ಪದ್ಯ ೩೮: ದುರ್ಯೋಧನನು ದುರ್ಜಯನಿಗೆ ಏನು ಹೇಳಿದ?

ತೇರ ಚಾಚಲಿ ಬೇಗ ಬಲುಗೈ
ಸಾರಥಿಯ ಬರಹೇಳು ಹಿಂದಣ
ಸಾರಥಿಯ ದೆಸೆಯಿಂದ ಬಂದುದು ಕರ್ಣ ಸೋಲುವನೆ
ವೀರನಾವೆಡೆ ಶೌರ್ಯ ಪಾರಾ
ವಾರನಾವೆಡೆಯೆನುತ ಕೌರವ
ಧಾರುಣೀಪತಿ ಬೆಸಸಿದನು ತನ್ನನುಜ ದುರ್ಜಯಗೆ (ದ್ರೋಣ ಪರ್ವ, ೧೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಇದನ್ನು ನೋಡಿದ ದುರ್ಯೋಧನನ ತಮ್ಮನಾದ ದುರ್ಜಯನನ್ನು ಕರೆದು, ಬೇಗ ತೇರನ್ನು ತಂದು ಕರ್ಣನಿಗೆ ಕೊಡ ಹೇಳು. ಕುಶಲನೂ, ಕೈಚಳಕವಿರುವವನೂ ಆದ ಸಾರಥಿಯನ್ನು ಬರಹೇಳು. ಕರ್ಣ ಸೋಲುವವನಲ್ಲ, ಹಿಮ್ದಿದ್ದ ಸಾರಥಿಯೆಂದ ಅವನಿಗೆ ಈ ಗತಿಯಾಯಿತು. ವೀರನಾದ ಕರ್ಣನಲ್ಲಿ ಶೌರ್ಯ ಸಮುದ್ರನಾದ ಕರ್ಣನೆಲ್ಲಿ ಎಂದು ಆಜ್ಞೆ ಮಾಡಿದನು.

ಅರ್ಥ:
ತೇರು: ಬಂಡಿ; ಚಾಚು: ಹರಡು; ಸಾರಥಿ: ಸೂತ; ಬರಹೇಳು: ಆಗಮಿಸು; ಹಿಂದಣ: ಹಿಂಬದಿ; ದೆಸೆ: ದಿಕ್ಕು; ಬಂದು: ಆಗಮಿಸು; ಸೋಲು: ಪರಾಭವ; ವೀರ: ಶೂರ; ಶೌರ್ಯ: ಪರಾಕ್ರಮ; ಪಾರಾವಾರ: ಸಮುದ್ರ, ಕಡಲು; ಧಾರುಣೀಪತಿ: ರಾಜ; ಬೆಸಸು: ಕಾರ್ಯ; ಅನುಜ: ತಮ್ಮ;

ಪದವಿಂಗಡಣೆ:
ತೇರ +ಚಾಚಲಿ +ಬೇಗ +ಬಲುಗೈ
ಸಾರಥಿಯ +ಬರಹೇಳು +ಹಿಂದಣ
ಸಾರಥಿಯ +ದೆಸೆಯಿಂದ +ಬಂದುದು +ಕರ್ಣ +ಸೋಲುವನೆ
ವೀರನಾವೆಡೆ+ ಶೌರ್ಯ +ಪಾರಾ
ವಾರನ್+ಆವೆಡೆ+ಎನುತ +ಕೌರವ
ಧಾರುಣೀಪತಿ +ಬೆಸಸಿದನು +ತನ್ನನುಜ +ದುರ್ಜಯಗೆ

ಅಚ್ಚರಿ:
(೧) ಕರ್ಣನ ಶೌರ್ಯವನ್ನು ವರ್ಣಿಸುವ ಪರಿ – ವೀರನಾವೆಡೆ ಶೌರ್ಯ ಪಾರಾವಾರನಾವೆಡೆಯೆನುತ

ಪದ್ಯ ೫೯: ಅಭಿಮನ್ಯುವನ್ನು ಯಾರಿಗೆ ಹೋಲಿಸಿದರು?

