ಪದ್ಯ ೮: ಅಶ್ವತ್ಥಾಮನ ಕೋಪದ ತೀವ್ರತೆ ಹೇಗಿತ್ತು?

ಕೂಡೆ ಹರಿಹಂಚಾದ ತಂದೆಯ
ಗೂಡ ನೋಡದ ಮುನ್ನ ಕಂಬನಿ
ಮೂಡಿ ಮುಳುಗಿದವಾಲಿ ಕಾಣವು ಪಿತೃಕಳೇವರವ
ನೋಡಲೆಳಸದ ಮುನ್ನ ಕಿಡಿಗಳ
ಝಾಡಿಯನು ಕಣ್ಣುಗುಳಿದವು ಮಿಗೆ
ನೋಡಿದಶ್ವತ್ಥಾಮ ಕಾಣನು ಮುಂದೆ ಪರಬಲವ (ದ್ರೋಣ ಪರ್ವ, ೧೯ ಸಂಧಿ, ೮ ಪದ್ಯ)

ತಾತ್ಪರ್ಯ:
ತುಂಡು ತುಂಡಾದ ತನ್ನ ತಂದೆಯ ದೇಹವನ್ನು ನೋಡುವ ಮೊದಲೇ ಕಣ್ಣಾಲಿಯಲ್ಲಿ ನೀರುತುಂಬಿ ದೇಹವು ಕಾಣಿಸಲಿಲ್ಲ. ನೋಡಲು ಇಚ್ಛೆ ಬರಲಿಲ್ಲ. ಅದಕ್ಕೆ ಮೊದಲೇ ಅಶ್ವತ್ಥಾಮನ ಕಣ್ಣೂಗಳು ಕೆಂಪಾಗಿ ಕಿಡಿಯುಗುಳಿದವು. ರೋಷದಲ್ಲಿ ಪಾಂಡವರ ಸೈನ್ಯವೇ ಕಾಣಲಿಲ್ಲ.

ಅರ್ಥ:
ಕೂಡು: ಜೊತೆ; ಹರಿ: ಸೀಳು; ಹಂಚು: ಹರಡು; ತಂದೆ: ಪಿತ; ಗೂಡು: ದೇಹ; ನೋಡು: ವೀಕ್ಷಿಸು; ಮುನ್ನ: ಮೊದಲು; ಕಂಬನಿ: ಕಣ್ಣೀರು; ಮೂಡು: ಹೊಮ್ಮು; ಮುಳುಗು: ತೋಯು, ಮಿಂದು; ಆಲಿ: ಕಣ್ಣು; ಕಾಣು: ತೋರು; ಪಿತೃ: ತಂದೆ; ಕಳೇವರ: ಪಾರ್ಥಿವ ಶರೀರ; ಎಳಸು: ಬಯಸು, ಅಪೇಕ್ಷಿಸು; ಮುನ್ನ: ಮೊದಲು; ಕಿಡಿ: ಬೆಂಕಿ; ಝಾಡಿ: ಕಾಂತಿ; ಕಣ್ಣು: ನಯನ; ಮಿಗೆ: ಅಧಿಕವಾಗಿ; ಕಾಣು: ತೋರು; ಪರಬಲ: ವೈರಿ ಸೇನೆ;

ಪದವಿಂಗಡಣೆ:
ಕೂಡೆ +ಹರಿಹಂಚಾದ +ತಂದೆಯ
ಗೂಡ +ನೋಡದ +ಮುನ್ನ +ಕಂಬನಿ
ಮೂಡಿ +ಮುಳುಗಿದವ್+ಆಲಿ +ಕಾಣವು +ಪಿತೃ+ಕಳೇವರವ
ನೋಡಲ್+ಎಳಸದ +ಮುನ್ನ +ಕಿಡಿಗಳ
ಝಾಡಿಯನು +ಕಣ್ಣುಗುಳಿದವು +ಮಿಗೆ
ನೋಡಿದ್+ಅಶ್ವತ್ಥಾಮ +ಕಾಣನು +ಮುಂದೆ +ಪರಬಲವ

ಅಚ್ಚರಿ:
(೧) ದೇಹವೆಂದು ಹೇಳಲು – ಗೂಡು ಪದದ ಬಳಕೆ
(೨) ತಂದೆ, ಪಿತೃ – ಸಮಾನಾರ್ಥಕ ಪದ

ಪದ್ಯ ೧೩: ಕರ್ಣನು ಕೃಪಾಚಾರ್ಯರನ್ನು ಹೇಗೆ ಹಂಗಿಸಿದನು?

