ಪದ್ಯ ೨೧: ಅಶ್ವತ್ಥಾಮನು ಯಾವ ಯಜ್ಞವನ್ನು ಮಾಡಲು ನಿರ್ಧರಿಸಿದನು?

ಇದು ವಿರೂಪಾಕ್ಷನ ಮನಃಕ್ಷೋ
ಭದ ವಿಕಾರವಲಾ ಪಿನಾಕಿಯ
ಪದವ ಹಿಡಿದೋಲೈಸುವೆನು ಸರ್ವಾಂಗಯಜ್ಞದಲಿ
ಇದುಕುಪಾಯವ ಬಲ್ಲೆನೆಂದು
ಬ್ಬಿದನು ಬೊಬ್ಬಿರಿದಾರಿ ತೋಡಿದ
ನುದರವಹ್ನಿಯನಿದಿರೊಳಗ್ನಿತ್ರಯವ ನಿರ್ಮಿಸಿದ (ಗದಾ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಆಗ ಅಶ್ವತ್ಥಾಮನು, ಇದು ವಿರೂಪಾಕ್ಷನ ಮನಃಕ್ಷೋಭೆಯಿಂದಾದ ವಿಕಾರ. ಇದಕ್ಕೆ ಉಪಾಯವನ್ನು ಬಲ್ಲೆ, ಸರ್ವಾಂಗ ಯಜ್ಞದಿಂದ ಶಿವನನ್ನು ಒಲಿಸುತ್ತೇನೆ ಎಂದುಕೊಂಡು, ವೈಶ್ವಾನರನನ್ನು ಬಗೆದು ತೋಡಿ ಇದಿರಿನಲ್ಲಿ ಗಾರ್ಹಪತ್ಯ, ಅಹವನೀಯ, ದಕ್ಷಿಣಾಗ್ನಿಗಳೆಂಬ ಮುರು ಅಗ್ನಿಗಲನ್ನು ಸ್ಥಾಪಿಸಿದನು.

ಅರ್ಥ:
ವಿರೂಪಾಕ್ಷ: ಶಿವ; ಮನಃ: ಮನಸ್ಸು; ಕ್ಷೋಭೆ: ಕೋಪ, ವಿಪತ್ತು; ವಿಕಾರ: ರೂಪಾಂತರ, ವಿಕೃತಿ; ಪಿನಾಕಿ: ತ್ರಿಶೂಲ; ಪದ: ಚರಣ; ಹಿಡಿ: ಗ್ರಹಿಸು; ಓಲೈಸು: ಉಪಚರಿಸು; ಸರ್ವಾಂಗ: ಎಲ್ಲಾ ಅಂಗಗಳು; ಯಜ್ಞ: ಕ್ರತು; ಉಪಾಯ: ಯುಕ್ತಿ, ಹಂಚಿಕೆ; ಬಲ್ಲೆ: ತಿಳಿ; ಉಬ್ಬು: ಹಿಗ್ಗು, ಗರ್ವಿಸು; ಬೊಬ್ಬಿರಿ: ಗರ್ಜಿಸು; ತೋಡು: ಹಳ್ಳ, ಅಗೆ; ಉದರ: ಹೊಟ್ಟೆ; ವಹ್ನಿ: ಅಗ್ನಿ; ಇದಿರು: ಎದುರು; ಅಗ್ನಿ: ಬೆಂಕಿ; ತ್ರಯ: ಮೂರು; ನಿರ್ಮಿಸು: ಕಟ್ಟು, ರಚಿಸು;

ಪದವಿಂಗಡಣೆ:
ಇದು +ವಿರೂಪಾಕ್ಷನ+ ಮನಃ+ಕ್ಷೋ
ಭದ +ವಿಕಾರವಲಾ +ಪಿನಾಕಿಯ
ಪದವ +ಹಿಡಿದ್+ಓಲೈಸುವೆನು +ಸರ್ವಾಂಗ+ಯಜ್ಞದಲಿ
ಇದುಕ್+ಉಪಾಯವ +ಬಲ್ಲೆನೆಂದ್
ಉಬ್ಬಿದನು +ಬೊಬ್ಬಿರಿದ್+ಆರಿ +ತೋಡಿದನ್
ಉದರ+ವಹ್ನಿಯನ್+ಇದಿರೊಳ್+ಅಗ್ನಿತ್ರಯವ +ನಿರ್ಮಿಸಿದ

