ಪದ್ಯ ೩೯: ಯಾವ ಖಡ್ಗಗಳನ್ನು ಯುದ್ಧದಲ್ಲಿ ಬಳಸಲಾಯಿತು?

ಖಡುಗ ತೋಮರ ಪರಶುಗಳ ಕ
ಕ್ಕಡೆಯ ಕುಂತದ ಪಿಂಡಿವಾಳದ
ಕಡುಗಲಿಗಳುರೆ ಮಗ್ಗಿದರು ತಗ್ಗಿದುದು ಯಮಲೋಕ
ಬಿಡದೆ ನಾಯಕವಾಡಿ ಚೂಣಿಯ
ಹಿಡಿದು ಕಾದಿತ್ತು ಭಯರಾಯರು
ದಡಿಯಕೈಯವರಿಂದ ಕವಿಸಿದರಂದು ಸಬಳಿಗರ (ಭೀಷ್ಮ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಖಡ್ಗ, ತೋಮರ, ಗಂಡುಕೊಡಲಿ, ಕಕ್ಕಡೆ, ಕುಂತ, ಭಿಂಡಿವಾಳಗಳನ್ನು ಹಿಡಿದ ವೀರರು ಹೋರಾಡಿ ಸತ್ತರು, ಯಮಲೋಕವು ಅವರ ಭಾರದಿಂದ ಕುಸಿಯಿತು. ನಾಯಕರು ತಮ್ಮ ಎದುರಿನಲ್ಲಿದ್ದವರೊಡನೆ ಕಾದಿದರು, ಆಗ ಎರಡೂ ಸೈನ್ಯಗಳ ರಾಜರು ಕೈಗೋಲು ಹಿಡಿದ ದೂತರ ಮುಖಾಂತರ ಈಟಿಯನ್ನು ಹಿಡಿದ ಯೋಧರು ಮುನ್ನುಗ್ಗಲು ಅಪ್ಪಣೆಯನ್ನು ನೀಡಿದರು.

ಅರ್ಥ:
ಖಡುಗ: ಕತ್ತಿ, ಕರವಾಳ; ತೋಮರ: ಈಟಿ; ಪರಶು: ಕೊಡಲಿ, ಕುಠಾರ; ಕಕ್ಕಡೆ: ಗರಗಸ; ಕುಂತ: ಈಟಿ, ಭರ್ಜಿ; ಪಿಂಡಿವಾಳ: ಈಟಿ; ಕಲಿ: ಶೂರ; ಉರೆ: ಅಧಿಕ; ಮಗ್ಗು: ಕುಂದು, ಕುಗ್ಗು; ತಗ್ಗು: ಕುಗ್ಗು, ಕುಸಿ; ಯಮಲೋಕ: ಅಧೋಲೋಕ; ಬಿಡು: ತೊರೆ; ನಾಯಕ: ಒಡೆಯ; ಚೂಣಿ: ಮೊದಲು; ಹಿಡಿ: ಬಂಧಿಸು; ಕಾದು: ಹೋರಾಡು; ಭಯ: ಅಂಜಿಕೆ; ರಾಯ: ರಾಜ; ದಡಿ: ಕೋಲು, ಜೀನು; ಕವಿಸು: ಆವರಿಸು, ಮುಸುಕು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಖಡುಗ +ತೋಮರ +ಪರಶುಗಳ +ಕ
ಕ್ಕಡೆಯ +ಕುಂತದ +ಪಿಂಡಿವಾಳದ
ಕಡುಗಲಿಗಳ್+ಉರೆ +ಮಗ್ಗಿದರು+ ತಗ್ಗಿದುದು +ಯಮಲೋಕ
ಬಿಡದೆ +ನಾಯಕವಾಡಿ+ ಚೂಣಿಯ
ಹಿಡಿದು +ಕಾದಿತ್ +ಉಭಯ+ರಾಯರು
ದಡಿಯಕೈ+ಅವರಿಂದ +ಕವಿಸಿದರ್+ಅಂದು +ಸಬಳಿಗರ

ಅಚ್ಚರಿ:
(೧) ಆಯುಧಗಳ ಹೆಸರು – ಖಡುಗ, ತೋಮರ, ಪರಶು, ಕಕ್ಕಡಿ, ಕುಂತ, ಪಿಂಡಿವಾಳ
(೨) ಬಹಳ ಜನ ಸತ್ತರು ಎಂದು ಹೇಳಲು -ತಗ್ಗಿದುದು ಯಮಲೋಕ

ಪದ್ಯ ೨೨: ದುಶ್ಯಾಸನ ದಳವು ಹೇಗಿತ್ತು?

