಎರಕ: ಕಾಯಿಸಿದ ಲೋಹಾದಿಗಳ ದ್ರವವನ್ನು ಅಚ್ಚಿಗೆ ಎರೆಯುವಿಕೆ; ವಿಟ: ಕಾಮುಕ, ವಿಷಯಾಸಕ್ತ; ಪುಣ್ಯ: ಸದಾಚಾರ; ಪರಿಣತಿ: ಅನುಭವಿ, ಬುದ್ಧಿವಂತಿಕೆ; ಕಾಮುಕ: ಕಾಮಾಸಕ್ತನಾದವನು; ಭಾಗ್ಯ: ಸುದೈವ; ಪಕ್ವ: ಹಣ್ಣಾದ; ಫಲ: ಹಣ್ಣು; ರಸ: ಸಾರ; ಸ್ಮರ: ಮನ್ಮಥ; ವಿಜಯ: ಗೆಲುವು; ಧ್ವಜ: ಬಾವುಟ; ಮನ್ಮಥ: ಕಾಮ, ಸ್ಮರ; ಪರಮ: ಶ್ರೇಷ್ಠ; ಶಾಸ್ತ್ರ: ವಿದ್ಯೆ; ಮೂಲ: ಬೇರು; ಮಂತ್ರ: ವಿಚಾರ, ಆಲೋಚನೆ; ಸುರಸತಿ: ಅಪ್ಸರೆ; ಅಧಿದೇವತೆ: ಮುಖ್ಯ ದೇವತೆ; ವರ್ಣಿಸು: ಬಣ್ಣಿಸು, ವಿವರಿಸು; ಅರಿ: ತಿಳಿ;

ಪದವಿಂಗಡಣೆ:
ಪರಿಮಳದ +ಪುತ್ಥಳಿಯೊ +ಚೆಲುವಿನ
ಕರುವಿನ್+ಎರಕವೊ+ ವಿಟರ+ ಪುಣ್ಯದ
ಪರಿಣತಿಯೊ +ಕಾಮುಕರ+ ಭಾಗ್ಯ +ಸುಪಕ್ವ+ ಫಲರಸವೊ
ಸ್ಮರನ+ ವಿಜಯಧ್ವಜವೊ +ಮನ್ಮಥ
ಪರಮ+ ಶಾಸ್ತ್ರದ +ಮೂಲ+ಮಂತ್ರವೊ
ಸುರಸತಿಯರ್+ಅಧಿದೇವತೆಯೊ +ವರ್ಣಿಸುವೊಡ್+ಅರಿದೆಂದ

ಅಚ್ಚರಿ:
(೧) ಉಪಮಾನಗಳ ಬಳಕೆ – ಪರಿಮಳದ ಪುತ್ಥಳಿಯೊ; ಚೆಲುವಿನ ಕರುವಿನೆರಕವೊ; ವಿಟರ ಪುಣ್ಯದ ಪರಿಣತಿಯೊ; ಕಾಮುಕರ ಭಾಗ್ಯ ಸುಪಕ್ವ ಫಲರಸವೊ; ಸ್ಮರನ ವಿಜಯಧ್ವಜವೊ; ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ; ಸುರಸತಿಯರಧಿದೇವತೆಯೊ

ಪದ್ಯ ೧೩: ಕೃಷ್ಣನನ್ನು ಕಂಡ ವಿದುರನೇಕೆ ಮೌನವಾದ?

ನೆರೆಯೆ ಕೃತ್ಯಾಕೃತ್ಯ ಭಾವವ
ಮರೆದು ಕಳೆದನು ಮನ ಮುರಾರಿಯ
ನಿರುಕಿಕೊಂಡುದು ಕಂಗಳೊಡೆವೆಚ್ಚುವು ಪದಾಬ್ಜದಲಿ
ಅರಿವು ಮಯಣಾಮಯದ ಭಕ್ತಿಯೊ
ಳೆರಗಿಸಿದ ಪುತ್ಥಳಿಯವೊಲು ಕಡು
ಬೆರಗ ಕೇಣಿಯ ಕೊಂಡು ಮೌನದೊಳಿದ್ದನಾ ವಿದುರ (ಉದ್ಯೋಗ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೃಷ್ಣನ ಜೊತೆಯಲ್ಲಿದ್ದ ವಿದುರನು ಕೃತ ಅಕೃತ್ಯ ಭಾವವನ್ನು ಮರೆತು ತೊರೆದನು, ಮನವು ಮುರಾರಿಯನ್ನು ಅಪ್ಪಿಕೊಂಡಿತು ಕಣ್ಣುಗಳು ಅವನ ಚರಣಕಮಲವನ್ನು ನೋಡಿ ಪಾವನಗೊಂಡಿತು, ತಿಳುವಳಿಕೆಯು ಮೇಣಮಯವಾದ ಭಕ್ತಿಯಲ್ಲಿ ನಿರ್ಮಿಸಿದ ಬೊಂಬೆಯಂತೆ ವಿಸ್ಮಯವಾಗಿ ಕೃಷ್ಣನ ಗೆಳೆತನವನ್ನು ನೋಡುತ್ತಾ ವಿದುರನು ಮೌನಕ್ಕೆ ಶರಣಾದನು.

