ಪದ್ಯ ೧: ಪಾಂಡುವಿಗೆ ಯಾರು ಸರಿಯಾದ ಜೋಡಿ ಎಂದು ಭೀಷ್ಮರು ನಿರ್ಧರಿಸಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀಭೋಜ ಭೂಪತಿ
ಯಾಲಯದೊಳೀ ಕುಂತಿ ಮೆರೆದಳು ವಿವಿಧ ವಿಭವದಲಿ
ಕೇಳಿದನು ಗಾಂಗೇಯನಾ ನೀ
ಲಾಳಕಿಯ ಕುಲರೂಪು ಲಕ್ಷಣ
ಶೀಲವನು ಪಾಂಡುವಿಗೆ ಪಾಸಟಿಯೆಂದು ರಾಗದಲಿ (ಆದಿ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕುಂತೀಭೋಜರಾಜನ ಅರಮನೆಯಲ್ಲಿ ಕುಂತಿಯು ವೈಭವದಿಂದ ಮೆರೆಯುತ್ತಿದ್ದಳು. ಕುಂತಿಯ ಸೌಂದರ್ಯ, ಕುಲ, ಲಕ್ಷನ, ಶೀಲಗಳನ್ನು ಭೀಷ್ಮನು ಕೇಳಿ, ಪಾಂಡುವಿಗೆ ಇವಳು ಸರಿಯಾದ ಜೋಡಿ ಎಮ್ದು ನಿರ್ಧರಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಭೂಪತಿ: ರಾಜ; ಆಲಯ: ಮನೆ; ಮೆರೆ: ಶೋಭಿಸು; ವಿವಿಧ: ಹಲವಾರು; ವಿಭವ: ಸಿರಿ, ಸಂಪತ್ತು; ಗಾಂಗೇಯ: ಭೀಷ್ಮ; ನೀಲಾಳಕಿ: ಕಪ್ಪು ಮುಂಗುರುಳು; ಕುಲ: ವಂಶ; ರೂಪು: ಲಕ್ಷಣ; ಶೀಲ: ನಡತೆ, ಸ್ವಭಾವ; ಪಾಸಟಿ: ಸಮಾನ, ಹೋಲಿಕೆ; ರಾಗ: ಚೆಲುವು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುಂತೀಭೋಜ +ಭೂಪತಿ
ಆಲಯದೊಳ್+ಈ+ ಕುಂತಿ +ಮೆರೆದಳು +ವಿವಿಧ +ವಿಭವದಲಿ
ಕೇಳಿದನು +ಗಾಂಗೇಯನಾ +ನೀ
ಲಾಳಕಿಯ +ಕುಲ+ರೂಪು +ಲಕ್ಷಣ
ಶೀಲವನು+ ಪಾಂಡುವಿಗೆ +ಪಾಸಟಿಯೆಂದು +ರಾಗದಲಿ

ಅಚ್ಚರಿ:
(೧) ಧರಿತ್ರೀಪಾಲ, ಭೂಪತಿ – ಸಮಾನಾರ್ಥಕ ಪದ
(೨) ಕುಂತಿಯನ್ನು ಹೊಗಳಿದ ಬಳಿ – ನೀಲಾಳಕಿಯ ಕುಲರೂಪು ಲಕ್ಷಣ ಶೀಲವನು

ಪದ್ಯ ೮೬: ಕೀಚಕನು ಏಕೆ ಗಾಬರಿಗೊಂಡನು?