ಅಚ್ಚರಿ:
(೧) ವಹ್ನಿ, ಅಗ್ನಿ; ವಿರೂಪಾಕ್ಷ, ಪಿನಾಕಿ – ಸಮಾನಾರ್ಥಕ ಪದ

ಪದ್ಯ ೨೯: ದ್ರೋಣನು ಕರ್ಣನನ್ನು ಹೇಗೆ ಒಪ್ಪಿಸಿದನು?

ಚಾಪವೀತನ ಕೈಯಲಿರಲಿ
ನ್ನಾ ಪಿನಾಕಿಗೆ ಗೆಲವು ಘಟಿಸದು
ವೈಪರೀತ್ಯಕೆ ಬೆದರಲಾಗದು ಸ್ವಾಮಿಕಾರ್ಯವಿದು
ರೂಪುದೋರದೆ ಬಂದು ಸುಭಟನ
ಚಾಪವನು ಖಂಡಿಸುವುದಿದು ಕುರು
ಭೂಪನುಳಿವೆಂದಿನಸುತನನೊಡಬಡಿಸಿದನು ದ್ರೋಣ (ದ್ರೋಣ ಪರ್ವ, ೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ದ್ರೋಣನು ತನ್ನ ಮಾತನ್ನು ಮುಂದುವರೆಸುತ್ತಾ, ಎಲೈ ಕರ್ಣ, ಇವನ ಕೈಯಲ್ಲಿ ಬಿಲ್ಲಿದ್ದರೆ ಶಿವನೂ ಇವನನ್ನು ಗೆಲ್ಲಲಾಗುವುದಿಲ್ಲ. ಇದು ವಿಪರೀತ ಮಾರ್ಗವೆಂದು ಹೆದರಬೇಡ, ಇದು ಸ್ವಾಮಿಕಾರ್ಯ, ಅವನ ಕಣ್ಣಿಗೆ ಬೀಳದೆ ಹಿಂದಿನಿಂದ ಬಂದು ಬಿಲ್ಲನ್ನು ಕತ್ತರಿಸು. ಕೌರವನುಳಿಯಲು ಇರುವುದು ಇದೊಂದೇ ಮಾರ್ಗ, ಹೀಗೆ ಹೇಳಿ ದ್ರೋಣನು ಕರ್ಣನನ್ನೊಪ್ಪಿಸಿದನು.

ಅರ್ಥ:
ಚಾಪ: ಬಿಲ್ಲು; ಕೈ: ಹಸ್ತ; ಪಿನಾಕಿ: ಶಿವ; ಗೆಲುವು: ಜಯ; ಘಟಿಸು: ಸಂಭವಿಸು; ವೈಪರೀತ್ಯ: ವಿಪರೀತ; ಬೆದರು: ಹೆದರು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ರೂಪು: ಆಕಾರ; ತೋರು: ಗೋಚರಿಸು; ಬಂದು: ಆಗಮಿಸು; ಸುಭಟ: ಪರಾಕ್ರಮಿ; ಚಾಪ: ಬಿಲ್ಲು; ಖಂಡಿಸು: ಕತ್ತರಿಸು; ಭೂಪ: ರಾಜ; ಉಳಿವು: ಬದುಕಲು; ಇನಸುತ: ಸೂರ್ಯನ ಪುತ್ರ (ಕರ್ಣ); ಒಡಬಡಿಸು: ಒಪ್ಪಿಸು;

ಪದವಿಂಗಡಣೆ:
ಚಾಪವ್+ಈತನ +ಕೈಯಲಿರಲ್
ಇನ್+ಆ +ಪಿನಾಕಿಗೆ +ಗೆಲವು +ಘಟಿಸದು
ವೈಪರೀತ್ಯಕೆ +ಬೆದರಲಾಗದು+ ಸ್ವಾಮಿ+ಕಾರ್ಯವಿದು
ರೂಪು+ತೋರದೆ +ಬಂದು +ಸುಭಟನ
ಚಾಪವನು +ಖಂಡಿಸುವುದ್+ಇದು+ ಕುರು
ಭೂಪನ್+ಉಳಿವೆಂದ್+ಇನಸುತನನ್+ಒಡಬಡಿಸಿದನು +ದ್ರೋಣ