ಅರ್ಥ:
ನೆರೆ: ಸಮೀಪ, ಪಕ್ಕ, ಸೇರು, ಜೊತೆಗೂಡು; ಕೃತ್ಯಾಕೃತ್ಯ: ಒಳ್ಳೆಯ ಮತ್ತು ಕೆಟ್ಟ ಕೆಲಸ; ಭಾವ: ಭಾವನೆ; ಮರೆ: ನೆನಪಿನಿಂದ ದೂರ ಮಾಡು; ಕಳೆ: ಬಿಡು, ತೊರೆ; ಮನ: ಮನಸ್ಸು; ಮುರಾರಿ: ಕೃಷ್ಣ; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಕಂಗಳು: ಕಣ್ಣು, ನಯನ; ಪದಾಬ್ಜ: ಚರಣ ಕಮಲ; ಅರಿ: ತಿಳು; ಮಯಣಮಯ; ಮೇಣದಿಂದ ತುಂಬಿದ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಎರಗು: ನಮಸ್ಕರಿಸು; ಪುತ್ಥಳಿ: ಬೊಂಬೆ; ಕಡು: ಹೆಚ್ಚಾಗಿ, ಅಧಿಕ; ಬೆರಗು: ವಿಸ್ಮಯ, ಸೋಜಿಗ; ಕೇಣಿ:ಮೈತ್ರಿ, ಗೆಳೆತನ; ಮೌನ: ಮಾತಿಲ್ಲದ, ಸುಮ್ಮನಿರುವಿಕೆ;

ಪದವಿಂಗಡಣೆ:
ನೆರೆಯೆ +ಕೃತ್ಯ+ಅಕೃತ್ಯ+ ಭಾವವ
ಮರೆದು +ಕಳೆದನು +ಮನ +ಮುರಾರಿಯನ್
ಇರುಕಿಕೊಂಡುದು+ ಕಂಗಳ್+ಒಡೆವೆಚ್ಚುವು +ಪದಾಬ್ಜದಲಿ
ಅರಿವು +ಮಯಣಾಮಯದ +ಭಕ್ತಿಯೊಳ್
ಎರಗಿಸಿದ +ಪುತ್ಥಳಿಯವೊಲು +ಕಡು
ಬೆರಗ +ಕೇಣಿಯ +ಕೊಂಡು +ಮೌನದೊಳಿದ್ದನಾ +ವಿದುರ

ಅಚ್ಚರಿ:
(೧) ನೆರೆ, ಮರೆ – ಪ್ರಾಸ ಪದ
(೨) ಕಡು ಬೆರಗ ಕೇಣಿಯ ಕೊಂಡು – ‘ಕ’ ಕಾರದ ಸಾಲು ಪದಗಳು
(೩) ಉಪಮಾನದ ಪ್ರಯೋಗ – ಅರಿವು ಮಯಣಾಮಯದ ಭಕ್ತಿಯೊಳೆರಗಿಸಿದ ಪುತ್ಥಳಿಯವೊಲು

ಪದ್ಯ ೧೭: ಯಾಂತ್ರಿಕ ಗೊಂಬೆಗಳು ಮಂಟಪದಲ್ಲಿ ನೆರೆದಿದ್ದ ಜನರಿಗೆ ಏನನ್ನು ಕೊಡುತ್ತಿದ್ದವು?

