ಪದ್ಯ ೨೩: ವೇದವ್ಯಾಸರು ಯಾರಲ್ಲಿ ಜನಿಸಿದರು?

ಬಳಿಕ ಮತ್ಸ್ಯದ ಬಸುರಲುದಿಸಿದ
ನಳಿನ ಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ (ಆದಿ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮತ್ಸ್ಯದ ಗರ್ಭದಿಂದುದಿಸಿದ ಮತ್ಸ್ಯಗಂಧಿಯು ತರುಣಿಯಾಗಲು ಒಮ್ಮೆ ಪರಾಶರಮಹರ್ಷಿಯು ಅವಳಲ್ಲಿ ಆಕರ್ಷಿತಗೊಂಡನು. ಅವರಿಬ್ಬರ ಮಗನಾಗಿ, ಶ್ಯಾಮವರ್ಣದವನೂ, ಪಿಂಗಳ ಜಟೆಯನ್ನುಳ್ಳ ವೇದವ್ಯಾಸರು ಜನಿಸಿದರು.

ಅರ್ಥ:
ಬಳಿಕ: ನಂತರ; ಮತ್ಸ್ಯ: ಮೀನು; ಬಸುರು: ಹೊಟ್ಟೆ; ಉದಿಸು: ಹುಟ್ಟು; ನಳಿನ: ಕಮಲ; ಲೊಚನ: ಕಣ್ಣು; ಬೆಳೆ: ವೃದ್ಧಿಸು; ಸಂಗ: ಜೋಡಿ; ವ್ರತಿ: ಯೋಗಿ, ತಪಸ್ವಿ; ಇಳಿ: ಕೆಳಕ್ಕೆ ಬಾ; ಅಭ್ರ:ಮೋಡ; ಶ್ಯಾಮ: ಕಪ್ಪು ಬಣ್ಣ; ಉರು: ಹೆಚ್ಚು; ಪಿಂಗಳ: ಕಂದು ಬಣ್ಣದ; ಜಟಾ: ಜಟೆ; ಬದ್ಧ: ಕಟ್ಟಿದ, ಬಿಗಿದ; ಮುನಿ: ಋಷಿ;

ಪದವಿಂಗಡಣೆ:
ಬಳಿಕ +ಮತ್ಸ್ಯದ+ ಬಸುರಲ್+ಉದಿಸಿದ
ನಳಿನ +ಲೋಚನೆ +ಮತ್ಸ್ಯಗಂಧಿನಿ
ಬೆಳೆವುತಿರ್ದಳು +ಸಂಗವಾಯ್ತು +ಪರಾಶರವ್ರತಿಯ
ಬಳಿಕ +ಯೋಜನಗಂಧಿಯಲ್ಲಿಂದ್
ಇಳಿದನ್+ಅಭ್ರ+ಶ್ಯಾಮನ್+ಉರು +ಪಿಂ
ಗಳ +ಜಟಾ+ಪರಿಬದ್ಧ+ ವೇದವ್ಯಾಸ +ಮುನಿರಾಯ

ಅಚ್ಚರಿ:
(೧) ವೇದವ್ಯಾಸರನ್ನು ವರ್ಣಿಸಿದ ಪರಿ – ಅಭ್ರಶ್ಯಾಮನುರು ಪಿಂಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ

ಪದ್ಯ ೪೯: ಪಿಂಗಳನು ಹೇಗೆ ಸತ್ತನು?

ಕಂಡು ಪವನಜ ತುಡುಕಿ ಮಿಗೆ ಮುಂ
ಕೊಂಡು ನೆಲಕಪ್ಪಳಿಸೆ ಮೆಲ್ಲನೆ
ದೊಂಡೆಗರುಳುರೆ ಸೂಸೆ ಚೆಲ್ಲಿತು ರಾಜಸಭೆಯೊಳಗೆ
ಖಂಡ ಮಿದುಳಿನ ಹೊನಲಿನಲಿ ಕಡಿ
ಖಂಡ ಶೋಣಿತವಾರಿಯೊಳು ಮಿಗೆ
ದಿಂಡುಗೆಡೆದೊರಗಿದನು ಪಿಂಗಳ ಸಭೆಯ ಮಧ್ಯದಲಿ (ವಿರಾಟ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪಿಂಗಳನು ಭರದಿಂದ ಬರುವುದನ್ನು ನೋಡಿದ ಭೀಮನು, ಅವನನ್ನು ಹಿಡಿದು ನೆಲಕ್ಕಪ್ಪಳಿಸಿದನು. ಅವನ ಮಿದುಳು, ಕರುಳು ಮಾಂಸಖಂಡಗಳು ಚೂರಾಗಿ ಹೊರಬಂದವು, ರಕ್ತಧಾರೆ ಜೋರಾಗಿ ಹರಿಯಿತು, ಪಿಂಗಳನ ದೇಹವು ಸಭೆಯ ಮಧ್ಯದಲ್ಲಿ ನೆಲದ ಮೇಲೆ ಮಲಗಿತು.