ಅಚ್ಚರಿ:
(೧) ಅಭಿಮನ್ಯುವಿನ ಪೌರುಷ – ಚಾಪವೀತನ ಕೈಯಲಿರಲಿನ್ನಾ ಪಿನಾಕಿಗೆ ಗೆಲವು ಘಟಿಸದು

ಪದ್ಯ ೩೩: ಯಾವುದು ಪರಬ್ರಹ್ಮನ ಲೀಲಾ ವಿನೋದ?

ಏಕಮೇವಾದ್ವಿತಿಯವೆಂಬ ನಿ
ರಾಕುಳಿತ ತೇಜೋನಿಧಿಗೆ ಮಾ
ಯಾಕಳತ್ರದೊಳಾಯ್ತು ನಿಜಗುಣ ಭೇದವದರಿಂದ
ಆ ಕಮಲಭವನೀ ಮುಕುಂದ ಪಿ
ನಾಕಿಯೆಂಬಭಿದಾನದಲಿ ತ್ರಿಗು
ಣಾಕೃತಿಯ ಕೈಕೊಂಡನುರು ಲೀಲಾ ವಿನೋದದಲಿ (ಅರಣ್ಯ ಪರ್ವ, ೧೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ತನಗೆರಡೆಯದಿಲ್ಲದ ಒಂದೇ ಆದ ನಿಶ್ಚಿಂತನಾದ ತೇಜೋ ರೂಪಿಯಾದವನಿಗೆ ಮಾಯೆಯೆಂಬ ಪತ್ನಿಯಿಂದ ತ್ರಿಗುಣಗಳ ಭೇದವಾದಂತೆ ತೋರುತ್ತದೆ. ಆದುದರಿಂದ ಬ್ರಹ್ಮ, ವಿಷ್ಣು, ಶಿವರೆಂಬ ಹೆಸರಿನಿಂದ ತ್ರಿಗುಣಾಕೃತಿಯನ್ನು ಪಡೆದಂತೆ ತೋರುತ್ತದೆ. ಇದು ಆ ಪರಬ್ರಹ್ಮನ ಮಹಾಲೀಲಾ ವಿನೋದ.

ಅರ್ಥ:
ಏಕಮೇವ: ಒಂದೇ ಒಂದು; ಅದ್ವಿತೀಯ: ಎರಡನೆಯದಿಲ್ಲದ, ತನಗೆ ಸಮನಾದ ಬೇರೊಂದಿಲ್ಲದ; ನಿರಾಕುಳ: ನಿರಾತಂಕ; ತೇಜಸ್ಸು: ಕಾಂತಿ; ನಿಧಿ: ಐಶ್ವರ್ಯ; ಮಾಯಾ: ಗಾರುಡಿ; ಕಳತ್ರ: ಹೆಂಡತಿ; ನಿಜಗುಣ: ತನ್ನ ಸ್ವಭಾವ; ಭೇದ: ಮುರಿ, ಬಿರುಕು; ಕಮಲಭವ: ಬ್ರಹ್ಮ; ಮುಕುಂದ: ಕೃಷ್ಣ; ಪಿನಾಕಿ: ಶಿವ; ಅಭಿದಾನ: ಹೆಸರು; ತ್ರಿಗುಣ: ಮೂರು ಗುಣಗಳು; ಆಕೃತಿ: ರೂಪ; ಕೈಕೊಂಡು: ಜವಾಬ್ದಾರಿ ವಹಿಸು; ಉರು: ಹೆಚ್ಚಿನ; ಲೀಲಾ: ವಿಲಾಸ, ಬೆಡಗು; ವಿನೋದ: ಸಂತೋಷ, ಹಿಗ್ಗು;