ಇಂದು ಪಿತೃದಿನವಿಂದು ಸಂಕ್ರಮ
ವಿಂದು ಸೂರ್ಯಗ್ರಹಣ ಹರಿದಿನ
ವಿಂದು ಯಜ್ಞಾರಂಭದಿನ ವಡ್ಡಂತಿ ಲೇಸೆಂದು
ಬಂದು ನಾನಾಮುಖದ ದಾನಕೆ
ತಂದ ವಸ್ತುವ ಬಾಚಿ ಹೊಳ್ಳಿಸಿ
ತಿಂದು ಕೊಬ್ಬಿದ ನಿಮಗೆ ಸುಭಟರ ಮಾತದೇಕೆಂದ (ವಿರಾಟ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರಮನೆಗೆ ಹೋಗಿ, ಇಂದು ಶ್ರಾದ್ಧ, ಇವತ್ತು ಸಂಕ್ರಮಣ, ಇಂದು ಸೂರ್ಯಗ್ರಹಣ, ಇದು ಹರಿದಿನ, ಇಂದು ಯಜ್ಞಾರಂಭದ ದಿನ, ಇಂದು ನಿನ್ನ ವರ್ಧಂತಿ, ಎಂದು ರಾಜನಿಗೆ ಹೇಳುತ್ತೀರಿ, ಏನೂ ಇಲ್ಲದಿದ್ದರೆ ಈ ದಿನ ಬಹಳ ಚೆನ್ನಾಗಿದೆ ಎನ್ನುತ್ತೀರಿ, ಯಾವುದೋ ನೆಪದಿಂದ ಅವನು ತಂದ ವಸ್ತು, ಹಣಗಳನ್ನು ಬಾಚಿಕೊಂಡು ಹೊರಳಿಸಿಕೊಂಡು ಹೋಗಿ, ಅದನ್ನು ತಿಂದು ಕೊಬ್ಬಿದ್ದೀರಿ, ನಿಮಗೆ ವೀರರ ವಿಷಯ್ ಏನು ಗೊತ್ತು, ನಿಮಗೇಕೆ ಬೇಕು ಎಂದು ಕರ್ಣನು ಕೃಪಾಚಾರ್ಯರನ್ನು ಹಂಗಿಸಿದನು.

ಅರ್ಥ:
ಪಿತೃ: ತಂದೆ; ದಿನ: ವಾರ; ಸಂಕ್ರಮ: ಒಟ್ಟಿಗೆ ಸೇರುವುದು; ಗ್ರಹಣ: ಹಿಡಿಯುವುದು; ಸೂರ್ಯ: ಭಾನು; ಹರಿ: ವಿಷ್ಣು; ಯಜ್ಞ: ಕ್ರತು; ಆರಂಭ: ಶುರು; ವಡ್ಡಂತಿ: ಹುಟ್ಟುಹಬ್ಬ; ಲೇಸು: ಒಳಿತು; ಬಂದು: ಆಗಮಿಸು; ನಾನಾ: ಹಲವಾರು; ಮುಖ: ಆನನ; ದಾನ: ಚತುರೋಪಾಯಗಳಲ್ಲಿ ಒಂದು; ವಸ್ತು: ಸಾಮಗ್ರಿ; ಬಾಚು: ಸೆಳೆದು ಅಪ್ಪಿಕೊಳ್ಳು; ಹೊಳ್ಳಿಸು: ಖಾಲಿಮಾಡು; ತಿಂದು: ಭಕ್ಷಿಸು; ಕೊಬ್ಬು: ಸೊಕ್ಕು, ಅಹಂಕಾರ; ಸುಭಟ: ಸೈನಿಕ; ಮಾತು: ವಾಣಿ;

ಪದವಿಂಗಡಣೆ:
ಇಂದು +ಪಿತೃದಿನವ್+ಇಂದು +ಸಂಕ್ರಮವ್
ಇಂದು +ಸೂರ್ಯಗ್ರಹಣ+ ಹರಿದಿನವ್
ಇಂದು +ಯಜ್ಞಾರಂಭದಿನ+ ವಡ್ಡಂತಿ +ಲೇಸೆಂದು
ಬಂದು +ನಾನಾ+ಮುಖದ +ದಾನಕೆ
ತಂದ +ವಸ್ತುವ +ಬಾಚಿ +ಹೊಳ್ಳಿಸಿ
ತಿಂದು +ಕೊಬ್ಬಿದ +ನಿಮಗೆ +ಸುಭಟರ +ಮಾತದೇಕೆಂದ

ಅಚ್ಚರಿ:
(೧) ಇಂದು, ಬಂದು, ತಿಂದು – ಪ್ರಾಸ ಪದಗಳು

ಪದ್ಯ ೫೪: ಯಾವುದರಿಂದ ಅತ್ಯಂತ ಪುಣ್ಯಲಭಿಸುತ್ತದೆ?