ಅರ್ಥ:
ಕಂಡು: ನೋಡು; ಪವನಜ: ವಾಯುಪುತ್ರ (ಭೀಮ); ತುಡುಕು: ಹೋರಾಡು, ಸೆಣಸು; ಮಿಗೆ: ಮತ್ತು, ಅಧಿಕವಾಗಿ; ಮುಂಕೊಂಡು: ಮುಂಭಾಗದಲ್ಲಿ ಹಿಡಿದು; ನೆಲ: ಭೂಮಿ; ಅಪ್ಪಳಿಸು: ಎತ್ತಿಕುಕ್ಕು; ಮೆಲ್ಲನೆ: ನಿಧಾನವಾಗಿ; ದೊಂಡೆ: ಜಿಗುಟಾದುದು; ಕರುಳು: ಪಚನಾಂಗದ ಭಾಗ; ಉರೆ: ಅಧಿಕವಾಗಿ; ಸೂಸು: ಎರಚು, ಚಲ್ಲು; ಚೆಲ್ಲು: ಹರಡು; ಸಭೆ: ಓಲಗ; ಖಂಡ: ತುಂಡು, ಚೂರು; ಮಿದುಳು: ತಲೆಯ ಭಾಗ; ಹೊನಲು: ಪ್ರವಾಹ; ಕಡಿ: ತುಂಡು, ಹೋಳು; ಶೋಣಿತ: ರಕ್ತ; ವಾರಿ: ಜಲ; ಮಿಗೆ: ಅಧಿಕ; ದಿಂಡು: ಶರೀರ, ದೇಹ; ಒರಗು: ಮಲಗು; ಸಭೆ: ಓಲಗ; ಮಧ್ಯ: ನಡುವೆ;

ಪದವಿಂಗಡನೆ:
ಕಂಡು+ ಪವನಜ+ ತುಡುಕಿ +ಮಿಗೆ +ಮುಂ
ಕೊಂಡು +ನೆಲಕ್+ಅಪ್ಪಳಿಸೆ +ಮೆಲ್ಲನೆ
ದೊಂಡೆ+ಕರುಳ್+ಉರೆ +ಸೂಸೆ +ಚೆಲ್ಲಿತು +ರಾಜಸಭೆಯೊಳಗೆ
ಖಂಡ +ಮಿದುಳಿನ +ಹೊನಲಿನಲಿ +ಕಡಿ
ಖಂಡ +ಶೋಣಿತವಾರಿಯೊಳು +ಮಿಗೆ
ದಿಂಡುಗೆಡೆದ್+ಒರಗಿದನು +ಪಿಂಗಳ +ಸಭೆಯ +ಮಧ್ಯದಲಿ

ಅಚ್ಚರಿ:
(೧) ಪಿಂಗಳನ ಸ್ಥಿತಿಯನ್ನು ವಿವರಿಸುವ ಪರಿ – ಖಂಡ ಮಿದುಳಿನ ಹೊನಲಿನಲಿ ಕಡಿಖಂಡ ಶೋಣಿತವಾರಿಯೊಳು ಮಿಗೆದಿಂಡುಗೆಡೆದೊರಗಿದನು ಪಿಂಗಳ ಸಭೆಯ ಮಧ್ಯದಲಿ

ಪದ್ಯ ೪೮: ಭೀಮನನೆದುರು ಮಲ್ಲಯುದ್ಧಕ್ಕೆ ಮುಂದೆ ಯಾರು ಬಂದರು?