ಪದವಿಂಗಡಣೆ:
ಏಕಮೇವ+ಅದ್ವಿತಿಯವೆಂಬ +ನಿ
ರಾಕುಳಿತ +ತೇಜೋನಿಧಿಗೆ+ ಮಾ
ಯಾ+ಕಳತ್ರದೊಳ್+ಆಯ್ತು +ನಿಜಗುಣ+ ಭೇದವ್+ಅದರಿಂದ
ಆ +ಕಮಲಭವನ್+ಈ+ ಮುಕುಂದ +ಪಿ
ನಾಕಿ+ಎಂವ್+ಅಭಿದಾನದಲಿ+ ತ್ರಿಗು
ಣಾಕೃತಿಯ +ಕೈಕೊಂಡನ್+ಉರು +ಲೀಲಾ +ವಿನೋದದಲಿ

ಅಚ್ಚರಿ:
(೧) ಸಂಸ್ಕೃತ ನುಡಿಯ ಬಳಕೆ – ಏಕಮೇವಾದ್ವಿತಿಯ
(೨) ಗುಣಗಳು ಹುಟ್ಟಿದ ಪರಿ – ನಿರಾಕುಳಿತ ತೇಜೋನಿಧಿಗೆ ಮಾಯಾಕಳತ್ರದೊಳಾಯ್ತು ನಿಜಗುಣ ಭೇದವದರಿಂದ

ಪದ್ಯ ೬: ಅರ್ಜುನನೇಕೆ ತಾಳ್ಮೆಯನ್ನು ಕಳೆದುಕೊಂಡನು?

ಲೋಕ ಶಿಕ್ಷಕರಲ್ಲಲೇ ನಮ
ಗೇಕೆ ನಿಮ್ಮಯ ತಪದ ಚಿಂತೆ ಪಿ
ನಾಕ ಧರನಡಹಾಯ್ದರೆಯು ಬಿಡೆವೆಮ್ಮ ವಾಸಿಗಳ
ಈ ಕಳಂಬವಿದೆಮ್ಮದೆನುತವ
ನೌಕಹದ ನೆಳಲಿನಲಿ ನಿಂದು ಪಿ
ನಾಕಿ ನುಡಿದನು ಕಡಿದ ನೀತನ ಮನದ ಸೈರಣೆಯ (ಅರಣ್ಯ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಅರ್ಜುನನ ಮಾತಿಗೆ ಶಿವನು, ನಾವೇನೂ ಲೋಕಕ್ಕೆ ಬುದ್ಧಿಹೇಳುವ ಶಿಕ್ಷರರಲ್ಲವಲ್ಲ, ನಮಗೇಕೆ ನಿಮ್ಮ ತಪಸ್ಸಿನ ಚಿಂತೆ? ಆದರೊಂದನ್ನು ನೆನಪಿಡು, ಶಿವನೇ ಬಂದು ತಡೆದರೂ ನಮ್ಮ ಪದ್ದತಿಗಳನ್ನು ನಾವು ಬಿಡುವವರಲ್ಲ. ಈ ಹಂದಿಯನ್ನು ಕೊಂದ ಬಾಣ ನಮ್ಮದು, ಎಂದು ಮರದ ನೆರಳಲ್ಲಿ ನಿಂತು ಹೇಳಿದನು. ಅರ್ಜುನನ ತಾಳ್ಮೆ ಮುರಿದು ಹೋಯಿತು.

ಅರ್ಥ:
ಲೋಕ: ಜಗತ್ತು; ಶಿಕ್ಷಕ: ಆಚಾರ್ಯ; ತಪ: ತಪಸ್ಸು; ಚಿಂತೆ: ಯೋಚನೆ; ಪಿನಾಕ: ತ್ರಿಶೂಲ; ಧರ: ಧರಿಸಿದವ; ಅಡಹಾಯ್ದು: ಮಧ್ಯ ಪ್ರವೇಶ; ಬಿಡು: ತೊರೆ, ತ್ಯಜಿಸು; ವಾಸಿ: ಪ್ರತಿಜ್ಞೆ, ಶಪಥ; ಕಳಂಬ: ಬಾಣ, ಅಂಬು; ಔಕು: ಒತ್ತು, ಹಿಚುಕು; ನೆಳಲು: ನೆರಳು; ನಿಂದು: ನಿಲ್ಲು; ಪಿನಾಕಿ: ಶಿವ; ನುಡಿ: ಮಾತಾಡು; ಕಡಿದ: ನಾಶಮಾಡಿದ; ಮನ: ಮನಸ್ಸು; ಸೈರಣೆ: ತಾಳ್ಮೆ, ಸಹನೆ;