ಎನಗೆ ಪುರುಷರು ಸೋಲದವರಿ
ಲ್ಲೆನಗೆ ಪಾಸಟಿ ನೀನು ನಿನಗಾ
ಮನವೊಲಿದೆ ನೀ ನೋಡು ತನ್ನಯ ಹೆಣ್ಣುತನದನುವ
ಎನಲು ಹರುಷದಲುಬ್ಬಿ ಕೀಚಕ
ನನಿಲಜನ ಮೈದಡವಿ ವೃತ್ತ
ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ (ವಿರಾಟ ಪರ್ವ, ೩ ಸಂಧಿ, ೮೬ ಪದ್ಯ)

ತಾತ್ಪರ್ಯ:
ನನಗೆ ಸೋಲದ ಗಂಡಸರೇ ಇಲ್ಲ. ನನಗೆ ನೀನು ಸರಿಸಾಟಿ, ನಿನಗೆ ಮನಸಾರೆ ಒಲಿದಿದ್ದೇನೆ, ನನ್ನ ಹೆಣ್ಣುತನವನ್ನು ನೀನು ನೋಡು ಎಂದು ಭೀಮನು ಹೇಳಲು, ಕೀಚಕನು ಸಂತೋಷದಿಂದ ಉಬ್ಬಿ ಭೀಮನ ಮೈದಡವಿದನು. ಗುಂಡಾಕಾರದ ಸ್ತನಗಳನ್ನು ಕಾಣದೆ ಹೆದರಿ ಹೀಗೆಂದನು.

ಅರ್ಥ:
ಪುರುಷ: ಗಂಡು; ಸೋಲು: ಪರಾಭವ; ಪಾಸಟಿ: ಸಮಾನ, ಹೋಲಿಕೆ; ಮನ: ಮನಸ್ಸು; ಒಲಿದು: ಬಯಸು, ಸಮ್ಮತಿಸು; ಹೆಣ್ಣು: ಸ್ತ್ರೀ; ಅನುವು: ಸೊಗಸು; ಹರುಷ: ಸಂತಸ; ಉಬ್ಬು: ಹೆಚ್ಚಾಗು; ಅನಿಲಜ: ವಾಯುಪುತ್ರ; ಮೈದಡವು: ದೇಹವನ್ನು ಅಲುಗಾಡಿಸು; ವೃತ್ತ: ಗುಂಡಾಕಾರ; ಸ್ತನ: ಮೊಲೆ; ಕಾಣು: ತೋರು; ಹೆದರು: ಅಂಜಿ; ಬಳಿಕ: ನಂತರ; ನಗುತ: ಸಂತಸ;

ಪದವಿಂಗಡಣೆ:
ಎನಗೆ +ಪುರುಷರು +ಸೋಲದ್+ಅವರಿಲ್
ಎನಗೆ +ಪಾಸಟಿ +ನೀನು +ನಿನಗಾ
ಮನವೊಲಿದೆ +ನೀ +ನೋಡು +ತನ್ನಯ +ಹೆಣ್ಣುತನದ್+ಅನುವ
ಎನಲು+ ಹರುಷದಲ್+ಉಬ್ಬಿ +ಕೀಚಕನ್
ಅನಿಲಜನ+ ಮೈದಡವಿ+ ವೃತ್ತ
ಸ್ತನವ +ಕಾಣದೆ +ಹೆದರಿ +ಬಳಿಕಿಂತೆಂದನ್+ಅವ+ ನಗುತ

ಅಚ್ಚರಿ:
(೧) ಕೀಚಕನು ಅಂಜಲು ಕಾರಣ – ವೃತ್ತ ಸ್ತನವ ಕಾಣದೆ ಹೆದರಿ

ಪದ್ಯ ೮೩: ಕೀಚಕನು ತನ್ನ ಸೌಂದರ್ಯದ ಬಗ್ಗೆ ಏನು ಹೇಳಿದನು?

ವನಜ ಮುಖಿ ವೀಳೆಯವನನುಲೇ
ಪನವ ಮಲ್ಲಿಗೆಯರಳ ತೊಡಿಗೆಯ
ನನುಪಮಾಂಬರವಿವೆ ಮನೋಹರವಹರೆ ಚಿತ್ತೈಸು
ನಿನಗೆ ಪಾಸಟಿಯಾನುಯೆನ್ನವೊ
ಲನಿಮಿಷರೊಳಾರುಂಟು ಚೆಲುವರು
ಮನುಜರೆನ್ನನು ಹೋಲುವರೆ ಸೈರಂಧ್ರಿ ಕೇಳೆಂದ (ವಿರಾಟ ಪರ್ವ, ೩ ಸಂಧಿ, ೮೩ ಪದ್ಯ)