ಹಲಗೆ ಕಡೆತಲೆ ಹರಿಗೆ ಖಂಡೆಯ
ಹೊಳೆವ ಮಡ್ಡು ಕಠಾರಿ ಡೊಂಕಣಿ
ಬಿಲು ಸರಳು ತೋಡಿಟ್ಟಿ ಮುದ್ಗರ ಪಿಂಡಿವಾಳ ಚಯ
ತಲೆಯ ನೇಣಿನ ಕೈಯ ಚೌರಿಯ
ಲುಳಿಯ ಜೋಡಿನ ಕಟಿಯ ಗಂಟೆಯ
ದಳವನೀಕ್ಷಿಸು ಪಾರ್ಥ ದುಶ್ಯಾಸನನ ಪಯದಳವ (ಭೀಷ್ಮ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೈನ್ಯದಲ್ಲಿನ ಗುರಾಣಿ, ಕತ್ತಿ, ಕಠಾರಿ, ಡೊಂಕಣಿ, ಬಿಲ್ಲು ಬಾಣ, ಮುದ್ಗರ, ಭಿಂಡಿವಾಳ, ಕತ್ತಿಗೆ ಹಾಕಿ ಕೊಲ್ಲುವ ಹಗ್ಗಗಳಿಂದ ಸಜ್ಜಿತವಾಗಿದೆ, ಸೊಂಟದಲ್ಲಿ ಕಿರುಗೆಜ್ಜೆ ಕಟ್ಟಿದ್ದಾರೆ. ಎದ್ದು ಕಾಣುವ ಪಾದರಕ್ಷೆಗಳು, ನೋಡು ಅರ್ಜುನ ಅದು ದುಶ್ಯಾಸನ ಕಾಲಾಳಿನ ಸೈನ್ಯ.

ಅರ್ಥ:
ಹಲಗೆ: ಪಲಗೆ, ಒಂದು ಬಗೆಯ ಗುರಾಣಿ; ಕಡಿತಲೆ: ಕತ್ತಿ, ಖಡ್ಗ; ಹರಿಗೆ: ಚಿಲುಮೆ; ಖಂಡೆಯ: ಕತ್ತಿ, ಖಡ್ಗ; ಹೊಳೆ: ಪ್ರಖಾಸಹ್; ಮಡ್ಡು: ಸೊಕ್ಕು, ಅಹಂಕಾರ; ಕಠಾರಿ: ಬಾಕು, ಚೂರಿ, ಕತ್ತಿ; ಡೊಂಕಣಿ: ಈಟಿ; ಬಿಲು: ಬಿಲ್ಲು, ಚಾಪ; ಸರಳು: ಬಾಣ; ತೋಡಿಟ್ಟ: ದೇಹವನ್ನು ಬಗೆವಷ್ಟು ಚೂಪಾದ ಈಟಿ; ಮುದ್ಗರ: ಗದೆ; ಪಿಂಡಿವಾಳ: ಒಂದು ಬಗೆಯ ಆಯುಧ, ಈಟಿ; ಚಯ: ಸಮೂಹ; ತಲೆ: ಶಿರ; ನೇಣು: ಹಗ್ಗ, ಹುರಿ; ಕೈ: ಹಸ್ತ; ಚೌರಿ: ಚಾಮರ; ಲುಳಿ: ರಭಸ; ಜೋಡು: ಜೊತೆ; ಕಟಿ: ಸೊಂಟ; ಗಂಟೆ: ಕಿರುಗೆಜ್ಜೆ; ದಳ: ಸಮೂಹ, ಸೈನ್ಯ; ಈಕ್ಷಿಸು: ನೋದು; ಪಯದಳ: ಕಾಲಾಳು;

ಪದವಿಂಗಡಣೆ:
ಹಲಗೆ +ಕಡೆತಲೆ+ ಹರಿಗೆ +ಖಂಡೆಯ
ಹೊಳೆವ +ಮಡ್ಡು +ಕಠಾರಿ+ ಡೊಂಕಣಿ
ಬಿಲು +ಸರಳು +ತೋಡಿಟ್ಟಿ +ಮುದ್ಗರ +ಪಿಂಡಿವಾಳ+ ಚಯ
ತಲೆಯ +ನೇಣಿನ +ಕೈಯ +ಚೌರಿಯ
ಲುಳಿಯ +ಜೋಡಿನ +ಕಟಿಯ +ಗಂಟೆಯ
ದಳವನೀಕ್ಷಿಸು +ಪಾರ್ಥ +ದುಶ್ಯಾಸನನ+ ಪಯದಳವ

ಅಚ್ಚರಿ:
(೧) ಆಯುಧಗಳ ಹೆಸರು – ಕಡೆತಲೆ, ಖಂಡೆಯ, ಮಡ್ಡು, ಕಠಾರಿ, ದೊಂಕಣಿ, ಬಿಲು, ಸರಳು, ತೋಡಿಟ್ಟಿ, ಮುದ್ಗರ, ಪಿಂಡಿವಾಳ

ಪದ್ಯ ೨೩: ಯಾವ ಆಯುಧಗಳು ರಥಗಳಲ್ಲಿದ್ದವು?