ಪದವಿಂಗಡಣೆ:
ಲೋಕ +ಶಿಕ್ಷಕರಲ್ಲಲೇ+ ನಮ
ಗೇಕೆ +ನಿಮ್ಮಯ +ತಪದ +ಚಿಂತೆ +ಪಿ
ನಾಕ +ಧರನ್+ಅಡಹಾಯ್ದರೆಯು +ಬಿಡೆವ್+ಎಮ್ಮ +ವಾಸಿಗಳ
ಈ +ಕಳಂಬವಿದ್+ಎಮ್ಮದ್+ಎನುತವನ್
ಔಕಹದ+ ನೆಳಲಿನಲಿ +ನಿಂದು +ಪಿ
ನಾಕಿ ನುಡಿದನು ಕಡಿದ ನೀತನ ಮನದ ಸೈರಣೆಯ

ಅಚ್ಚರಿ:
(೧) ಪಿನಾಕಧರ, ಪಿನಾಕಿ – ಶಿವನನ್ನು ಕರೆದ ಬಗೆ;

ಪದ್ಯ ೪೫: ಮೂಕಾಸುರನು ಯಾರ ಬಳಿ ತೆರಳಿದನು?

ಇದುವೆ ಸಮಯವಲಾಯೆನುತ ಹೂ
ಡಿದನು ಬಾಣವನುಗಿದು ಪೂರಾ
ಯದಲಿ ತೂಗಿ ಪಿನಾಕಿಯೆಚ್ಚನು ಮೂಕದಾನವನ
ಒದೆದು ಹಾಯ್ದುದು ಬಾಣ ಗರಿದೋ
ರಿದುದು ಬದಿಯಲಿ ಕೊಡಹಿ ಗೋಳಿಡು
ತದು ಧನಂಜಯನತ್ತ ಹೋದುದು ಹೊತ್ತಕಣೆ ಸಹಿತ (ಅರಣ್ಯ ಪರ್ವ, ೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ಇದೇ ಸರಿಯಾದ ಸಮಯವೆಂದು ಯೋಚಿಸಿ, ಶಿವನು ಬಾಣವನ್ನು ತೆಗೆದು ಬಿಲ್ಲಿನಲ್ಲಿ ಹೂಡಿ, ಹೆದೆಯನ್ನು ಪೂರ್ಣವಾಗಿ ಹಿಂದಕ್ಕೆಳೆದು ಹಂದಿಯ ಮೇಲೆ ಬಿಟ್ಟನು. ಬಾಣವು ಹಂದಿಯ ಹೊಟ್ಟೆಯನ್ನು ಹೊಕ್ಕು ಆಚೆ ಹೋಯಿತು. ಈ ಪಕ್ಕೆಗಳಿಗೆ ಬಾಣದ ಗರಿಗಳಂಟಿದವು. ಹಂದಿಯು ತಲೆ ಕೊಡವಿ ಬಾಣವನ್ನು ಹೊತ್ತು ಗೋಳಿಡುತ್ತಾ ಅರ್ಜುನನಿದ್ದ ಕಡೆಗೆ ಹೋಯಿತು.

