ಪದ್ಯ ೧೯: ಪಾವನವಾದ ಪ್ರಾಯೋಪವೇಶವಾವುದು?

ತರುಣಿ ನೀ ಹೆಸರಿಸಿದವಿವು ದು
ರ್ಮರಣ ಸಾಧನವಮಲ ದರ್ಭಾ
ಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ
ಪರಿಹರಿಸುವೆನು ದೇಹವನು ಸುಡ
ಲರಸುತನವನು ಪಾಂಡುಪುತ್ರರ
ಕರುಣ ಕಲುಷಿತ ಕಾಯವಿದನಾ ಧರಿಸುವೆನೆಯೆಂದ (ಅರಣ್ಯ ಪರ್ವ, ೨೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭಾನುಮತಿಯ ಮಾತನ್ನು ಕೇಳಿದ ದುರ್ಯೋಧನನು, ಎಲೈ ಭಾನುಮತಿ, ನೀನು ಹೇಳಿದ ಮರಣದ ಮಾರ್ಗಗಳು ದುರ್ಮರಣಕ್ಕೆ ಸಾಧನಗಳು, ಪವಿತ್ರವಾದ ದರ್ಭೆಯ ಹಾಸಿನ ಮೇಲೆ ಮಲಗಿ ಪ್ರಾಯೋಪವೇಶದಿಂದ ಈ ದೇಹವನ್ನು ಕಳೆದುಕೊಳ್ಳುತ್ತೇನೆ, ಅರಸುತನಕ್ಕೆ ಬೆಂಕಿ ಬೀಳಲಿ, ಪಾಂಡುಪುತ್ರರ ಕರುಣೆಯಿಂದ ಉಳಿದಿರುವ ಈ ದೇಹದಲ್ಲಿ ನಾನು ಇರಬಲ್ಲೆನೆ? ಎಂದು ಕೇಳಿದನು.

ಅರ್ಥ:
ತರುಣಿ: ಹೆಣ್ಣು; ಹೆಸರಿಸು: ಹೇಳು; ದುರ್ಮರಣ: ಅಸ್ವಾಭಾವಿಕವಾದ ಸಾವು; ಸಾಧನ: ಕಾರಣ, ಹೇತು, ನಿಮಿತ್ತ; ಅಮಲ: ನಿರ್ಮಲ; ದರ್ಭೆ:ಕುಶ, ಹುಲ್ಲು; ದರ್ಭಾಸ್ತರಣ: ದರ್ಭೆಯಿಂದ ಮಾಡಿದ ಚಾಪೆ; ಪಾವನ: ನಿರ್ಮಲ; ಪ್ರಾಯೋಪವೇಶ: ಆಹಾರವಿಲ್ಲದೆ ದೇಹವನ್ನು ಬಿಡುವುದು; ಪರಿಹರ: ನಿವಾರಣೆ, ಪರಿಹಾರ; ದೇಹ: ಕಾಯ; ಸುಡು: ದಹಿಸು; ಅರಸು: ರಾಜ; ಕರುಣ: ದಯೆ; ಕಲುಷ: ಕಳಂಕ; ಕಾಯ: ದೇಹ; ಧರಿಸು: ಉಡು,ಹೊರು;

ಪದವಿಂಗಡಣೆ:
ತರುಣಿ +ನೀ +ಹೆಸರಿಸಿದವಿವು +ದು
ರ್ಮರಣ+ ಸಾಧನವ್+ಅಮಲ +ದರ್ಭಾ
ಸ್ತರಣವಿದು +ಪಾವನವಲಾ +ಪ್ರಾಯೋಪವೇಶದಲಿ
ಪರಿಹರಿಸುವೆನು+ ದೇಹವನು +ಸುಡಲ್
ಅರಸುತನವನು +ಪಾಂಡುಪುತ್ರರ
ಕರುಣ +ಕಲುಷಿತ +ಕಾಯವಿದನಾ +ಧರಿಸುವೆನೆಯೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣ ಕಲುಷಿತ ಕಾಯವಿದನಾ
(೨) ಪಾವನವಾದ ಮರಣ ಪದ್ದತಿ – ಅಮಲ ದರ್ಭಾಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ

ಪದ್ಯ ೨೬: ಕೃಷ್ಣನ ಹಿರಿಮೆ ಎಂತಹುದು?