ತಾತ್ಪರ್ಯ:
ಕಮಲಮುಖಿ ಸೈರಂಧ್ರಿ, ತಾಂಬೂಲ, ಅನುಲೇಪನ, ಮಲ್ಲಿಗೆಯ ಹೂಗಳು ಹೋಲಿಕೆಯೇ ಇಲ್ಲದ ಉತ್ತಮ ವಸ್ತ್ರಗಳು ಎಲ್ಲವನ್ನೂ ತಂದಿದ್ದೇನೆ, ನಿನಗೆ ಸರಿಯೆಂದರೆ ನಾನೇ, ದೇವತೆಗಳಲ್ಲೂ ನನ್ನಂತಹ ಚೆಲುವರಿಲ್ಲ ಎಂದ ಮೇಲೆ ಮನುಷ್ಯರು ನನ್ನನ್ನು ಹೋಲುವರೇ ಎಂದು ಕೀಚಕನು ಕೇಳಿದನು.

ಅರ್ಥ:
ವನಜ: ಕಮಲ; ವನಜಮುಖಿ: ಕಮಲದಂತ ಮುಖವುಳ್ಳವಳು; ವೀಳೆಯ: ತಾಂಬೂಲ; ಅನುಲೇಪ: ಲೇಪನದ್ರವ್ಯ, ಬಳಿಯುವಿಕೆ; ಅರಳು: ಹೂವು; ತೊಡಿಗೆ: ಆಭರಣ; ಅನುಪಮ: ಉತ್ಕೃಷ್ಟವಾದುದು; ಅಂಬರ: ಆಗಸ; ಮನೋಹರ: ಸುಂದರವಾದುದು; ಚಿತ್ತೈಸು: ಗಮನವಿಟ್ಟು ಕೇಳು; ಪಾಸಟಿ: ಸಮಾನ, ಹೋಲಿಕೆ; ಅನಿಮಿಷ: ದೇವತೆ; ಚೆಲುವು: ಅಂದ; ಮನುಜ: ಮಾನವ; ಹೋಲು: ಸದೃಶವಾಗು; ಕೇಳು: ಆಲಿಸು;

ಪದವಿಂಗಡಣೆ:
ವನಜಮುಖಿ +ವೀಳೆಯವನ್+ಅನುಲೇ
ಪನವ+ ಮಲ್ಲಿಗೆ+ಅರಳ +ತೊಡಿಗೆಯನ್
ಅನುಪಮ+ಅಂಬರವಿವೆ +ಮನೋಹರವಹರೆ +ಚಿತ್ತೈಸು
ನಿನಗೆ +ಪಾಸಟಿ+ಆನು+ಎನ್ನವೊಲ್
ಅನಿಮಿಷರೊಳ್+ಆರುಂಟು +ಚೆಲುವರು
ಮನುಜರ್+ಎನ್ನನು+ ಹೋಲುವರೆ+ ಸೈರಂಧ್ರಿ +ಕೇಳೆಂದ

ಅಚ್ಚರಿ:
(೧) ಕೀಚಕನ ಸೌಂದರ್ಯದ ವರ್ಣನೆ – ಎನ್ನವೊಲನಿಮಿಷರೊಳಾರುಂಟು ಚೆಲುವರು ಮನುಜರೆನ್ನನು ಹೋಲುವರೆ

ಪದ್ಯ ೪೭: ಕೃಷ್ಣನು ದತ್ತಾತ್ರೇಯಾವತಾರದಲ್ಲಿ ಏನು ಮಾಡಿದ?