ಅರ್ಥ:
ಸಮಯ: ಕಾಲ; ಹೂಡು: ತೊಡು; ಬಾಣ: ಶರ, ಮಾರ್ಗಣ; ಉಗಿ: ಹೊರಹಾಕು; ಪೂರಾಯ: ವಿಶಾಲ, ಪೂರ್ಣ; ತೂಗು: ಇಳಿಬಿಡು; ಪಿನಾಕಿ: ಶಿವ; ಎಚ್ಚು: ಬಾಣಬಿಡು; ದಾನವ: ರಾಕ್ಷಸ; ಒದೆ: ಹೊಡೆತ, ತಳ್ಳು; ಹಾಯಿ: ಮೇಲೆಬೀಳು, ಚಾಚು; ಗರಿ: ಬಾಣದ ಹಿಂಭಾಗ; ತೋರು: ಕಾಣಿಸು; ಬದಿ: ಹತ್ತಿರ; ಕೊಡವಿ: ಅಲ್ಲಾಡಿಸು; ಗೋಳು: ಅಳಲು; ಹೋಗು: ತೆರಳು; ಕಣೆ: ಬಾಣ; ಸಹಿತ: ಜೊತೆ; ಹೊತ್ತು:

ಪದವಿಂಗಡಣೆ:
ಇದುವೆ +ಸಮಯವಲಾ+ಎನುತ +ಹೂ
ಡಿದನು +ಬಾಣವನ್+ಉಗಿದು +ಪೂರಾ
ಯದಲಿ +ತೂಗಿ +ಪಿನಾಕಿ+ಎಚ್ಚನು +ಮೂಕ+ದಾನವನ
ಒದೆದು +ಹಾಯ್ದುದು +ಬಾಣ +ಗರಿ+ತೋ
ರಿದುದು +ಬದಿಯಲಿ +ಕೊಡಹಿ +ಗೋಳಿಡುತ್
ಅದು+ ಧನಂಜಯನತ್ತ +ಹೋದುದು +ಹೊತ್ತ+ಕಣೆ +ಸಹಿತ

ಅಚ್ಚರಿ:
(೧) ಕಣೆ, ಬಾಣ – ಸಮನಾರ್ಥಕ ಪದ
(೨) ಬಾಣದ ಬಿರುಸನ್ನು ವಿವರಿಸುವ ಪರಿ – ಒದೆದು ಹಾಯ್ದುದು ಬಾಣ ಗರಿದೋರಿದುದು ಬದಿಯಲಿ

ಪದ್ಯ ೪೫: ಭುವನಜನ ಶಿವನನ್ನು ಹೇಗೆ ಆರಾಧಿಸಿದರು?

ತ್ರಾಹಿ ಮದನಾಂತಕ ಪುರತ್ರಯ
ದಾಹ ಹರ ಶಂಕರ ಮಹೇಶ
ತ್ರಾಹಿ ಮೃತ್ಯುಂಜಯ ಪಿನಾಕಿ ತ್ರಾಹಿ ಲೋಕೇಶ
ದ್ರೋಹಿಗಳು ಧೂಳಾಯ್ತು ಬಳಿಕಿನೊ
ಳೀ ಹದನು ಬಂದಿದೆ ಜಗತ್ರಯ
ರೂಹುಗೆಡುತಿದೆ ದೇವ ಎಂದುದು ಸಕಲ ಭುವನಜನ (ಕರ್ಣ ಪರ್ವ, ೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲೈ ಮನ್ಮಥನನ್ನು ಸಂಹರಿಸಿದವನೇ, ತ್ರಿಪುರಗಳನ್ನು ಸಂಹಾರಮಾಡಿದವನೇ, ಹರ ಶಂಕರ, ಮಹೇಶ್ವರ, ಪಿನಾಕಧರ, ಮೃತ್ಯುಂಜಯ, ಲೋಕೇಶ್ವರನೇ, ಮಹೇಶ್ವರನೇ ನಮ್ಮನ್ನು ಈ ಸಂಕಟದಿಂದ ಪಾರುಮಾಡು. ದ್ರೋಹಿಗಳು ಬೆಂದು ಹೋದರು. ಆಅರೀಗ ಈ ವಿಪತ್ತು ಮೂರು ಲೋಕಗಳ ರೂಪವನ್ನು ಕೆಡಿಸುತ್ತಿದೆ, ದೇವ ನಮ್ಮನ್ನು ಪಾರು ಮಾಡೆಂದು ಸಕಲ ಲೋಕಗಳ ಜನರು ಬೇಡಿಕೊಂಡರು.

