ಪದ್ಯ ೧೦: ಅರ್ಜುನನು ಕಂಡ ಕನಸಿನ ಮರ್ಮವೇನು?

ಕನಸನೀ ಹದನಾಗಿ ಕಂಡೆನು
ದನುಜಹರ ಬೆಸಸಿದರ ಫಲವನು
ನನಗೆನಲು ನಸುನಗುತ ನುಡಿದನು ದಾನವಧ್ವಂಸಿ
ನಿನಗೆ ಶೂಲಿಯ ಕರುಣವಾಯ್ತಿಂ
ದಿನಲಿ ಪಾಶುಪತಾಸ್ತ್ರ ನಿನ್ನದು
ದಿನದೊಳರಿ ಸೈಂಧವ ವಧವ್ಯಾಪಾರವಹುದೆಂದ (ದ್ರೋಣ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನು ಮಾತನಾಡುತ್ತಾ ತನ್ನ ಕನಸನ್ನು ಕೃಷ್ಣನಿಗೆ ವಿವರಿಸಿದನು. ಇದರ ಫಲವೇನೆಂದು ಕೃಷ್ಣನಲ್ಲಿ ಕೇಳಲು, ಶ್ರೀಕೃಷ್ಣನು ನಸುನಕ್ಕು, ನಿನಗೆ ಶಿವನ ಕರುಣೆ ದೊರಕಿತು. ಈ ದಿವಸ ಪಾಶುಪತಾಸ್ತ್ರವು ನಿನ್ನದು, ಇಂದು ಸೈಂಧವನ ವಧೆಯಾಗುತ್ತದೆ ಎಂದನು.

ಅರ್ಥ:
ಕನಸು: ಸ್ವಪ್ನ; ಹದ: ಸರಿಯಾದ ಸ್ಥಿತಿ; ಕಂಡು: ನೋಡು; ದನುಜ: ರಾಕ್ಷರ; ಹರ: ನಾಶ; ದನುಜಹರ: ಕೃಷ್ಣ; ಬೆಸ: ಕೆಲಸ, ಕಾರ್ಯ; ಫಲ: ಪ್ರಯೋಜನ; ನಸುನಗು: ಮಂದಸ್ಮಿತ; ನುಡಿ: ಮಾತು; ದಾನವ: ರಾಕ್ಷಸ; ಧ್ವಂಸಿ: ನಾಶ; ಶೂಲಿ: ಈಶ್ವರ; ಕರುಣ: ದಯೆ; ಅಸ್ತ್ರ: ಶಸ್ತ್ರ; ಅರಿ: ವೈರಿ; ವಧ: ಸಾಯಿಸು; ವ್ಯಾಪಾರ: ವ್ಯವಹಾರ;

ಪದವಿಂಗಡಣೆ:
ಕನಸನ್+ಈ+ ಹದನಾಗಿ +ಕಂಡೆನು
ದನುಜಹರ +ಬೆಸಸ್+ಇದರ +ಫಲವನು
ನನಗೆನಲು +ನಸುನಗುತ +ನುಡಿದನು +ದಾನವಧ್ವಂಸಿ
ನಿನಗೆ +ಶೂಲಿಯ +ಕರುಣವಾಯ್ತ್
ಇಂದಿನಲಿ +ಪಾಶುಪತಾಸ್ತ್ರ +ನಿನ್ನದು
ದಿನದೊಳ್+ಅರಿ +ಸೈಂಧವ +ವಧ+ವ್ಯಾಪಾರವಹುದೆಂದ

ಅಚ್ಚರಿ:
(೧) ದನುಜಹರ, ದಾನವಧ್ವಂಸಿ – ಕೃಷ್ಣನನ್ನು ಕರೆದ ಪರಿ
(೨) ನ ಕಾರದ ತ್ರಿವಳಿ ಪದ – ನನಗೆನಲು ನಸುನಗುತ ನುಡಿದನು

ಪದ್ಯ ೯: ಶಿವನು ಅರ್ಜುನನಿಗೆ ಯಾವ ಅಸ್ತ್ರದ ಪ್ರಯೋಗವನ್ನು ತೋರಿಸಿದನು?