ರಾಯ ಕೇಳೈ ವಿಮಲ ದತ್ತಾ
ತ್ರೇಯವೆಸರಲಿ ಧರ್ಮವನು ಪೂ
ರಾಯದಲಿ ಪಲ್ಲವಿಸಿದನು ಹೈಹಯನ ರಾಜ್ಯದಲಿ
ಬಾಯಿಬಡುಕರು ಬಗುಳಿದರೆ ಹರಿ
ಯಾಯತಿಕೆ ಪಾಸಟಿಯೆ ನಿಗಮದ
ಬಾಯ ಬೀಯಗವೀ ಮುಕುಂದನನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೪೭ ಪದ್ಯ)

ತಾತ್ಪರ್ಯ:
ಧರ್ಮರಾಜನೇ ಕೇಳು, ಶ್ರೀಕೃಷ್ಣನು ದತ್ತಾತ್ರೇಯನೆಂಬ ಹೆಸರಿನಿಂದ ಅವತರಿಸಿ ಹೈಹಯ ಕಾರ್ತಿವೀರ್ಯನ ರಾಜ್ಯದಲ್ಲಿ ಧರ್ಮವನ್ನು ನಾಲ್ಕು ಕಾಲುಗಳ ಮೇಲೆ ನಿಲ್ಲಿಸಿದನು. ಶಿಶುಪಾಲನಂತಹ ಬಾಯಬಡುಕರು ಬೊಗಳಿದರೆ ಶ್ರೀಕೃಷ್ಣನ ಘನತೆಗೆ ಯಾರು ಸರಿಯಾದಾರು? ಇವನು ವೇದಗಳ ಬಾಯಿಗೇ ಬೀಗಹಾಕಿದವನು, ವೇದಗಳೇ ಇವನನ್ನು ಅರಿಯಲು ಸಾಧ್ಯವಾಗಲಿಲ್ಲ, ಇನ್ನಾರಿಗೆ ಇವನನ್ನು ಅರಿಯಲು ಸಾಧ್ಯ ಎಂದು ಭೀಷ್ಮರು ಹೇಳಿದರು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ವಿಮಲ: ನಿರ್ಮಲ, ಶುದ್ಧ; ಧರ್ಮ: ಧಾರಣೆಮಾಡಿದುದು; ಪೂರಾಯ: ಪರಿಪೂರ್ಣ; ಪಲ್ಲವಿಸು: ವಿಕಸಿಸು; ರಾಜ್ಯ: ರಾಷ್ಟ್ರ; ಬಾಯಿಬಡುಕ: ವೃಥಾಮಾತಾಡುವವರು; ಬಗುಳು: ಬೊಗಳು; ಆಯತಿ: ಸಾಮರ್ಥ್ಯ; ಪಾಸಟಿ: ಸಮಾನ, ಹೋಲಿಕೆ; ನಿಗಮ: ವೇದ; ಬೀಯಗ: ಕೀಲಿ; ಅರಿ: ತಿಳಿ;

ಪದವಿಂಗಡಣೆ:
ರಾಯ +ಕೇಳೈ +ವಿಮಲ +ದತ್ತಾ
ತ್ರೇಯವೆಸರಲಿ+ ಧರ್ಮವನು +ಪೂ
ರಾಯದಲಿ +ಪಲ್ಲವಿಸಿದನು +ಹೈಹಯನ +ರಾಜ್ಯದಲಿ
ಬಾಯಿಬಡುಕರು+ ಬಗುಳಿದರೆ +ಹರಿ
ಯಾಯತಿಕೆ+ ಪಾಸಟಿಯೆ+ ನಿಗಮದ
ಬಾಯ +ಬೀಯಗವ್+ಈ+ ಮುಕುಂದನನ್+ಅರಿವರಾರೆಂದ

ಅಚ್ಚರಿ:
(೧) ಶಿಶುಪಾಲನನ್ನು ಬಯ್ಯುವ ಪರಿ – ಬಾಯಿಬಡುಕರು ಬಗುಳಿದರೆ
(೨) ಕೃಷ್ಣನ ಗುಣಗಾನ – ನಿಗಮದಬಾಯ ಬೀಯಗವೀ ಮುಕುಂದನನರಿವರಾರೆಂದ