ಅರ್ಥ:
ತ್ರಾಹಿ:ರಕ್ಷಿಸು, ಕಾಪಾಡು; ಮದನಾಂತಕ: ಕಾಮನನ್ನು ಸಂಹರಿಸಿದವ; ಪುರ: ಊರು; ತ್ರಯ: ಮೂರು; ದಾಹ: ಉರಿ, ಕಿಚ್ಚು; ಹರ: ನಿವಾರಣೆ, ಪರಿಹಾರ, ಶಿವ; ಶಂಕರ: ಒಳ್ಳೆಯದನ್ನು ಮಾಡುವವ (ಶಿವ); ಮಹೇಶ: ಶ್ರೇಷ್ಠನಾದ ಒಡೆಯ; ಮೃತ್ಯುಂಜಯ: ಮೃತ್ಯುವನ್ನು ಗೆದ್ದವ; ಪಿನಾಕಿ: ತ್ರಿಶೂಲವನ್ನು ಹಿಡಿದವ; ಲೋಕೇಶ: ಲೋಕಕ್ಕೆ ಒಡೆಯನಾದವ; ದ್ರೋಹಿ: ವೈರಿ; ಧೂಳು: ಮಣ್ಣಿನ ಪುಡಿ; ಬಳಿಕ: ನಂತರ; ಹದನು:ಸಂಗತಿ; ಬಂದಿದೆ: ಆಗಮಿಸು; ಜಗತ್ರಯ: ಮೂರುಲೋಕ; ರೂಹು: ರೂಪ; ಕೆಡು: ಹಾಳಾಗು; ದೇವ: ಭಗವಂತ; ಸಕಲ: ಎಲ್ಲಾ; ಭುವನಜನ: ಲೋಕದ ಜೀವಿಗಳು;

ಪದವಿಂಗಡಣೆ:
ತ್ರಾಹಿ+ ಮದನಾಂತಕ+ ಪುರತ್ರಯ
ದಾಹ +ಹರ +ಶಂಕರ +ಮಹೇಶ
ತ್ರಾಹಿ +ಮೃತ್ಯುಂಜಯ +ಪಿನಾಕಿ +ತ್ರಾಹಿ +ಲೋಕೇಶ
ದ್ರೋಹಿಗಳು +ಧೂಳಾಯ್ತು +ಬಳಿಕಿನೊಳ್
ಈ+ ಹದನು +ಬಂದಿದೆ +ಜಗತ್ರಯ
ರೂಹುಗೆಡುತಿದೆ+ ದೇವ+ ಎಂದುದು+ ಸಕಲ +ಭುವನಜನ

ಅಚ್ಚರಿ:
(೧) ತ್ರಾಹಿ – ಮೂರು ಬಾರಿ ಪ್ರಯೋಗ
(೨) ಮದನಾಂತಕ, ಪುರತ್ರಯದಾಹ, ಶಂಕರ, ಹರ, ಮಹೇಶ, ಮೃತ್ಯುಂಜಯ, ಪಿನಾಕಿ, ಲೋಕೇಶ, ದೇವ – ಶಿವನ ಹೆಸರುಗಳು

ಪದ್ಯ ೪೮: ಇಂದ್ರನು ದ್ರೌಪದಿಯನ್ನು ನೋಡಿ ವಿನೋದವಾಗಿ ಏನೆಂದು ಹೇಳಿದನು?