ಬಳಿಕ ತಿರುವಿಟ್ಟಾಗಲಸ್ತ್ರವ
ಸೆಳೆದು ಬಿಲುವಿದ್ಯಾಚಮತ್ಕೃತಿ
ಯಳವ ತೋರಿದಡಾಗಳೀಶನ ಹೊರೆಗೆ ನಾನೈದಿ
ನಿಲೆ ತದೀಯಾಸ್ತ್ರಪ್ರಯೋಗದ
ಬಲುಹನೀಕ್ಷಿಸೆ ತೆಗೆವ ಬೆಡಗನು
ಕಲಿಸೆ ಪಾಶುಪತಾಸ್ತ್ರವೆನಗಾಯ್ತಲ್ಲಿ ವಶವರ್ತಿ (ದ್ರೋಣ ಪರ್ವ, ೯ ಸಂಧಿ, ೯ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ನಾನದಕ್ಕೆ ಹೆದೆಯೇರಿಸಿ ಬಿಲ್ವಿದ್ಯೆಯ ಚಮತ್ಕಾರವನ್ನು ತೋರಿಸಿ ಹರನ ಬಳಿಗೆ ಹೋಗಿ ನಿಂತೆನು. ಅವನು ಪಾಶುಪತಾಸ್ತ್ರ ಪ್ರಯೋಗ ಮಾದುವಾಗ ಅದನ್ನು ಹೇಗೆ ತೆಗೆಯಬೇಕೆಂದು ತೋರಿಸಿದನು. ಪಾಶುಪತಾಸ್ತ್ರವು ನನ್ನ ವಶವಾಯಿತು.

ಅರ್ಥ:
ಬಳಿಕ: ನಂತರ; ತಿರುವು: ತಿರುಗಿಸು; ಅಸ್ತ್ರ: ಶಸ್ತ್ರ, ಆಯುಧ; ಸೆಳೆ: ಜಗ್ಗು, ಎಳೆ; ಬಿಲು: ಬಿಲ್ಲು, ಚಾಪ; ವಿದ್ಯೆ: ಜ್ಞಾನ; ಚಮತ್ಕೃತಿ: ವಿಸ್ಮಯ; ಅಳವು: ಶಕ್ತಿ; ತೋರು: ಪ್ರದರ್ಶಿಸು; ಹೊರೆ: ರಕ್ಷಣೆ, ಆಶ್ರಯ; ಪ್ರಯೋಗ: ನಿದರ್ಶನ, ದೃಷ್ಟಾಂತ; ಬಲುಹು: ಶಕ್ತಿ; ಈಕ್ಷಿಸು: ನೋಡು; ತೆಗೆ: ಹೊರತರು; ಬೆಡಗು: ಅಂದ, ಸೊಬಗು; ಕಲಿಸು: ತಿಳಿಸು; ವಶ: ಅಧೀನ;

ಪದವಿಂಗಡಣೆ:
ಬಳಿಕ +ತಿರುವಿಟ್ಟಾಗಲ್+ಅಸ್ತ್ರವ
ಸೆಳೆದು +ಬಿಲುವಿದ್ಯಾ+ಚಮತ್ಕೃತಿ
ಯಳವ +ತೋರಿದಡ್+ಆಗಳ್+ಈಶನ +ಹೊರೆಗೆ +ನಾನೈದಿ
ನಿಲೆ +ತದೀಯಾಸ್ತ್ರ+ಪ್ರಯೋಗದ
ಬಲುಹನ್+ಈಕ್ಷಿಸೆ +ತೆಗೆವ+ ಬೆಡಗನು
ಕಲಿಸೆ +ಪಾಶುಪತಾಸ್ತ್ರವ್+ಎನಗಾಯ್ತಲ್ಲಿ +ವಶವರ್ತಿ

ಪದ್ಯ ೬: ಯಾರ ಬಾಣದ ಪೆಟ್ಟನ್ನು ಭೀಷ್ಮರು ಸಹಿಸಲಾರರು?

