ಪದ್ಯ ೧೬: ಸುಭದ್ರೆ ಅರ್ಜುನನನ್ನೇಕೆ ಪಾತಕಿ ಎಂದು ಕರೆದಳು?

ಅಕಟ ಮಗನೇ ಬಹಳ ಪಾಪಾ
ತ್ಮಕರ ಬಸುರಲಿ ಬಹುದರಿಂದೀ
ನಕುಳನುದರದಲಾಗಲೀ ಧರ್ಮಜನ ಜಠರದಲಿ
ಸುಕೃತಿ ನೀನುದಯಿಸಲು ಬಹು ಕಂ
ಟಕರು ಬಳಿಕಾರುಂಟು ಕಡು ಪಾ
ತಕಿಯಲಾ ನಿಮ್ಮಯ್ಯನೆಂದಳು ಫಲುಗುಣನ ರಾಣಿ (ದ್ರೋಣ ಪರ್ವ, ೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅಯ್ಯೋ ಮಗನೇ ಮಹಾ ಪಾಪಿಗಳ ಹೊಟ್ಟೆಯಲ್ಲಿ ನೀನು ಜನಿಸಿದೆ. ನಕುಲ ಅಥವ ಧರ್ಮಜನ ಹೊಟ್ಟೆಯಲ್ಲಿ
ಮಗನಾಗಿ ಹುಟ್ಟುವ ಪುಣ್ಯವಂತನಾಗಿದ್ದರೆ ನಿನ್ನ ಜೀವಕ್ಕೆ ಯಾರೂ ಸಂಚಕಾರ ತರುತ್ತಿರಲಿಲ್ಲ. ನಿಮ್ಮಪ್ಪ ಅರ್ಜುನನು ಮಹಾಪಾಪಿ ಎಂದು ತನ್ನ ನೋವನ್ನು ಹೊರಹಾಕಿದಳು.

ಅರ್ಥ:
ಅಕಟ: ಅಯ್ಯೋ; ಮಗ: ಕುಮಾರ; ಬಹಳ: ತುಂಬ; ಪಾಪ: ಪುಣ್ಯವಲ್ಲದ ಕಾರ್ಯ; ಬಸುರು: ಹೊಟ್ಟೆ; ಉದರ: ಹೊಟ್ಟೆ; ಜಠರ: ಹೊಟ್ಟೆ; ಸುಕೃತಿ: ಒಳ್ಳೆಯ ಕೆಲಸ; ಉದಯಿಸು: ಹುಟ್ಟು; ಕಂಟಕ: ವಿಪತ್ತು; ಬಳಿಕ: ನಂತರ; ಕಡು: ಬಹಳ; ಪಾತಕಿ: ಪಾಪಿ; ಅಯ್ಯ: ತಂದೆ; ಫಲುಗುಣ: ಅರ್ಜುನ; ರಾಣಿ: ಅರಸಿ;

ಪದವಿಂಗಡಣೆ:
ಅಕಟ +ಮಗನೇ +ಬಹಳ+ ಪಾಪಾ
ತ್ಮಕರ +ಬಸುರಲಿ +ಬಹುದರ್+ ಇಂದೀ
ನಕುಳನ್+ಉದರದಲಾಗಲೀ +ಧರ್ಮಜನ +ಜಠರದಲಿ
ಸುಕೃತಿ +ನೀನ್+ಉದಯಿಸಲು +ಬಹು +ಕಂ
ಟಕರು +ಬಳಿಕಾರುಂಟು +ಕಡು +ಪಾ
ತಕಿಯಲಾ +ನಿಮ್ಮಯ್ಯನ್+ಎಂದಳು +ಫಲುಗುಣನ +ರಾಣಿ

ಅಚ್ಚರಿ:
(೧) ಸುಭದ್ರೆಯ ನೋವನ್ನು ಚಿತ್ರಿಸುವ ಪರಿ – ಬಹಳ ಪಾಪಾತ್ಮಕರ ಬಸುರಲಿ ಬಹುದರಿ; ಕಡು ಪಾತಕಿಯಲಾ ನಿಮ್ಮಯ್ಯನೆಂದಳು
(೨) ಉದರ, ಜಠರ, ಬಸುರು – ಸಮಾನಾರ್ಥಕ ಪದಗಳು