ಈಕೆಯಂದುದಿಸಿದರೆ ಮದನಂ
ಗೇಕೆ ದೇಹತ್ಯಾಗವಹುದು ಪಿ
ನಾಕಿ ನೆರೆವೈರಾಗ್ಯದಲಿ ಹೊಗುವನೆ ತಪೋವನವ
ಸಾಕು ಗೌತಮ ಮುನಿಯ ಮುಳಿಸಿನ
ಕಾಕುನುಡಿ ಫಲಿಸುವುದೆ ಯೆನುತಾ
ನಾಕಪತಿ ರಂಭಾದಿ ಸತಿಯರ ನೋಡಿದನು ನಗುತ (ಆದಿ ಪರ್ವ, ೧೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಇಂದ್ರ ದ್ರೌಪದಿಯ ಚೆಲುವನ್ನು ಕಂಡು ರಂಭಾ ಮುಂತಾದವರನ್ನು ನೋಡಿ ನಗುತ, ದ್ರೌಪದಿಯು ಹಿಂದೆ ಹುಟ್ಟಿದ್ದರೆ ಇವಳನ್ನು ನೋಡಿದ ಶಿವನು ತಪೋವನಕ್ಕೆ ಹೋಗುತ್ತಿದ್ದನೆ, ಮನ್ಮಥನನ್ನು ಸುಡುತ್ತಿದ್ದನೇ, ಈಕೆ ಒಂದು ಸಮಯ ಅಹಲ್ಯೆಯಾಗಿದ್ದರೆ, ಇವಳನ್ನು ನೋಡಿದ ಗೌತಮನು ನನಗೆ ಶಾಪವನ್ನು ಕೊಡುತ್ತಿದ್ದನೆ, ಎಂದು ವಿನೋದವಾಗಿ ಹೇಳಿದನು.

ಅರ್ಥ:
ಈಕೆ: ಇವಳನ್ನು (ದ್ರೌಪದಿ); ಅಂದು: ಆಗ; ಉದಿಸು: ಹುಟ್ಟು; ಮದನ: ಮನ್ಮಥ; ಏಕೆ: ಯಾವ ಕಾರಣ; ದೇಹ: ತನು, ಕಾಯ; ತ್ಯಾಗ: ಬಿಡು, ತ್ಯಜಿಸು; ಪಿನಾಕಿ: ಈಶ್ವರ; ನೆರೆ:ಗುಂಪು, ಬೆರೆತುಹೋಗು; ವೈರಾಗ್ಯ: ಸರ್ವಸಂಗಪರಿತ್ಯಾಗಿ; ಹೊಗು: ಪ್ರವೇಶಿಸು; ತಪ: ಧ್ಯಾನ; ವನ: ಅರಣ್ಯ;ತಪೋವನ: ಧ್ಯಾನಮಾಡಲು ಹೋಗುವ ಸ್ಥಳ; ಸಾಕು: ಅದು ಬೇಡ; ಮುನಿ: ಋಷಿ; ಮುಳಿಸು: ಕೋಪ, ಸಿಟ್ಟು; ಕಾಕು: ವ್ಯಂಗ್ಯ, ಕೇಡು; ನುಡಿ: ಮಾತು; ಫಲಿಸು: ಫಲಿತಾಂಶ ನೀಡು; ನಾಕ: ಸ್ವರ್ಗ; ನಾಕಪತಿ: ಇಂದ್ರ; ಸತಿ: ಹೆಂಗಸು, ಸ್ತ್ರಿ; ನೋಡಿ: ವೀಕ್ಷಿಸಿ; ನಗು: ಹಾಸ್ಯ;

ಪದವಿಂಗಡಣೆ:
ಈಕೆ+ಅಂದ್+ಉದಿಸಿದರೆ+ ಮದನಂ
ಗೇಕೆ +ದೇಹ+ತ್ಯಾಗವಹುದು +ಪಿ
ನಾಕಿ+ ನೆರೆ+ವೈರಾಗ್ಯದಲಿ+ ಹೊಗುವನೆ+ ತಪೋವನವ
ಸಾಕು +ಗೌತಮ +ಮುನಿಯ +ಮುಳಿಸಿನ
ಕಾಕುನುಡಿ +ಫಲಿಸುವುದೆ+ ಯೆನುತಾ
ನಾಕಪತಿ +ರಂಭಾದಿ +ಸತಿಯರ +ನೋಡಿದನು+ ನಗುತ

ಅಚ್ಚರಿ:
(೧) ಈಕೆ, ಏಕೆ – ಪ್ರಾಸ ಪದಗಳು, ೧,೨ ಸಾಲಿನ ಮೊದಲ ಪದ
(೨) ಇಂದ್ರನನ್ನು ನಾಕಪತಿ, ಶಿವನನ್ನು ಪಿನಾಕಿ ಎಂದು ವರ್ಣಿಸಿರುವುದು