ಪರಶುರಾಮನ ಕೊಡಲಿಗಡಿತವ
ಧರಿಸಲಾಪೆನು ವಿಲಯ ಭೈರವ
ನಿರಿದಡಂಜೆನು ಸಿಡಿಲು ಹೊಡೆದರೆ ರೋಮ ಕಂಪಿಸದು
ಹರನ ಪಾಶುಪತಾಸ್ತ್ರ ಬಾದಣ
ಗೊರೆದರೆಯು ಲೆಕ್ಕಿಸೆನು ಪಾರ್ಥನ
ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಪರಶುರಾಮನ ಕೊಡಲಿಯ ಹೊಡೆತವನ್ನು ಸಹಿಸಬಲ್ಲೆ. ಪ್ರಳಯ ಭೈರವನ ಇರಿತಕ್ಕೆ ಹೆದರುವುದಿಲ್ಲ. ಸಿಡಿಲು ಬಡಿದರೆ ನನ್ನ ಕೂದಲೂ ಕೊಂಕುವುದಿಲ್ಲ. ಶಿವನ ಪಾಶುಪತಾಸ್ತ್ರವು ಮೈಯಲ್ಲಿ ರಂಧ್ರವನ್ನು ಕೊರೆದರೂ ಬೆದರುವುದಿಲ್ಲ. ಅರ್ಜುನನ ಬಾಣಗಳ ದಾಳಿಗೆ ಸಿಲುಕಿ ನೋಯುತ್ತಿದ್ದೇನೆ, ನೀವು ಬಂದು ಅವನ ಬಾಣಗಳನ್ನು ಪರಿಹರಿಸಿ ಎಂದು ಭೀಷ್ಮನು ಬೇಡಿದನು.

ಅರ್ಥ:
ಕೊಡಲಿ: ಪರಶು; ಕಡಿತ: ಕತ್ತರಿಸು; ಧರಿಸು: ಹಿಡಿ, ತೆಗೆದುಕೊಳ್ಳು; ವಿಲಯ: ನಾಶ, ಪ್ರಳಯ; ಇರಿ: ಚುಚ್ಚು; ಅಂಜು: ಹೆದರು; ಸಿಡಿಲು: ಅಶನಿ; ಹೊಡೆ: ಏಟು, ಹೊಡೆತ; ರೋಮ: ಕೂದಲು; ಕಂಪಿಸು: ಅಲುಗಾಡು; ಹರ: ಈಶ್ವರ; ಅಸ್ತ್ರ: ಶಸ್ತ್ರ; ಬಾದಣ: ತೂತು, ರಂಧ್ರ; ಒರೆ: ತಿಕ್ಕು; ಲೆಕ್ಕಿಸು: ಎಣಿಕೆಮಾಡು; ಸರಳು: ಬಾಣ; ಚೂಣಿ: ಮುಂದಿನ ಸಾಲು; ಸಿಲುಕು: ಸೆರೆಯಾದ ವಸ್ತು; ಪರಿಹರ: ನಿವಾರಣೆ;

ಪದವಿಂಗಡಣೆ:
ಪರಶುರಾಮನ +ಕೊಡಲಿ+ಕಡಿತವ
ಧರಿಸಲಾಪೆನು +ವಿಲಯ +ಭೈರವನ್
ಇರಿದಡ್+ಅಂಜೆನು +ಸಿಡಿಲು +ಹೊಡೆದರೆ +ರೋಮ +ಕಂಪಿಸದು
ಹರನ +ಪಾಶುಪತಾಸ್ತ್ರ+ ಬಾದಣಗ್
ಒರೆದರೆಯು+ ಲೆಕ್ಕಿಸೆನು+ ಪಾರ್ಥನ
ಸರಳ+ ಚೂಣಿಗೆ +ಸಿಲುಕಿದೆನು +ಪರಿಹರಿಸಿ+ ನೀವೆಂದ

ಅಚ್ಚರಿ:
(೧) ಭೀಷ್ಮನು ಬೇಡುವ ಪರಿ – ಪಾರ್ಥನ ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ

ಪದ್ಯ ೧: ಸೂರ್ಯೋದಯವು ಹೇಗೆ ಕಂಡಿತು?

