ಪದ್ಯ ೨೮: ಭೀಮನು ಹನುಮನನ್ನು ಹೇಗೆ ಹೊಗಳಿದನು?

ಜರುಗಿನಲಿ ಜಾಂಬೂನದದ ಸಂ
ವರಣೆಕಾರಂಗೆಡೆಯೊಳಿರ್ದುದು
ಪರಮನಿಧಿ ಮಝಪೂತು ಪುಣ್ಯೋದಯದ ಫಲವೆನಗೆ
ಸರಸಿಯೆತ್ತಲು ಗಂಧವೆತ್ತಲು
ಬರವಿದೆತ್ತಣದೆತ್ತ ಘಟಿಸಿದು
ದರರೆ ಮಾರುತಿ ತಂದೆ ನೀನೆಂದೆನುತ ಬಣ್ಣಿಸಿದ (ಅರಣ್ಯ ಪರ್ವ, ೧೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಜರುಗಿನಲ್ಲಿ ಚಿನ್ನದ ಕಣಗಳನ್ನು ಆಯ್ದುಕೊಳ್ಳುತ್ತಿದ್ದವನಿಗೆ ಹತ್ತಿರದಲ್ಲೇ ಮಹಾನಿಧಿಯು ಸಿಕ್ಕಂತಾಯಿತು. ನನ್ನ ಪುಣ್ಯದ ಫಲವು ಉದಿಸುವ ಕಾಲವಿದು. ಎಲ್ಲಿಯ ಸರೋವರ? ಎಲ್ಲಿಯ ಸುಗಂಧ? ಅದನ್ನನುಸರಿಸಿ ನಾನೇಕೆ ಈ ದಾರಿಯಲ್ಲಿ ಬಂದೆ, ಇವೆಲ್ಲಾ ಒಂದುಗೂಡಿ ತಂದೆ ಆಂಜನೇಯ ನಿನ್ನ ದರ್ಶನವಾಯಿತು ಎಂದು ಭೀಮನು ಹನುಮಂತನನ್ನು ಹೊಗಳಿದನು.

ಅರ್ಥ:
ಜರುಗು: ಚಿನ್ನದ ಸಣ್ಣ ಸಣ್ಣ ಕಣಗಳು ಬೆರೆತಿರುವ ಮಣ್ಣು; ಜಾಂಬೂನದ: ಚಿನ್ನ, ಸುವರ್ಣ; ಸಂವರಣೆ: ಸಂಗ್ರಹ, ಶೇಖರಣೆ; ಪರಮನಿಧಿ: ಶ್ರೇಷ್ಠವಾದ ಐಶ್ವರ್ಯ; ಮಝಪೂತು: ಭಲೇ; ಪುಣ್ಯ: ಸದಾಚಾರ; ಉದಯ: ಹುಟ್ಟು; ಫಲ: ಪ್ರಯೋಜನ; ಸರಸಿ: ಸರೋವರ; ಗಂಧ: ಪರಿಮಳ; ಬರವು: ಆಗಮನ; ಎತ್ತಣ: ಎಲ್ಲಿ; ಘಟಿಸು: ಸೇರು, ಕೂಡು; ಮಾರುತಿ: ಹನುಮಂತ; ತಂದೆ: ಪಿತ; ಬಣ್ಣಿಸು: ವಿವರಿಸು;

ಪದವಿಂಗಡಣೆ:
ಜರುಗಿನಲಿ +ಜಾಂಬೂನದದ+ ಸಂ
ವರಣೆಕಾರಂಗೆಡೆಯೊಳ್+ಇರ್ದುದು
ಪರಮನಿಧಿ+ ಮಝಪೂತು+ ಪುಣ್ಯೋದಯದ +ಫಲವೆನಗೆ
ಸರಸಿಯೆತ್ತಲು +ಗಂಧವೆತ್ತಲು
ಬರವಿದ್+ಎತ್ತಣದೆತ್ತ+ ಘಟಿಸಿದುದ್
ಅರರೆ +ಮಾರುತಿ +ತಂದೆ +ನೀನೆಂದೆನುತ+ ಬಣ್ಣಿಸಿದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜರುಗಿನಲಿ ಜಾಂಬೂನದದ ಸಂವರಣೆಕಾರಂಗೆಡೆಯೊಳಿರ್ದುದು
ಪರಮನಿಧಿ