ಖತಿಯೊಳುರಿನೆಗೆದೆದ್ದು ಪಿಂಗಳ
ನತಿಶಯದ ಕುಶಲದಲಿ ವರಬಃಉ
ಪತಿಯೆ ಇತ್ತೈಸೆನುತ ಹೊಕ್ಕನು ತೋಳ ತೆಕ್ಕೆಯಲಿ
ಧೃತಿಗೆಡದೆ ಹೋರಿದರು ಸಾಧಕ
ದತಿಶಯದ ಬಲುಹಿನಲಿ ವರಭೂ
ಪತಿಯೆ ಗೋಚರವಲ್ಲ ಭೀಮನ ಬಲವ ಬಣ್ಣಿವೊಡೆ (ವಿರಾಟ ಪರ್ವ, ೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸಿಂಧುರ, ಗಜಸಿಂಗನ ಸಾವಿನಿಂದ ಅತೀವ ಕೋಪಗೊಂಡು, ಕೋಪಜ್ವಾಲೆ ಮೇಲೇಳಲು, ಪಿಂಗಳನೆಂಬ ಮಲ್ಲನು ಮೇಲೆದ್ದು ನೆಗೆದನು. ರಾಜ ನೋಡು ಎಂದು ಭೀಮನೊಡನೆ ಯುದ್ಧವನ್ನಾರಂಭಿಸಿದನು. ತಾವು ಮಾಡಿದ ಸಾಧನೆಯ ಸತ್ವದಿಂದ ತೋಳ ಬಲುಹಿನಿಂದ ಇಬ್ಬರೂ ಸೆಣಸಿದರು. ಜನಮೇಜಯ ರಾಜ ಭೀಮನ ಬಲವನ್ನು ನಾನು ಹೇಗೆ ವರ್ಣಿಸಲಿ.

ಅರ್ಥ:
ಖತಿ: ರೇಗುವಿಕೆ, ಕೋಪ; ಉರಿ: ಬೆಂಕಿ; ನೆಗೆ: ಜಿಗಿ; ಎದ್ದು: ಮೇಲೇಳು; ಅತಿಶಯ: ಹೆಚ್ಚು, ಅಧಿಕ; ಕುಶಲ: ಕೌಶಲ್ಯ, ಚಾತುರ್ಯ; ವರ: ಶ್ರೇಷ್ಠ; ಭೂಪತಿ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಹೊಕ್ಕು: ಸೇರು ತೋಳು: ಭುಜ; ತೆಕ್ಕೆ: ಅಪ್ಪುಗೆ, ಆಲಿಂಗನ; ಧೃತಿ: ಧೈರ್ಯ; ಹೋರು: ಜಗಳ, ಕಲಹ; ಸಾಧಕ: ಪರಿಶ್ರಮ; ಬಲುಹು: ಶಕ್ತಿ; ಗೋಚರ: ಕಾಣು; ಬಲ: ಶಕ್ತಿ; ಬಣ್ಣಿಸು: ವರ್ಣಿಸು;

ಪದವಿಂಗಡಣೆ:
ಖತಿಯೊಳ್+ಉರಿ+ನೆಗೆದ್+ಎದ್ದು +ಪಿಂಗಳನ್
ಅತಿಶಯದ +ಕುಶಲದಲಿ+ ವರಭೂ
ಪತಿಯೆ +ಚಿತ್ತೈಸೆನುತ +ಹೊಕ್ಕನು +ತೋಳ +ತೆಕ್ಕೆಯಲಿ
ಧೃತಿಗೆಡದೆ +ಹೋರಿದರು +ಸಾಧಕದ್
ಅತಿಶಯದ+ ಬಲುಹಿನಲಿ+ ವರಭೂ
ಪತಿಯೆ +ಗೋಚರವಲ್ಲ+ ಭೀಮನ +ಬಲವ +ಬಣ್ಣಿವೊಡೆ

ಅಚ್ಚರಿ:
(೧) ೨, ೫ ಸಾಲು ಸಾಮ್ಯವಾಗಿರುವ ಪರಿ – ಅತಿಶಯ, ವರಭೂಪತಿ ಪದಗಳು
(೨) ಜೋಡಿ ಪದಗಳು – ತೋಳ ತೆಕ್ಕೆಯಲಿ, ಭೀಮನ ಬಲವ ಬಣ್ಣಿವೊಡೆ