ಕೇಳು ಜನಮೇಜಯ ಧರಿತ್ರೀ
ಪಾಲಪಾಶುಪತಾಸ್ತ್ರವೇದದ
ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ
ಮೇಳವಿಸಿತರುಣಾಂಶು ಪೂರ್ವದಿ
ಶಾಲತಾಂಗಿಯ ಮಂಡನೋಚಿತ
ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ (ಅರಣ್ಯ ಪರ್ವ, ೧೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಪಾಶುಪತಾಸ್ತ್ರವೇದದ ಉಚ್ಚಾರಣೆಯ ಮೊದಲು ಬರುವ ಓಂಕಾರವೋ ಎಂಬಂತೆ ಪೂರ್ವ ದಿಕ್ಕಿನಲ್ಲಿ ಅರುಣೋದಯವಾಯಿತು. ಪೂರ್ವದಿಕ್ಕಿನ ವನಿತೆಯ ಮುಂದಲೆಯನ್ನು ಅಲಂಕರಿಸಲು ಸರಿಯಾದ ಮಾಣಿಕ್ಯವೋ ಎಂಬಂತೆ ಉದಯ ರವಿಯ ಬಿಂಬವು ಕಾಣಿಸಿತು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಅಸ್ತ್ರ: ಶಸ್ತ್ರ, ಆಯುಧ; ವೇದ: ಜ್ಞಾನ; ಪಾಳಿ: ಸಾಲು; ಉಚ್ಚರಣೆ: ಹೇಳು; ಪ್ರಣವ: ಓಂಕಾರ; ಸ್ವರೂಪ: ನಿಜವಾದ ರೂಪ; ಮೇಳವಿಸು: ಸೇರು, ಜೊತೆಯಾಗು; ಅರುಣ:ಸೂರ್ಯನ ಸಾರ, ಕೆಂಪುಬಣ್ಣ; ಅಂಶ: ಭಾಗ, ಘಟಕ; ಪೂರ್ವ: ಮೂಡಣ ದಿಕ್ಕು; ದಿಶ: ದಿಕ್ಕು; ಮಂಡನ: ಸಿಂಗರಿಸುವುದು, ಅಲಂಕರಿಸುವುದು; ಉಚಿತ: ಸರಿಯಾದ; ಮೌಳಿ: ಶಿರ; ಮಾಣಿಕ: ಅಮೂಲ್ಯವಾದ ಮಣಿ; ಮೆರೆ: ಹೊಳೆ; ದಿನಮಣಿ: ಸೂರ್ಯ; ಬಿಂಬ: ಕಾಂತಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ+ಪಾಶುಪತಾಸ್ತ್ರ+ವೇದದ
ಪಾಳಿ+ಉಚ್ಚರಣೆಯಲಿ +ತತ್+ಪ್ರಣವ +ಸ್ವರೂಪವೆನೆ
ಮೇಳವಿಸಿತ್+ಅರುಣಾಂಶು +ಪೂರ್ವ+ದಿ
ಶಾಲತಾಂಗಿಯ+ ಮಂಡನೋಚಿತ
ಮೌಳಿಮಾಣಿಕವೆನಲು +ಮೆರೆದುದು +ದಿನಮಣಿಯ +ಬಿಂಬ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಪೂರ್ವದಿಶಾಲತಾಂಗಿಯ ಮಂಡನೋಚಿತ ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ

ಪದ್ಯ ೯೭: ಅರ್ಜುನನು ಶಂಕರನನ್ನು ಏನು ಬೇಡಿದನು?