ಆರ ರಥವಿದು ಸೈನ್ಯ ಪಾರಾ
ವಾರಕಿದನಂಘೈಸುವನು ತ್ರಿಪು
ರಾರಿಯೋ ಮೇಣಾ ತ್ರಿವಿಕ್ರಮನೋ ಸುರೇಶ್ವರನೊ
ವೀರನಹನೋ ಪೂತು ರಣದ ದೊ
ಠಾರನಿವನಾರೆನುತ ತರುಬಿಯೆ
ತೋರಹತ್ತರು ತಾಗಿದರು ಸೌಬಲ ಜಯದ್ರಥರು (ದ್ರೋಣ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ಪದ್ಮವ್ಯೂಹದ ಮುಂದೆ ನಿಂತಿದ್ದ ಶಕುನಿ ಮತ್ತು ಜಯದ್ರಥರು, ಈ ಸೈನ್ಯ ಸಮುದ್ರವನ್ನು ತುಡುಕಲು ಬಂದ ವೀರನಾರಿರಬಹುದು? ಇವನು ಶಿವನೋ, ವಿಷ್ಣುವೋ, ಇಂದ್ರನೋ ಇರಬೇಕು. ಹೀಗೆ ಬರುವ ಈತನು ವೀರನೇ ಸರಿ. ಆದರೆ ಮಹಾಪರಾಕ್ರಮಿ ಯಾರಿದ್ದಾನು ಎಂದುಕೊಂಡು ಅಭಿಮನ್ಯುವನ್ನು ತಡೆದು ಯುದ್ಧಾರಂಭ ಮಾಡಿದರು.

ಅರ್ಥ:
ರಥ: ಬಂಡಿ; ಸೈನ್ಯ: ದಳ; ಪಾರಾವಾರ: ಸಮುದ್ರ, ಕಡಲು, ಎಲ್ಲೆ; ಅಂಘೈಸು: ಬಯಸು, ಒಪ್ಪು; ತ್ರಿಪುರಾರಿ: ಶಿವ; ಮೇಣ್: ಅಥವ; ತ್ರಿವಿಕ್ರಮ: ವಿಷ್ಣು; ಸುರೇಶ್ವರ: ಇಂದ್ರ; ವೀರ: ಶೂರ; ಪೂತು: ಕೊಂಡಾಟದ ಪದ; ರಣ: ಯುದ್ಧರಂಗ; ದೊಠಾರ: ಶೂರ, ಕಲಿ; ತರುಬು: ತಡೆ, ನಿಲ್ಲಿಸು; ತೋರು: ಕಾಣಿಸು; ತಾಗು: ಪೆಟ್ಟು, ಎದುರಿಸು; ಸೌಬಲ: ಶಕುನಿ;

ಪದವಿಂಗಡಣೆ:
ಆರ +ರಥವಿದು +ಸೈನ್ಯ +ಪಾರಾ
ವಾರಕಿದನ್+ಅಂಘೈಸುವನು +ತ್ರಿಪು
ರಾರಿಯೋ +ಮೇಣ್+ಆ+ ತ್ರಿವಿಕ್ರಮನೋ +ಸುರೇಶ್ವರನೊ
ವೀರನಹನೋ +ಪೂತು +ರಣದ +ದೊ
ಠಾರನಿವನ್+ಆರೆನುತ +ತರುಬಿಯೆ
ತೋರಹತ್ತರು+ ತಾಗಿದರು +ಸೌಬಲ +ಜಯದ್ರಥರು

ಅಚ್ಚರಿ:
(೧) ಅಭಿಮನ್ಯುವನ್ನು ಹೋಲಿಸುವ ಪರಿ – ಸೈನ್ಯ ಪಾರಾವಾರಕಿದನಂಘೈಸುವನು ತ್ರಿಪು
ರಾರಿಯೋ ಮೇಣಾ ತ್ರಿವಿಕ್ರಮನೋ ಸುರೇಶ್ವರನೊ
(೨) ವೀರ, ದೊಠಾರ – ಸಾಮ್ಯಾರ್ಥ ಪದ

ಪದ್ಯ ೨೪: ದ್ರೌಪದಿಯು ಕೃಷ್ಣನನ್ನು ಹೇಗೆ ಆರಾಧಿಸಿದಳು?