ಜಾತಿಧರ್ಮವನನುಸರಿಸಿ ವರ
ಮಾತೃಪಿತೃ ಪರಿಚರಿಯದಲಿ ಸಂ
ಪ್ರೀತಿವಡೆಯುತೆ ಪರಗುಣಸ್ತುತಿ ನಿಂದೆಗಳನುಳಿದು
ಭೂತನಾಥನ ಭುಕುತಿಯಲಿ ವಿ
ಖ್ಯಾತವಹ ಗುರುದೈವದಲಿ ಭಯ
ಭೀತಿ ಯಿಂದಿರಲದುವೆ ಕೇಳ್ ಸುಕೃತಕ್ಕೆ ಕಡೆಯೆಂದ (ಉದ್ಯೋಗ ಪರ್ವ, ೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ತನ್ನ ಕುಲ, ಜಾತಿ ಧರ್ಮವನ್ನನುಸರಿಸುತ್ತ, ತಂದೆ ತಾಯಿಗಳ ಶುಶ್ರೂಷೆ ಮಾಡುತ್ತಾ, ಪರರ ಗುಣದ ಹೊಗಳಿಕೆ ತೆಗಳಿಕೆಗಳನ್ನು ಬಿಟ್ಟು, ಶಿವನಲ್ಲಿ ಗುರು ದೈವದಲ್ಲಿ ಭಯಭಕ್ತಿಯಿಂದಿರುವುದೇ ಅತಿ ಹೆಚ್ಚಿನ ಪುಣ್ಯವನ್ನುಂಟು ಮಾಡುತ್ತದೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಜಾತಿ: ಕುಲ; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ವರ: ಶ್ರೇಷ್ಠ; ಮಾತೃ: ಮಾತೆ; ಪಿತೃ: ಪಿತ; ಪರಿಚರ್ಯೆ: ಸೇವೆ, ಶುಶ್ರೂಷೆ; ಸಂಪ್ರೀತಿ: ಅತಿಶಯವಾದ ಪ್ರೀತಿ, ಒಲವು; ಪರ: ಬೇರೆ; ಗುಣ: ನಡತೆ; ಸ್ತುತಿ: ಹೊಗಳಿಕೆ; ನಿಂದೆ: ತೆಗಳಿಕೆ; ಉಳಿದು: ಮಿಕ್ಕ; ಭೂತನಾಥ: ಶಿವ, ದೇವರು; ಭುಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಭೀತಿ: ಭಯ; ಸುಕೃತ: ಒಳ್ಳೆಯ ಕೆಲಸ; ಕಡೆ: ದಾರಿ;

ಪದವಿಂಗಡಣೆ:
ಜಾತಿ+ಧರ್ಮವನ್+ಅನುಸರಿಸಿ +ವರ
ಮಾತೃ+ಪಿತೃ +ಪರಿಚರಿಯದಲಿ +ಸಂ
ಪ್ರೀತಿವಡೆಯುತೆ +ಪರಗುಣ+ಸ್ತುತಿ +ನಿಂದೆಗಳನ್+ಉಳಿದು
ಭೂತನಾಥನ +ಭುಕುತಿಯಲಿ +ವಿ
ಖ್ಯಾತವಹ +ಗುರುದೈವದಲಿ +ಭಯ
ಭೀತಿ +ಯಿಂದಿರಲ್+ಅದುವೆ +ಕೇಳ್ +ಸುಕೃತಕ್ಕೆ +ಕಡೆಯೆಂದ

ಅಚ್ಚರಿ:
(೧) ಸ್ತುತಿ, ನಿಂದೆ – ವಿರುದ್ಧ ಪದ
(೨) ಮಾತೃ ಪಿತೃ; ಭಯ ಭಕ್ತಿ – ಜೋಡಿ ಪದಗಳ ಬಳಕೆ