ಪರಶು ಮುಸಲ ಮುಸುಂಡಿ ಸೆಲ್ಲೆಹ
ಪರಿಘ ತೋಮರ ಚಕ್ರವಸಿಮು
ದ್ಗರ ತ್ರಿಶೂಲ ಕಠಾರಿ ಖೇಟಕ ಪಿಂಡಿವಾಳಾಯ
ಸುರಗಿ ಮೊದಲಾದಖಿಳ ಶಸ್ತ್ರೋ
ತ್ಕರವನೊಂದೇ ಬಂಡಿಯಲಿ ಸಂ
ವರಿಸಿದೆನು ರಿಪುರಾಯರೊಡಲಲಿ ಬೀಯಮಾಡೆಂದ (ಕರ್ಣ ಪರ್ವ, ೧೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಗಂಡುಕೊಡಲಿ, ಒನಕೆ, ಮುಸುಂಡಿ, ಸೆಲ್ಲೆಹ, ಪರಿಘ, ತೋಮರ, ಚಕ್ರ, ಖಡ್ಗ, ಮುದ್ಗರ, ತ್ರಿಶೂಲ, ಕಠಾರಿ, ಖೇಟಕ, ಭಿಂಡಿವಾಳ, ಸುರಗಿ, ಇವನ್ನೆಲ್ಲಾ ಒಂದೇ ಬಂಡಿಯಲ್ಲಿ ಸೇರಿಸಿಟ್ಟಿದ್ದೇನೆ. ಇವನ್ನು ಶತ್ರುರಾಜರ ದೇಹಗಳಲ್ಲಿ ವ್ಯಯಮಾಡು ಎಂದು ವಿಶೋಕನು ಭೀಮನಿಗೆ ತಿಳಿಸಿದನು.

ಅರ್ಥ:
ಪರಶು: ಕೊಡಲಿ, ಕುಠಾರ; ಮುಸಲ: ಗದೆ; ಮುಸುಂಡಿ: ಆಯುಧದ ಹೆಸರು; ಸೆಲ್ಲೆಹ: ಈಟಿ, ಭರ್ಜಿ; ಪರಿಘ: ಕಬ್ಬಿಣದ ಆಯುಧ, ಗದೆ; ತೋಮರ: ತಿದಿಯಲ್ಲಿ ಅರ್ಧಚಂದ್ರಾಕೃತಿಯಲ್ಲಿರುವ ಒಂದು ಬಗೆಯ ಬಾಣ, ಈಟಿಯಂತಿರುವ ಆಯುಧ; ಚಕ್ರ: ಗುಂಡಾಗಿ ತಿರುಗುವ ಆಯುಧ; ಮುದ್ಗರ: ಗದೆ; ತ್ರಿಶೂಲ: ಮೂರುಮೊನೆಯ ಆಯುಧ; ಕಠಾರಿ: ಚೂರಿ, ಕತ್ತಿ; ಖೇಟಕ: ಗುರಾಣಿ; ಪಿಂಡಿವಾಳ: ಒಂದು ಬಗೆಯ ಆಯುಧ, ಈಟಿ; ಚಯ: ಗುಂಪು, ರಾಶಿ; ಸುರಗಿ: ಸಣ್ಣ ಕತ್ತಿ, ಚೂರಿ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಶಸ್ತ್ರ: ಆಯುಧ; ಉತ್ಕರ: ಸಮೂಹ; ಬಂಡಿ: ರಥ; ಸಂವರಿಸು: ಸಂಗ್ರಹಿಸು; ರಿಪು: ವೈರಿ; ರಾಯ: ರಾಜ; ಒಡಲು: ದೇಹ; ಬೀಯ: ವ್ಯಯ, ಖರ್ಚು;

ಪದವಿಂಗಡಣೆ:
ಪರಶು +ಮುಸಲ +ಮುಸುಂಡಿ +ಸೆಲ್ಲೆಹ
ಪರಿಘ+ ತೋಮರ +ಚಕ್ರವಸಿ+ಮು
ದ್ಗರ +ತ್ರಿಶೂಲ +ಕಠಾರಿ +ಖೇಟಕ +ಪಿಂಡಿವಾಳಾಯ
ಸುರಗಿ+ ಮೊದಲಾದ್+ಅಖಿಳ +ಶಸ್ತ್ರೋ
ತ್ಕರವನ್+ಒಂದೇ +ಬಂಡಿಯಲಿ +ಸಂ
ವರಿಸಿದೆನು +ರಿಪುರಾಯರ್+ಒಡಲಲಿ +ಬೀಯಮಾಡೆಂದ

ಅಚ್ಚರಿ:
(೧) ಆಯುಧಗಳ ಹೆಸರು: ಪರಶು, ಮುಸಲ, ಮುಸುಂಡಿ, ಸೆಲ್ಲೆಹ, ಪರಿಘ, ತೋಮರ, ಚಕ್ರವಸಿ, ಮುದ್ಗರ, ತ್ರಿಶೂಲ, ಕಠಾರಿ, ಖೇಟಕ, ಪಿಂಡಿವಾಳ, ಸುರಗಿ