ಶ್ರೀ ರಮಾವರ ದೈತ್ಯಕುಲ ಸಂ
ಹಾರ ಹರಿ ಭವ ಜನನ ಮರಣಕು
ಠಾರ ನಿಗಮವಿದೂರ ಸಚರಾಚರ ಜಗನ್ನಾಥ
ಚಾರುಗುಣ ಗಂಭೀರ ಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೋರೆನುತ ಹಲುಬಿದಳು ಲಲಿತಾಂಗಿ (ಅರಣ್ಯ ಪರ್ವ, ೧೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಲಕ್ಷ್ಮೀ ದೇವಿಯ ಪತಿಯೇ, ರಾಕ್ಷಸ ಕುಲ ಸಂಹಾರಕನೇ, ಹುಟ್ತು ಸಾವಿನ ಚಕ್ರರೂಪವಾದ ಸಂಸಾರ ವೃಕ್ಷಕ್ಕೆ ಕೊಡಲಿಯಾದವನೇ, ವೇದಗಳಿಗೆ ನಿಲುಕದವನೇ, ಸಮಸ್ತ ಜೀವಿಸುವ ಮತ್ತು ನಿರ್ಜೀವ ವಸ್ತುಗಳ ಜಗತ್ತಿನ ಈಶ್ವರನೇ, ಕಲ್ಯಾಣ ಗುಣಗುಂಭೀರನೇ, ಕರುಣೆಯೇ ಮೂರ್ತಿಯಾದಂತಿರುವವನೇ, ಸಕ್ರಮ ವಿಚಾರದ ಎಲ್ಲೆಯಲ್ಲಿ ದೊರಕುವವನೇ, ಶ್ರೀಕೃಷ್ಣನು ಪ್ರತ್ಯಕ್ಷನಾಗು ಎಂದು ದ್ರೌಪದಿ ಬೇಡಿದಳು.

ಅರ್ಥ:
ರಮಾವರ: ಲಕ್ಷಿಯ ಪಿತ; ದೈತ್ಯ: ರಾಕ್ಷಸ; ಕುಲ: ವಂಶ; ಸಂಹಾರ: ನಾಶ; ಭವ: ಇರುವಿಕೆ, ಅಸ್ತಿತ್ವ; ಜನನ: ಹುಟ್ಟು; ಮರಣ: ಸಾವು; ಕುಠಾರ: ಕೊಡಲಿ; ನಿಗಮ: ಶೃತಿ, ವೇದ; ವಿದೂರ: ನಿಲುಕದವ; ಚರಾಚರ: ಜೀವವಿರುವ ಮತ್ತು ಇಲ್ಲದಿರುವ; ಜಗನ್ನಾಥ: ಜಗತ್ತಿನ ಒಡೆಯ; ಚಾರು: ಸುಂದರ; ಗುಣ: ಸ್ವಭಾವ; ಗಂಭೀರ: ಆಳವಾದ, ಗಹನವಾದ; ಕರುಣ: ದಯೆ; ವಿಹಿತ: ಯೋಗ್ಯ; ವಿಚಾರ: ವಿಷಯ, ಸಂಗತಿ; ಪಾರಾವಾರ: ಸಮುದ್ರ, ಕಡಲು, ಎಲ್ಲೆ; ಮೈದೋರು: ಕಾಣಿಸಿಕೋ, ಪ್ರತ್ಯಕ್ಷನಾಗು; ಹಲುಬು: ಬೇಡು; ಲಲಿತಾಂಗಿ: ಬಳ್ಳಿಯಂತೆ ದೇಹವುಳ್ಳವಳು, ಸುಂದರಿ (ದ್ರೌಪದಿ)

ಪದವಿಂಗಡಣೆ:
ಶ್ರೀ+ ರಮಾವರ +ದೈತ್ಯಕುಲ +ಸಂ
ಹಾರ +ಹರಿ +ಭವ +ಜನನ +ಮರಣ+ಕು
ಠಾರ +ನಿಗಮವಿದೂರ +ಸಚರಾಚರ +ಜಗನ್ನಾಥ
ಚಾರುಗುಣ+ ಗಂಭೀರ +ಕರುಣಾ
ಕಾರ +ವಿಹಿತ +ವಿಚಾರ +ಪಾರಾ
ವಾರ +ಹರಿ +ಮೈದೋರೆನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಸಂಹಾರ, ಕುಠಾರ, ಪಾರಾವಾರ – ಪ್ರಾಸಪದ
(೨) ಕೃಷ್ಣನ ಗುಣಗಾನ – ದೈತ್ಯಕುಲ ಸಂಹಾರ, ನಿಗಮವಿದೂರ, ಚಾರುಗುಣ, ಗಂಭೀರ, ವಿಹಿತ ವಿಚಾರ, ಪಾರಾವಾರ