ದೇವರಂಗೋಪಾಂಗದಲಿ ವೇ
ದಾವಳಿಗಳುಚ್ಛ್ವಾಸದಲಿ ತೀ
ರ್ಥಾವಳಿಗಳಂಘ್ರಿದ್ವಯಾಂಬುಜ ಮಾಕರಂದದಲಿ
ಪಾವನಕೆ ಪಾವನನು ಜೀವರ
ಜೀವನನು ಮೃತ್ಯುವಿಗೆ ಮೃತ್ಯುವಿ
ದಾವಲೆಕ್ಕದೊಳೀತನಹನೆಂದರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಇವನ ಅಂಗೋಪಾಂಗಗಳಲ್ಲಿ ದೇವರುಗಳು, ಇವನ ಉಸಿರಾಟದಲ್ಲಿ ವೇದಗಳು, ಪಾದಕಮಲಗಳ ಮಕರಂದದಲ್ಲಿ ತೀರ್ಥಗಳು, ಇವೆ. ಪವಿತ್ರವಾದುದಕ್ಕೆ ಪಾವಿತ್ರ್ಯವನ್ನು ಕೊಡುವವನು ಇವನು. ಜೀವರ ಜೀವನವು ಇವನೇ, ಮೃತ್ಯುವಿಗಿವನು ಮೃತ್ಯು ಇವನು ಯಾವಲೆಕ್ಕಕ್ಕನುಗುಣವಾಗಿ ಆದನೋ ಇರುವನೋ ತಿಳಿದವರು ಯಾರು ಎಂದು ಭೀಷ್ಮರು ಕೃಷ್ಣನ ಗುಣಗಾನವನ್ನು ಹೇಳಿದರು.

ಅರ್ಥ:
ದೇವ: ಭಗವಂತ, ಸುರ; ಅಂಗೋಪಾಂಗ: ಅಂಗಾಗಳು; ವೇದ: ಜ್ಞಾನ; ಉಚ್ಛ್ವಾಸ: ಉಸಿರಾಟ; ತೀರ್ಥ: ಪವಿತ್ರವಾದ ಜಲ; ಆವಳಿ: ಗುಂಪು; ಅಂಘ್ರಿ: ಪಾದ; ಅಂಬುಜ: ಕಮಲ; ಮಕರಂದ: ಹೂವಿನ ರಸ; ಪಾವನ:ಶುದ್ಧ; ಜೀವ: ಉಸಿರು; ಮೃತ್ಯು: ಸಾವು; ಲೆಕ್ಕ: ಗಣನೆ; ಅರಿ: ತಿಳಿ;

ಪದವಿಂಗಡಣೆ:
ದೇವರ್+ಅಂಗೋಪಾಂಗದಲಿ+ ವೇ
ದಾವಳಿಗಳ್+ಉಚ್ಛ್ವಾಸದಲಿ +ತೀ
ರ್ಥಾವಳಿಗಳ್+ಅಂಘ್ರಿದ್ವಯ+ಅಂಬುಜ +ಮಾಕರಂದದಲಿ
ಪಾವನಕೆ+ ಪಾವನನು+ ಜೀವರ
ಜೀವನನು +ಮೃತ್ಯುವಿಗೆ ಮೃತ್ಯುವಿದ್
ಆವಲೆಕ್ಕದೊಳ್+ಈತನಹನೆಂದ್+ಅರಿವರಾರೆಂದ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಪಾವನಕೆ ಪಾವನನು ಜೀವರ ಜೀವನನು ಮೃತ್ಯುವಿಗೆ ಮೃತ್ಯು