ಬಳಿಕ ಸೊದೆಗಳ ಬಾವಿಗಳ ಪ
ಕ್ಕಲೆಯ ಪನ್ನೀರುಗಳು ಹಿಡಿದವು
ಹೊಳೆವ ಕೈರಾಟಣದ ಕಾಂಚನಮಯದ ದೋಣಿಗಳ
ತುಳುಕಿ ಬಿಗಿದರು ಕೊಪ್ಪರಿಗೆಗಳ
ವಳಯದಲಿ ನವಯಂತ್ರಮಯ ಪು
ತ್ಥಳಿಗಳೇ ನೀಡುವವು ಬೇಡಿದರಿಗೆ ಸುವಸ್ತುಗಳ (ಆದಿ ಪರ್ವ, ೧೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಆ ಮಂಟಪದ ಸುತ್ತಲೂ, ಬಾವಿಯಲ್ಲಿ ತುಂಬಿದ ಹಾಲು, ದೊಡ್ಡಪಾತ್ರೆಗಳಲ್ಲಿ ಪನ್ನೀರು, ಕೈರಾಟಣ (ಚಕ್ರ) ದಲ್ಲಿ ತಿರುಗುತ್ತಾ ದೋಣಿಗಳಲ್ಲಿ ಜನರಿಗೆ ಇವೆಲ್ಲವೂ ದೊರಕುತ್ತಿದ್ದವು. ತುಂಬಿ ತುಳುಕುತ್ತಿದ್ದ ಆ ದೊಡ್ಡ ಪಾತ್ರೆಗಳ ಸುತ್ತಲೂ ನಡೆದಾಡುವ ಗೊಂಬೆಗಳೇ ಬೇಕಾದವರಿಗೆ ಹಾಲು, ಪನ್ನೀರು ಮುಂತಾದವುಗಳನ್ನು ಕೊಡುತ್ತಿದ್ದವು.

ಅರ್ಥ:
ಬಳಿಕ: ನಂತರ; ಸೊದೆ:ಹಾಲು, ಕ್ಷೀರ, ಅಮೃತ; ಬಾವಿ: ಕೂಪ, ವಾಪಿ; ಪಕ್ಕಲೆ: ಕೊಪ್ಪರಿಗೆ; ಪನ್ನೀರು: ಸುಗಂಧವಾದ ನೀರು, ತಂಪಾದ ನೀರು; ಹಿಡಿ: ಗ್ರಹಿಸು; ಹೊಳೆ: ಪ್ರಕಾಶಿಸು; ಕೈರಾಟಣ:ಚಕ್ರ; ಕಾಂಚನ: ಹೊನ್ನು, ಚಿನ್ನ; ದೋಣಿ: ನಾವೆ, ಹರವಿ; ತುಳುಕಿ: ಹೊರಚೆಲ್ಲು, ಕದಡು, ಕಲುಕು; ಬಿಗಿ: ಕಟ್ಟು, ಬಂಧಿಸು; ಕೊಪ್ಪರಿಗೆ: ಕಡಾಯಿ; ವಳಯ: ಕಡಗ, ಬಳೆ; ನವ: ಹೊಸ; ಯಂತ್ರ: ಉಪಕರಣ; ಪುತ್ಥಳಿ: ಗೊಂಬೆ; ನೀಡು: ಕೊಡು; ವಸ್ತು: ಪದಾರ್ಥ;

ಪದವಿಂಗಡಣೆ:
ಬಳಿಕ +ಸೊದೆಗಳ+ ಬಾವಿಗಳ +ಪ
ಕ್ಕಲೆಯ +ಪನ್ನೀರುಗಳು +ಹಿಡಿದವು
ಹೊಳೆವ +ಕೈರಾಟಣದ+ ಕಾಂಚನಮಯದ +ದೋಣಿಗಳ
ತುಳುಕಿ +ಬಿಗಿದರು +ಕೊಪ್ಪರಿಗೆಗಳ
ವಳಯದಲಿ+ ನವಯಂತ್ರಮಯ +ಪು
ತ್ಥಳಿಗಳೇ +ನೀಡುವವು +ಬೇಡಿದರಿಗೆ+ ಸುವಸ್ತುಗಳ

ಅಚ್ಚರಿ:
(೧) ಈಗಿನ ಕಾಲದ ರೋಬೋಟ್ಸ್ ನ ಪರಿಕಲ್ಪನೆ ಈ ಪದ್ಯದಲ್ಲಿ ಕಾಣಬಹುದು -ನವಯಂತ್ರಮಯ ಪುತ್ಥಳಿಗಳೇ ನೀಡುವವು
(೨) ಪಕ್ಕಲೆಯ ಪನ್ನೀರು, ಕೈರಾಟಣದ ಕಾಂಚನ – ಒಂದೆ ಅಕ್ಷರದ ಜೋಡಿ ಪದಗಳು