ಸಲಿಸುವೆನು ನೀ ಬೇಡಿದುದ ನಿ
ಸ್ಖಲಿತವಂಜದಿರಿನ್ನು ಸಾಕೆನೆ
ಸುಲಭ ನೀ ಭಕ್ತರಿಗೆ ಭಯವಿನ್ನೇಕೆ ನಮಗೆನುತ
ಸಲಿಸು ಪಾಶುಪತಾಸ್ತ್ರವನು ವೆ
ಗ್ಗಳದ ಬ್ರಹ್ಮ ಶಿರೋಸ್ತ್ರವನು ಕೈ
ಗೊಳಿಸುವುದು ಕೃಪೆಯುಳ್ಳೊಡೆಂದನು ನಗುತ ಕಲಿಪಾರ್ಥ (ಅರಣ್ಯ ಪರ್ವ, ೭ ಸಂಧಿ, ೯೭ ಪದ್ಯ)

ತಾತ್ಪರ್ಯ:
ನೀನು ಬೇಡಿದ ವರವನ್ನು ನಾನು ಖಂಡಿತ ನೀಡುತ್ತೇನೆ ಎಂದು ಶಿವನು ಹೇಳಲು, ಅರ್ಜುನನು ನಗುತ್ತಾ ನನಗೆ ಪಾಶುಪತಾಸ್ತ್ರವನ್ನೂ, ಬ್ರಹ್ಮ ಶಿರೋಸ್ತ್ರವನ್ನೂ ಕೃಪೆಯಿಂದ ಕರುಣಿಸು ಎಂದು ಕೇಳಿದನು. ಶಂಕರನೇ, ನೀನು ಭಕ್ತಪರಾಧೀನ, ಭಕ್ತರಿಗೆ ಸುಲಭವಾಗಿ ಒಲಿಯುವವನು ಎಂದು ಸಂತಸದಿಂದ ಬಣ್ಣಿಸಿದನು.

ಅರ್ಥ:
ಸಲಿಸು: ದೊರಕಿಸಿ ಕೊಡು, ಪೂರೈಸು; ಬೇಡು: ಕೇಳು; ನಿಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ಅಂಜು: ಹೆದರು; ಸಾಕು: ಕೊನೆ, ಬೆಳೆಸು; ಸುಲಭ: ಕಷ್ಟವಲ್ಲದುದು, ಸರಾಗ; ಭಕ್ತ: ಆರಾಧಕ; ಭಯ: ಅಂಜಿಕೆ; ಅಸ್ತ್ರ: ಶಸ್ತ್ರ; ವೆಗ್ಗಳ: ಶ್ರೇಷ್ಠ; ಶಿರಸ್ಸು: ತಲೆ; ಕೈಗೊಳಿಸು: ನೀಡು; ಕೃಪೆ: ದಯೆ; ನಗು: ಸಂತಸ; ಕಲಿ: ಶೂರ;

ಪದವಿಂಗಡಣೆ:
ಸಲಿಸುವೆನು +ನೀ +ಬೇಡಿದುದ+ ನಿ
ಸ್ಖಲಿತವ್+ಅಂಜದಿರ್+ಇನ್ನು +ಸಾಕೆನೆ
ಸುಲಭ+ ನೀ +ಭಕ್ತರಿಗೆ+ ಭಯವಿನ್ನೇಕೆ +ನಮಗೆನುತ
ಸಲಿಸು+ ಪಾಶುಪತಾಸ್ತ್ರವನು +ವೆ
ಗ್ಗಳದ +ಬ್ರಹ್ಮ +ಶಿರೋಸ್ತ್ರವನು +ಕೈ
ಗೊಳಿಸುವುದು +ಕೃಪೆಯುಳ್ಳೊಡೆಂದನು+ ನಗುತ+ ಕಲಿಪಾರ್ಥ

ಅಚ್ಚರಿ:
(೧) ಪಾಶುಪತಾಸ್ತ್ರ, ಬ್ರಹ್ಮಶಿರೋಸ್ತ್ರ – ಅಸ್ತ್ರಗಳನ್ನು ವಿವರಿಸುವ ಪರಿ

ಪದ್ಯ ೩೧: ಅರ್ಜುನನ ಶಿವನಿಂದ ಯಾವ ಅಸ್ತ್ರವನ್ನು ಪಡೆಯುವೆನೆಂದನು?

ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯ ಮಾರ್ಗಣವ
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ (ಅರಣ್ಯ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅತ್ಯಂತ ಕಷ್ಟಕರವಾದ ತಪಸ್ಸನ್ನಾಚರಿಸಿ, ಶಿವನನ್ನು ಭಜಿಸಿ ಅವನ ಕೃಪೆಯಿಂದ ಪಾಶುಪತಾಸ್ತ್ರವೇ ಮೊದಲಾದ ಮಹಾ ಬಾಣಗಳನ್ನು ಪಡೆಯುತ್ತೇನೆ. ಎಲೈ ದ್ರೌಪದಿ ಆ ಅಸ್ತ್ರಗಳಿಂದ ಆ ನರಿಗಳಾದ ಕೌರವರನ್ನು ಸಂಹರಿಸಿ, ನಿನ್ನ ಅಪಮಾನದ ಅಗ್ನಿಯನ್ನು ನಂದಿಸುತ್ತೇನೆ ಎಂದು ಅರ್ಜುನನು ಹೇಳಿದನು.

ಅರ್ಥ:
ಹರ: ಶಿವ; ಚರಣ: ಪಾದ; ಭಜಿಸು: ಆರಾಧಿಸು; ದುರ್ಧರ: ಕಷ್ಟ, ಕಠಿಣ; ತಪಸ್ಸು: ಧ್ಯಾನ, ಏಕಾಗ್ರಚಿತ್ತ; ನಿಷ್ಠೆ: ದೃಢತೆ, ಸ್ಥಿರತೆ, ಶ್ರದ್ಧೆ; ಕೇಳು: ಆಲಿಸು; ತರುಣಿ: ಹೆಣ್ಣು; ಅಸ್ತ್ರ: ಆಯುಧ; ದಿವ್ಯ: ಶ್ರೇಷ್ಠ; ಮಾರ್ಗಣ: ಬಾಣ; ಪುರಹರ: ಶಿವ; ಕೃಪೆ: ದಯೆ; ನರಿ: ಒಂದು ಪ್ರಾಣಿ, ಇಲ್ಲಿ ಕೌರವರನ್ನು ಹೇಳಲು ಬಳಸಿದ ಪದ; ಸಂಹರಿಸು: ಸಾಯಿಸು; ಪರಿವವ: ಸೋಲು, ಅಪಮಾನ; ಅಗ್ನಿ: ಬೆಂಕಿ; ನಂದಿಸು: ಆರಿಸು; ನಿಲ್ಲು: ತಡೆ;

ಪದವಿಂಗಡಣೆ:
ಹರನ+ ಚರಣವ+ ಭಜಿಸುವೆನು +ದು
ರ್ಧರ+ ತಪೋನಿಷ್ಠೆಯಲಿ +ಕೇಳ್+ಎಲೆ
ತರುಣಿ+ ಪಾಶುಪತಾಸ್ತ್ರವ್+ ಆದಿಯ+ ದಿವ್ಯ+ ಮಾರ್ಗಣವ
ಪುರಹರನ+ ಕೃಪೆಯಿಂದ +ಪಡೆದ್+ಆ
ನರಿಗಳನು +ಸಂಹರಿಸಿ +ನಿನ್ನಯ
ಪರಿಭವಾಗ್ನಿಯ +ನಂದಿಸುವೆ +ನಿಲ್ಲೆಂದನ್+ಆ+ ಪಾರ್ಥ

ಅಚ್ಚರಿ:
(೧) ಹರ, ಪುರಹರ – ಶಿವನಿಗೆ ಬಳಸಿದ ಹೆಸರು
(೨) ದ್ರೌಪದಿಯನ್ನು ತರುಣಿ, ಕೌರವರನ್ನು ನರಿ ಎಂದು ಕರೆದಿರುವುದು